ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೂ ಬರಲಿದೆ ಸಾರ್ವಜನಿಕ ಶೌಚಾಲಯ ಪತ್ತೆ ಹಚ್ಚುವ ಆ್ಯಪ್‌...

Last Updated 23 ಮೇ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿಗೂ ಬರಲಿದೆ ಸಾರ್ವಜನಿಕ ಶೌಚಾಲಯ ಪತ್ತೆ ಹಚ್ಚುವ ಆ್ಯಪ್‌...
ಕೇಂದ್ರದ ನಗರಾಭಿವೃದ್ದಿ  ಇಲಾಖೆಯು ದೇಶದ 85 ನಗರಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಪತ್ತೆ ಹಚ್ಚುವ ಹೊಸ ಆ್ಯಪ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ.  ಅಕ್ಟೋಬರ್‌ 2 ರಂದು  ಈ ನೂತನ ಆ್ಯಪ್‌ ಬಿಡುಗಡೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ.

ಬೆಂಗಳೂರು ಮಹಾನಗರ ಸೇರಿದಂತೆ ದೇಶದ 85 ನಗರಗಳಲ್ಲಿ ನಾಗರಿಕರು ಈ ಆ್ಯಪ್‌ ನೆರವಿನಿಂದ ತಮ್ಮ ಮೊಬೈಲ್‌ ಫೋನ್‌ಗಳಲ್ಲಿ  ಸಾರ್ವಜನಿಕ ಶೌಚಾಲಯಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂದು ಕೇಂದ್ರ ನಗರಾಭಿವೃದ್ಧಿ ಇಲಾಖೆ ತಿಳಿಸಿದೆ.

ಅಭಿವೃದ್ಧಿಪಡಿಸುತ್ತಿರುವ ಆ್ಯಪ್‌ಗೆ ‘ಮಿಷನ್‌ ಟಾಯ್ಲೆಟ್‌ ಲೋಕೆಟರ್‌’ (ಎಂಟಿಎಲ್‌) ಎಂದು ಹೆಸರಿಡಲಾಗಿದೆ.  ಸ್ವಚ್ಛ ಭಾರತ ಅಭಿಯಾನ ಯೋಜನೆ ಅಡಿಯಲ್ಲಿ ಎಂಟಿಎಲ್‌ ಆ್ಯಪ್ ರೂಪಿಸಲಾಗುತ್ತಿದೆ.

ಸಾರ್ವಜನಿಕರು ಎಂಟಿಎಲ್‌ ಆ್ಯಪ್ (Toilet Locator) ಅನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ತಮ್ಮ ಸಮೀಪದಲ್ಲಿರುವ ಶೌಚಾಲಯಗಳನ್ನು ಗೂಗಲ್‌ ಮ್ಯಾಪ್‌ ನೆರವಿನ ಮೂಲಕ ಗುರುತಿಸಬಹುದು.

ಉದಾಹರಣೆಗೆ ಬಳಕೆದಾರರೊಬ್ಬರು ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ಇರುತ್ತಾರೆ.  ಈ ವೇಳೆ ಅವರು ಎಂಟಿಎಲ್‌ ಆ್ಯಪ್‌ ಅನ್ನು ಆನ್‌ ಮಾಡಿಕೊಂಡರೆ, ಎಂಜಿ ರಸ್ತೆಯ ಸುತ್ತಮುತ್ತ ಇರುವ ಶೌಚಾಲಯಗಳ ಮಾಹಿತಿಯನ್ನು ಅದು ನೀಡುತ್ತದೆ. ಬಳಕೆದಾರರು ತಮಗೆ ಸಮೀಪ ಇರುವ ಶೌಚಾಲಯವನ್ನು ಗೂಗಲ್ ಮ್ಯಾಪ್‌ ನೆರವಿನೊಂದಿಗೆ ಸುಲಭವಾಗಿ ಹುಡುಕಿಕೊಂಡು ಹೋಗಬಹುದು. ಈಗಾಗಲೇ ದೆಹಲಿಯ ಕೆಲವು ಭಾಗಗಳಲ್ಲಿ ಈ ಆ್ಯಪ್ ಅನ್ನು ಬಿಡುಗಡೆ ಮಾಡಲಾಗಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ನಗರಾಭಿವೃದ್ಧಿ ಇಲಾಖೆ ತಿಳಿಸಿದೆ.

***

ಮೊಬೈಲ್‌ನಲ್ಲೂ ಕೋರ್‌ ಬ್ಯಾಕಿಂಗ್‌...

ಬ್ಯಾಂಕಿಂಗ್‌ ಕ್ಷೇತ್ರಕ್ಕೆ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿರುವ ‘ಐ ಎಕ್ಸೀಡ್‌’ (i-exceed) ಸಾಫ್ಟ್‌ವೇರ್‌ ಕಂಪೆನಿಯು ಮೊಬೈಲ್‌  ಫೋನ್‌ಗಳಲ್ಲೂ ಬಳಸಬಹುದಾದ ಕೋರ್‌ ಬ್ಯಾಕಿಂಗ್‌  ಅಪ್ಲಿಕೇಷನ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ.

ಈ ಬಗ್ಗೆ ಅಧ್ಯಯನ ನಡೆಸಿರುವ ಕಂಪೆನಿಯು, ಜನರು ಹೆಚ್ಚಾಗಿ ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಿದ್ದು,  ಬ್ಯಾಂಕಿಂಗ್‌ ಮಾಹಿತಿಯನ್ನು ಮೊಬೈಲ್‌ ಫೋನ್‌ಗಳಲ್ಲೇ ಪಡೆಯುತ್ತಿದ್ದಾರೆ. ಅದಕ್ಕಾಗಿ ಕೋರ್‌ ಬ್ಯಾಂಕಿಂಗ್‌ ಮತ್ತು ಷೇರು ಸಮಾಚಾರದ ಮಾಹಿತಿ ಮೊಬೈಲ್‌ ಫೋನ್‌ನಲ್ಲಿ ಸಿಗುವಂತಹ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕಂಪೆನಿ  ತಿಳಿಸಿದೆ.

‘ಐ ಎಕ್ಸೀಡ್‌’ ಐಟಿ ಕಂಪೆನಿಯು  ’ಅಪ್ಲಿಜೀನ್‌’ ಎಂಬ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದ್ದು, ಇದರ ಮೂಲಕ ಷೇರು ವಹಿವಾಟು ಮತ್ತು ಬ್ಯಾಂಕಿಂಗ್‌ ಕ್ಷೇತ್ರದ ವಿವಿಧ ಮಾಹಿತಿಗಳನ್ನು 11 ಪ್ಲಾಟ್‌ಫಾರಂನಲ್ಲಿ ಪಡೆಯಬಹುದು.

ಮಾಹಿತಿಗೆ: https://i-exceed.com/

***

ಜಾಹೀರಾತು ನಿರ್ಮಾಣಕ್ಕೆ ‘ಮ್ಯಾಡ್‌’ ಆ್ಯಪ್‌
ಪ್ರಸ್ತುತ ನಮ್ಮ ದೈನಂದಿನ  ಜೀವನದಲ್ಲಿ  ಜಾಹೀರಾತುಗಳು ಮಹತ್ವದ ಪಾತ್ರವನ್ನು ವಹಿಸುತ್ತಿವೆ.  ಬೆಳಗ್ಗೆ ಎದ್ದು ಹಲ್ಲುಜ್ಜುವ ಟೂತ್‌ ಪೇಸ್ಟ್‌ನಿಂದ ಹಿಡಿದು ರಾತ್ರಿ ಮಲಗುವಾಗ ಸೊಳ್ಳೆ ಬತ್ತಿ ಹಚ್ಚುವ ತನಕವೂ ನಾವು ಜಾಹೀರಾತುಗಳ ಸುಳಿಯಲ್ಲಿ ಸಿಲುಕಿರುತ್ತೇವೆ.

ನಾವು ನೋಡುವ ಕೆಲವು ಜಾಹೀರಾತುಗಳು ನಮಗೆ ಇಷ್ಟವಾಗುವುದಿಲ್ಲ!  ಆ ಜಾಹೀರಾತು ಈ ರೀತಿ ಇದ್ದರೆ ಜನರಿಗೆ ಸುಲಭವಾಗಿ ತಲುಪುತ್ತಿತ್ತು ಎಂದು ನಾವು ಎಷ್ಟೋ ಸಲ ಆಲೋಚನೆ ಮಾಡಿರುತ್ತೇವೆ. ನಮ್ಮ ಕಲ್‍ಪನೆಯಲ್ಲಿ ಅದಕ್ಕೊಂದು ರೂಪ ಕೊಟ್ಟು ಸುಮ್ಮನಾಗಿ ಬಿಡುತ್ತೇವೆ.  ಈ ವೇಳೆ ನಮ್ಮ ಕ್ರಿಯಾತ್ಮಕ ಪರಿಕಲ್ಪನೆ ನಾಶವಾಗಿ ಬಿಡುತ್ತದೆ. ಹಾಗಾಗಿ, ನಮ್ಮ ಕ್ರಿಯಾಶೀಲತೆಯನ್ನು ಆ ಕಂಪೆನಿಗಳಿಗೆ ತಲುಪಿಸುವ ವೇದಿಕೆಯೊಂದು ಸಿದ್ಧವಾಗಿದೆ.

ಸಾಮಾನ್ಯ ಜನರಲ್ಲಿರುವ ಸೃಜನಶೀಲತೆ ಗುರುತಿಸುವ ಸಲುವಾಗಿ ಗೊಕ್ರಾಜೀ ಐ.ಟಿ (GoKrazee) ಸ್ಟಾರ್ಟ್‌ಅಪ್‌ ಕಂಪೆನಿಯು ‘ಮ್ಯಾಡ್‌’ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಬಳಕೆದಾರರು ಈ ಆ್ಯಪ್ ಮೂಲಕ ಯಾವುದಾದರು ಕಂಪೆನಿಯೊಂದರ ಉತ್ಪನ್ನದ ಜಾಹೀರಾತನ್ನು ನಿರ್ಮಾಣ ಮಾಡಿ  ಮ್ಯಾಡ್‌ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕು.  ಆ ಕಂಪೆನಿಗೆ ಬಳಕೆದಾರರು ರೂಪಿಸಿದ ಮಾಡಿದ ಜಾಹೀರಾತು ಇಷ್ಟವಾದರೆ ಅದಕ್ಕೆ ಸೂಕ್ತ ಸಂಭಾವನೆಯನ್ನು ನೀಡುತ್ತಾರೆ ಎಂದು ಗೊಕ್ರಾಜೀ ಕಂಪೆನಿಯ ಮುಖ್ಯಸ್ಥರಾದ ಸುಂದರ್‌ ರಾಮನ್ ಹೇಳುತ್ತಾರೆ.

ಸಾಮಾನ್ಯ ಜನರಲ್ಲಿ ಇರುವ ಪ್ರತಿಭೆಯನ್ನು  ಗುರುತಿಸುವುದೇ ಈ ಆ್ಯಪ್‌ನ ಮುಖ್ಯ ಉದ್ದೇಶ ಎನ್ನುತ್ತಾರೆ ಅವರು.  ಆಂಡ್ರಾಯ್ಡ್‌ ಮತ್ತು ಐಒಎಸ್‌ ಮಾದರಿಯಲ್ಲಿ ಮ್ಯಾಡ್ ಆ್ಯಪ್ ಲಭ್ಯವಿದೆ. ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ 5 ಸಾವಿರ ಜನರು ಡೌನ್‌ಲೋಡ್‌ ಮಾಡಿದ್ದು ಸುಮಾರು 250ಕ್ಕೂ ಹೆಚ್ಚು ಜಾಹಿರಾತುಗಳನ್ನು ನಿರ್ಮಾಣ ಮಾಡಿ ಅಪ್‌ಲೋಡ್‌ ಮಾಡಿದ್ದಾರೆ.

ಜಾಹಿರಾತು ಕ್ಷೇತ್ರಕ್ಕೆ ಹೋಗಬೇಕು ಎಂದು ಬಯಸುವವರಿಗೆ ಮ್ಯಾಡ್‌ ಆ್ಯಪ್ ಉತ್ತಮ ವೇದಿಕೆಯಾಗಿದೆ. https://goo.gl/1E9YWq

***

ಓಲಾದಿಂದ ಹೊಸ ಸೌಲಭ್ಯ

ದೇಶದಲ್ಲಿ ಟ್ಯಾಕ್ಸಿ ಸೇವೆ ನೀಡುತ್ತಿರುವ ಓಲಾ ಕಂಪೆನಿಯೂ ಬಳಕೆದಾರ ಸ್ನೇಹಿಯಾದ ಮೊಬೈಲ್‌ ಅಂತರ್ಜಾಲ ತಾಣ   (Progressive Web App) ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ.

ಇದು ಸರಳ ಸ್ವರೂಪದ ಸ್ಮಾರ್ಟ್‌ಫೋನ್‌ಗಳಲ್ಲಿ  ಆ್ಯಪ್‌ನಂತಹ ಅನುಭವ ನೀಡಲಿದೆ. ಇದಕ್ಕೆ ಅತ್ಯಲ್ಪ ಪ್ರಮಾಣದ ಡೇಟಾ ವೆಚ್ಚವಾಗಲಿದೆ.
ಇಂಟರ್‌ನೆಟ್‌ ಸಂಪರ್ಕ ದುರ್ಬಲವಾಗಿರುವ ಕಡೆಗಳಲ್ಲಿ ಮತ್ತು ಕಡಿಮೆ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ ಬಳಸುವ ಗ್ರಾಹಕರಲ್ಲಿ ಈ ಸೌಲಭ್ಯ ಹೆಚ್ಚು ಉಪಯುಕ್ತವಾಗಿರಲಿದೆ.

‘ಚಾಲಕರು ಮತ್ತು ಗ್ರಾಹಕರ ಬಳಕೆಗೆ ಸರಳವಾಗಿ ಬಳಸುವಂತೆ ವಿನ್ಯಾಸ ಮಾಡಲಾಗಿದೆ.  ಪಿಡಬ್ಲ್ಯುಎ ತಂತ್ರಜ್ಞಾನ ಆಧರಿಸಿದ ಈ ಸೌಲಭ್ಯವು ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತಲುಪಲು ನೆರವಾಗಲಿದೆ’ ಎಂದು ಓಲಾ ಕಂಪೆನಿಯ ಸಹ ಸಂಸ್ಥಾಪಕರಾದ ಅಂಕಿತ್ ಭಾಟಿಯಾ ತಿಳಿಸಿದ್ದಾರೆ.

ಗೂಗಲ್ ಮ್ಯಾಪ್‌ ಕಂಪೆನಿಯ ಸಹಯೋಗದಲ್ಲಿ ಈ ಹೊಸ ಆ್ಯಪ್‌ ಅನ್ನು ವಿನ್ಯಾಸ ಮಾಡಲಾಗಿದೆ. https://book.olacabs.com ತಾಣಕ್ಕೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT