ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳ ಪರಿಶೀಲನೆ ನಂತರವೇ ಫಾರಂ 3 ವಿತರಣೆ

Last Updated 23 ಮೇ 2017, 9:15 IST
ಅಕ್ಷರ ಗಾತ್ರ

ಹೊಸಪೇಟೆ: ‘ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಲಾಗುವುದು. ನಂತರ ಸ್ಥಳಕ್ಕೆ ಭೇಟಿ ನೀಡಿ ಆ ಆಸ್ತಿ ಸಂಬಂಧಿಸಿದ ವರಿಗೆ ಸೇರಿದೆಯೋ ಇಲ್ಲವೋ ಎನ್ನುವು ದನ್ನು ಖಾತ್ರಿಪಡಿಸಿಕೊಂಡ ಬಳಿಕವೇ ಫಾರಂ ನಂ. 3 ಕೊಡಲಾಗುವುದು’ ಎಂದು ಉಪವಿಭಾಗಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ತಿಳಿಸಿದರು.

ಸೋಮವಾರ ಇಲ್ಲಿ ನಡೆದ ನಗರ ಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಕೆ. ಬಡಾವಲಿ ಅವರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು. ‘ಜಿಲ್ಲಾಧಿಕಾರಿ ರಾಮಪ್ರಸಾದ ಮನೋಹರ್‌ ಅವರು ನಗರಸಭೆ ಕಂದಾಯ ಅಧಿಕಾರಿಗಳನ್ನು ಬೇರೆಡೆ ಎತ್ತಂಗಡಿ ಮಾಡಿದ ನಂತರ ಇಲ್ಲಿಯ ವರೆಗೆ ಯಾರಿಗೂ ಫಾರಂ ನಂ. 3 ಕೊಟ್ಟಿಲ್ಲ. ಸುಮಾರು ಒಂದೂವರೆ ತಿಂಗಳಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಅಷ್ಟೇ ಅಲ್ಲ ನಗರಸಭೆಗೆ ಬರಬೇಕಾದ ಆದಾಯ ಕೂಡ ಖೋತಾ ಆಗಿದೆ’ ಎಂದು ಕೆ. ಬಡಾವಲಿ ಸಭೆಯ ಗಮನಕ್ಕೆ ತಂದರು.

‘ಸುಮ್ಮನೆ ಬೇಕಾಬಿಟ್ಟಿಯಾಗಿ ಫಾರಂ ನಂ.3 ಕೊಡಲು ಆಗುವುದಿಲ್ಲ. ಎಲ್ಲವ ನ್ನೂ ಸಮಗ್ರವಾಗಿ ಪರಿಶೀಲಿಸಿದ ನಂತರ ವೇ ಕೊಡಲಾಗುವುದು. ನಗರಸಭೆಯ ಆದಾಯ ಖೋತಾ ಆಗಿಲ್ಲ. ಹಲವು ವರ್ಷಗಳಿಂದ ಬಿಎಸ್‌ಎನ್‌ಎಲ್‌, ಜೆಸ್ಕಾಂ ನವರು ಲಕ್ಷಾಂತರ ರೂಪಾಯಿ ಬಾಕಿ ಉಳಿಸಿಕೊಂಡಿದ್ದರು. ಸ್ವತಃ ನಾನೇ ಮುತುವರ್ಜಿ ವಹಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಬಾಕಿ ಹಣ ತುಂಬಿಸಿಕೊಳ್ಳಲಾಗಿದೆ. ನಗರಸಭೆಗೆ ಎಷ್ಟು ಆದಾಯ ಬರಬೇಕೋ ಅಷ್ಟು ಬರುತ್ತಿದೆ’ ಎಂದು ತಿಳಿಸಿದರು.

ಸ್ವಚ್ಛತೆ ನಿರ್ಲಕ್ಷ್ಯ: ‘ನಗರದಲ್ಲಿಯೇ ನನ್ನ ವಾರ್ಡ್‌ ಬಹಳ ದೊಡ್ಡದಿದೆ. ಪೌರ ಕಾರ್ಮಿಕರ ಕೊರತೆ ಇರುವುದರಿಂದ ಸ್ವಚ್ಛತೆ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸಬೇಕು ಎಂದು ಆರು ತಿಂಗಳಿಂದ ಹೇಳುತ್ತ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಎಷ್ಟು ಪೌರ ಕಾರ್ಮಿಕರಿದ್ದಾರೆ ಆ ಪೈಕಿ ಎಲ್ಲ ವಾರ್ಡ್‌ಗಳಿಗೆ ಸಮಾನವಾಗಿ ಹಂಚಿಕೆ ಮಾಡಬೇಕು’ ಎಂದು ಸದಸ್ಯ ಗೌಸ್‌ ಆಗ್ರಹಿಸಿದರು.

‘ನಿಮ್ಮ ಸಮಸ್ಯೆ ನನಗೆ ಅರ್ಥವಾಗು ತ್ತದೆ. ಇದನ್ನು ಆದ್ಯತೆಯ ಮೇರೆಗೆ ತುರ್ತಾಗಿ ಕ್ರಮ ಜರುಗಿಸಲಾಗುವುದು’ ಎಂದು ಮಿಶ್ರಾ ಭರವಸೆ ನೀಡಿದರು. ‘ನನ್ನ ವಾರ್ಡ್‌ನಲ್ಲಿ ಬೀದಿ ದೀಪಗಳ ನಿರ್ವಹಣೆ ಮಾಡುವವರೇ ಇಲ್ಲದಂತಾ ಗಿದೆ. ನಾನೇ ಬಹುತೇಕ ಕಂಬಗಳಿಗೆ ಹೋಗಿ ಬೀದಿ ದೀಪಗಳ ಸ್ವಿಚ್‌ ಹಾಕು ತ್ತೇನೆ. ಆ ಕೆಲಸ ನಾನು ಮಾಡಬೇಕೇ?’ ಎಂದು ಸದಸ್ಯ ಎಂ.ಎಸ್‌. ರಘು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಸೈಯದ್‌ ಮನ್ಸೂರ್‌, ‘ಈ ಸಮಸ್ಯೆ ಗಮನಕ್ಕೆ ಬಂದಿದೆ. ಶೀಘ್ರವೇ ಯೋಜನೆ ಸಿದ್ಧಪಡಿಸಿ, ಸ್ಮಾರ್ಟ್ ಸ್ವಿಚ್‌ಗಳನ್ನು ಅಳ ವಡಿಸಲಾಗುವುದು’ ಎಂದರು.

ಹೆಸರಿಗೆ ಸ್ವಚ್ಛ ಭಾರತ: ‘ನಗರದಲ್ಲಿ ಸ್ವಚ್ಛ ಭಾರತ ಕೇವಲ ಹೆಸರಿಗಷ್ಟೇ ಇದೆ. ದೊಡ್ಡ ಹೋಟೆಲ್‌ಗಳಿಂದ ಹಣ ಪಡೆದು ಕೊಂಡು ಅವರ ಕಸ ಮಾತ್ರ ಸಂಗ್ರಹಿಸ ಲಾಗುತ್ತಿದೆ’ ಎಂದು ಬಡಾವಲಿ ಆರೋಪ ಮಾಡಿದರು. ‘ಹೋಟೆಲ್‌, ವಾಣಿಜ್ಯ ಸಂಕೀರ್ಣ, ಮಳಿಗೆಗಳು, ಮಾಂಸದ ಮಳಿಗೆಗಳು, ಮಾರುಕಟ್ಟೆ, ಮನೆಗಳಿಂದ ಪ್ರತ್ಯೇಕವಾಗಿ ವಾಹನಗಳಲ್ಲಿ ಕಸ ಸಂಗ್ರಹಿಸಲಾಗುತ್ತಿದೆ. ನಗರಕ್ಕೆ ಒಟ್ಟು 47 ಕಸ ಸಂಗ್ರಹಿಸುವ ವಾಹನಗಳ ಅಗತ್ಯವಿದೆ. ಈಗ ನಮ್ಮ ಬಳಿ ಅಷ್ಟು ವಾಹನಗಳಿಲ್ಲ. ಹಾಗಾಗಿ ದಿನ ಬಿಟ್ಟು ದಿನ ಕಸ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ’ ಎಂದು ಪರಿಸರ ಎಂಜಿನಿಯರ್‌ ಶಿಲ್ಪಾಶ್ರೀ ಮಾಹಿತಿ ನೀಡಿದರು.

ವಕೀಲರ ಬದಲಾವಣೆ ಬೇಡ: ‘ನಗರಸಭೆಯ ವ್ಯಾಜ್ಯಗಳಿಗೆ ಸಂಬಂಧಿಸಿ ದಂತೆ ನ್ಯಾಯಾಲಯದಲ್ಲಿ ವಾದಿಸುವ ವಕೀಲರನ್ನು ಪದೇ ಪದೇ ಬದಲಿಸು ವುದು ಸರಿಯಲ್ಲ. ಇದರಿಂದ ಪ್ರಕರಣಗಳು ಶೀಘ್ರ ಇತ್ಯರ್ಥವಾಗುವುದಿಲ್ಲ’ ಎಂದು ಸದಸ್ಯ ಚಂದ್ರಕಾಂತ ಕಾಮತ್‌ ಹೇಳಿದರು. ಅದಕ್ಕೆ ಪ್ರತಿಕ್ರಿಯಿ ಸಿದ ಉಪವಿಭಾಗಾಧಿಕಾರಿ, ‘ನಿಮಗೆ ಕಾನೂನಿನ ಬಗ್ಗೆ ಸಾಕಷ್ಟು ತಿಳಿವಳಿಕೆ ಇದೆ. ನೀವೇ ವಕೀಲರು. ನೀವೇ ವಾದ ಮಾಡಿ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

‘ನಗರಸಭೆಯ ವಕೀಲರು ಒಮ್ಮೆಯೂ ಸಾಮಾನ್ಯ ಸಭೆಗೆ ಬಂದಿಲ್ಲ. ಬೇಕಿದ್ದರೆ ಅವರ ಹಾಜರಾತಿ ಪರಿಶೀಲಿಸಿ’ ಎಂದು ಬಡಾವಲಿ ಹೇಳಿದರು. ‘ಅನಿವಾರ್ಯ ಕಾರಣಗಳಿಂದ ಇಂದಿನ ಸಭೆಗೆ ಬರಲು ಆಗುವುದಿಲ್ಲ ಎಂದು ವಕೀಲರು ತಿಳಿಸಿ ಹೋಗಿದ್ದಾರೆ. ಯಾವ ವ್ಯಾಜ್ಯಗಳು ಯಾವ ಹಂತದಲ್ಲಿವೆ ಎನ್ನುವುದನ್ನು ಮುಂದಿನ ಸಭೆಗೆ ಅವರೇ ಖುದ್ದಾಗಿ ಬಂದು ಮಾಹಿತಿ ಕೊಡುವರು’ ಎಂದು ಮಿಶ್ರಾ ತಿಳಿಸಿದರು.

‘ಬೇಡವೆನ್ನಲು ನೀವ್ಯಾರು?’
‘ನಗರಸಭೆಯಲ್ಲಿ ಸ್ಥಾಯಿ ಸಮಿತಿ ರಚಿಸುವುದು ಬೇಡ ಎನ್ನಲು ನೀವ್ಯಾರು?’. ಹೀಗೆ ಖಡಕ್‌ ಆಗಿ ಪ್ರಶ್ನಿಸಿದ್ದು ಉಪವಿಭಾಗಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ.ಸ್ಥಾಯಿ ಸಮಿತಿ ರಚನೆ ಕುರಿತ ಚರ್ಚೆ ವೇಳೆ ಮಾತನಾಡಿದ ಸದಸ್ಯ ಬಡಾವಲಿ, ‘ಕೆಲವು ಸದಸ್ಯರು ಜೈಲಿನಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಾಯಿ ಸಮಿತಿ ರಚಿಸುವುದು ಬೇಡ.

ತಾತ್ಕಾಲಿಕವಾಗಿ ಮುಂದೂಡುವುದು ಒಳಿತು’ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಮಿಶ್ರಾ, ‘ನೀವು ಕೇವಲ ನಿಮ್ಮ ಅಭಿಪ್ರಾಯ ತಿಳಿಸಿ ಸುಮ್ಮನೆ ಕೂತುಕೊಳ್ಳಿ. ಬೇಡ ಎನ್ನಲು ನೀವ್ಯಾರು?’ ಎಂದು ಕೇಳಿದರು. ಅದಕ್ಕೆ ಬಡಾವಲಿ ಸುಮ್ಮನಾದರು. ಬಹುತೇಕ ಸದಸ್ಯರು ಕೆಲ ದಿನ ಸಮಯ ಕೊಡಬೇಕು ಎಂದು ಕೇಳಿದರು. ಇದಕ್ಕೆ ಮಿಶ್ರಾ, ‘ನಿಮ್ಮೆಲ್ಲರ ಮನವಿ ಮೇರೆಗೆ ಒಂದು ವಾರ ಕಾಲಾವಕಾಶ ಕೊಡಲಾಗುವುದು. ನಂತರ ಸ್ಥಾಯಿ ಸಮಿತಿ ರಚಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT