ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡೆ ಪಡಿ, ಕೊಡೆ ಹಿಡಿ!

Last Updated 23 ಮೇ 2017, 19:30 IST
ಅಕ್ಷರ ಗಾತ್ರ

ಮಳೆಗಾಲ ಬಂತು. ಮೂಲೆಯಲ್ಲಿ ಮಡಿಸಿಟ್ಟ ಛತ್ರಿಗಳ ನೆನಪು ಬರಿಸುವ ಮಳೆ ಇಳೆಗಿಳಿಯಲಾರಂಭಿಸಿದೆ. ಹೋದ ವರ್ಷ ನಮ್ಮಿಂದ ಛತ್ರಿ ಯಾರು ಎರವಲು ಪಡೆದರೋ ಎಂದು ಜ್ಞಾಪಿಸಿಕೊಳ್ಳುವ ಕಾಲವೂ ಇದು. ಹೌದು, ಬಿಸಿಲು-ಮಳೆಗಳಿಗೆ ತಡೆಯೊಡ್ಡಿ ನಮ್ಮನ್ನು ರಕ್ಷಿಸುವುದು ‘ಕೊಡೆ’. ಛತ್ರಿ ಎಂದೂ ಕರೆಸಿಕೊಳ್ಳುವ ಈ ಸಾಧನ ಮೊದಲಿಗೆ ಮನೆಯ ಗೋಡೆಗೋ ಅಥವಾ ಬಾಗಿಲ ಹಿಂದೋ ಸ್ಥಾನ ಪಡೆದಿರುತ್ತಿತ್ತು. ಆದರೆ ಕಾಲಾಂತರದಲ್ಲಿ ಮಡಚಿ ಬಗಲಿಗೇರುವಷ್ಟು ಅಥವಾ ಕೈಚೀಲದೊಳಕ್ಕೆ ಮುದುರಿಡುವಷ್ಟು ಪುಟ್ಟದಾಗಿದೆ. ಕೇಂದ್ರಬಿಂದುವಿನಿಂದ ಅರಳಿದ ವೃತ್ತದಂತೆ ಬಿಚ್ಚಿದ ಕೊಡೆ ವರ್ತುಲಾಕಾರವಾಗಿ ತಲೆಯ ಮೇಲೊಂದು ತಾತ್ಕಾಲಿಕ ಸೂರನ್ನು ಒದಗಿಸುತ್ತದೆ. ತಲೆಗೆ, ತನ್ಮೂಲಕ ಮೈಗೆ ರಕ್ಷಣೆಯೇನೋ ದೊರೆಯಿತು. ಆದರೆ ಮನಸ್ಸಿಗೂ ಒಂದು ಕೊಡೆ ಬೇಕಲ್ಲವೆ? ನಮ್ಮ ಸುತ್ತಮುತ್ತಲ ವಿದ್ಯಮಾನಗಳು ಕೆಲವೊಮ್ಮೆ ಬಿಸಿಲಿನಷ್ಟೇ ಪ್ರಖರವಾಗಿ, ಮಳೆಯಷ್ಟೇ ರಭಸವಾಗಿ ಮನಸ್ಸಿನಂಗಳಕ್ಕೆ ದಾಳಿಯಿಡುತ್ತವೆ. ರಕ್ಷಿಸದಿದ್ದರೆ ವ್ಯಕ್ತಿತ್ವಕ್ಕೆ ಅಪಾರ ಹಾನಿ. ಆದರ್ಶಗಳ ಚಿಗುರು ಒಣಗಬಹುದು ಅಥವಾ ಹದಗೊಂಡ ಮನಸ್ಸಿನಲ್ಲಿ ಬಿತ್ತಿದ ಬೀಜ ಕೊಚ್ಚಿಹೋಗಬಹುದು. ಬಿಸಿಲು-ಮಳೆಗಳಿಗೆ ಪೋಷಕಶಕ್ತಿಯೂ ಇದೆ, ನಾಶಕಶಕ್ತಿಯೂ ಇದೆ. ನಮ್ಮ ಆಲೋಚನಾಕ್ರಮಗಳನ್ನು ರೂಪಿಸುವವು ನಮ್ಮ ಓದು, ಮಿತ್ರಸಹವಾಸ ಮತ್ತು ನಾವೇ ಕಾಲಾನುಕ್ರಮದಲ್ಲಿ ರೂಢಿಸಿಕೊಂಡ ನಡತೆ, ಆಚರಣೆಗಳು. ಇವುಗಳಲ್ಲಿ ಕೆಲವು ಅಂಶಗಳ ಮೇಲೆ ನಮ್ಮ ನಿಯಂತ್ರಣವಿದೆ, ಕೆಲವುದರ ಮೇಲೆ ಇಲ್ಲ. ಆದರೆ ಇವು ನಮ್ಮನ್ನು ತಾಗುವುದಂತೂ ಖಂಡಿತ. ಜೊತೆಗೆ ಇಂದು ಪತ್ರಿಕೆಗಳು, ನಿಯತಕಾಲಿಕೆಗಳು, ಚಲನಚಿತ್ರ, ಸಾಹಿತ್ಯ, ರಂಗಭೂಮಿ ಮೊದಲಾದ ಮಾಧ್ಯಮ ಮತ್ತು ಕಲಾಪ್ರಕಾರಗಳು ಮೌಲ್ಯಕ್ಕಿಂತ ಹೆಚ್ಚಾಗಿ ಮನೋರಂಜನೆಯನ್ನು ನೀಡಲು ಪಣತೊಟ್ಟಿರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ. ಮನೋರಂಜನೆಯ ಲೇಪದಲ್ಲಿ ಮೌಲ್ಯಗಳನ್ನು ನೀಡಬೇಕಾದ ಈ ಮಾಧ್ಯಮಗಳು ತಮ್ಮ ಮುಖ್ಯ ಉದ್ದೇಶ ಮರೆತು ‘ಜನಮೆಚ್ಚುವ’ ಸರಕು ನೀಡಲು ಮುಂದಾಗುತ್ತಿರುವುದು ವಿಷಾದನೀಯ. ಹೀಗಾಗಿ ವ್ಯಕ್ತಿಯ ಮೌಲ್ಯಗ್ರಹಣದ ಜವಾಬ್ದಾರಿ ಮತ್ತೂ ಹೆಚ್ಚಿನದಾಗುತ್ತದೆ. ಇಂದು ನಡೆಯುತ್ತಿರುವ ಎಷ್ಟೋ ಸಾಮಾಜಿಕ ಅಪರಾಧಗಳಿಗೆ ಪ್ರೇರಣೆ ದೊರೆಯುತ್ತಿರುವುದೇ ಮೇಲೆ ಸೂಚಿಸಿದ ಮಾಧ್ಯಮಗಳಿಂದ ಎಂಬುದನ್ನು ಅವುಗಳೇ ವರದಿ ಮಾಡಿವೆ. ಹೀಗಾಗಿ ನಾವೊಂದು ಅದೃಶ್ಯ ಕೊಡೆಯನ್ನು ಹೊತ್ತು ಸಾಗುವುದು ಅನಿವಾರ್ಯ. ಹೇಗೆ ಹಾದಿಯ ಮುಳ್ಳು ನಿವಾರಿಸಲು ಪಾದರಕ್ಷೆ ಧರಿಸುತ್ತೇವೋ ಹಾಗೇ ಮನಸ್ಸಿಗೂ ಒಂದು ಕೊಡೆ ಹಿಡಿಯಬೇಕು. ಉತ್ತಮ ವಿಚಾರಗಳು ಮೈಮನ ತಾಗಲು ಅನುವು ಮಾಡಿಕೊಟ್ಟು ದುರ್ಬಲಗೊಳಿಸುವ ಅಂಶಗಳು, ಕುವಿಚಾರಗಳು ತಾಗದಂತೆ ಕೊಡೆ ಹಿಡಿಯಬೇಕು. ಅದರಲ್ಲೂ ಯೌವನದ ದಿನಗಳಲ್ಲಿ ಈ ಮಾನಸಿಕ ಕೊಡೆಯನ್ನು ಸದಾ ತೆರೆದಿಟ್ಟಿರಬೇಕು. ಆಶ್ರಮದ ಸ್ವಯಂಸೇವಕ ಶಿಸ್ತಿಗೆ ಹೆಸರಾದ ಸ್ವಾಮಿಗಳೊಬ್ಬರ ಗರಡಿಯಲ್ಲಿ ಬೆಳೆಯುತ್ತಿದ್ದ. ಪ್ರೌಢಶಾಲಾ ದಿನಗಳಿಂದಲೂ ಆಶ್ರಮದ ಸಂಪರ್ಕವಿದ್ದ ಅವನಿಗೆ ಸ್ವಾಮಿಗಳು ಕೈತುಂಬ ಕೆಲಸ ಕೊಡುತ್ತಿದ್ದರು. ಕಾಲೇಜು ಸೇರಿದ ಮೇಲೆ ಕೆಲಸ ಇನ್ನು ಹೆಚ್ಚಿತು. ವಾರಾಂತ್ಯದಲ್ಲಂತೂ ಮೈಮುರಿಯುವಷ್ಟು ಕೆಲಸ. ಕೆಲಸ ಕೆಡಿಸಿದರೆ ವಾಗ್ದಂಡನೆ. ಜಾಗರೂಕನಾಗಿ, ಅಚ್ಚುಕಟ್ಟಾಗಿ ಕೆಲಸ ಮಾಡುತ್ತಲೇ ಇದ್ದ ಯುವಕ. ಒಮ್ಮೆ ಸ್ವಾಮಿಗಳು ಅವನನ್ನು ಕರೆದು ವಿಚಾರಿಸಿದರು,
‘ಏನು, ನಿನಗೆ ಚೆನ್ನಾಗಿ ನಿದ್ರೆ ಬರುತ್ತದೊ?’

‘ಹೌದು, ಬರುತ್ತದೆ ಸ್ವಾಮೀಜಿ.’

‘ನಿದ್ರೆಗೆ ಮುನ್ನ ಅಥವಾ ಎಚ್ಚರದ ಮುನ್ನ ಮನಸ್ಸು ವಿಹರಿಸುತ್ತದೆಯೆ?’

‘ಇಲ್ಲ ಸ್ವಾಮೀಜಿ. ರಾತ್ರಿ ದಿಂಬಿಗೆ ತಲೆ ಕೊಡುತ್ತಿದ್ದಂತೆ ಗಾಢನಿದ್ರೆ, ಏಕೆಂದರೆ ಅಷ್ಟೊಂದು ದಣಿವಾಗಿರುತ್ತದೆ.’

‘ಕನಸುಗಳು?’

‘ಅಪರೂಪ ಸ್ವಾಮೀಜಿ.’

‘ಗೆದ್ದೆ ನೀನು. ಆದರೆ ಆಲಸ್ಯಕ್ಕೆ ಎಂದೂ ವಶನಾಗಬೇಡ. ಹಾಗೆ ವಶನಾದರೆ ಅಂದಿನಿಂದ ನಿನ್ನ ಅಧಃಪತನ ಆರಂಭವಾಗುತ್ತದೆ.’

ಸ್ವಾಮಿಗಳು ಅವನ ವೈಯಕ್ತಿಕ ಜೀವನದ ಪರಿಶುದ್ಧತೆಗೆ, ಮನಸ್ಸಿನ ಪಾವಿತ್ರ್ಯ ಕೆಡದಂತೆ ಇರಲು ಕೈತುಂಬ ಕೆಲಸ ಕೊಡುತ್ತಿದ್ದರೆಂಬ ಗುಟ್ಟು ಅವನಿಗೆ ಅರಿವಾಗುವ ವೇಳೆಗೆ ಅವನು ಅದರ ಪೂರ್ಣ ಪ್ರಯೋಜನ ಪಡೆದಿದ್ದ. ಮುಂದೆ ಯಶಸ್ವಿ ಗೃಹಸ್ಥಾಶ್ರಮಿಯೂ ಆದ. ಆದರೆ ಗುರುಗಳ ಹೇಳಿದ ಸೂತ್ರವಾಕ್ಯವನ್ನು ಇಂದೂ ಪಾಲಿಸುತ್ತಾ ಸಂತೋಷದಿಂದಿದ್ದಾನೆಂದು ಮೊನ್ನೆ ಭೇಟಿಯಾದಾಗ ತಿಳಿಸಿದ.  ಕಾಯಕವೇ ‘ಕೊಡೆ’ಯಾದ ಉದಾಹರಣೆಯಿದು. ಜಗವನ್ನು ನಾವು ತಿದ್ದಲಾರೆವು ಆದರೆ ನಮ್ಮ ರಕ್ಷಣೆ ನಮ್ಮ ಹೊಣೆ. ಬದುಕಿನ ಆಯ್ಕೆಗಳು ಎದುರಾದಾಗ, ಮೌಲ್ಯಗಳ ತಾಕಲಾಟವಾದಾಗ, ವಿರೋಧದ ಅಲೆ ಎದ್ದಾಗ, ದ್ವೇಷದ ಝಳ ಅಪ್ಪಳಿಸಿದಾಗ ನಮ್ಮ ಕೊಡೆ ನಮ್ಮನ್ನು ರಕ್ಷಿಸಬೇಕು. ಅಂಗುಲಿಮಾಲನಲ್ಲಿ ಎಂತಹ ರೋಷದ ಧಗೆ, ಇಡೀ ಮನುಕುಲದ ವಿರುದ್ಧ ಎಂತಹ ದ್ವೇಷದ ಪ್ರವಾಹ ಅವನಲ್ಲಿ! ಭಗವಾನ್ ಬುದ್ಧ ಎದುರಾಗುವವರೆಗೆ ಅವನು ವಿಜೃಂಭಿಸಿದ, ಎದುರಿಗೆ ಬಂದವರನ್ನು ಕತ್ತರಿಸಿ ಎಸೆದ, ಹಾಗೆ ಕೊಂದವರ ಬೆರಳುಗಳ ಮಾಲೆ ಧರಿಸಿದ. ಆದರೆ ಬುದ್ಧ ತನ್ನ ಪ್ರೇಮದ ಕೊಡೆ ಹಿಡಿದು ಅವನೆದುರು ನಿಂತಾಗ ಅವನ ರೋಷ, ದ್ವೇಷದ ಪ್ರವಾಹಗಳೆಲ್ಲ ಸೋತವು, ತನಗೂ ಅಂತಹುದೊಂದು ಕೊಡೆ ಕೊಡಿರೆಂದು ಬೇಡಿದ. ಬುದ್ಧ ನಕ್ಕ, ಅಂತಹ ಕೊಡೆ ಪಡೆಯುವ ಮಾರ್ಗ ತೋರಿದ. ಗಾಂಧೀಜಿಯವರನ್ನು ಅದೆಷ್ಟು ಬಾರಿ ಬಂಧಿಸಿತು ಬ್ರಿಟಿಷ್ ಸರ್ಕಾರ, ಬಂಧಿಸಿ ಬಂಧಿಸಿ ಅದರ ಕೈಸೋತಿತೆ ಹೊರತು ಗಾಂಧೀಜಿ ಬಸವಳಿಯಲಿಲ್ಲ. ತಮ್ಮ ತಾಳ್ಮೆ, ಶಾಂತಿಯ ಕೊಡೆ ಹಿಡಿದು ಜಯ ಸಾಧಿಸಿಬಿಟ್ಟರು ಅವರು.

ಕೊಡೆ ಹಿಡಿದು ನಡೆಯುವುದು, ಕ್ಷೇಮವಾಗಿ ಜಗದ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವುದು ಮೊದಲ ಹಂತ. ಆದರೆ ಈ ಕೊಡೆಯನ್ನು ದೊಡ್ಡದಾಗಿಸಿಕೊಂಡು ಇತರರಿಗೆ ಆಶ್ರಯ ನೀಡುವುದು ಮುಂದಿನ ಹಂತ. ಜಗದ ಜ್ಞಾನಿಗಳೆಲ್ಲ ತಮ್ಮ ತಮ್ಮ ಕೊಡೆಗಳನ್ನು ತಮ್ಮೊಂದಿಗೇ ಒಯ್ದುಬಿಟ್ಟಿದ್ದರೆ ಉಳಿದ ಜನರ ರಕ್ಷಣೆ ಅಸಾಧ್ಯವಾಗುತ್ತಿತ್ತು. ಅವರು ತಮ್ಮ ಉಸಿರಿನ ಕೊನೆಯ ಕ್ಷಣದವರೆಗೂ ತಮ್ಮ ರಕ್ಷಣಾ ಕೊಡೆ ಬಿಡಿಸಿಯೇ ಇದ್ದರು. ಬುದ್ಧನಿಗೆ ಮಹಾಸಮಾಧಿಯ ಕ್ಷಣ ಸನ್ನಿಹಿತವಾಗಿದೆ. ಬುದ್ಧನ ಪ್ರಿಯ ಶಿಷ್ಯ ಆನಂದ, ಗುರುವಿಯೋಗ ಸನ್ನಿಹಿತವಾಗಿರುವುದನ್ನರಿತು ತನ್ನೊಳಗಿನ ದುಃಖವನ್ನು ನುಂಗಿಕೊಂಡು ಯಾರೂ ಹತ್ತಿರ ಬರದಂತೆ ತಡೆಯುತ್ತಿದ್ದಾನೆ. ಆದರೆ ಬೋಧಿಜ್ಞಾನ ಪಡೆಯುವ ಆಸೆಯಿಂದ ಒಬ್ಬ ವ್ಯಕ್ತಿ ಬಂದಿರುವುದನ್ನು ತಿಳಿದ ಬುದ್ಧ ಆನಂದನಿಗೆ ಆ ಮನುಷ್ಯನ್ನು ತನ್ನ ಬಳಿಗೆ ಕರೆತರಲು ಸೂಚಿಸುತ್ತಾನೆ ಮತ್ತು ಅವನಿಗೆ ಬೋಧಿಜ್ಞಾನವನ್ನೂ ಬೋಧಿಸುತ್ತಾನೆ. ಶ್ರೀರಾಮಕೃಷ್ಣರಿಗೆ ಗಂಟಲ ಹುಣ್ಣು-ಕ್ಯಾನ್ಸರ್ ಉಲ್ಬಣಿಸಿದೆ. ಆದರೆ ಅವರು ತಮ್ಮ ಶಿಷ್ಯವರ್ಗಕ್ಕೆ ಬೋಧಿಸುವುದನ್ನು ಬಿಟ್ಟಿಲ್ಲ. ವೈದ್ಯರು ಹೆಚ್ಚು ಮಾತನಾಡಬಾರದೆಂದು ಸೂಚಿಸಿದ್ದರೂ, ಶಿಷ್ಯರು ಅವರು ಮಾತನಾಡಬಾರದೆಂದು ಕೇಳಿಕೊಂಡರೂ ಅವರು ಬೋಧಿಸುತ್ತಲೇ ಇದ್ದಾರೆ. ‘ಏನು ಮಾಡಲಿ? ಭಗವಂತನ ಕುರಿತಾಗಿ ನಿಮ್ಮೊಂದಿಗೆ ಮಾತನಾಡದಿರಲು ನನಗೆ ಸಾಧ್ಯವೇ ಇಲ್ಲ!’ ಎನ್ನುತ್ತಾರೆ ಅವರು. ಅಷ್ಟೇ ಅಲ್ಲ ಅಂತಹ ದುರ್ಬಲ ಸ್ಥಿತಿಯಲ್ಲೂ ಅವರು ಕಲ್ಪತರು ದಿನದಂದು (ಜನವರಿ 1) ತಮ್ಮ ಶಿಷ್ಯರೊಂದಿಗೆ ಭಗವದುನ್ಮಾದದಲ್ಲಿ ನರ್ತಿಸಿ, ವಿಶೇಷ ಆಶಿವಾರ್ದಗಳನ್ನೂ ಮಾಡುತ್ತಾರೆ.

ಹಿಂದೊಮ್ಮೆ ನಿರ್ವಿಕಲ್ಪ ಸಮಾಧಿ ಸ್ಥಿತಿಯ ಅನುಭವ ಪಡೆದ ನರೇಂದ್ರನನ್ನು ಅವನ ಗುರುಗಳಾದ ಶ್ರೀರಾಮಕೃಷ್ಣರು ಕೇಳಿದರು, ‘ಹೇಗಿತ್ತು ಅದರ ಅನುಭವ?’. ‘ಬಹಳ ಸೊಗಸಾಗಿತ್ತು. ಸದಾ ಅದೇ ಸ್ಥಿತಿಯಲ್ಲಿ ಇರಬೇಕು ಎನಿಸುತ್ತದೆ...’ ಎಂದ ನರೇಂದ್ರ. ‘ಛೇ...ಛೇ...ಎಂತಹ ಸ್ವಾರ್ಥಿ ನೀನು! ನೀನೊಂದು ದೊಡ್ಡ ಆಲದ ಮರವಾಗಬೇಕು ಎಂದು ಬಯಸಿದ್ದೆ ನಾನು....’ ಎಂದು ಛೀಮಾರಿ ಹಾಕಿದರು ಗುರುಗಳು. ಶ್ರೀರಾಮಕೃಷ್ಣರ ನೆರವಿನಿಂದ ಅತ್ಯುನ್ನತ ಸತ್ಯಗಳನ್ನು ಅರಿತು, ಆ ಕೊಡೆ ಹಿಡಿದು ಒಬ್ಬನೇ ನಡೆದುಹೋಗಿಬಿಡಲು ಬಿಡುತ್ತಾರೆಯೇ ಗುರುಗಳು? ಅವನನ್ನು ಮತ್ತಷ್ಟು ತಿದ್ದಿದರು, ಜಗದ ನೊಂದ ಬೆಂದ ಮನುಜರೂ ಆ ಪಥದಲ್ಲಿ ಸಾಗಿಹೋಗಲು   ವಿವೇಕಾನಂದರೆಂಬ ಕೊಡೆ ಅರಳಿಸಿದರು. ನಾವು ಹಿರಿಯರಿಂದ ಕಲಿತದ್ದನ್ನೇ ನಮ್ಮ ಮುಂದಿನ ಪೀಳಿಗೆಗೆ ನೀಡಬೇಕು. ಜೀವನಯಾತ್ರೆ ಸುಗಮವಾಗಿ ನಡೆಯಬೇಕು. ಜಗದ ಮಳೆಯಲ್ಲಿ ನಡೆಯುವಾಗ ನೆನೆಯುತ್ತಿರುವ ಮತ್ತೊಬ್ಬರಿಗೆ ಕೊಡೆಯ ಆಸರೆ ನೀಡೋಣ.
 (ಲೇಖಕರು ಶಿಕ್ಷಣತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT