ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಇಎಸ್‌ ನಾಯಕರ ವಿರುದ್ಧ ಕ್ರಮಕ್ಕೆ ಪಟ್ಟು

Last Updated 23 ಮೇ 2017, 8:46 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯದ ಗಡಿಯಲ್ಲಿ ಭಾಷೆ ಹೆಸರಿನಲ್ಲಿ ಕೀಳುಮಟ್ಟದ ರಾಜಕಾರಣ ಮಾಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕನ್ನಡ ಸಂಘಟನೆಗಳು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದವು.

‘ಈಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಸಮಿತಿಯ ಮುಖಂಡರು, ಮರಾಠಿಗರಿಗೆ ಸರ್ಕಾರಿ ದಾಖಲೆಗಳನ್ನು ಮರಾಠಿ­ಯಲ್ಲಿಯೇ ಕೊಡಬೇಕು’ ಎಂದು ಕೇಳಿರುವುದು ತೀವ್ರ ಖಂಡನೀಯ. ನಾಡು, ನುಡಿ, ಗಡಿ ಹಾಗೂ ಭಾಷೆ ವಿಚಾರದಲ್ಲಿ ಪದೇಪದೇ ಕ್ಯಾತೆ ತೆಗೆಯುತ್ತಿರುವ ಅವರ ಬೇಡಿಕೆಗೆ ಸೊಪ್ಪು ಹಾಕಬಾರದು’ ಎಂದು ಕನ್ನಡ ಹೋರಾಟಗಾರರು ಕೋರಿದರು.

ಸಿದ್ದನಗೌಡ ಪಾಟೀಲ, ಅಶೋಕ ಚಂದರಗಿ ನೇತೃತ್ವದ ನಿಯೋಗದಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎನ್‌. ಜಯರಾಮ್‌, ‘ಎಂಇಎಸ್‌ ನಾಯಕರು ನೀಡಿದ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿದ್ದೇನೆ. ಇಲ್ಲಿ ವಾಸಿಸುವ ಎಲ್ಲ ಭಾಷಿಕರ ರಕ್ಷಣೆಯ ಜವಾಬ್ದಾರಿ ಜಿಲ್ಲಾಡಳಿತಕ್ಕಿದೆ. ಕನ್ನಡಿಗರು, ಮರಾಠಿಗರು ಎಂದು ತಾರತಮ್ಯ ಮಾಡ­ಲಾಗದು. ಎಲ್ಲರ ಕ್ಷೇಮಾಭಿವೃದ್ಧಿಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಎಂಇಎಸ್‌ ಮುಖಂಡರ ವಿರುದ್ಧ ಆಕ್ರೋಶ: ಇದಕ್ಕೆ ಮೊದಲು ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಚಂದರಗಿ, ‘ಗಡಿ ಭಾಗದಲ್ಲಿನ ಮರಾಠಿಗರಿಗೆ ಮರಾಠಿ­ಯಲ್ಲಿಯೇ ಸರ್ಕಾರಿ ದಾಖಲೆಗಳನ್ನು ಒದಗಿಸುವಂತೆ ಎಂಇಎಸ್‌ ನಾಯಕರು ಐದು ದಶಕಗಳಿಂದಲೂ ಒತ್ತಾಯಿ­ಸುತ್ತಲೇ ಬಂದಿದ್ದಾರೆ. ಭಾಷಾ ವಿಷಯವನ್ನು ರಾಜಕೀಯ ಬಂಡವಾಳ ಮಾಡಿಕೊಂಡು ಸ್ವಾರ್ಥ ರಾಜಕಾರಣ­ದಲ್ಲಿ ತೊಡಗಿದ್ದಾರೆ. ಭಾಷಾ ಸಾಮರಸ್ಯ ಹಾಳುಗೆಡವಲು ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.

‘ಎಂಇಎಸ್‌ ಹಾಗೂ ಮರಾಠಿಗರ ನಡುವೆ ಅಂತರ ಹೆಚ್ಚುತ್ತಿದೆ. ಹೀಗಾಗಿ, ಭವಿಷ್ಯದ ಬಗ್ಗೆ ನಾಯಕರು ಆತಂಕ­ಗೊಂಡಿದ್ದಾರೆ. ಎಂಇಎಸ್‌ ಮುಖಂಡ ಕಿರಣ್‌ ಠಾಕೂರ್‌ ತಾಕತ್ತಿದ್ದರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿ, ಠೇವಣಿ ಉಳಿಸಿಕೊಳ್ಳಲಿ’ ಎಂದು ಅಶೋಕ ಚಂದರಗಿ ಸವಾಲು ಹಾಕಿದರು. ‘ಶೇ 15ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಭಾಷಾ ಅಲ್ಪ­ಸಂಖ್ಯಾತರಿಗೆ ಅವರ ಭಾಷೆಯಲ್ಲಿಯೇ ದಾಖಲೆಗಳನ್ನು ಕೊಡಬೇಕು ಎಂಬ ಸಂವಿಧಾನದ ನಿಯಮವನ್ನು ಸಮಿತಿ ನಾಯಕರು ಪದೇಪದೇ ಹೇಳುತ್ತಾರೆ.

ಮಹಾರಾಷ್ಟ್ರದ ಸೊಲ್ಲಾಪುರ, ಜತ್ತ, ಅಕ್ಕಲಕೋಟದಲ್ಲಿರುವ ಜನಸಂಖ್ಯೆಯಲ್ಲಿ ಶೇ 50ಕ್ಕಿಂತ ಹೆಚ್ಚು ಕನ್ನಡಿಗರೇ ಇದ್ದಾರೆ. ಅಲ್ಲಿ ಕನ್ನಡದಲ್ಲಿ ದಾಖಲೆಗಳನ್ನು ಕೊಡಲಾಗುತ್ತಿಲ್ಲ. ಈ ಬಗ್ಗೆ ಎಂಇಎಸ್‌ ನಾಯಕರು ಮಾತನಾಡುವುದಿಲ್ಲವೇಕೆ? ಮಹಾರಾಷ್ಟ್ರ ಸರ್ಕಾರ ಅಲ್ಲಿನ ಕನ್ನಡಿಗರಿಗೆ ಕನ್ನಡದಲ್ಲಿ ದಾಖಲೆಗಳನ್ನು ಒದಗಿಸಲು ಕ್ರಮ ಕೈಕೊಂಡಲ್ಲಿ ಕರ್ನಾಟಕ ಸರ್ಕಾರವೂ ಅದೇ ಹೆಜ್ಜೆ ಇಡ­ಬಹುದಾಗಿದೆ’ ಎಂದು ತಿಳಿಸಿದರು.

ಏಕಪಕ್ಷೀಯ ಕ್ರಮ ಸಲ್ಲದು: ‘ಭಾಷಾ ಅಲ್ಪಸಂಖ್ಯಾತರ ಆಯೋಗವು ಎರಡೂ ರಾಜ್ಯಗಳ ಹಿರಿಯ ಅಧಿಕಾರಿಗಳ ಜಂಟಿ ಸಭೆ ಕರೆದು ಮಹಾರಾಷ್ಟ್ರ ಗಡಿಯಲ್ಲಿನ ಕನ್ನಡಿಗರಿಗೆ ಕನ್ನಡದಲ್ಲಿ ಹಾಗೂ ಕರ್ನಾಟಕದ ಗಡಿಯಲ್ಲಿನ ಮರಾಠಿಗರಿಗೆ ಮರಾಠಿಯಲ್ಲಿ ಸರ್ಕಾರಿ ದಾಖಲೆಗಳನ್ನು ಒದಗಿಸಬೇಕು ಎಂದು ಆದೇಶಿಸಬೇಕು.

ಇದನ್ನು ಬಿಟ್ಟು ಏಕಪಕ್ಷೀಯವಾಗಿ ಕರ್ನಾಟಕದ ಗಡಿಯಲ್ಲಿನ ಮರಾಠಿಗರಿಗೆ ಮರಾಠಿಯಲ್ಲಿ ದಾಖಲೆ ಕೊಡಬೇಕು ಎನ್ನುವುದನ್ನು ತೀವ್ರವಾಗಿ ವಿರೋಧಿಸು­ತ್ತೇವೆ. ಇಂತಹ ಭಾಷಾ ವಿಷಯಗಳು ಕೊಡುವ–ತೆಗೆದುಕೊಳ್ಳುವ ನೀತಿಯಿಂದ ಕೂಡಿರಬೇಕು’ ಎಂದು ಹೇಳಿದರು.

‘ಸಂವಿಧಾನದತ್ತ ಹಕ್ಕುಗಳ ಬಗ್ಗೆ ಮಾತನಾಡುವ ಈ ನಾಯಕರು ಕರ್ತವ್ಯಗಳನ್ನು ತಿಳಿದಿಲ್ಲವೇ? ‘ಬೆಳಗಾವಿ’ ಎಂದು ಮರುನಾಮಕರಣ ಮಾಡಿ 2 ವರ್ಷಗಳಾದರೂ ‘ಬೆಳಗಾಂವ’ ಎಂದೇ ಬರೆಯುವುದನ್ನು ಮುಂದುವರಿಸಿರುವ ಅವರಿಗೆ ಹಕ್ಕು ಪ್ರಸ್ತಾಪಿಸಲು ಯಾವ ನೈತಿಕತೆ ಇದೆ? ಈ ನಾಯಕರ ವಿರುದ್ಧ ಸರ್ಕಾರವು ಸಂವಿಧಾನದತ್ತ ಅಧಿಕಾರ ಬಳಸಿಯೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

‘ಮರಾಠಿ ಪತ್ರಿಕೆಗಳು ಕರ್ನಾಟಕ ಸರ್ಕಾರದ ಜಾಹೀರಾತು, ಟೆಂಡರ್‌­ಗಳಲ್ಲಿ ‘ಬೆಳಗಾಂವ’ ಎಂದೇ ಮುದ್ರಿಸು­ತ್ತಿವೆ. ಈ ಪತ್ರಿಕೆಗಳಿಗೆ ಹಣ ಸಂದಾಯ ಮಾಡದಂತೆ ಆದೇಶಿಸಬೇಕು. ಗಡಿ ಭಾಗದಲ್ಲಿ ಗಟ್ಟಿ ನಿಲುವು ತಳೆದು, ಎಂಇಎಸ್‌ ಆಟಾಟೋಪಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ಒಬ್ಬ ಕನ್ನಡಿಗ, ಕೋಟಿ ಕನ್ನಡಿಗ: ‘ಒಬ್ಬ ಕನ್ನಡಿಗ ಎಂದರೆ ಕೋಟಿ ಕನ್ನಡಿಗ ಎನ್ನುವುದನ್ನು ಮರೆಯಬಾರದು. ಆಡಳಿತ­ದಲ್ಲಿ ಕನ್ನಡವನ್ನು ಸಂಪೂರ್ಣ­ವಾಗಿ ಅನುಷ್ಠಾನಕ್ಕೆ ತರಬೇಕು. ಫಲಕ­­ಗಳಲ್ಲಿ ಕನ್ನಡವನ್ನು ಮಾತ್ರ ಬಳಸಬೇಕು’ ಎಂದರು.

‘ಮತ ಗಳಿಕೆಗಾಗಿ ಎಂಇಎಸ್‌ ಮುಖಂಡರ ಬಾಲ ಹಿಡಿಯುವುದನ್ನು ರಾಜಕಾರಣಿಗಳು ಬಿಡಬೇಕು. ಕನ್ನಡಕ್ಕೆ ಅನ್ಯಾಯವಾದಾಗಲೂ ಜನಪ್ರತಿನಿಧಿಗಳು ದನಿ ಎತ್ತದಿರುವುದನ್ನು ನೋಡಿದರೆ ನಾಚಿಕೆಯಾಗುತ್ತದೆ’ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಮಹದೇವ ತಳವಾರ ಟೀಕಿಸಿದರು.

‘ರಾಜಕೀಯ ಪಕ್ಷಗಳು ಓಲೈಕೆ ರಾಜಕಾರಣವನ್ನು ಬಿಡಬೇಕು’ ಎಂದು ಸಾಹಿತಿ ರಾಘವೇಂದ್ರ ಜೋಶಿ ಹೇಳಿದರು. ಮುಖಂಡರಾದ ವಿ. ಶಂಕರ ದೇಸಾಯಿ, ಮಹಾಂತೇಶ ರಣಗಟ್ಟಿಮಠ, ರಾಜು ಕೋಲಾ, ಕಸ್ತೂರಿ ಭಾವಿ ಭಾಗವಹಿಸಿದ್ದರು.

* *

ದಾಖಲೆಗಳನ್ನು ಮರಾಠಿಯಲ್ಲಿಯೇ ಒದಗಿಸಿ ಎಂದು ಸರ್ಕಾರ ಹೇಳುವುದಿಲ್ಲ. ಆದರೆ, ಉಸ್ತುವಾರಿ ಸಚಿವರು, ಶಾಸಕರು ಒತ್ತಡ ಹೇರಬಾರದು
ಸಿದ್ದನಗೌಡ ಪಾಟೀಲ ಕನ್ನಡ ಚಳವಳಿ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT