ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯಾಸ್ತ ವೀಕ್ಷಣೆಗೆ ಪ್ರವಾಸಿಗರೇ ಇಲ್ಲ

ಅಕ್ಷರ ಗಾತ್ರ

ಹೊಸಪೇಟೆ: ಸದಾ ಜನರಿಂದ ಗಿಜಿ ಗುಡುವ ಹಂಪಿಯ ಹೇಮಕೂಟ ಬಳಿಯ ಸೂರ್ಯಾಸ್ತ ವೀಕ್ಷಣೆಯ (ಸನ್‌ಸೆಟ್‌ ಪಾಯಿಂಟ್‌) ತಾಣ ಇದೀಗ ಪ್ರವಾಸಿಗ ರಿಲ್ಲದೇ ಸೊರಗಿದೆ. ಹಂಪಿಯ ಅಪರೂಪದ ತಾಣಗಳಲ್ಲಿ ಸೂರ್ಯಾಸ್ತ ವೀಕ್ಷಣೆಯ ಸ್ಥಳ ಕೂಡ ಒಂದು. ನಿತ್ಯ ಸಂಜೆಯಾಗುತ್ತಿದ್ದಂತೆಯೇ ಇಲ್ಲಿ ಪ್ರವಾಸಿಗರ ದಂಡು ಬೀಡು ಬಿಟ್ಟಿರುತ್ತದೆ.

ಬಂಡೆಗಲ್ಲುಗಳ ಮೇಲೆಲ್ಲ ಜನ ನೆರೆದಿರುತ್ತಾರೆ. ಪೈಪೋಟಿಗೆ ಬಿದ್ದವರಂತೆ ಕ್ಯಾಮೆರಾಗಳಲ್ಲಿ ಸುಂದರ ವಾದ ಛಾಯಾಚಿತ್ರಗಳನ್ನು ಸೆರೆಹಿಡಿಯು ತ್ತಾರೆ. ಮೊಬೈಲ್‌ಗಳಲ್ಲಿ ಸೆಲ್ಫಿ ತೆಗೆದು ಕೊಂಡು ಸಂಭ್ರಮಿಸುತ್ತಾರೆ. ಕಣ್ಣು ಹಾಯಿಸಿದಲೆಲ್ಲ ಕಂಡು ಬರುವ ಬೆಟ್ಟ, ಗುಡ್ಡಗಳ ಸಾಲಿನಲ್ಲಿ ‘ರವಿ’ ಮುಳುಗು ವುದನ್ನು ನೋಡುವುದೇ ಬಲು ಚೆಂದ. ಅಂತಹ ಅಪರೂಪದ ಸನ್ನಿವೇಶವನ್ನು ಕಣ್ತುಂಬಿಕೊಳ್ಳಲು ಯಾರೇ ತಾನೇ ಬಯಸರು.

ದಿನವಿಡೀ ಹಂಪಿ ಪರಿಸರದಲ್ಲಿ ಓಡಾಡಿ ವಿವಿಧ ಸ್ಮಾರಕಗಳನ್ನು ವೀಕ್ಷಿ ಸುವ ಜನ ಸಂಜೆ ಐದು ಗಂಟೆಯಾಗು ತ್ತಿದ್ದಂತೆಯೇ ಹೇಮಕೂಟದತ್ತ ದಾಂಗುಡಿ ಇಡುತ್ತಾರೆ. ಹಂಪಿಯಲ್ಲಿ ಯಾರು, ಎಷ್ಟೇ ದೂರದಲ್ಲಿದ್ದರೂ ಸೂರ್ಯಾಸ್ತ ನೋಡುವುದನ್ನು ತಪ್ಪಿಸಿಕೊಳ್ಳುವುದಿಲ್ಲ. ಕೆಲವು ಪ್ರವಾಸಿಗ ರಂತೂ ಸೂರ್ಯಾಸ್ತ ವೀಕ್ಷಣೆಗೆಂದು ದೂರದ ಊರುಗಳಿಂದ ವಾಹನಗಳನ್ನು ಮಾಡಿಕೊಂಡು ಬರುತ್ತಾರೆ. ಆದರೆ, ಈಗ ಇಲ್ಲಿ ಇದ್ಯಾವುದು ಕಂಡು ಬರುತ್ತಿಲ್ಲ. ಬಿಸಿಲಿನ ಪ್ರಮಾಣ ಹೆಚ್ಚಾದ ದಿನದಿಂದಲೂ ನಿಧಾನವಾಗಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತ ಬಂದಿದ್ದು, ಈಗ ಬೆರಳೆಣಿಕೆಯಷ್ಟು ಪ್ರವಾಸಿಗರೂ ಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ ಇಡೀ ಹೇಮಕೂಟದ ಪರಿಸರ ಜನರಿಲ್ಲದೇ ಬಿಕೋ ಎನ್ನುತ್ತಿದೆ.

ಈ ಪ್ರದೇಶದಲ್ಲಿ ಸದಾ ವಾನರ ಸೇನೆ ಬೀಡು ಬಿಟ್ಟಿರುತ್ತದೆ. ಕಾರಣ ನಿತ್ಯ ಇಲ್ಲಿಗೆ ಬರುವ ನೂರಾರು ಪ್ರವಾಸಿಗರು ಅವುಗಳಿಗೆ ಬಾಳೆಹಣ್ಣು, ಬಿಸ್ಕತ್‌ಗಳನ್ನು ಕೊಡುತ್ತಾರೆ. ಅವುಗಳು ಅದನ್ನು ತಿನ್ನುವುದನ್ನು ನೋಡುತ್ತ ಜನ ಸಂಭ್ರಮಿಸುತ್ತಾರೆ. ಛಾಯಾಚಿತ್ರದಲ್ಲಿ ಅವುಗಳ ಅಟಾಟೋಪವನ್ನು ಸೆರೆ ಹಿಡಿದು ಖುಷಿಪಡುತ್ತಾರೆ. ಈ ಕಡೆ ಜನ ಸುಳಿಯದ ಕಾರಣ ಕೋತಿಗಳಿಗೆ ಆಹಾರ ಸಿಗುತ್ತಿಲ್ಲ. ಹೀಗಾಗಿ ಬಹುತೇಕ ಕೋತಿಗಳು ಆಹಾರವನ್ನು ಅರಸಿ ಕೊಂಡು ಬೇರೆಡೆ ಪಲಾಯನ ಮಾಡಿವೆ.

‘ಮಾರ್ಚ್‌ನಿಂದ ಬಿಸಿಲಿನ ಪ್ರಮಾಣ ಹೆಚ್ಚಾಗುವ ಕಾರಣ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತದೆ. ಮೇ ಅಂತ್ಯದ ವರೆಗೂ ಇದೇ ಸ್ಥಿತಿ ಇರುತ್ತದೆ’ ಎನ್ನುತ್ತಾರೆ ಹಂಪಿ ಗೈಡ್‌ ಗೋಪಾಲ್‌.‘ಜೂನ್‌ನಲ್ಲಿ ಮಳೆಗಾಲ ಆರಂಭವಾಗಿ ವಾತಾವರಣ ಸ್ವಲ್ಪ ತಂಪಾದರೂ ಮತ್ತೆ ಪ್ರವಾಸಿಗರು ಹಂಪಿಗೆ ಬರುವುದು ಸೆಪ್ಟೆಂಬರ್‌ನಲ್ಲಿಯೇ. ವಿದೇಶಿಗರಂತೂ ಅಕ್ಟೋಬರ್‌ನಿಂದ ಜನವರಿ ವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ’ ಎಂದು ಹೇಳಿದರು.

‘ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡು ಬಂದಿರುವುದರಿಂದ ನಮಗೆ ಕೆಲಸವಿಲ್ಲದಂತಾಗಿದೆ. ಕೆಲವು ಗೈಡ್‌ಗಳು ಬೇರೆ ಇನ್ನೇನೋ ಕೆಲಸ ಮಾಡುತ್ತಾರೆ. ನಮಗೆ ಈ ಕೆಲಸ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಏನು ಮಾಡಬೇಕು ದಿಕ್ಕು ತೋಚುತ್ತಿಲ್ಲ’ ಎಂದು ಗೋಳು ತೋಡಿಕೊಂಡರು.

* * 

ಹಂಪಿಯಲ್ಲಿ ಅನೇಕ ಜನ ಇಷ್ಟಪಡುವ ಸ್ಥಳಗಳಲ್ಲಿ ಸೂರ್ಯಾಸ್ತ ವೀಕ್ಷಣೆಯ ಜಾಗ ಕೂಡ ಒಂದು. ಅದರಲ್ಲೂ ವಿದೇಶಿ ಪ್ರವಾಸಿಗರು ಈ ಜಾಗಕ್ಕೆ ಭೇಟಿ ಕೊಡದೇ ಹಿಂತಿರುಗುವುದಿಲ್ಲ.
ಗೋಪಾಲ್‌, ಹಂಪಿ ಗೈಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT