ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮುನ್ನೆಲೆಗೆ ಬಂದ ಹಿರಿಯ ನಾಯಕ

Last Updated 23 ಮೇ 2017, 7:35 IST
ಅಕ್ಷರ ಗಾತ್ರ

ಗಂಗಾವತಿ: ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆದರೆ, ಪ್ರಮುಖ ಮೂರೂ ಪಕ್ಷಗಳಲ್ಲೂ ಅಕಾಂಕ್ಷಿಗಳಿಂದ ಲಾಬಿ ಶುರುವಾಗಿದೆ. ಗಂಗಾವತಿ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಈಗಾಗಲೆ ಕಸರತ್ತು ನಡೆಯುತ್ತಿರುವ ಮಧ್ಯೆ ಜೆಡಿಎಸ್ ಟಿಕೆಟ್‌ಗೂ ಬೇಡಿಕೆ ಹೆಚ್ಚುತ್ತಿದೆ.

ಶಾಸಕ ಇಕ್ಬಾಲ್ ಅನ್ಸಾರಿ ಅವರಿಗೆ ರಾಜಕೀಯವಾಗಿ ಬಲ ತುಂಬಿದ್ದ, ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಪಾಡಗುತ್ತಿ ಅಖ್ತರ್‌ಸಾಬ, ಮತ್ತವರ ಬೆಂಬಲಿಗರು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಎರಡು ದಿನಗಳ ಹಿಂದೆ ಭೇಟಿಯಾಗಿ ಕ್ಷೇತ್ರದ ವಿದ್ಯಮಾನಗಳ ಬಗ್ಗೆ ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. 

ಪಾಡಗುತ್ತಿ ಅಖ್ತರ್ ಸಾಬ ಅವರು ಒಂದೂವರೆ ದಶಕದ ಹಿಂದೆ ಗಂಗಾವತಿ ಕ್ಷೇತ್ರದಲ್ಲಿ ಜೆಡಿಎಸ್ ಬೆಳೆಸುವಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಜೊತೆ ಸರಿಸಮಾನ ಕೆಲಸ ಮಾಡಿದ್ದರು. ಕಾರಣಾಂತರದಿಂದ ನೇಪಥ್ಯಕ್ಕೆ ಸರಿದಿದ್ದ ಹಿರಿಯ ಮುಖಂಡರಾದ ಇವರು ಮತ್ತೆ ಪಕ್ಷದ ಮುನ್ನೆಲೆಗೆ ಬರುವ ಸಾಧ್ಯತೆಗಳು ಹೆಚ್ಚಿವೆ.

ಇಕ್ಬಾಲ್ ಅನ್ಸಾರಿ ಸಚಿವರಾದ ಸಂದರ್ಭದಲ್ಲಿ ಅಖ್ತರ್‌ಸಾಬ ಜೊತೆಗಿದ್ದು ರಾಜಕೀಯವಾಗಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಆದರೆ ಇಬ್ಬರ ನಡುವೆ ಉದ್ಭವಿಸಿದ್ದ ವೈಮನಸ್ಸು ಕಂದಕ ನಿರ್ಮಾಣಕ್ಕೆ ಕಾರಣವಾಗಿತ್ತು.

ಇಕ್ಬಾಲ್ ಅನ್ಸಾರಿ ತಾಂತ್ರಕವಾಗಿ ಜೆಡಿಎಸ್‌ನಲ್ಲಿದ್ದಾರೆ. ಮಾನಸಿಕವಾಗಿ ಕಾಂಗ್ರೆಸ್‌ ಜೊತೆ ಇದ್ದಾರೆ. ಅವರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಬಹುತೇಕ ಪಕ್ಕಾ ಆಗಿದೆ. ಅವರಿಂದ ತೆರವಾಗಲಿರುವ ಜೆಡಿಎಸ್ ನಾಯಕತ್ವದ ಕೊರತೆಯನ್ನು ನೀಗುವಂತೆ ಕುಮಾರಸ್ವಾಮಿ ಕೋರಿದ್ದಾರೆ.

ಈ ಬಗ್ಗೆ ಸ್ನೇಹಿತರು, ಕಾರ್ಯಕರ್ತರು, ಆಪ್ತತರೊಂದಿಗೆ ಚರ್ಚಿಸಿ ತೀಮಾನ ತಿಳಿಸುವುದಾಗಿ ಅಖ್ತರ್‌ಸಾಬ ಹೇಳಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ರಾಜವಂಶಸ್ಥೆ ಲಲಿತಾರಾಣಿ, ನಗರಸಭಾ ಸದಸ್ಯ ರಾಘವೇಂದ್ರ ಶೆಟ್ಟಿ, ವಿರೂಪಾಕ್ಷಗೌಡ ಹೇರೂರು, ರಾಘವೇಂದ್ರ ಇತರರ ಸಾಲಿಗೆ ಅವರ ಹೆಸರೂ ಕೇಳಿ ಬರುತ್ತಿವೆ.
 

* * 

ಚುನಾವಣೆಗೆ ಇನ್ನೂ ಒಂದು ವರ್ಷ  ಇದೆ. ಜೆಡಿಎಸ್‌ನಲ್ಲಿ ನಡೆಯುತ್ತಿರುವ ಚಟುವಟಿಕೆ ಬೇರೆ ಪಕ್ಷಗಳಲ್ಲಿ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಜನರಿಗೆ ಕುತೂಹಲವಿದೆ.
ರಾಘವೇಂದ್ರ ಕುಲಕರ್ಣಿ
ಜೆಡಿಎಸ್‌ ಗಂಗಾವತಿ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT