ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 23 ಮೇ 2017, 19:30 IST
ಅಕ್ಷರ ಗಾತ್ರ

ಜಗನಾಥಗುಪ್ತ, ಬೆಂಗಳೂರು
* ಐಟಿಆರ್‌ 2013–14, 2014–15 ರಲ್ಲಿ ನಾನು ಸೆಕ್ಷನ್‌ 87 ಅಡಿಯಲ್ಲಿ ವಿನಾಯ್ತ ಪಡೆದಿಲ್ಲ. ಈಗ ಪಡೆಯಬಹುದೇ? ತಿಳಿಸಿ.
ಉತ್ತರ:
ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಿ (After Filing ITR Return)  ಅದರಲ್ಲಿ ವ್ಯತ್ಯಾಸವೇನಾದರೂ ಇರುವಲ್ಲಿ, ಪುನಃ ಅಂದರೆ (Revised Return)  ತುಂಬುವ ಅವಾಕಾಶವಿದೆ. ಈ ವಿಚಾರದಲ್ಲಿ ನೀವು ನಿಮ್ಮ ಮನೆಗೆ ಸಮೀಪದ ಚಾರ್ಟ್‌ರ್‍ಡ್‌ ಅಕೌಂಟೆಂಟ್‌ ಅವರನ್ನು ಸಂಪರ್ಕಿಸಿ ಹಾಗೂ ನೀವು ತಿಳಿಸುವ ವಿಚಾರದಲ್ಲಿ ಈಗ ಅವಕಾಶವಿದ್ದಲ್ಲಿ ತಕ್ಷಣ (Revised Return)   ಅವರ ಮುಖಾಂತರವೇ ಸಲ್ಲಿಸಿರಿ.

*

ಸ್ಕಂದ, ಬೆಂಗಳೂರು
* ನನಗೆ ತಾಯಿಯಿಂದ ₹ 6 ಲಕ್ಷ ಬರಲಿದೆ. ಡಿಡಿ ಮುಖಾಂತರ ತಾಯಿ ಕೊಡುತ್ತಾರೆ. ತೆರಿಗೆ ಕಡಿಮೆ ಮಾಡಿಕೊಳ್ಳುವ ವಿಧಾನ ತಿಳಿಸಿರಿ. ನಾನು ಮುಂದೆ ಮನೆ ಕಟ್ಟಿಸಬೇಕೆಂದಿದ್ದೇನೆ.
ಉತ್ತರ:
ತಾಯಿ ಮಗನಿಗೆ ಕೊಡುವ ಹಣ–ಆಸ್ತಿ–ಬಂಗಾರ ಅಥವಾ ಇನ್ನಿತರ ಬೆಲೆಬಾಳುವ ಸೊತ್ತುಗಳಿಗೆ, ಗಿಫ್ಟ್‌ ಟ್ಯಾಕ್ಸ್‌ ಬರುವುದಿಲ್ಲ. ಡಿಡಿ ಮುಖಾಂತರವೇ ಸ್ವೀಕರಿಸಿ, ಭದ್ರವಾದ ಬ್ಯಾಂಕಿನಲ್ಲಿ ಠೇವಣಿಯಾಗಿರಿಸಿ. ತೆರಿಗೆ ಅಥವಾ ಇನ್ನಿತರ ಭಯವಿಲ್ಲದೇ ನಿಶ್ಚಿಂತೆಯಿಂದ ಜೀವನ ಸಾಗಿಸಿರಿ. ತಾಯಿ ಒಳ್ಳೆಯ ದೃಷ್ಟಿಯಿಂದ ನಿಮಗೆ ಕೊಟ್ಟಿರುವ ಹಣ, ಹೆಚ್ಚಿನ ಬಡ್ಡಿ ಉಡುಗೊರೆ, ಕಮೀಷನ್‌ ಆಸೆಯಿಂದ ಅಭದ್ರವಾದ ಅಥವಾ ಊಹಾ ಪೋಹಗಳಿಗೆ ಸಂಬಂಧಿಸಿದ (Speculative Investments)  ಹೂಡಿಕೆಯಲ್ಲಿ ಇಟ್ಟು ನಷ್ಟ ಅನುಭವಿಸಬೇಡಿ. ನೀವು ಇಚ್ಚಿಸಿದಂತೆ ಮುಂದೆ ಮನೆ ಕಟ್ಟುವಾಗ, ಈ ಹಣ ತಾಯಿಯ ಆಶೀರ್ವಾದವೆಂದು ತಿಳಿದು ವಿನಿಯೋಗಿಸಿರಿ.

*

ಜಗದೀಶ, ಕೆ.ಜಿ.ಎಫ್‌
* ನಾನು ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಉಪನ್ಯಾಸಕ. ಫೆಡರಲ್‌ ಬ್ಯಾಂಕಿನಲ್ಲಿ 2010 ರಲ್ಲಿ ಗೃಹ ಸಾಲ ₹ 23 ಲಕ್ಷ ಪಡೆದು ಮನೆ ಕೊಂಡಿದ್ದೆ. ಈ ಸಾಲದ ಬಡ್ಡಿಯಲ್ಲಿ ತೆರಿಗೆ ವಿನಾಯತಿ ಪಡೆದಿರುತ್ತವೆ. ಈಗ  (Can Fin Housing)ನಲ್ಲಿ ಸಾಲ ಪಡೆದು ಇನ್ನೊಂದು ಮನೆ ಕೊಂಡಿದ್ದೇನೆ. ಇದನ್ನು ಅವರು (Commercial Loan) ಎಂದು ಪರಿಗಣಿಸಿದ್ದಾರೆ. ಇಲ್ಲಿ ಕೊಡುವ ಬಡ್ಡಿ ಹಾಗೂ ಫೆಡರಲ್‌ ಬ್ಯಾಂಕಿನ ಬಡ್ಡಿ ಸೇರಿಸಿ, ಗರಿಷ್ಠ ₹ 1.50 ಲಕ್ಷ ತೆರಿಗೆ ವಿನಾಯತಿ ಪಡೆಯಬಹುದೇ ತಿಳಿಸಿ.
ಉತ್ತರ:
ಇತ್ತೀಚಿನ ಆದಾಯ ತೆರಿಗೆ ಕಾನೂನಿನಂತೆ, ಯಾವುದೇ ವ್ಯಕ್ತಿ ಬೇರೆ ಬೇರೆ ಎರಡು ಮನೆಗಳನ್ನೂ, ಗೃಹಸಾಲದಿಂದ ನಿರ್ಮಿಸಿದಾಗ ಸ್ವಂತ ಉಪಯೋಗಿಸುವ ಮನೆಯ ಮೇಲಿನ ಗೃಹಸಾಲದ ಬಡ್ಡಿ ಮಾತ್ರ ಸೆಕ್ಷನ್‌ 24(ಬಿ) ಆಧಾರದ ಮೇಲೆ ವಿನಾಯ್ತಿ ಪಡೆಯಬಹುದು. ನೀವು (Can Fin Home)ನಲ್ಲಿ, ಪಡೆದ ಸಾಲ ಗೃಹ ನಿರ್ಮಿಸುವ ಅಥವಾ ಕೊಂಡುಕೊಳ್ಳುವ ಉದ್ದೇಶವಾದರೂ, ಅವರು ವಾಣಿಜ್ಯ ಉದ್ದೇಶದ ಸಾಲ (Commercial Purpose Loan) ಎಂದು ಪರಿಗಣಿಸಿರುವುದರಿಂದಲೂ ನಿಮಗೆ ಎರಡು ಮನೆ ಇರುವುದರಿಂದಲೂ, ಈ ವಿನಾಯ್ತಿ ಪಡೆಯುವಂತಿಲ್ಲ.

*

ಪ್ರಕಾಶ್‌ ಆರ್‌., ಮೈಸೂರು
* 3ನೇ ವರ್ಷ ಬಿ.ಎ. ಓದುವ ಹಾಗೂ ಪಿಯುಸಿ ಓದುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನನ್ನೊಡನೆ ₹ 10 ಲಕ್ಷ ಬೆಲೆ ಬಾಳುವ ಸ್ಥಿರ ಆಸ್ತಿ ಇದ್ದು ನನ್ನ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಇದನ್ನು ವಿನಿಯೋಗಿಸಬಹುದು. ಅವರ ಹೆಸರಿನಲ್ಲಿ ಪ್ರತ್ಯೇಕವಾಗಿ ವಿದ್ಯೆ ಹಾಗೂ ಮದುವೆಗೆ ಸ್ಥಿರ ಆಸ್ತಿ ಇರಿಸಿದ್ದೇನೆ. ನನಗೆ ಉಳಿತಾಯದ ಮಾರ್ಗ ತಿಳಿಸಿ.
ಉತ್ತರ:
ನಿಮ್ಮ ಉದ್ಯೋಗ–ಆದಾಯ ಹಾಗೂ ಇನ್ನಿತರ ವಿವರ ತಿಳಿಸಿಲ್ಲ. ನಿಮ್ಮ ಮಗಳು ಬಿ.ಎ. ಮುಗಿಸಿ, ಕೆಲಸಕ್ಕೆ ಸೇರಬಹುದು ಹಾಗೂ ಸ್ವಂತ ಉದ್ಯೋಗದಲ್ಲಿ ತೊಡಗಬಹುದು. ಇನ್ನೊಬ್ಬಳು ಮಗಳು ಪಿಯುಸಿಯಲ್ಲಿ ಇರುವುದರಿಂದ, ಅವಳಿಗೂ ವೃತ್ತಿಪರ ಶಿಕ್ಷಣವನ್ನೇ ಕೊಡಿ. ನೀವು ಮೈಸೂರಿನಂತಹ ನಗರದಲ್ಲಿರುವುದರಿಂದ, ಈ ಇಬ್ಬರೂ ಹೆಣ್ಣುಮಕ್ಕಳು ಅಲ್ಲಿಯೇ ಓದು ಮುಂದುವರಿಸಬಹುದು ಹಾಗೂ ಉದ್ಯೋಗ ಮಾಡಬಹುದು. ನಿಮ್ಮ ಯೋಜನೆ ಚೆನ್ನಾಗಿದೆ, ಆದರೆ ಸ್ಥಿರ ಆಸ್ತಿ ಸಾಧ್ಯವಾದರೆ ಮಾರಾಟಮಾಡದೇ ವಿದ್ಯೆ ಹಾಗೂ ಮಾಡುವ ಪ್ರಯತ್ನ ಮಾಡಿ. ಒಮ್ಮೆ ಮಾರಾಟ ಮಾಡಿದರೆ ಇನ್ನೊಮ್ಮೆ ಆಸ್ತಿ ಮಾಡುವುದು ಸುಲಭದ ಕೆಲಸವಲ್ಲ. ನಿಮ್ಮ ಆದಾಯಕ್ಕೆ ಅನುಗುಣವಾಗಿ ಕನಿಷ್ಠ ತಲಾ 10 ಗ್ರಾಮ್‌ ಬಂಗಾರ ವಾರ್ಷಿಕ ಕೊಳ್ಳಿರಿ, ಜೊತೆಗೆ ತಲಾ ₹ 5000 ಆರ್‌.ಡಿ. ಮಾಡಿರಿ. ನಿಮ್ಮ ಎರಡೂ ಮಕ್ಕಳಿಗೂ ಉಜ್ವಲ ಭವಿಷ್ಯ ಹಾರೈಸುತ್ತೇನೆ.

*

ನಾಗಮ್ಮ ಪಿ. ಚಿಕ್ಕಮಗಳೂರು
* ನಾನು ₹ 5,000 ಎಸ್ಐಪಿನಲ್ಲಿ ಪ್ರತೀ ತಿಂಗಳು ಹೂಡಬೇಕೆಂದಿರುವೆ. ಯಾವ ಸಂಸ್ಥೆ ಹಾಗೂ ಹೆಚ್ಚಿನ ಆದಾಯ ತರುವ ಯೋಜನೆ ತಿಳಿಸಿರಿ.
ಉತ್ತರ:
ಸಿಪ್‌ ಒಂದು ಕ್ರಮ ಬದ್ಧವಾಗಿ ಉಳಿತಾಯ ಮಾಡುವ ಪ್ಲ್ಯಾನ್‌. ಸಾಮಾನ್ಯವಾಗಿ ಎಲ್ಲಾ ಮ್ಯೂಚುವಲ್‌ ಫಂಡ್‌ಗಳೂ ಎಸ್‌ಐಪಿ ಯೋಜನೆ ಅಳವಡಿಸಿ ಕೊಂಡಿವೆ. ಪ್ರತೀ ತಿಂಗಳೂ ₹ 5000 ಇಲ್ಲಿ ತೊಡಗಿಸುವಾಗ ತೊಡಗಿಸಿದ ಹಣ ಆಯಾಯ ತಿಂಗಳಲ್ಲಿ ಕಟ್ಟಿದ ತಾರೀಕಿಗನುಗಣವಾಗಿ ವಾರ್ಷಿಕ ಸರಾಸರಿ ಪರಿಗಣಿಸುವಾಗ (Yearly average) ನಷ್ಟ ಸಂಭವಿಸುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಆದರೂ, ಇಲ್ಲಿ ತೊಡಗಿಸಿದ ಹಣ ಷೇರು ಮಾರುಕಟ್ಟೆ ಆಧಾರಿತವಾಗಿರುತ್ತದೆ. ಕೆಲವು ಬರೇ ಡೆಟ್‌ (Govt Securities) ಆಧಾರಿತ ಎಸ್‌ಇಪಿ ಯೋಜನೆಗಳೂ ಇದ್ದು ಇಲ್ಲಿ ಲಾಭ ಬಂದೇಬರುತ್ತದೆ. ನೀವು ಎಸ್‌ಬಿಐ ಮ್ಯೂಚುವಲ್‌ ಫಂಡ್‌ ಸಂಪರ್ಕಿಸಿರಿ. ಎಸ್‌ಬಿಐನಲ್ಲಿ ಹೂಡಿಕೆ ಪರಿಣತರು ನಿಮಗೆ ಸರಿಯಾದ ಮಾರ್ಗದರ್ಶನ ಮಾಡುತ್ತಾರೆ. ಡೆಬಿಟ್‌ ಆಧಾರಿತ ಸಿಪ್‌ ಆರಿಸಿಕೊಳ್ಳಿ.

*

ಹೆಸರು–ಊರು ಬೇಡ
* ನಾನು ಸರ್ಕಾರದಿಂದ ಪರವಾನಗಿ ಪಡೆದು 15 ವರ್ಷಗಳಿಂದ ಗಿರವಿ ಅಂಗಡಿ ನಡೆಸುತ್ತಿದ್ದೇನೆ. ಈಗ ನಾನು ರೂ ಒಂದು ಕೋಟಿ ಗಿರವಿ (ಬಂಗಾರದ ಅಡವು) ವ್ಯಾಪಾರ ಮಾಡುತ್ತೇನೆ. ನನ್ನ ವಯಸ್ಸು 40. ನಮಗೆ ಕೃಷಿ ಜಮೀನು 8.5 ಎಕರೆ ಇದೆ. ನಾನು ಇದುವರೆಗೆ ಯಾವ ತೆರಿಗೆ ತುಂಬಿಲ್ಲ. ನಾನು ಈಗ ಆದಾಯ ತೆರಿಗೆ ರಿಟರ್ನ್ ತುಂಬ ಬೇಕೆಂದಿದ್ದೇನೆ. ಎಷ್ಟು ತೆರಿಗೆ ಆಗಬಹುದು, ರಿಟರ್ನ್ ತುಂಬುವ ವಿಚಾರ ತಿಳಿಸಿ.
ಉತ್ತರ:
ನೀವು ಒಂದು ಕೋಟಿ ರೂಪಾಯಿಗಳಷ್ಟು ಬಂಗಾರದ ಗಿರವಿ ವ್ಯವಹಾರ ಮಾಡುತ್ತಿದ್ದು, ಇದುವರೆಗೆ ಆದಾಯ ತೆರಿಗೆ ಸಲ್ಲಿಸದೆ ಹಾಗೂ ರಿಟರ್ನ್ ತುಂಬದಿರುವುದು ಅಪರಾಧವಾಗುತ್ತದೆ. ನಿಮ್ಮ ಕೃಷಿ ಜಮೀನು ಹಾಗೂ ಅದರಿಂದ ಬರುವ ವರಮಾನಕ್ಕೆ ತೆರಿಗೆ ಇರುವುದಿಲ್ಲ. ಗಿರವಿ ವ್ಯವಹಾರದಲ್ಲಿ ಬರುವ ಲಾಭಕ್ಕೆ ತೆರಿಗೆ ಸಲ್ಲಿಸಬೇಕು. ಎಷ್ಟು ತೆರಿಗೆ ಎನ್ನುವ ವಿಚಾರ ನಿಮ್ಮ ಲೆಕ್ಕ ಪತ್ರ ಪರಿಶೋಧಿಸದೆ ಹೇಳಲು ಬರುವುದಿಲ್ಲ. ನಿಮ್ಮೊಡನಿರುವ ಸಂಪತ್ತು ಕಪ್ಪು ಹಣ ಆಗುವುದಲ್ಲದೆ, ದಂಡ ತೆರಬೇಕಾಗುತ್ತದೆ. ತಕ್ಷಣ ತಜ್ಞ ಚಾರ್ಟರ್ಡ್ ಅಕೌಂಟೆಂಟ್ ಸಂಪರ್ಕಿಸಿ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ.

*

ಪರಶುರಾಮ.ಎನ್., ಹೊಸಪೇಟೆ
* ನಾನು ಅರೆ ಸರ್ಕಾರಿ  ನೌಕರನಾಗಿದ್ದು, 35 ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ್ದೇನೆ. ವಯಸ್ಸು 58. ನಿವೃತ್ತಿಯಿಂದ
₹ 70 ಲಕ್ಷ ಬಂದಿದೆ. ಇದರಲ್ಲಿ ₹ 20 ಲಕ್ಷ ಮಗನ ಹೆಸರಿಗೆ ಒಂದು ಮನೆ ತೆಗೆದು ಕೊಂಡಿದ್ದೇನೆ. ಉಳಿದ ₹ 50 ಲಕ್ಷ, ನನ್ನ ಹಾಗೂ ನನ್ನ ಹೆಂಡತಿ ಹೆಸರಿನಲ್ಲಿ ತಲಾ ₹ 25 ಲಕ್ಷ ಬ್ಯಾಂಕ್ ಠೇವಣಿ ಮಾಡಿದ್ದೇನೆ.  ನಮಗೆ ಆದಾಯ ತೆರಿಗೆ ಬರುತ್ತದೆಯೇ? ನಾವು ಯಾವ ಸ್ಥಿರ ಆಸ್ತಿಯಲ್ಲಿ ಹಣ ಹೂಡಬಹುದು? ನಾನು ನನ್ನ ಹೆಂಡತಿ ಬೇರೆ ಬೇರೆ ಐಟಿ ರಿಟರ್ನ್ ತುಂಬಬಹುದೇ? 
ಉತ್ತರ:
ಕಾನೂನಿನಂತೆ ನೀವು ದುಡಿದು ಬಂದಿರುವ ಹಣ, ನಿಮ್ಮ ಹೆಂಡತಿ ಹೆಸರಿನಲ್ಲಿ ಠೇವಣಿ ಇರಿಸಿದರೂ, ಇಲ್ಲಿ ಬರುವ ಬಡ್ಡಿ ಲಾಭ, ನಿಮ್ಮ ಆದಾಯಕ್ಕೆ ಸೇರಿಸಿ ತೆರಿಗೆ ಸಲ್ಲಿಸಬೇಕಾಗುತ್ತದೆ. ನೀವು ಹಿರಿಯ ನಾಗರಿಕರಲ್ಲವಾದ್ದರಿಂದ ₹ 50 ಲಕ್ಷ ಠೇವಣಿ ಬರುವ ಬಡ್ಡಿಯಲ್ಲಿ ₹ 2.50ಲಕ್ಷ ಕಳೆದು ಉಳಿದ ಹಣಕ್ಕೆ ತೆರಿಗೆ ಸಲ್ಲಿಸಬೇಕಾಗುತ್ತದೆ. ಇದೇ ವೇಳೆ ₹  2.50 ಲಕ್ಷ ನಿಮ್ಮ ಮಗನ ಹೆಸರಿನಲ್ಲಿ ಠೇವಣಿ ಇರಿಸಿದರೆ, ಇಲ್ಲಿ ಬರುವ ಬಡ್ಡಿ ಆದಾಯ ನಿಮ್ಮ ಆದಾಯಕ್ಕೆ ಸೇರಿಸಿ ತೆರಿಗೆ  ಕೊಡುವ ಅವಶ್ಯವಿಲ್ಲ. ಆದರೆ ನಿಮ್ಮ ಮಗನ ಆದಾಯಕ್ಕೆ ಸೇರಿಸಿ ಅವರು ತೆರಿಗೆ ಕೊಡಬೇಕಾಗುತ್ತದೆ. ಸೆಕ್ಷನ್ 80 ಸಿ ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಠೇವಣಿ ಇರಿಸಿ ತೆರಿಗೆ ಕಡಿಮೆ ಮಾಡಿಕೊಳ್ಳಬಹುದು. ನಿಮ್ಮ ವಾರ್ಷಿಕ ವರಮಾನ ₹ 2.50 ಲಕ್ಷ ದಾಟಿದಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕು. ಸದ್ಯಕ್ಕೆ ಸ್ಥಿರ ಆಸ್ತಿ ಹೂಡಿಕೆ ಮುಂದೂಡಿರಿ.

*

ಡಾ. ರಘುಚಂದ್ರನ್, ಬೇಲೂರು
* ನಾನು ದಂತ ವೈದ್ಯ. ನನ್ನೊಡನೆ ₹  10 ಲಕ್ಷ ನಗದು ಇದೆ. 3–4 ವರ್ಷಗಳ ಅವಧಿಗೆ ಈ ಮೊತ್ತವನ್ನು ಉತ್ತಮ ಹೂಡಿಕೆಯಲ್ಲಿ ಇರಿಸಬಯಸುತ್ತೇನೆ. ನನಗೆ ಭದ್ರತೆ ಮುಖ್ಯ. ಮುಂದೆ ಮನೆ ತೆಗೆದುಕೊಳ್ಳಬೇಕೆಂದಿದ್ದೇನೆ. ಇದೇ ವೇಳೆ ನನ್ನ ಹಣ ಉತ್ತಮ ವರಮಾನ ಗಳಿಸಬೇಕು. ದಯಮಾಡಿ ಉತ್ತಮ ಮಾರ್ಗದರ್ಶನ ಮಾಡಿರಿ.
ಉತ್ತರ:
ನೀವು ಹೊಂದಿರುವ ₹  10 ಲಕ್ಷ ಸದ್ಯ ಉಳಿತಾಯ ಖಾತೆಯಲ್ಲಿ ಇರಬಹುದು. ಈ ಹಣವನ್ನು ಖಾತೆ ಹೊಂದಿದ ಬ್ಯಾಂಕಿನಲ್ಲಿ 4 ವರ್ಷಗಳ ಅವಧಿಗೆ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿ. ಈ ಯೋಜನೆಯಲ್ಲಿ ಭದ್ರತೆಯ ಜೊತೆಗೆ ಉತ್ತಮ ವರಮಾನ ಕೂಡ ಬರುತ್ತದೆ. 4 ವರ್ಷಗಳ ತನಕವೂ ನಿಮ್ಮ ಹಣ ಚಕ್ರಬಡ್ಡಿಯಲ್ಲಿ ಬೆಳೆಯುತ್ತಿರುತ್ತದೆ. ಇದೇ ವೇಳೆ ನೀವು ಕನಿಷ್ಠ ₹  5000 ನಿಮ್ಮ ದುಡಿಮೆಯಿಂದ ತಿಂಗಳಿಗೆ ಆರ್.ಡಿ. ಪ್ರಾರಂಭಿಸಿರಿ. ನಿಮ್ಮೊಡನಿರುವ ₹ 10 ಲಕ್ಷ ಎಷ್ಟು ಬೆಳೆದರೂ, ಸ್ಥಿರಾಸ್ತಿಕೊಳ್ಳಲು ಸಾಕಾಗಲಾರದು. ಪ್ರಾರಂಭದಿಂದಲೇ ಇಂತಹ ಉಳಿತಾಯ ಮಾಡುತ್ತಾ ಬಂದಲ್ಲಿ, ಜೀವನದಲ್ಲಿ ಆರ್ಥಿಕ ಶಿಸ್ತು ಉಂಟಾಗಿ ಮುಂದೆ ಬಯಸಿದ್ದನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

**

ಟಿ. ಕುಮಾರ ಸ್ವಾಮಿ, ಮೈಸೂರು
* ನನ್ನ ವಯಸ್ಸು 22. ಕಂಪೆನಿಯಲ್ಲಿ ಕೆಲಸ. ಸಂಬಳ ₹ 27,000. ನನ್ನ ತಂದೆಗೆ ಹಳ್ಳಿಯಲ್ಲಿ ಒಂದು ಮನೆ ಇದೆ. ಇದು ಪಿತ್ರಾರ್ಜಿತ ಹಾಗೂ ಉಳಿಯಲು ಅನುಕೂಲವಿಲ್ಲ. ನಾವು ಎಸ್‌ಬಿಐನಿಂದ ಸಾಲ ಪಡೆದು ಮೈಸೂರಿನಲ್ಲಿ ಮನೆ ಕಟ್ಟಿಸಬೇಕೆಂದಿದ್ದೇವೆ. PMAY ವಿಚಾರದಲ್ಲಿ ನನ್ನ ಪ್ರಶ್ನೆಗಳು.

1. ನಾನು PMAY ಯೋಜನೆಯಲ್ಲಿ ಗೃಹಸಾಲ ಪಡೆಯಬಹುದೇ?
2. ನಾನು ನನ್ನ ತಂದೆಯವರ ಹೆಸರಿನಲ್ಲಿ PMAY ಸೌಲತ್ತು ಪಡೆಯಬಹುದೇ?
3. ಇಂತಹ ಪ್ರದೇಶದಲ್ಲಿಯೇ ಮನೆ ಕಟ್ಟಬೇಕು ಎನ್ನುವ ಕಾನೂನು ಇದೆಯೇ?
4. ಸಾಲ ಪಡೆಯಲು ಅನುಸರಿಸಬೇಕಾದ ಕ್ರಮಗಳೇನು.
5. ಸಿ ಕ್ಲಾಸಸ್‌ ಪಟ್ಟಣ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆಯೇ?

ಉತ್ತರ: ಪ್ರಧಾನಮಂತ್ರಿ ಆವಾಸ್‌ ಯೋಜನಾ (ಗೃಹಸಾಲ) (Pradhan Mantri Awas Yojana -Home Loan) ವಿಚಾರದಲ್ಲಿ ನಿಮ್ಮ ಪ್ರಶ್ನೆಯಿಂದ ಹಲವರಿಗೆ ವಿಚಾರ ತಿಳಿಯಲಿ ಎನ್ನುವುದನ್ನು ಮನಗಂಡು ಈ ಕೆಳಗಿನಂತೆ, ಯೋಜನೆಯ ವಿವರಣೆ ತಿಳಿಸುತ್ತಿದ್ದೇನೆ.
1. ಈ ಯೋಜನೆ ಪಟ್ಟದಲ್ಲಿ ವಾಸಿಸುವ ಮಧ್ಯಮ ವರ್ಗದ ಅಂದರೆ ₹ 6 ಲಕ್ಷದಿಂದ 18 ಲಕ್ಷಗಳ ಒಳಗೆ ಆದಾಯವಿರುವ ವ್ಯಕ್ತಿಗಳಿಗೆ ಮಾತ್ರ ಸೀಮಿವಾಗಿದೆ.
2. ಮೇಲೆ ವಿವರಿಸಿದ ಮಧ್ಯಮ ವರ್ಗದ ಜನರು ಪಟ್ಟಣದಲ್ಲಿ ಮನೆ ಕಟ್ಟುವಾಗ ಪಡೆದ ಸಾಲಕ್ಕೆ ಸರ್ಕಾರ ಬಡ್ಡಿ ಅನುದಾನ ಈ ಕೆಳಗಿನಂತೆ ಘೋಷಿಸಿದೆ.
ಎ) ₹ 12 ಲಕ್ಷಗಳ ಆದಾಯದೊಳಗಿರುವವರು, ₹ 9 ಲಕ್ಷ ಗೃಹ ಸಾಲದ ತನಕ ಶೇ 4 ಬಡ್ಡಿ ಅನುದಾನ ರೂಪದಲ್ಲಿ ಪಡೆಯಬಹುದು.
ಬಿ) ₹ 18 ಲಕ್ಷಗಳ ಆದಾಯದೊಳಗಿರುವವರು, ₹ 12 ಲಕ್ಷ ಗೃಹ ಸಾಲದ ತನಕ ಶೇ 3  ಬಡ್ಡಿ ಅನುದಾನ ರೂಪದಲ್ಲಿ ಪಡೆಯಬಹುದು.

ವಿ.ಸೂ.: ಮಿತಿಗಿಂತ ಹೆಚ್ಚಿನ ಸಾಲ ಪಡೆದಲ್ಲಿ, ಅನುದಾನಿತ ಬಡ್ಡಿ ಅನ್ವಯವಾಗುವುದಿಲ್ಲ.
3.  ಅನುದಾನಿತ ಗೃಹ ಸಾಲದ ಬಡ್ಡಿಯ ಪ್ರಯೋಜನ 1–1–2017 ಹಾಗೂ ನಂತರ ಮಂಜೂರಾದ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ.
4. ಈ ಯೋಜನೆ ಪಟ್ಟಣವಾಸಿಗಳು, ಪಟ್ಟಣದಲ್ಲಿ ಮನೆ ನಿರ್ಮಿಸುವಾಗ ಉಪಯೋಗಿಸಬಹುದು.
5. ವ್ಯಕ್ತಿಯು ಪ್ರಥಮ ಗೃಹ ಸಾಲ ಪಡೆಯುವಲ್ಲಿ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ.
6. ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ, ₹ 12 ಲಕ್ಷದೊಳಗಿರುವ ಆದಾಯವಿರುವವರು 90 ಚದರ ಮೀಟರ್‌ ಹಾಗೂ 12–18 ಲಕ್ಷ ₹ ಆದಾಯ ವಿರುವವರು 110 ಚದರ ಮೀಟರ್‌ ವಾಸದ ಜಾಗ (Carpet area) ತನಕ ಮನೆ ಕಟ್ಟಿಕೊಳ್ಳಬಹುದು. ಇದಕ್ಕೂ ಹೆಚ್ಚಿನ ಅಥವಾ ದೊಡ್ಡ ಮನೆ ಕಟ್ಟಿಕೊಂಡರೆ, ಅನುದಾನಿತ ಬಡ್ಡಿ ಪಡೆಯುವಂತಿಲ್ಲ.
7. ಸಾಲದ ಗರಿಷ್ಠ ಅವಧಿ 20 ವರ್ಷ ಮಾತ್ರ.
8. ಅನುದಾನಿತ ಬಡ್ಡಿ, ಸಾಲದ ಸಮಾನ ಕಂತು (ಇ.ಎಂ.ಐ.) ನಿರ್ಧರಿಸುವಾಗಲೇ ಲೆಕ್ಕಕ್ಕೆ ತೆಗೆದು.  ಇದರಿಂದ (ಇ.ಎಂ.ಐ.)  ಗಣನೀಯವಾಗಿ ಕಡಿಮೆಯಾಗುತ್ತದೆ.
9. ಅನುದಾನಿತ ಬಡ್ಡಿ ಸಾಲ ನೀಡುವ ಬ್ಯಾಂಕಿಗೆ ನ್ಯಾಷನಲ್‌ ಹೌಸಿಂಗ್‌ ಬೋರ್ಡು ಹಾಗೂ ಹೌಸಿಂಗ್‌ ಅಂಡ್‌ ಅರ್ಬನ್‌ ಡೆವಲಪ್‌ಮೆಂಟ್‌ ಕಾರ್ಪರೇಶನ್‌ ಕಾಲಕಾಲಕ್ಕೆ ಒದಗಿಸುತ್ತದೆ.
10. ಈ ಯೋಜನೆ ಎಲ್ಲಾ ಬ್ಯಾಂಕುಗಳಲ್ಲಿ ಲಭ್ಯ ವಿರುತ್ತದೆ.
ನಿಮ್ಮ ಸಂಬಳ ವಾರ್ಷಿಕವಾಗಿ ₹  3.24 ಲಕ್ಷ ವಿದ್ದು ನೀವು ಎಸ್‌ಬಿಐನಿಂದ ಪಿಎಂಎವೈ ಅಡಿ ಮೈಸೂರಿನಲ್ಲಿ ಮನೆಕಟ್ಟಲು ಸಾಲ ಪಡೆಯಬಹುದು. ನಿಮ್ಮ ತಂದೆ ಹಳ್ಳಿಯಲ್ಲಿ ಮನೆ ಕಟ್ಟಲು ಪಡೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT