ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ದರಗಳಿಗೆ ಉದ್ಯಮದ ಅಪಸ್ವರ

Last Updated 23 ಮೇ 2017, 19:30 IST
ಅಕ್ಷರ ಗಾತ್ರ

ಸರಕು ಮತ್ತು ಸೇವೆಗಳ ಉಪಭೋಗದ ಮೇಲೆ ವಿಧಿಸಲಾಗುವ ರಾಷ್ಟ್ರೀಯ ಮಾರಾಟ ತೆರಿಗೆಯಾಗಿರುವ ಜಿಎಸ್‌ಟಿ ಜಾರಿ ನಿಟ್ಟಿನಲ್ಲಿ ಈಗ ಇನ್ನೊಂದು ಮಹತ್ವದ ಹೆಜ್ಜೆ ಇರಿಸಲಾಗಿದೆ. ಜುಲೈ 1 ರಿಂದ ಹೊಸ ತೆರಿಗೆ ವ್ಯವಸ್ಥೆ ಜಾರಿಗೊಳಿಸುವ  ಕುರಿತು ಕೆಲ ವಲಯಗಳಲ್ಲಿ  ಅನುಮಾನ ವ್ಯಕ್ತವಾಗುತ್ತಿದ್ದರೂ ಪೂರ್ವಭಾವಿ ಸಿದ್ಧತೆಗಳಂತೂ ಭರದಿಂದ ನಡೆದಿವೆ. ಪೂರಕ ಮಸೂದೆಗಳ ಅಂಗೀಕಾರ, ತೆರಿಗೆ ದರಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಗಳು ನಿಗದಿಯಂತೆ ನಡೆದಿವೆ.

ನಾಲ್ಕು ಹಂತದ ತೆರಿಗೆ ದರಗಳ ವ್ಯಾಪ್ತಿಗೆ ಒಳಪಡುವ ಸರಕು ಮತ್ತು ಸೇವೆಗಳ ಪಟ್ಟಿಯನ್ನು ಜಿಎಸ್‌ಟಿ ಮಂಡಳಿಯು ಅಂತಿಮಗೊಳಿಸಿದೆ. ಮೊನ್ನೆ ಶ್ರೀನಗರದಲ್ಲಿ ಸಭೆ ಸೇರಿದ್ದ ಮಂಡಳಿ ಸಭೆಯು ಒಂದು ಸಾವಿರಕ್ಕೂ  ಹೆಚ್ಚು ಸರಕುಗಳಿಗೆ ವಿಧಿಸುವ ತೆರಿಗೆ ದರ ನಿಗದಿಪಡಿಸಿದೆ.

ಹಣದುಬ್ಬರ ಮತ್ತು ಸರ್ಕಾರದ ಬೊಕ್ಕಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದ ರೀತಿಯಲ್ಲಿ   ಹೊಸ ತೆರಿಗೆ ದರಗಳನ್ನು ನಿಗದಿಪಡಿಸಲಾಗಿದೆ.

ಸಮಗ್ರ ಸ್ವರೂಪದ ಹೊಸ ಪರೋಕ್ಷ ತೆರಿಗೆ ವ್ಯವಸ್ಥೆಯು ದೇಶಿ ತೆರಿಗೆ ವ್ಯವಸ್ಥೆಯಲ್ಲಿ ವ್ಯಾಪಕ ಸುಧಾರಣೆ ತರಲಿದೆ.

ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ, ದರಗಳ ಸ್ವರೂಪದ ಬಗ್ಗೆ ಕೈಗಾರಿಕಾ ವಲಯದಲ್ಲಿ ಪರ – ವಿರೋಧ ಅಭಿಪ್ರಾಯ ಕೇಳಿ ಬರುತ್ತಿದೆ. ದರಗಳ ಸ್ವರೂಪವು  ಸಕಾರಾತ್ಮಕ ಮತ್ತು ಉತ್ತೇಜನಕಾರಿಯಾಗಿದೆ. ಉದ್ಯಮದ ಬೆಳವಣಿಗೆಗೆ ಪೂರಕವಾಗಿದೆ ಎಂದು ಕೆಲವು ಉದ್ಯಮಿಗಳು ಸ್ವಾಗತಿಸಿದ್ದಾರೆ.

ಆದರೆ, ಗರಿಷ್ಠ ಮಟ್ಟದ ತೆರಿಗೆ ದರಗಳಿಗೆ ಹೋಟೆಲ್‌, ವಿಮೆ, ಮೊಬೈಲ್‌ ಸೇವೆ, ವಾಹನ ತಯಾರಿಕೆ ಮತ್ತು ಹಣಕಾಸು ಸೇವಾ ಉದ್ಯಮದ ಕಡೆಯಿಂದ ತೀವ್ರ ಸ್ವರೂಪದ ಅಪಸ್ವರ ಕೇಳಿ ಬರುತ್ತಿದೆ.

ತೆರಿಗೆ ಹೊರೆ ಹೆಚ್ಚಾಯಿತು. ಇದರಿಂದ ಉದ್ಯಮದ ಪ್ರಗತಿಗೆ ಹಿನ್ನಡೆ ಉಂಟಾಗಲಿದೆ ಎಂದು ಉದ್ಯಮ ಸಂಘಟನೆಗಳು ಅಲವತ್ತುಕೊಳ್ಳುತ್ತಿವೆ. ಕರ್ನಾಟಕದ  ಹೋಟೆಲ್‌ ಮತ್ತು ರೆಸ್ಟೊರಂಟ್ಸ್‌ ಮಾಲೀಕರ ಸಂಘಟನೆಗಳು ತಮ್ಮ ಪ್ರತಿಭಟನೆ ದಾಖಲಿಸಲು ಒಂದು ದಿನ ಬಾಗಿಲು ಮುಚ್ಚಿ ಬಂದ್‌ ಆಚರಿಸಲೂ ಚಿಂತನೆ ನಡೆಸಿವೆ.

ಉದ್ಯಮ ವಲಯದಿಂದ ವ್ಯಕ್ತವಾಗುತ್ತಿರುವ ತೀವ್ರ ಸ್ವರೂಪದ ಆಕ್ಷೇಪಗಳ  ಕಾರಣಕ್ಕೆ ಈ ವಲಯಗಳ ಮೇಲೆ ವಿಧಿಸಿರುವ ತೆರಿಗೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುವ ಸಾಧ್ಯತೆ ಇದೆ.

ಗ್ರಾಹಕರಿಗೆ ವರ್ಗಾಯಿಸಿ
‘ಹೊಸ ತೆರಿಗೆ ವ್ಯವಸ್ಥೆ  ಜಾರಿ ವಿಷಯದಲ್ಲಿ ಆದಷ್ಟೂ ಪ್ರಾಮಾಣಿಕರಾಗಿರಿ. ಕಡಿಮೆ ತೆರಿಗೆ ದರಗಳ ಪ್ರಯೋಜನವನ್ನು  ಗ್ರಾಹಕರಿಗೆ ವರ್ಗಾಯಿಸಿ.  ದುರಾಸೆಯಿಂದ ಲಾಭ ಮಾಡಿಕೊಳ್ಳಲು ಮುಂದಾದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾದೀತು’ ಎಂದು ರೆವೆನ್ಯೂ ಕಾರ್ಯದರ್ಶಿ ಹಸ್ಮುಖ ಆಧಿಯಾ ಎಚ್ಚರಿಸಿದ್ದಾರೆ.

‘ಅಧಿಕ ಲಾಭ ಮಾಡಿಕೊಳ್ಳುವುದನ್ನು ತಡೆಯುವ ವ್ಯವಸ್ಥೆ ಜಾರಿಗೆ ಬರುತ್ತಿದ್ದಂತೆ, ಗ್ರಾಹಕರಿಗೆ ತೆರಿಗೆಯ ಲಾಭ ವರ್ಗಾಯಿಸದ ಮತ್ತು ಅನಪೇಕ್ಷಿತ ರೀತಿಯಲ್ಲಿ ಲಾಭ  ಮಾಡಿಕೊಂಡ ಉದ್ದಿಮೆ ಸಂಸ್ಥೆಗಳ ಹಣಕಾಸು ಪರಿಸ್ಥಿತಿ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಎಚ್ಚರಿಸಿದ್ದಾರೆ.

ಗ್ರಾಹಕರಿಗೆ ಹೊರೆಯಾಗದು
‘ಸರಕು ಮತ್ತು ಸೇವೆಗಳನ್ನು ಖರೀದಿಸಲು ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳಲಾರದು. ಜಿಎಸ್‌ಟಿಯ ಅಂತಿಮ ಪರಿಣಾಮವು ಹಣದುಬ್ಬರಕ್ಕೆ ಕಾರಣವಾಗಲಾರದು’ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಭರವಸೆ ನೀಡಿದ್ದಾರೆ.

ಮೊಬೈಲ್‌ ಖರೀದಿ ಮತ್ತು ಕರೆ ದರಗಳು ತುಟ್ಟಿಯಾಗಲಿವೆ ಎಂದು ಮೊಬೈಲ್‌ ಸೇವಾ ಸಂಸ್ಥೆಗಳೂ  ಅಸಮಾಧಾನ ಹೊರ ಹಾಕಿವೆ.

ದೂರಸಂಪರ್ಕ ಮತ್ತು ಹಣಕಾಸು ಸೇವೆಗಳು ಸದ್ಯದ ಶೇ 15ರ ಬದಲಿಗೆ ಶೇ 18ರ ತೆರಿಗೆ ದರ ವ್ಯಾಪ್ತಿಗೆ ಬರುವುದರಿಂದ ಗ್ರಾಹಕರಿಗೆ ತುಟ್ಟಿಯಾಗಿ ಪರಿಣಮಿಸಲಿವೆ. ‘ಇನ್‌ಪುಟ್‌ ಕ್ರೆಡಿಟ್‌’ನಿಂದಾಗಿ ಇಂತಹ ಆತಂಕ ದೂರವಾಗಲಿದೆ ಎಂದು ಸರ್ಕಾರ ಸಮಜಾಯಿಷಿ ನೀಡಿದೆ. ಜುಲೈ 1ರ ಮುನ್ನ ತಮ್ಮ ಸಂಗ್ರಹದಲ್ಲಿನ ಮೊಬೈಲ್‌ಗಳನ್ನು ಮಾರಾಟ ಮಾಡಲು ಸಂಸ್ಥೆಗಳು ಬೆಲೆಗಳಲ್ಲಿ ಆಕರ್ಷಕ ಕಡಿತ ಘೋಷಿಸುವ ಸಾಧ್ಯತೆಯೂ ಇದೆ.

ಸದ್ಯಕ್ಕೆ ಜಾರಿಯಲ್ಲಿ ಇರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ  16 ಬಗೆಯ  ತೆರಿಗೆಗಳಿಗೆ ಬದಲಿಗೆ ಇದೊಂದೇ ತೆರಿಗೆ ದೇಶದಾದ್ಯಂತ ಜಾರಿಗೆ ಬರಲಿದೆ. ಸರಕು ಮತ್ತು ಸೇವೆಗಳ ತಯಾರಕರು ಮತ್ತು ವಿತರಕರಿಂದ  ಬಳಕೆದಾರರಿಗೆ ತಲುಪುವ ಹಂತದಲ್ಲಿ (ಗಮ್ಯ ಸ್ಥಾನ ಆಧರಿಸಿದ) ವಿಧಿಸಲಾಗುವ ಏಕರೂಪದ ತೆರಿಗೆ ಇದಾಗಿದೆ. ಜಿಎಸ್‌ಟಿ ಜಾರಿ ನಿಟ್ಟಿನಲ್ಲಿ ಇನ್ನೂ ಕೆಲವು ಸಿಕ್ಕುಗಳಿವೆ. ಜಿಎಸ್‌ಟಿ ನೆಟ್‌ವರ್ಕ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಬಗೆಹರಿಸಿಕೊಳ್ಳಬೇಕಾಗಿದೆ. ಈ ಎಲ್ಲ ಕಂಟಕಗಳಿಗೆ ಗಡುವಿನೊಳಗೆ ಪರಿಹಾರ ಕಂಡುಕೊಂಡರೆ ಮಾತ್ರ ನಿಗದಿಯಂತೆ ಜುಲೈ 1ರಿಂದ ದೇಶದಲ್ಲಿ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ.

ಇನ್‌ಪುಟ್‌ ಕ್ರೆಡಿಟ್‌
ಉತ್ಪನ್ನವೊಂದಕ್ಕೆ ತಯಾರಕನು ಅಂತಿಮ ಹಂತದಲ್ಲಿ ತೆರಿಗೆ ಪಾವತಿಸುವಾಗ, ಸರಕಿನ ತಯಾರಿಕೆಗೆ ಬಳಸಿದ ಕಚ್ಚಾ ಸರಕುಗಳನ್ನು ಖರೀದಿಸುವಾಗ ಪಾವತಿಸಿದ ತೆರಿಗೆಯನ್ನು ಮುರಿದುಕೊಳ್ಳಬಹುದು. ಇದಕ್ಕೆ ‘ಇನ್‌ಪುಟ್‌ ಕ್ರೆಡಿಟ್‌’ (input credit)  ಎನ್ನುತ್ತಾರೆ. ಈ ವ್ಯವಸ್ಥೆ ಚಾಲನೆಗೆ ಬರುತ್ತಿದ್ದಂತೆ ಬಹುತೇಕ ಸರಕು ಮತ್ತು ಸೇವೆಗಳ ಮೇಲೆ ವಿಧಿಸಿರುವ ವಾಸ್ತವ ರೂಪದಲ್ಲಿನ ತೆರಿಗೆ  ಹೊರೆ ಕಡಿಮೆಯಾಗಲಿದೆ. ಇದೊಂದು ಸ್ವಯಂ ಚಾಲಿತ ವ್ಯವಸ್ಥೆಯಾಗಿದೆ.

**

ಪರಿಣಾಮಗಳು

ತ್ವರಿತವಾಗಿ ಬಿಕರಿಯಾಗುವ ಸರಕು
* ಗ್ರಾಹಕರು ವ್ಯಾಪಕವಾಗಿ ಬಳಸುವ ಹಾಲು, ದವಸ ಧಾನ್ಯ, ಬೇಳೆಗಳಿಗೆ ರಿಯಾಯ್ತಿ ನೀಡಲಾಗಿದೆ. ಸಕ್ಕರೆ, ಚಹ, ಖಾದ್ಯತೈಲ  ಶೇ 5ರ ವ್ಯಾಪ್ತಿಗೆ ತರಲಾಗಿದೆ.

* ಕೇಶ ತೈಲ, ಸೋಪ್‌, ಟೂತ್‌ಪೇಸ್ಟ್‌ಗಳನ್ನು ಶೇ 18ರ ವ್ಯಾಪ್ತಿಯಲ್ಲಿವೆ.  ಹೀಗಾಗಿ ತ್ವರಿತವಾಗಿ ಬಕರಿಯಾಗುವ ಗ್ರಾಹಕ ಸರಕುಗಳನ್ನು (ಎಫ್‌ಎಂಸಿಜಿ) ತಯಾರಿಸುವ ಉದ್ದಿಮೆಗೆ ಉತ್ತೇಜನ ದೊರೆಯಲಿದೆ.

ವಾಹನ ಉದ್ದಿಮೆ

* ದ್ವಿಚಕ್ರ ವಾಹನ ಮತ್ತು ಕಾರ್‌ಗಳ ಮೇಲೆ ಶೇ 28ರಷ್ಟು ತೆರಿಗೆ ಜತೆಗೆ ಸೆಸ್‌ ವಿಧಿಸಿರುವುದರಿಂದ ವಾಹನಗಳು ದುಬಾರಿಯಾಗಲಿವೆ.

ಗೃಹೋಪಯೋಗಿ ಸಲಕರಣೆ
* ಏ.ಸಿ. ರೆಫ್ರಿಜರೇಟರ್‌ನಂತಹ ಗೃಹ ಬಳಕೆ ಸಲಕರಣೆಗಳು ಕೂಡ ಶೇ 28ರ ವ್ಯಾಪ್ತಿಗೆ ಬರುವುದರಿಂದ ದುಬಾರಿಯಾಗಲಿವೆ.

ಮಲ್ಟಿಪ್ಲೆಕ್ಸ್‌ – ಸಿನಿಮಾ
* ಗರಿಷ್ಠ ಪ್ರಮಾಣದ ತೆರಿಗೆಗೆ ಒಳಪಡುವ ಜೂಜು ಮತ್ತು ಬೆಟ್ಟಿಂಗ್‌ ವಿಭಾಗದಲ್ಲಿ ಬರುವುದರಿಂದ ಮಲ್ಟಿಪ್ಲೆಕ್ಸ್‌ ಮತ್ತು ಚಲನಚಿತ್ರ ಮಂದಿರಗಳಲ್ಲಿ ಸಿನಿಮಾ ವೀಕ್ಷಣೆ ದುಬಾರಿಯಾಗಲಿದೆ.

ಉಕ್ಕು ಮತ್ತು ಕಲ್ಲಿದ್ದಲು
* ಕಲ್ಲಿದ್ದಲು ಮತ್ತು ಲೋಹದ ಅದಿರು ಶೇ 5ರಷ್ಟು ತೆರಿಗೆಗೆ ಒಳಪಡುವುದರಿಂದ, ಕಲ್ಲಿದ್ದಲ್ಲನ್ನೇ ಹೆಚ್ಚಾಗಿ ಅವಲಂಬಿಸಿರುವ ಉಕ್ಕು ತಯಾರಿಕೆ ಮತ್ತು ವಿದ್ಯುತ್‌ ಉತ್ಪಾದನೆಯ  ಉದ್ದಿಮೆಗಳಿಗೆ ಲಾಭವಾಗಲಿದೆ.

ಶಿಕ್ಷಣ ಮತ್ತು ಆರೋಗ್ಯ ಸೇವೆ
* ಈ ಎರಡೂ ವಲಯಗಳನ್ನು ರಿಯಾಯ್ತಿ ವ್ಯಾಪ್ತಿಗೆ ತರಲಾಗಿದೆ. ಇನ್ನಷ್ಟು ಸರಕು ಮತ್ತು ಸೇವೆಗಳನ್ನು ಇದರ ವ್ಯಾಪ್ತಿಗೆ ತರುವ ಆಲೋಚನೆ ತನಗೆ ಇಲ್ಲ  ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಸೇವಾ ತೆರಿಗೆ
* ದೂರಸಂಪರ್ಕ (ಮೊಬೈಲ್‌,) ಹಣಕಾಸು ಮತ್ತು ವಿಮೆ ಸೇವೆಗಳಿಗೆ ಸದ್ಯಕ್ಕೆ ಶೇ 15ರಷ್ಟು ತೆರಿಗೆ ಜಾರಿಯಲ್ಲಿತ್ತು. ಅದು ಶೇ 18ಕ್ಕೆ ಏರಿಕೆಯಾಗಿರುವುದರಿಂದ ಈ ಸೇವೆಗಳು ದುಬಾರಿಯಾಗಲಿವೆ.

**

ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇರುವ ಸರಕುಗಳು ಪೆಟ್ರೋಲ್‌, ವಿದ್ಯುತ್‌, ಮದ್ಯ, ರಿಯಲ್‌ ಎಸ್ಟೇಟ್‌

**

ತುಟ್ಟಿ
ಟೆಲಿಫೋನ್‌ ಬಿಲ್‌, ವಿಮೆ, ಬ್ಯಾಂಕಿಂಗ್‌ ಸೇವೆ, ಬಿಸಿನೆಸ್‌ ದರ್ಜೆ ವಿಮಾನ ಪ್ರಯಾಣ, ಪತ್ರಿಕೆಗಳಲ್ಲಿ ನೀಡುವ ಜಾಹೀರಾತು. ಸದ್ಯಕ್ಕೆ ಜಾಹೀರಾತುಗಳಿಗೆ ತೆರಿಗೆ ವಿನಾಯ್ತಿ ನೀಡಲಾಗುತ್ತಿದೆ.

ಅಗ್ಗ
ಸಾರಿಗೆಯನ್ನು ಸದ್ಯದ ಶೇ 6ರ ಬದಲಿಗೆ ಶೇ 5ರ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದರಿಂದಾಗಿ ಟ್ಯಾಕ್ಸಿ ಬಾಡಿಗೆ ನೀಡುವ ಓಲಾ, ಉಬರ್‌,  ಇಕಾನಮಿ ದರ್ಜೆಯ ವಿಮಾನ ಪ್ರಯಾಣ ಕೆಲಮಟ್ಟಿಗೆ ಅಗ್ಗವಾಗಿರಲಿದೆ.

ರಿಯಾಯ್ತಿ
ಶಿಕ್ಷಣ, ಆರೋಗ್ಯ ಸೇವೆ, ಮೆಟ್ರೊ, ಲೋಕಲ್‌ ಟ್ರೇನ್‌ ಮತ್ತು ಏ.ಸಿ ರಹಿತ ರೈಲ್ವೆ ಪ್ರಯಾಣ, ಧಾರ್ಮಿಕ ಯಾತ್ರೆ, ಹಜ್‌ ಯಾತ್ರೆ

**

ಜೂನ್‌ 3ಕ್ಕೆ ತೆರಿಗೆ ದರ ನಿರ್ಧರಿಸಲಿರುವ ಸರಕುಗಳು: ಚಿನ್ನ, ಬಿಸ್ಕಿಟ್‌, ಬೀಡಿ, ಜವಳಿ, ಪಾದರಕ್ಷೆ, ಜೈವಿಕ ಇಂಧನ, ಕೃಷಿ ಸಲಕರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT