ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಮೌಢ್ಯದಿಂದ ಹೊರಬನ್ನಿ; ಸ್ವಾಮೀಜಿ

Last Updated 23 ಮೇ 2017, 6:51 IST
ಅಕ್ಷರ ಗಾತ್ರ

ಆಳಂದ: ‘ಧರ್ಮವು ಮಾನವ ಕಲ್ಯಾಣಕ್ಕೆ ದಾರಿಯಾಗಬೇಕು, ಆದರೆ, ಕೆಲವರು ತಮ್ಮ ಸ್ವಾರ್ಥ ಹಿತಾಸಕ್ತಿಗೆ ಧರ್ಮ, ಜಾತಿ, ಪಂಚಾಂಗ, ಆಚರಣೆ ನೆಪದಲ್ಲಿ ಜನರನ್ನು ಶೋಷಣೆ ಮಾಡುತ್ತಿದ್ದಾರೆ. ಅದಕ್ಕಾಗಿ ಇಂತಹ ಧಾರ್ಮಿಕ ಮೌಢ್ಯದಿಂದ ಹೊರಬನ್ನಿ’ ಎಂದು ಬೇಲೂರಿನ ನಿಜಗುಣಾನಂದ ಸ್ವಾಮೀಜಿ ಕರೆ ನೀಡಿದರು.

ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಭಾನುವಾರ ತಾಲ್ಲೂಕು ಬಸವ ಜಯಂತಿ ಉತ್ಸವ ಸಮಿತಿಯಿಂದ ಆಯೋಜಿಸಿದ ಬಸವಣ್ಣ ಅವರ 884ನೇ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಇದೇ ಧರ್ಮ, ಜಾತಿಯಲ್ಲಿ ಜನಿಸಬೇಕು ಎಂದು ಯಾರು ದೇವರಲ್ಲಿ ಅರ್ಜಿ ಹಾಕಲ್ಲ. ಎಲ್ಲರಿಗೂ ಸಾವು ನಿಶ್ಚಿತ.  ಇದ್ದಷ್ಟು ದಿನ ಎಲ್ಲರೊಂದಿಗೆ ಸಹಬಾಳ್ವೆಯಿಂದ ಬದುಕುವಂತೆ ಸಲಹೆ ನೀಡಿದರು.

ಬಸವಣ್ಣ ಅವರನ್ನು ಅರ್ಥ ಮಾಡಿಕೊಂಡರೆ ನಮ್ಮಲ್ಲಿ ಅಜ್ಞಾನ, ಜಾತಿ, ತಾರತಮ್ಯ ಮತ್ತು ದಾರಿದ್ರ್ಯ ಸುಳಿಯಲಾರದು ಎಂದು ಸ್ವಾಮೀಜಿ ತಿಳಿಸಿದರು. ಶಾಸಕ ಬಿ.ಆರ್.ಪಾಟೀಲ ಮಾತನಾಡಿ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಅಸಮಾನತೆ ವಿರುದ್ಧ ಹೋರಾಡಿ ಶೋಷಿತರು, ಅಸಹಾಯಕರು ಮತ್ತು ಸಕಲ ಜೀವಾತ್ಮರಿಗೆ ಸಾಮಾಜಿಕ ನ್ಯಾಯ, ಘನತೆ ದೊರಕಿಸಲು ಶ್ರಮಿಸಿದವರು ಬಸವಣ್ಣ  ಎಂದು ಬಣ್ಣಿಸಿದರು.

ಸೇಡಂನ ಸೈಯದ್‌ ಮುಸ್ತಾಫಾ ಖಾದ್ರಿ ಮಾತನಾಡಿ ಧರ್ಮದ ಆದರ್ಶ ವಿಚಾರಗಳನ್ನು ಜೀವನದಲ್ಲಿ ಅನುಷ್ಠಾನಕ್ಕೆ ತಂದರೆ ಸಮಾಜದಲ್ಲಿ ಶಾಂತಿ ನೆಲಸುವುದು. ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಶರಣರ ವಚನಗಳಲ್ಲಿ ಇದೆ ಎಂದರು. ಬೆಳಗಾಂವನ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಸಂಜಯ ಎಸ್.ಪಾಟೀಲ ಮಾತನಾಡಿದರು.

ಸಾಹಿತಿ ಎಸ್.ಪಿ.ಸುಳ್ಳದ ಅಧ್ಯಕ್ಷತೆ ವಹಿಸಿದರು. ಜಿಪಂ ಸದಸ್ಯ ಶರಣಗೌಡ ಪಾಟೀಲ, ಸಿದ್ದರಾಮ ಪ್ಯಾಟಿ, ಮುಖಂಡ ಬಸವರಾಜ ತಡಕಲ, ಅಶೋಕ ಸಾವಳೇಶ್ವರ, ಶರಣಗೌಡ ಪಾಟೀಲ, ವಿಠಲರಾವ ಪಾಟೀಲ, ಹಮೀದ ಅನ್ಸಾರಿ, ದೇವೇಗೌಡ ತೆಲ್ಲೂರು, ಡಾ.ಎಸ್.ಆರ್.ಬೇಡಗೆ, ಲಿಂಗರಾಜ ಪಾಟೀಲ ಇದ್ದರು.

ಮಂಗ್ಳೂರು ವಿಜಯ ರಚಿಸಿದ ‘ಬಸವಣ್ಣನವರ ಚಿಂತನೆ’ ಪುಸ್ತಕ ಬಿಡುಗಡೆ ನಡೆಯಿತು. ಬಸವಸೇನೆಯಿಂದ ಪಟ್ಟಣದಲ್ಲಿ ಬಸವಣ್ಣನವರ ಮೂರ್ತಿ ಸ್ಥಾಪನೆಗೆ ಒತ್ತಾಯಿಸಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ತಾಲ್ಲೂಕಿನ ಕಡಗಂಚಿ, ಮಾದನ ಹಿಪ್ಪರಗಾ, ಖಜೂರಿ, ನಿರಗುಡಿ, ನಿಂಬರ್ಗಾ ಮತ್ತಿತರ ಗ್ರಾಮದಿಂದ ಬಸವ ಜ್ಯೋತಿ ಯಾತ್ರೆ ಮತ್ತು ಬಸವಣ್ಣ ಅವರ ಮೂರ್ತಿ ಆಗಮನ ಡೊಳ್ಳು ಕುಣಿತ ಮತ್ತಿತರ ವಾದ್ಯಗಳ ಭವ್ಯ ಮೆರವಣಿಗೆಯಲ್ಲಿ ತರಲಾಯಿತು.  ಬಸವಣ್ಣ ಅವರ ಮೂರ್ತಿಯನ್ನು  ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT