ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀನು ನನ್ನ ತಂಗಿ ಅಲ್ಲ, ತಾಯಿ’

Last Updated 23 ಮೇ 2017, 19:30 IST
ಅಕ್ಷರ ಗಾತ್ರ

ಗೀತಾ, ಮೊನ್ನೆ ನಾನು ಪೇಪರ್‌ ಓದುತ್ತಾ ಕುಳಿತಿದ್ದೆ.  ಆಗ ಅದರಲ್ಲಿ ಒಂದು ವಿಷಯದ ಬಗ್ಗೆ ಓದಿದೆ.  ಒಬ್ಬಳು ತನ್ನ ಅಪ್ಪನಿಗೆ ತನ್ನ ಮನದಾಳದ ಮಾತುಗಳನ್ನು, ಅನಿಸಿಕೆಗಳನ್ನು ಭಾವನಾತ್ಮಕವಾಗಿ ಬರೆದಿದ್ದಳು. ಅವಳಿಗೆ ತನ್ನ ಅಪ್ಪನ ಬಗ್ಗೆ ಇರುವ ಅಪಾರ ಪ್ರೀತಿಯನ್ನು ಅದರಲ್ಲಿ ವ್ಯಕ್ತಪಡಿಸಿದ್ದಳು.

ಅದನ್ನು ಓದಿ ನನಗೂ ಆನಂದದ ಕಣ್ಣೀರು ಬಂತು. ಆಗ ನನಗೂ ನಿನ್ನ ಬಗ್ಗೆ ನನಗೆ ಇರುವ ಮನದಾಳದ ಎಲ್ಲಾ ಮಾತುಗಳನ್ನು ಹೇಳಬೇಕು  ಅನಿಸಿತು.  ನಿನ್ನ ಮೇಲಿನ ಅಪಾರ ಪ್ರೀತಿ ಇಂದು ನನ್ನನ್ನು ಲೇಖಕಿಯನ್ನಾಗಿ ಮಾಡಿತು.

ನಾನು ವಯಸ್ಸಿನಲ್ಲಿ ಮಾತ್ರ ನಿನ್ನ ಅಕ್ಕ. ಎಲ್ಲದರಲ್ಲಿಯೂ ನೀನೇ ದೊಡ್ಡವಳು ಕಣೇ. ನೀನೆಂದರೆ ನನಗೆ ಅಭಿಮಾನ, ಪ್ರೀತಿ. ನನಗೆ ಸ್ನೇಹಿತೆ ಇದ್ದ ಹಾಗೆ. ನೀನು ಗುರುವೂ ಹೌದು. ಎಲ್ಲಕ್ಕಿಂತ ಹೆಚ್ಚಾಗಿ, ನೀನು ನನಗೆ ತಂಗಿ ಅಲ್ಲ, ತಾಯಿನೇ. ನಿನ್ನ ಸರಳತೆಯ ಗುಣಕ್ಕೆ ಸರಿಸಾಟಿ ಯಾರೂ ಇಲ್ಲ ಅಂತ ನನಗೆ ಅನಿಸುತ್ತದೆ. ಕಡು ಬಡತನದಲ್ಲಿ ನಾವು ಹುಟ್ಟಿ ಬೆಳೆದೆವು. ಅಪ್ಪ ಅಮ್ಮ ತಮ್ಮ ಬಡತನದ ನೋವುಗಳನ್ನು ನುಂಗಿ ನಮಗೆಲ್ಲಾ ಪ್ರೀತಿ ಉಣಿಸಿ ಬೆಳೆಸಿದರು. ನೀನು ಇಂದು ಈ ಸಮಾಜದಲ್ಲಿ ಆದರ್ಶ ಶಿಕ್ಷಕಿಯಾಗಿದ್ದೀಯಾ.

ನಾವು ನಾಲ್ವರು ಅಕ್ಕ ತಂಗಿಯರ ಮುದ್ದಿನ ತಂಗಿ ನೀನು. ಆದರೆ ಇಂದು ನಮಗೆಲ್ಲ ಅಪ್ಪ ಅಮ್ಮನ ಸ್ಥಾನವನ್ನು, ನೀನು ತುಂಬಿದ್ದೀಯ ಗೊತ್ತಾ? ತಮ್ಮನಿಗೆ ನೀನು ಅಂದರೆ ಅಪಾರ ಗೌರವ ಮತ್ತು ಪ್ರೀತಿ ಕೂಡ ಇದೆ. ಅಕ್ಕಂದಿರಿಗೆ ನೀನು ಅಂದರೆ ಪಂಚಪ್ರಾಣ. ನಿನ್ನ ಮುಂದೆ ಹೇಳಿಲ್ಲ ಅಷ್ಟೆ. ಯಾಕೆ ಅಂದರೆ ನೀನು ಎಲ್ಲರ ತರಹವೂ ಅಲ್ಲ.

ನೀನು ವೃತ್ತಿಯಲ್ಲಿ ಶಿಕ್ಷಕಿ. ನಿನಗಿರುವ ಸಾಮಾಜಿಕ ಜ್ಞಾನ ನಮಗಿಲ್ಲ. ನಾವೆಲ್ಲರೂ ಅಕ್ಕಂದಿರು ಕೇವಲ ಗಂಡನ ಮನೆಗೆ ಸೀಮಿತವಾದವರು. ಪ್ರಪಂಚವೆಂದರೆ ಗಂಡ ಮಕ್ಕಳು ಅಂತ ತಿಳಿದವರು.

ನೀನು ಹಾಗಲ್ಲ. ಮಕ್ಕಳಿಗೆ ವಿದ್ಯೆಯನ್ನು ಹೇಳಿಕೊಡುವವಳು. ತಪ್ಪು ಮಾಡಿದರೆ ತಿದ್ದುವವಳು. ಜ್ಞಾನದ ಬೆಳಕು ನೀಡುವವಳು. ಎಷ್ಟೋ ಬಾರಿ ನನಗೆ ಬುದ್ಧಿ, ಜೀವನದ ಪಾಠ ಹೇಳಿದವಳು. ವಿನಯ ಸೌಜನ್ಯ ಧೈರ್ಯ ಹೇಗಿರಬೇಕು. ಅಂತ ನಿನ್ನನ್ನು ನೋಡಿ ಕಲಿಯಬೇಕು.

ಅಪ್ಪ– ಅಮ್ಮ ಇಬ್ಬರೂ ಒಂದೇ ವರ್ಷದಲ್ಲಿ ತೀರಿಕೊಂಡ ಮೇಲೆ ನೀನು ನನಗೆ ನಿಜವಾಗಿಯೂ ತಾಯಿಯಾಗಿದ್ದೀಯಾ.

ದೈನಂದಿನ ಕೆಲಸಗಳ ನಡುವೆ ನೀನು ದಿನಕ್ಕೆ ಎರಡು ಬಾರಿ ಧ್ಯಾನಕ್ಕೆ ಕುಳಿತುಕೊಳ್ಳುವ ನಿನ್ನ ಅಭ್ಯಾಸವನ್ನು ಕಂಡರೆ ನನಗೆ ಕೈ ಮುಗಿಯಬೇಕು ಅನಿಸುತ್ತದೆ. ಜೊತೆ ಜೊತೆಯಾಗಿ ಕೂಡಿ ಬೆಳೆದವರು ನಾವು. ನಾವಿಬ್ಬರು ಜಗಳವಾಡಿದ ನೆನಪೇ ಇಲ್ಲ.  ನಿನ್ನ ಸ್ವಭಾವದ ಮೂಲಕ ಜನರು ನನ್ನನ್ನು ‘ನೀವು ಗೀತಾಳ ಅಕ್ಕನಾ’ ಅಂತ ಕೇಳುತ್ತಾರೆ. ‘ನಿಮ್ಮಲ್ಲಿ ಅವರ ಸೌಜನ್ಯ ಎದ್ದು ಕಾಣುತ್ತಿದೆ’ ಎಂದು ಹೇಳುತ್ತಾರೆ. ಅದನ್ನು ಕೇಳಿದಾಗ ನನಗಾಗುವ ಆನಂದ ಹೇಳತೀರದು. ನನ್ನ ತಂಗಿ ಹೇಗೆಲ್ಲಾ ಹೆಸರು ಮಾಡಿದ್ದಾಳೆ ಅಂತ ನನಗೆ ಆನಂದದ ಕಣ್ಣೀರು ಬರುತ್ತದೆ. ಎಲ್ಲರನ್ನು ಪ್ರೀತಿಸುವ ಸ್ವಭಾವ ನಿನ್ನದು. ನನ್ನ ಮಗಳು ಸಹ ನಿನ್ನ ತರಹ ಶಿಕ್ಷಕಿಯಾಗಬೇಕು ಅನ್ನುವ ಮಹದಾಸೆ ನನಗೆ. ನಿನ್ನಂತಹ ಸೃಜನಶೀಲ ಶಿಕ್ಷಕರು ಈ ಸಮಾಜಕ್ಕೆ ಬೇಕು.

ಯಾರು ಏನೇ ಕೇಳಿದರೂ ನೆರವಾಗುವ ನಿನ್ನ ಮನಸ್ಸು  ಇಷ್ಟವಾಗುತ್ತದೆ. ನೀನು ನನ್ನ ತಂಗಿ ಅನ್ನುವುದಕ್ಕಿಂತ ನಾನೇ ನಿನ್ನ ಅಕ್ಕ ಅಂತ ಹೇಳೋಕೆ ತುಂಬಾನೆ ಹೆಮ್ಮೆ ಆಗುತ್ತದೆ.

ನಿನ್ನಂತಹ ಮಗಳನ್ನು ಹೆತ್ತಿರುವ ಅಪ್ಪ–ಅಮ್ಮನಿಗೆ ಈ ಮೂಲಕ ನಾನು ಅಭಿನಂದಿಸುತ್ತೇನೆ.
– ಇಂತಿ ನಿನ್ನ ಅಕ್ಕ, ಸವಿತಾ ಆರ್‌.ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT