ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥರ್ಗಾ: ನೀರಿಗಾಗಿ ನಿಲ್ಲದ ಹಾಹಾಕಾರ

Last Updated 23 ಮೇ 2017, 8:38 IST
ಅಕ್ಷರ ಗಾತ್ರ

ಇಂಡಿ: ‘ಬ್ಯಾಸಿಗಿ ಆರಂಭಾತು ಅಂದ್ರ, ಬೆನ್ನಿಗೆ ನೀರಿನ ಸಮಸ್ಯಾನೂ ಶುರುವಾಗ್ರೈತಿ. ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡ್ರೂ ಸಮಸ್ಯಾ ಬಿಡದು. ನಮ್ಮೂರವ್ರ ಕೇಂದ್ರ ಸಚಿವರಿದ್ರೂ ನಮ್ಮ ತ್ರಾಸು ತಪ್‌ವಲ್ದು...’

‘ನಮ್ಮೂರ ನೀರಿನ ತ್ರಾಸ್‌ ಗೊತ್ತಿರೋರು ಸಂಬಂಧ ಬೆಳೆಸೋಕ ಬರೂದಿಲ್ಲ. ಗೊತ್ತಿಲ್ಲದ್ವರಷ್ಟೇ ಬರ್ತಾರ. ನಮ್ಗೂ ಈ ಜೀವನ ಬ್ಯಾಸರ ಬಂದೈತಿ. ಇಲ್ಲಿ ಬಾಳೇವ ಮಾಡಬೇಕಾದರ ಶೌಚಾಲಯಕ್ಕಾಗಿ ಉಪವಾಸ ಇರಾಕೂ ಸಿದ್ದರಿರಬೇಕ ನೋಡ್ರಿ...’

ಇವು ಅಥರ್ಗಾ ಗ್ರಾಮದ ಗೀತಾ ಹಿರೇಮಠ, ಶೋಭಾ ರೊಳ್ಳಿ, ಸುಧಾ ರೊಳ್ಳಿ, ಸರೋಜಾ ರೊಳ್ಳಿ, ಗೌರಮ್ಮ ಬಂಟನೂರ, ಕನ್ಯಾಕುಮಾರಿ ಹಿರೇಮಠರ ನೋವಿನ ನುಡಿಗಳು. ‘ಊರಾಗ ಸಾರ್ವಜನಿಕ ಸಂಡಾಸ್ ಕಟ್ಟಸ್ಯಾರೀ. ಅದರಾಗ ನೀರಿಲ್ಲ, ಗ್ವಾಡಿ ಬಿದ್ದಾವ, ಅದರೊಳಗ ಹಂದಿ ವಾಸ ಮಾಡ್ಯಾವ.

ಇನ್ನ ನೀರ 10ರಿಂದ 15 ದಿನಕ್ಕೊಮ್ಮೆ ಬರತಾವ. ಗಟಾರದಾಗ ನಿಂತು ನೀರು ತುಂಬಕೋಬೇಕ. ಅದು ಬಿಟ್ಟರ ನೀರ ಸಿಗೋದಿಲ್ಲ. ಟ್ಯಾಂಕರ್ ಹಚ್ಯಾರ. ಅದು ಬರೋ ತನಕ ಕಾಯ ಬೇಕು.ಬಂದರ ನೀರಿಗಾಗಿ ಕಚ್ಚಾಟ ಸುರೂ ಆಗತಾದ ನೋಡ್ರಿ. ಇದರಿಂದ ಬ್ಯಾಸತ್ತು ಕೆಲವರು ಊರ ಬಿಟ್ಟಾರ. ಮಳಿ ಬಂದ ಮ್ಯಾಲ ಬರತಾರ’ ಎಂದು ಹೇಳಿದರು.

ಶೌಚಾಲಯವಿಲ್ಲ: ‘ಶೌಚಾಲಯದ ಸಮಸ್ಯೆನೂ ಕಾಡತೈತಿ. ಇದರಿಂದ ಕೆಲ ಹೆಣ್ಮಕ್ಕಳು ಒಂದೊತ್ತು ಊಟ ಮಾಡಲ್ಲ. ಹೊಟ್ಟೆ ತುಂಬ ಉಂಡರ, ಹಗಲು ಶೌಚಾ ಲಯಕ್ಕೆ ಹೋಗಬೇಕಾದರೆ ಸ್ಥಳವಿಲ್ಲ. ರಸ್ತೆ ಬದಿಯೇ ಬಹಿರ್ದೆಸೆಗೆ ಹೋಗ ಬೇಕು. ಮುಖ್ಯ ರಸ್ತೆ ಇಲ್ಲೇ ಹಾದು ಹೋಗಿರೋದ್ರಿಂದ ಸಮಸ್ಯೆ ಬಿಗಡಾ ಯಿಸಿದೆ. ರಾತ್ರಿ, ನಸುಕಿನಲ್ಲಿ ಮಾತ್ರ ಶೌಚಕ್ಕೆ ಹೋಗ್ಬೇಕು. ನಮ್‌ ಸಂಕಟ ಕೇಳೋರು ಯಾರು ಇಲ್ಲ’ ಎಂದು ಮಹಿಳಾ ಸಮೂಹ ದೂರಿತು.

‘ಊರ ತಿಪ್ಪೇಗುಂಡಿ ಆಗ್ಯಾದರೀ. ಯಾರೂ ಇತ್ತ ಗಮನಿಸಲ್ಲ. ಗ್ರಾಮ ಪಂಚಾಯ್ತಿ ಅದ. ಎಲ್ಲಾ ಪ್ರಮುಖ ಅಧಿಕಾರಿಗಳು ನಮ್ಮೂರ ಮ್ಯಾಗ ಹೋಗತಾರ. ಮುಂಜಾನೆ ರಸ್ತೆ ಪಕ್ಕದಲ್ಲಿ ಶೌಚಾಲಯಕ್ಕಾಗಿ ಹೆಣ್ಣುಮಕ್ಕಳು ಸಾಲಾಗಿ ನಿಂತಿದ್ದನ್ನ ನೋಡತಾರ. ಆದರೂ ಯಾರೂ ಎನೂ ಮಾಡಿಲ್ಲ’ ಎಂದು ಗೀತಾ ಹಿರೇಮಠ ‘ಪ್ರಜಾವಾಣಿ’ ಬಳಿ ಆಕ್ರೋಶ ವ್ಯಕ್ತಪಡಿಸಿದರು.

‘ಕುಡಿಯುವ ನೀರಿಗಾಗಿ ಗ್ರಾಮ ದಿಂದ 4ರಿಂದ 5ಕಿ.ಮೀ. ದೂರದಿಂದ ಬೈಕ್ ಮೂಲಕ ನೀರು ತರುವ ಪರಿಸ್ಥಿತಿ ಯಿದೆ. ಸರ್ಕಾರ ಸಿಹಿ ನೀರಿಗಾಗಿ ಪೈಪ್‌ ಲೈನ್‌ ಮಾಡೈತಿ. ಆದರ ಅದು ಕೆಲಸ ಮಾಡುತ್ತಿಲ್ಲ’ ಎಂದು ಗ್ರಾಮದ ಪ್ರದೀಪ ಮಸಳಿ, ಚೆನ್ನಪ್ಪ ಮಸಳಿ, ಸಂತೋಷ ಶಿರಕನಹಳ್ಳಿ, ವಿಶ್ವನಾಥ ಹಜೇರಿ, ಅಣ್ಣಪ್ಪ ಹಜೇರಿ ಹೇಳಿದರು.
 

‘ನೀರಿನ ಸಮಸ್ಯೆಯಿಲ್ಲ...’
‘ಗ್ರಾಮದಲ್ಲಿ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದೆ. ನಿತ್ಯ ಐದು ಲಕ್ಷ ಲೀಟರ್‌ ನೀರು ಪೂರೈಸಲಾಗುತ್ತಿದೆ. ಮೂರು ಭಾಗಗಳನ್ನಾಗಿ ಗ್ರಾಮ ವಿಂಗಡಿಸಿದ್ದು, ನಿತ್ಯವೂ ಓವರ್‌ಹೆಡ್‌ ಟ್ಯಾಂಕ್‌ನಿಂದ ನೀರು ಸರಬರಾಜು ಮಾಡುತ್ತಿದ್ದೇವೆ.

ಈಚೆಗಿನ ದಿನಗಳಲ್ಲಿ ಜನಸಂಖ್ಯೆ ಕೊಂಚ ಹೆಚ್ಚಿದ್ದರಿಂದ ಅಲ್ಲಲ್ಲೇ ಸಮಸ್ಯೆ ಗೋಚರಿಸುತ್ತಿದೆ. ಪರಿಹಾರಕ್ಕೆ ಕ್ರಮ ಕೈಗೊಂಡಿದ್ದೇವೆ’ ಎಂದು ಅಥರ್ಗಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಿರೀಶ ಚಾಂದಕವಟೆ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ನಮ್ಮೂರಾವ ರಮೇಶ ಚಂದಪ್ಪ ಜಿಗಜಿಣಗಿ ಕೇಂದ್ರದಲ್ಲಿ ಮಂತ್ರಿ ಆಗ್ಯಾನ ಅಂತ ಹೇಳ್ತಾರ, ಭಾಳ ದಿವಸ ಅಧಿಕಾರದಲ್ಲಿ ಅದಾನ ಅಂತಾರ. ಆದ್ರ ನಮ್ಮ ಗೋಳು ಮಾತ್ರ ತಪ್ಪಿಲ್ಲ
ಗೀತಾ ಹಿರೇಮಠ
ಅಥರ್ಗಾ ಗ್ರಾಮಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT