ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಕಲೆಯ ಸಾಂಗತ್ಯಕ್ಕೆ ಒಲಿದು...

Last Updated 23 ಮೇ 2017, 19:30 IST
ಅಕ್ಷರ ಗಾತ್ರ

ದೇವರ ದೀಪ, ಕಳಸ, ತಟ್ಟೆಗಳಿಗೆ ಕುಂದನ್‌ ಹರಳು ಮತ್ತು ಚಿನ್ನದ ಬಣ್ಣದ ಮಣಿಗಳಿಂದ ಅಲಂಕಾರ, ತಂಜಾವೂರು ಕಲಾಕೃತಿ ರಚನೆ  ಮಡಕೆ ಮೇಲೆ ಬಗೆ ಬಗೆ ಹೂವಿನ ಚಿತ್ತಾರ, ಹೂತೋಟ ನಿರ್ಮಾಣ, ರೋಮನ್‌ ಗೊಂಬೆ ರಚನೆ, ಸ್ಟೈನ್‌ ಗ್ಲಾಸ್‌ ಪೇಂಟಿಂಗ್... ಇದು ಹಲಸೂರಿನ ಗೀತಾ ಕೃಷ್ಣಮೂರ್ತಿ ಅವರ ಹವ್ಯಾಸದ ಪರಿ.

ಹಲಸೂರು ಜೋಗುಪಾಳ್ಯದ ಗೀತಾ ಅವರಿಗೆ ಈಗ 69 ವಯಸ್ಸು. ಈ ಇಳಿವಯಸ್ಸಿನಲ್ಲೂ  ಅವರು ತಮ್ಮ ನೆಚ್ಚಿನ ಹವ್ಯಾಸಗಳನ್ನು ಮುಂದುವರೆಸಿದ್ದಾರೆ.
ದೇವರ ಮಂಟಪ, ತಟ್ಟೆ,  ಮದುಮಕ್ಕಳಿಗೆ ನೀಡುವ ಉಡುಗೊರೆ ಬ್ಯಾಗ್‌, ಕೊಬ್ಬರಿ ಮೇಲೆ ರಾಜ–ರಾಣಿ ಚಿತ್ರ, ಕನ್ನಡಿಗೆ ಶಂಖ ಚಿಪ್ಪು, ಹರಳುಗಳಿಂದ ಅಲಂಕಾರ, ಹೀಗೆ ವಸ್ತುಗಳನ್ನು  ಆಕರ್ಷಕವಾಗಿ ಅಲಂಕಾರಗೊಳಿಸಿ, ಅದಕ್ಕೆ ಕಲಾಕೃತಿಯ  ರೂಪ ನೀಡುವ ಕೈಚಳಕ ಅವರದು.

ಗೀತಾ ಅವರು ಗೃಹಬಳಕೆಯ ನಿರುಪಯುಕ್ತ ವಸ್ತುಗಳಿಂದ ಕಲಾಕೃತಿಗಳನ್ನು ಅರಳಿಸಿದ್ದಾರೆ. ತೆಂಗಿನಚಿಪ್ಪುಗಳಿಂದ ಕಲಾಕೃತಿ, ಮರದ ಕಡ್ಡಿಗಳಿಂದ ಡಬ್ಬ, ಪೆನ್‌ಸ್ಟ್ಯಾಂಡ್‌ ವಿನ್ಯಾಸ ಮಾಡುತ್ತಾರೆ.

ಗೀತಾ ಅವರು ತಂಜಾವೂರು ಶೈಲಿಯ ಚಿತ್ರ ಬಿಡಿಸಿ ಅದಕ್ಕೆ ಮಣಿಗಳಿಂದ ಅಲಂಕರಿಸುತ್ತಾರೆ. ಇನ್ನು ಕ್ಯಾನ್ವಾಸ್‌ ಬಟ್ಟೆ ಮೇಲೆ ಚಿತ್ರಗಳನ್ನು ಬರೆದು, ಅದಕ್ಕೂ ವಿವಿಧ ಮಣಿಗಳಿಂದ ಅಲಂಕರಿಸುತ್ತಾರೆ. ‘ಇದು ಕಲಾಕೃತಿಯನ್ನು ಮತ್ತಷ್ಟು ಭಿನ್ನವಾಗಿಸುತ್ತದೆ’ ಎಂಬ ವಿವರಣೆ ಅವರದು.

ತಮ್ಮ ಹವ್ಯಾಸದ ಬಗ್ಗೆ ಅವರು ಹೇಳುವುದು ಹೀಗೆ... ‘ನನಗೆ ಸಣ್ಣ ವಯಸ್ಸಿನಿಂದಲೂ ಕಲೆ ಬಗ್ಗೆ ಸೆಳೆತ. ಮದುವೆಯಾದ ಬಳಿಕ ಬೆಂಗಳೂರಿಗೆ ಬಂದೆ. ನನ್ನ ಆಸಕ್ತಿಯನ್ನು ಮುಂದುವರೆಸಿಕೊಂಡು ಹೋಗಲು ಪತಿ ಕೃಷ್ಣಮೂರ್ತಿ ಸಂಪೂರ್ಣ ಬೆಂಬಲ ನೀಡಿದರು. ನಾನು ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ಹೋಗುತ್ತಿದ್ದೆ. ಅಲಂಕಾರ ಮಾಡುವ ಬಗ್ಗೆ, ರೋಮನ್‌ ಡಾಲ್‌ ಮಾಡುವ ಬಗ್ಗೆ ತಿಳಿದುಕೊಂಡೆ. ಆಮೇಲೆ ಕೆಲವು ಗೃಹಿಣಿಯರಿಗೆ, ಮಕ್ಕಳಿಗೆ ತರಗತಿ  ನೀಡಲು ಆರಂಭಿಸಿದೆ’.

ಇವರು ಕೋರಮಂಗಲದ ಬೆಥನಿ ಬುದ್ಧಿಮಾಂದ್ಯರ ಮಕ್ಕಳ ಶಾಲೆಯಲ್ಲಿ ಅರೆಕಾಲಿಕ ಕಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. 

‘20 ವರ್ಷಗಳಿಂದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಸಾಮಾನ್ಯರಿಗೆ ಈ ಕಲೆ ಬಗ್ಗೆ ತಿಳಿದುಕೊಳ್ಳಲು 1–2 ದಿನ ಸಾಕು. ಆ ಮಕ್ಕಳಿಗೆ ಒಂದು ವಾರವಾದರೂ ಬೇಕು. ಅವರು ಸ್ವಲ್ಪ ನಿಧಾನ. ಆದರೆ ತುಂಬ ಚೆನ್ನಾಗಿ ಮಾಡುತ್ತಾರೆ. ಈಗ ಅಲ್ಲಿ ಮಕ್ಕಳು ಮಾಡಿದ ಕರಕುಶಲ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ.

ರೋಮನ್‌ ಡಾಲ್‌ ತಯಾರಿಸುವುದು ಗೀತಾ ಕೃಷ್ಣಮೂರ್ತಿ ಅವರ   ವಿಶೇಷ. ಇದನ್ನು ಬ್ರೆಡ್‌ ಚೂರು ಹಾಗೂ ಫೆವಿಕಾಲ್‌ ಗಮ್‌ ಬಳಸಿ ರಚಿಸಲಾಗುತ್ತದೆ. ‘ಬ್ರೆಡ್‌ ಪುಡಿ ಮಾಡಿಕೊಂಡು, ಬಳಿಕ ಫೆವಿಕಾಲ್‌ ಗಮ್‌ ಜತೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ, ಎರಡು ದಿನಗಳ ಕಾಲ ಇಡಬೇಕು. ನಂತರ ಅದನ್ನು ಚಪಾತಿ ಹಿಟ್ಟಿನಂತೆ ನಾದಿ, ಬೇಕಾದ ರೂಪ ನೀಡಬೇಕು. ಗೊಂಬೆಗಳ ಮೇಲೆ ಹಾಕುವಂತಹ ಬಟ್ಟೆ, ಕೂದಲು, ಕನ್ನಡಕ ಇವೆಲ್ಲವುಗಳನ್ನು ಅದೇ ಮಿಶ್ರಣದಿಂದ ರಚಿಸಿಕೊಳ್ಳಬೇಕು. ಮಿಶ್ರಣವನ್ನು ಚಪಾತಿಯಂತೆ ಉಜ್ಜಿ, ಬೇಕಾದ ಆಕಾರಕ್ಕೆ ಕತ್ತರಿಸಬೇಕು. ಇದಕ್ಕೆ ಅಭ್ಯಾಸ  ಬೇಕು. ಬಳಿಕ ಎಲ್ಲಾ ಗೊಂಬೆ ಮಾಡಿ, ಫೆವಿಕ್ರೀಮ್‌ನಿಂದ ಬಣ್ಣ ನೀಡಬೇಕು. ಎರಡು ಅಡಿ ಎತ್ತರದ ತನಕದ ರೋಮನ್‌ ಗೊಂಬೆಯನ್ನು ಮಾಡುತ್ತೇನೆ’ ಎಂದು ಅವರು ವಿವರಿಸುತ್ತಾರೆ.

ಇದಲ್ಲದೆ ಗಾಜಿನ ಮೇಲೆ ಸ್ಟೈನ್‌ ಗ್ಲಾಸ್‌ ಪೇಂಟಿಂಗ್‌, ಮಡಿಕೆಗಳ ಮೇಲೆ ಸೆರಾಮಿಕ್‌  ವಿನ್ಯಾಸ, ಹೂದಾನಿ ರಚನೆ,  ಬಟ್ಟೆಗಳ ಮೇಲೆ ಕಸೂತಿಗಳನ್ನು ಗೀತಾ ಮಾಡುತ್ತಾರೆ.

ಇವರು ತಮ್ಮ ಕರಕುಶಲ ಕಲಾಕೃತಿಗಳನ್ನು ನಗರದ ಅನೇಕ ಕಡೆಗಳಲ್ಲಿ ಪ್ರದರ್ಶನ ಮಾಡಿದ್ದಾರೆ. ರಂಗೋಲಿ, ಮಣಿಗಳ ಅಲಂಕಾರದ ತಟ್ಟೆಗಳನ್ನು ಕೆಲ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ.

ಗೀತಾ ಕೃಷ್ಣಮೂರ್ತಿ ಅವರ ಸಂಪರ್ಕಕ್ಕೆ: 98452 62392

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT