ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಹಳಿಕೆಯ ಬದುಕು ಬೇಕೇ?

Last Updated 23 ಮೇ 2017, 19:30 IST
ಅಕ್ಷರ ಗಾತ್ರ

ಕೆಲವರಲ್ಲಿ ಒಂದು ಅಭ್ಯಾಸವಿರುತ್ತದೆ. ಅದು ಏನೆಂದರೆ  ಯಾವಾಗಲೂ ತಮ್ಮ ತಮ್ಮ ಕಷ್ಟದ ದಿನಗಳನ್ನು ಕುರಿತೇ ಮಾತನಾಡುವುದು.  ಯಾರೇ ಇರಲಿ, ಬಸ್ಸಿನಲ್ಲಿ, ರೈಲಿನಲ್ಲಿ, ಕಚೇರಿಗಳಲ್ಲಿ, ಒಂದು ಗುಂಪಿನಲ್ಲಿ – ಎಲ್ಲೇ ಇರಲಿ. ತಮ್ಮ ನೋವುಗಳು, ತಾವೆಷ್ಟು ಕಷ್ಟಪಟ್ಟೆವು ಎಂಬುದನ್ನು ಹೇಳುತ್ತ ಜೊತೆಯಲ್ಲಿ ಕಣ್ಣಿನಲ್ಲಿ ನೀರನ್ನೂ ಹಾಕಿಕೊಂಡು ಬೇರೆಯವರ ಗಮನವನ್ನು ಸೆಳೆಯುವುದು. ಅನೇಕ ಆತ್ಮಚರಿತ್ರೆಗಳು ಕೂಡ ಇದಕ್ಕೆ ಹೊರತಲ್ಲ. ಟೀವಿ. ರಿಯಾಲಿಟಿ ಶೋಗಳಲ್ಲಿ ಅಂತೂ ಕಣ್ಣೀರೇ ದೊಡ್ಡ ಟಿ.ಆರ್.ಪಿ. ಕೇವಲ ಕಣ್ಣೀರಿಗೆ ಮಾತ್ರ ಬೆಲೆ. ಎದುರಿಗಿರುವವರ ಮನಗೆಲ್ಲುವ ಸುಲಭ ತಂತ್ರವನ್ನು ನೋವುಗಳ ವೈಭವೀಕರಣದಿಂದ ಮತ್ತು ಕಣ್ಣೀರಿನ ಮೂಲಕ ಮನುಷ್ಯ ಬಹಳ ಬೇಗ ಅಭ್ಯಾಸ ಮಾಡಿಕೊಂಡು ಬಿಡುತ್ತಾನೇನೋ?  ಆದರೆ ಹೀಗೆ ಮಾಡುವವರಿಗೆ ಕನಿಷ್ಠ ತಿಳಿವಳಿಕೆಗಳೇ ಮರೆಯಾಗಿ ಹೋಗಿರುತ್ತವೆ. ತಮ್ಮ ಮಾತುಗಳು ಎದುರಿಗಿರುವವರಿಗೆ ಎಷ್ಟು ಮುಜುಗರವನ್ನು ಉಂಟುಮಾಡುತ್ತವೆ ಎಂಬುದನ್ನು ಗಮನಿಸಬೇಕು.  ನಮ್ಮ ಇರವು ಹೇಗಿರಬೇಕು, ನಾವು ಮಾತನಾಡಾಬೇಕಾದುದೇನು, ನಮ್ಮಿಂದ ಎಂತಹ ಸಹಾಯವನ್ನು ನೀಡಲು ಸಾಧ್ಯ – ಎಂಬ ಕನಿಷ್ಠ ಅಂಶಗಳು ತಿಳಿಯದಿದ್ದರೆ ಮೌನವಾಗಿರುವುದೇ ಉತ್ತಮ.  ಏಕೆಂದರೆ ಸಂಬಂಧಗಳ ಸ್ಥಾಪನೆಗೆ ಮಾತಿನ ಮೌಲ್ಯ ತಿಳಿದಿರಬೇಕು. ಅವರು ಬಂಧುಗಳೇ ಇರಬಹುದು, ಸಹೋದ್ಯೋಗಿಗಳೇ ಇರಬಹುದು, ನೆರೆಹೊರೆಯವರೇ ಇರಬಹುದು; ಅಷ್ಟೇ ಏಕೆ, ಬಸ್ಸಿನಲ್ಲಿ ಕೆಲವು ಗಂಟೆಗಳು ನಮ್ಮ ಜೊತೆಯಲ್ಲಿರುವ ಸಹಪ್ರಯಾಣಿಕರೇ ಇರಬಹುದು. 

ನಮ್ಮ ಮನೆಗೆ ವಯಸ್ಸಾದ ಹಿರಿಯ ವ್ಯಕ್ತಿಯೊಬ್ಬರು ಆಗಾಗ ಬರುತ್ತಿದ್ದರು. (ಈಗ ಅವರಿಲ್ಲ). ಅವರು ತಮ್ಮ ಮಗ–ಸೊಸೆಯನ್ನು ಯಾವಾಗಲೂ ಹೀಗಳೆಯುತ್ತಿದ್ದರು. ಸೊಸೆ ತಮಗೆ ಕಾಫಿ ಕೊಡುವುದಿಲ್ಲ; ಪ್ಲಾಸ್ಕ್‌ನಲ್ಲಿ ಹಾಕಿಟ್ಟಿರುತ್ತಾಳೆ; ಅಡುಗೆಯನ್ನು ಟೇಬಲ್ ಮೇಲೆ ಇಟ್ಟು ಹೋಗಿಬಿಡುತ್ತಾಳೆ; ಬೆಳಗ್ಗೆ ಮಾಡಿದ ಅಡುಗೆಯನ್ನು ಮಧ್ಯಾಹ್ನ ತಿನ್ನುವಾಗ ತಣ್ಣಗಾಗಿರುತ್ತದೆ; ಸಂಜೆ ಮನೆಗೆ ಲೇಟ್ ಆಗಿ ಬರುತ್ತಾಳೆ;  ಮೊಮ್ಮಗ ಶಾಲೆಯಿಂದ ಬಂದಾಗ ತಾನೇ ನೋಡಬೇಕು – ಇತ್ಯಾದಿ ಇತ್ಯಾದಿ.  ಅವರಿಗೆ ಬಹುತೇಕ ನಮ್ಮ ಮನೆಯಲ್ಲಿ ಕಾಫಿ, ಊಟ ಎಲ್ಲ ನಡೆಯುತ್ತಿತ್ತು. ನಮಗೂ ಕರುಣೆಯ ಭಾವನೆಗಳು – ಇಳಿ ವಯಸ್ಸಿನಲ್ಲಿ ಪತ್ನಿ ಇಲ್ಲದಾಗ ಎಷ್ಟೆಲ್ಲ ಕಷ್ಟಗಳು ಆಗುತ್ತವೆಯಲ್ಲ ಎಂದು. ಒಂದು ದಿನ ತರಕಾರಿ ತರುವಾಗ ಅವರ ಸೊಸೆ ಸಿಕ್ಕರು. ಅದೂ ಇದೂ ಮಾತನಾಡುತ್ತ ಅವರ ಬಳಿ ಕೇಳಿದೆ ‘ನೀವು ಕೆಲಸಕ್ಕೆ ಹೋಗಲೇಬೇಕೆ? ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ನಿಮ್ಮ ಮಾವನವರಿಗೆ ತೊಂದರೆ ಆಗುವುದಿಲ್ಲವೇ ?’ ಎಂದು.  ಆಕೆ ಹೇಳಿದ್ದು ಕೇಳಿದ ನಂತರ ಅನಿಸಿದ್ದು – ಮನುಷ್ಯನ ಕಣ್ಣೀರು ಎಷ್ಟೆಲ್ಲ ಮೋಸಗಳನ್ನು ಮಾಡಬಹುದು ಎಂದು. ಆಕೆ ಹೇಳಿದ್ದು – ಅವಳ ಗಂಡ ಕೇಂದ್ರ ಸರ್ಕಾರದ ಇಲಾಖೆಯೊಂದರಲ್ಲಿ ವಿಜ್ಞಾನಿ ಆಗಿ ಕೆಲಸ ಮಾಡುತ್ತಿದ್ದ.  ಆಕೆಯೂ ಗೃಹಿಣಿಯೇ ಆಗಿದ್ದಳು. ಕೆಲವು ವರ್ಷಗಳ ಹಿಂದೆ ಅವನಿಗೆ ಅಪಘಾತದಲ್ಲಿ ಮೆದುಳಿಗೆ ಏಟು ಬಿದ್ದಿತು.  ಅವನು ಬದುಕಿದ್ದೇ ಹೆಚ್ಚು.  ನಂತರ ನೌಕರಿಯಿಂದ ಹೊರಗೆ ಬರಬೇಕಾಯಿತು. ಅವನಿಗೆ ತಾನು ಏನು ಮಾಡುತ್ತಿರುವೆ ಎಂಬುದು ಕೆಲವು ಸಲ ತಿಳಿಯುವುದಿಲ್ಲ. ಈ ಕಾರಣದಿಂದಾಗಿ ಅವಳೇ ಡಿ.ಫಾರ್ಮ ಮಾಡಿಕೊಂಡು ಮೆಡಿಕಲ್ ಸ್ಟೋರ್ ಒಂದನ್ನು ಇಟ್ಟುಕೊಂಡಳು. ಪ್ರತಿನಿತ್ಯ ಗಂಡನ ಜೊತೆಯಲ್ಲಿ ಹೋಗಿ ಅಂಗಡಿ ಕೆಲಸ ಮುಗಿಸಿ ರಾತ್ರಿ ವಾಪಸ್ ಬರುತ್ತಾಳೆ. ಎರಡನೆಯ ತರಗತಿ ಓದುತ್ತಿರುವ ಮಗನನ್ನು ಮಾವ ಸ್ವಲ್ಪ ಹೊತ್ತು ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇನ್ನೊಂದೆರಡು ವರ್ಷಗಳಾದರೆ ಅವನೂ ದೊಡ್ಡವನಾಗುತ್ತಾನೆ, ಮಾವನಿಗೂ ಕಷ್ಟಗಳು ಇರುವುದಿಲ್ಲ. ಆದ್ದರಿಂದ ಬೆಳಿಗ್ಗೆ ನಾಲ್ಕು ಘಂಟೆಗೇ ಎದ್ದು ಮನೆ ಕೆಲಸ ಎಲ್ಲ ಮುಗಿಸಿ, ಮಗನನ್ನು ಶಾಲೆಗೆ ಕಳುಹಿಸಿ ಇವಳು ಸ್ಕೂಟರ್‌ನಲ್ಲಿ ಗಂಡನ ಜೊತೆ ಹೊರಡುತ್ತಾಳೆ.  ನಮ್ಮ ಕಣ್ಣಿಗೆ ಕಾಣುತ್ತಿದ್ದುದು ಅವರಿಬ್ಬರ ಸ್ಕೂಟರ್ ಯಾನ ಮಾತ್ರ. ಆಕೆ ಹೇಳಿದಳು: ‘ನೀವೆಲ್ಲ ಅಂದುಕೊಂಡಂತೆ ಇದ್ದರೆ ನಾನು ಯಾಕೆ ಇಷ್ಟೆಲ್ಲ ಕಷ್ಟ ಪಡುತ್ತೇನೆ ಹೇಳಿ.  ಪ್ರತಿನಿತ್ಯ ಮಾವನವರು ಎಷ್ಟು ಇರಿಸು ಮುರಿಸಿನ ಮಾತುಗಳನ್ನ ಆಡುತ್ತಾ ಇರುತ್ತಾರೆ ಅಂತ ನಿಮಗೆ ತಿಳಿಯಲ್ಲ. ನನ್ನ ಕಷ್ಟ ಯಾರಿಗೆ ಹೇಳಲಿ? ಮತ್ತೆ ನನಗೆ ಅದಕ್ಕೆ ಸಮಯವೂ ಇಲ್ಲ.’ ದಾರಿಯುದ್ದಕ್ಕೂ ಮಾತನಾಡುತ್ತ ಬಂದಾಗ ‘ಅಪರಂಜಿಯನ್ನು ಕೈಯಲ್ಲಿಟ್ಟುಕೊಂಡು ಅಳುವ ವ್ಯಕ್ತಿಗೆ ಬುದ್ಧಿ ಹೇಳಲು ಸಾಧ್ಯವೇ?’ ಎಂದೆನಿಸಿತು. ಕೆಲವರು ಹೊರಗೆ ಸಂತೋಷವಾಗಿ ಕಂಡರೂ ಅವರೊಳಗೆ ಅನೇಕ ಕಷ್ಟಗಳಿರುತ್ತವೆ. ಕೆಲವರು ಮೂರು ಹೊತ್ತೂ ಕಣ್ಣೀರಿಡುತ್ತಾ ಕುಳಿತರೂ ಅವರ ಬದುಕು ಸುಖವಾಗಿಯೇ ಸಾಗುತ್ತಿರುತ್ತದೆ. 

ಇಷ್ಟಕ್ಕೂ ಜೀವನ ಅಂದರೇನು?  ಕೇವಲ ಕಣ್ಣೀರಿನ ಕಥೆಯೇ? ‘ಸಾವಿಲ್ಲದ ಮನೆಯ ಸಾಸಿವೆ ಕಾಳು ತಾ’ ಎಂದ ಗೌತಮಿಯ ಕಥೆ ಕೇವಲ ಕಥೆ ಮಾತ್ರವೇ? ಅದಕ್ಕೆ ಸ್ವಲ್ಪವೂ ಅರ್ಥವಿಲ್ಲವೇ? ಈ ಜಗತ್ತಿನ ಯಾವ ವ್ಯಕ್ತಿಯ ಜೀವನದಲ್ಲಿ ಕಷ್ಟಗಳಿಲ್ಲ! ಕಷ್ಟವಿಲ್ಲ ಎಂದು ಹೇಳುವ ಒಬ್ಬನೇ ಒಬ್ಬ ವ್ಯಕ್ತಿ ಕೂಡ ಇಲ್ಲ.  ಎಲ್ಲರ ಬದುಕಿನಲ್ಲೂ ನಿರಾಶೆಗಳಿವೆ; ಜುಗುಪ್ಸೆಗಳು, ಆತಂಕಗಳು, ಅವಮಾನಗಳು, ಕಣ್ಣೀರುಗಳು – ಎಲ್ಲವೂ ಇವೆ.  ಅದನ್ನೇ ಹೇಳಿಕೊಳ್ಳುವ ರೋಗ ಮಾತ್ರ ಎಲ್ಲರಲ್ಲೂ ಇರವುದಿಲ್ಲ, ಅಷ್ಟೆ.  ಆದರೆ ಕೆಲವರು ಅದನ್ನು ಇಟ್ಟುಕೊಂಡು ಉಳಿದವರ ಬದುಕನ್ನು ನರಕ ಮಾಡುತ್ತಾರೆ. ‘ಮನುಷ್ಯ ಒಳಿತನ್ನೇ ಚಿಂತಿಸಬೇಕು’ ಎನ್ನುತ್ತಾರೆ ಹಿರಿಯರು.  ಏನು ಹಾಗೆಂದರೆ? ಒಳ್ಳೆಯ ಮಾತುಗಳನ್ನೇ ಆಡಬೇಕು, ಚಿಂತಿಸಬೇಕು.  ನಾವು ಹರ್ಷವಾಗಿರಲು ಅದೆಷ್ಟು ಅಂಶಗಳಿವೆ. ನಿಸರ್ಗವೇ ಅಂತಹುದನ್ನು ಪ್ರತಿನಿತ್ಯ ಹೊಸ ಹೊಸತನ್ನು  ನೀಡುತ್ತಿರುತ್ತದೆ.  ಋತುಗಳ ಬದಲಾವಣೆ, ವೈವಿಧ್ಯಮಯ ಹೂ, ಹಣ್ಣು, ಕಾಯಿಗಳು, ವಿಧ ವಿಧವಾದ ಪಕ್ಷಿ, ಪ್ರಾಣಿಗಳು – ಮನುಷ್ಯನಿಗೆ ಅವುಗಳನ್ನು ನೋಡಿ ತಿಳಿಯಲು ಒಂದು ಜನ್ಮ ಸಾಕಾಗುತ್ತದೆಯೆ? ಎಳೆಯ ಮಕ್ಕಳು ತೊದಲು ಮಾತುಗಳನ್ನು ಆಡುತ್ತಾ ಉಯ್ಯಾಲೆ ಆಡುವುದನ್ನು, ಪಾರ್ಕಿನಲ್ಲಿ ಆಡುವುದನ್ನು ನೋಡಿದರೆ ಹರ್ಷ ಉಂಟಾಗುವುದಿಲ್ಲವೇ?  ತರಕಾರಿ ಮಾರುಕಟ್ಟೆಗೆ ಹೋಗಿ ಒಂದು ಜಾಗದಲ್ಲಿ ನಿಂತು ನೋಡಿದರೆ ಸಾಕು – ಎಂತಹ ವೈವಿಧ್ಯಮಯ ಜಗತ್ತು.  ತರಹೇವಾರಿ ತರಕಾರಿಗಳು, ಕೊಳ್ಳುವವರು, ಮಾರುವವರು, ಅವರ ನಡುವಿನ ಚೌಕಾಸಿ ವ್ಯಾಪಾರಗಳು – ಎಷ್ಟು ಚಂದ!

ಈ ಜಗತ್ತು ಯಾವತ್ತೂ ಸಂತೋಷಮಯವೇ. ಆ ಸಂತೋಷವೇ ಜ್ಞಾನದ ಹೆಬ್ಬಾಗಿಲು. ಅದರಿಂದಲೇ ಸತ್ಯ ಸಾಕ್ಷಾತ್ಕಾರ.  ಭಾವನೆಗಳೆಲ್ಲವೂ ಶುದ್ಧವಾಗುವುದೇ ಇಂತಹ ಮೌಲ್ಯಭರಿತ ವಿಚಾರಗಳಿಂದ. ಯಾವ ಮನುಷ್ಯನಿಗೆ ಸಂತೋಷದಿಂದ ಇರಲು ಆಗುವುದಿಲ್ಲ, ಸಂತೋಷವನ್ನು ನೀಡಲು ಸಾಧ್ಯವಿಲ್ಲವೋ ಅವನನ್ನು ಕೊಳಕ ಎಂದೇ ಭಾವಿಸಬೇಕು. ವಾರಕ್ಕೆರಡು ದಿನ ವರ್ತನೆಗೆಂದು ಮಲ್ಲಿಗೆ ಹೂ ತಂದುಕೊಡುವ ಹನ್ನೊಂದು ವರ್ಷದ ಹುಡುಗ ಅದೆಷ್ಟು ಹರ್ಷದಿಂದ ಇರುತ್ತಾನೆ! ಆ ಚಳಿಯ ದಿನಗಳಲ್ಲಿ, ಮುಂಜಾನೆಯೇ ಮಂಜು ಸುರಿಯುತ್ತಿರುವಾಗ, ಮೂಗನ್ನೂ ಸೊರ್ ಸೊರ್ ಎನ್ನಿಸಿಕೊಂಡು ಸೈಕಲ್ ತುಳಿಯುತ್ತಾ ‘ಆಂಟಿ...ಎಷ್ಟು ಮಾರು ಕೊಡಲಿ?’ ಎಂದು ಕೇಳುವಾಗ ಅವನ ಧ್ವನಿಯಲ್ಲಿ ಏನೋ ಸಡಗರ.  ‘ಬಾರೋ ಕಾಫಿ ಕುಡಿ’ ಅಂದರೆ, ‘ಇಲ್ಲಾ ಆಂಟಿ. ಲೇಟ್ ಆಗುತ್ತೆ. ಇದನ್ನೆಲ್ಲ ಕೊಟ್ಟು, ಅಮ್ಮಂಗೆ ಬುಟ್ಟಿ ಕೊಟ್ಟು, ಗಂಜಿ ಕುಡಿದು ಸ್ಕೂಲ್‌ಗೆ ಓಡಬೇಕು’ ಎನ್ನುವಾಗ ಆಗಲೇ ಅವನು ಸೈಕಲ್ ಹತ್ತಿ ಹೊರಟಿರುತ್ತಾನೆ.  ಅವನ ಮುಖದಲ್ಲಿ ಎಂದೂ ನಗೆ ಇಳಿದದ್ದು ಕಂಡಿಲ್ಲ. ಹಿರಿಯರು ಹೇಳುತ್ತಿದ್ದರು: ‘ಸಂತೋಷವಾಗಿರುವುದಕ್ಕೂ ಕೇಳಿಕೊಂಡು ಬರಬೇಕು’.  ಮೂರು ಹೊತ್ತೂ ಅಳುವಿನ ಬಾಗಿಲನ್ನು ತೆರೆದಿಟ್ಟು ಕುಳಿತಿರುವವರನ್ನು ಕಂಡಾಗ ಈ ವಾಕ್ಯ ನೆನಪಾಗುತ್ತದೆ.  ಸಂತೋಷವಾಗಿರಲು ದುಡ್ಡು ಕೊಡಬೇಕೇ ?

ಈ ಜಗತ್ತಿನಲ್ಲಿ ತನಗೆ ಮಾತ್ರ ದುಃಖ ಇದೆ ಎಂದು ಯೋಚಿಸುವುದು ರೋಗದ ಮನಃಸ್ಥಿತಿ. ಬೇರೆಯವರ ಕಷ್ಟ ಸುಖಗಳಿಗೆ ಸ್ಪಂದಿಸಲು ಸಾಧ್ಯವೇ ಆಗದಂತಹ ಒಂದು ವ್ಯಕ್ತಿತ್ವ ಅದು. ಬದುಕಿನಲ್ಲಿ ನೋವು ಎಂಬುದು ಸಹಜ ಕ್ರಿಯೆ. ಕೆಲವು ಪ್ರಸಂಗಗಳಿಗೆ ಸುಖ ಎಂದು ಹೆಸರಿಡುವಂತೆ ಕೆಲವು ಪ್ರಸಂಗಗಳಿಗೆ ದುಃಖ ಎಂದು ಹೆಸರಿಸುತ್ತೇವೆ. ನಾವು ಹೆಸರಿಟ್ಟರೂ, ಇಡದಿದ್ದರೂ – ಅದು ಹಾಗೆಯೇ ಇರುತ್ತದೆ. ಅದರ ಪರಿಣಾಮ, ಫಲ ಎಲ್ಲವೂ ಅದಕ್ಕೆ ತಕ್ಕಂತೆಯೇ ಇರುತ್ತದೆ.  ನಮ್ಮ ಬಯಕೆಗೆ ತಕ್ಕಂತೆ ಭೂಮಿ ತಿರುಗಲು ಸಾಧ್ಯವಿಲ್ಲ. ಇದನ್ನು ಅರಿಯಬೇಕು.  ಈ ಭೂಮಿಯ ತುಂಬ ಎಂತಹ ಶ್ರೇಷ್ಠವಾದ ಸಂಪತ್ತಿದೆ.  ಅದೆಷ್ಟು ಪವಿತ್ರ ಮತ್ತು ಆನಂದದಾಯಕ. ಪ್ರತಿನಿತ್ಯ ನಮ್ಮ ಮನೆಯ ಕಿಟಕಿಯಲ್ಲಿ ಕೂತ ಹಕ್ಕಿ ತನ್ನ ಚಿಲಿಪಿಲಿಯನ್ನು ನಮಗೆ ನೀಡುತ್ತದೆಯೇ ಹೊರತು ಅಳುವನ್ನಲ್ಲ.  ಆದರೆ ನಾವೇಕೆ ಇದ್ದ ಜಾಗದಲ್ಲಿ, ಹೋದ ಜಾಗದಲ್ಲೆಲ್ಲ ಅಳುವಿನ ಸಂತಾನಗಳನ್ನು ನಿರ್ಮಿಸಬೇಕು? ಕೇವಲ ಹಳಹಳಿಕೆಯ, ನೋವಿನ ದಿನಗಳನ್ನೇ ದಾಖಲಿಸಬೇಕು?  ಬೆಂಗಳೂರು ಬಸ್ಸನ್ನು ಹತ್ತಿ ಕುಳಿತರೆ ಆ ಬಸ್ಸಿನಲ್ಲಿ ಇರುವವರೆಲ್ಲರೂ ಬೆಂಗಳೂರನ್ನೇ ತಲುಪುವುದು.  ಕೆಲವರು ನಿಂತು ತಲುಪುತ್ತಾರೆ, ಕೆಲವರು ಕುಳಿತು, ಕೆಲವರಿಗೆ ಮುಂದಿನ ಸೀಟು, ಕೆಲವರಿಗೆ ಹಿಂದಿನ ಸೀಟು. ರಸ್ತೆ ಇದ್ದಂತೆ ಬಸ್ಸು ಹಳ್ಳ ಕೊಳ್ಳಗಳಲ್ಲಿ, ತಿರುವುಗಳಲ್ಲಿ ಸಾಗಿ ಹೋಗಲೇ ಬೇಕು. ನಮಗೆ ತೊಂದರೆ ಆಯಿತು – ಎಂದು ಡ್ರೈವರ್, ಕಂಡಕ್ಟರ್, ಸಹಪ್ರಯಾಣಿಕರು ಎಲ್ಲರ ಜೊತೆ ಮುನಿಸಿಕೊಂಡು, ಅತ್ತುಕೊಂಡು ಪ್ರಯಾಣಿಸಿದರೆ, ನಾವು ಪ್ರಯಾಣದ ಆನಂದವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತೇವೆ. ನಮಗೆ ಅಧಿಕಾರವಿದ್ದರೂ ನಾವು ರಸ್ತೆಯನ್ನಾಗಲೀ, ಪ್ರಯಾಣಿಕರನ್ನಾಗಲೀ, ಡ್ರೈವರನನ್ನಾಗಲೀ ಬದಲಾಯಿಸಲು ಸಾಧ್ಯವಿಲ್ಲ. ಆದರೆ ಸ್ವಲ್ಪ ಸಹನೆ ಮತ್ತು ಹೊಂದಾಣಿಕೆ ಕಲಿತರೆ ಅದೇ ಪ್ರಯಾಣವನ್ನು ಆನಂದವಾಗಿ, ಸ್ಮರಣೀಯವಾಗಿ ಮಾಡಬಹುದು – ಅದೆಷ್ಟೇ ದೂರದ ಪ್ರಯಾಣವಿರಲಿ. ಇಂತಹ ಚಿಂತನೆಗಳಿಂದಲೇ ಅನೇಕ ವಿಜ್ಞಾನಿಗಳು, ಸಂತರು, ಕ್ರಾಂತಿಕಾರರು ಸಮಜೋದ್ಧಾರದ ಕಾರ್ಯಗಳನ್ನು ಮಾಡಿದ್ದಾರೆ. ಅವರು ತಮ್ಮ ಜೀವನದ ಅಶುಭದಿನಗಳನ್ನೇ ಮೆಲುಕು ಹಾಕುತ್ತ ಕುಳಿತುಕೊಂಡಿದ್ದರೆ ಅವರಿಂದ ಸಮಾಜಕ್ಕೆ ಯಾವ ಕಾಣ್ಕೆಯೂ ದೊರಕುತ್ತಿರಲಿಲ್ಲ. ನಮ್ಮ ಮುಂದಿರುವ ಕಾಲ ದೊಡ್ಡದು.  ಪ್ರಯಾಣವೂ ಮಹತ್ತಿನದು. ಅದನ್ನು ಆನಂದವಾಗಿರಿಸಿಕೊಳ್ಳುವುದು ನಮ್ಮದೇ ಕರ್ತ್ಯವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT