ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿಗೆ ಟ್ರಂಪ್‌ ಭೇಟಿ ಬದಲಾದ ಧೋರಣೆ

Last Updated 23 ಮೇ 2017, 19:30 IST
ಅಕ್ಷರ ಗಾತ್ರ
ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಧೋರಣೆಯಲ್ಲಿ ಭಾರಿ ಬದಲಾವಣೆ ಕಾಣಿಸುತ್ತಿದೆ. ಅಧ್ಯಕ್ಷೀಯ ಚುನಾವಣಾ ಪ್ರಚಾರ ಕಾಲದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಮತ್ತು ಮುಸ್ಲಿಮರ ಬಗ್ಗೆ ಅವರು ಆಡಿದ್ದ ದ್ವೇಷದ ಮಾತುಗಳಿಗೂ, ಮೊನ್ನೆ ಸೌದಿ ಅರೇಬಿಯದ ಭೇಟಿ ಕಾಲಕ್ಕೆ ಆಡಿದ ಸಾಂತ್ವನದ ಮಾತುಗಳಿಗೂ ಹೋಲಿಕೆ ಮಾಡಿದರೆ ಅಚ್ಚರಿ ಎನಿಸುತ್ತದೆ.
 
ಇವರೇನಾ ಟ್ರಂಪ್‌ ಎನ್ನುವಷ್ಟು ಮಾರ್ಪಾಡು. ಆದರೆ ಈ ಬದಲಾವಣೆ ಪ್ರಾಮಾಣಿಕವಾಗಿದ್ದರೆ, ಹೃದಯಾಂತರಾಳದಿಂದ ಬಂದಿದ್ದರೆ ನಿಜಕ್ಕೂ ಸ್ವಾಗತಾರ್ಹ. ‘ಅಮೆರಿಕನ್ನರನ್ನು ಇಸ್ಲಾಂ ದ್ವೇಷಿಸುತ್ತದೆ’ ಎಂದು ಅಧ್ಯಕ್ಷರಾಗುವ ಮುನ್ನ ದೂಷಿಸಿದ್ದ ಟ್ರಂಪ್‌, ಅಧ್ಯಕ್ಷರಾದ ನಂತರ ಮೊದಲ ವಿದೇಶ ಪ್ರವಾಸಕ್ಕೆ ಆಯ್ದುಕೊಂಡದ್ದು ಸುನ್ನಿ ಮುಸ್ಲಿಂ ಪ್ರಾಬಲ್ಯದ ಸೌದಿ ಅರೇಬಿಯವನ್ನು.
 
ಅಲ್ಲಿ ನಡೆದ 50ಕ್ಕೂ ಹೆಚ್ಚು ದೇಶಗಳ ಅರಬ್‌– ಇಸ್ಲಾಮಿಕ್– ಅಮೆರಿಕ ಶೃಂಗಸಭೆಯಲ್ಲಿ ಪಾಲ್ಗೊಂಡು, ಇಸ್ಲಾಂ ಧರ್ಮವನ್ನು ಹಾಡಿ ಹೊಗಳಿದರು.  ಆದರೆ ಷಿಯಾಗಳು  ಬಹುಸಂಖ್ಯೆಯಲ್ಲಿರುವ ಇರಾನ್‌ ದೇಶವನ್ನು ತೀವ್ರವಾಗಿ ಟೀಕಿಸಿದರು. ಆ ದೇಶ ಪರಮಾಣು ಅಸ್ತ್ರವನ್ನು ಹೊಂದಲು ಯಾವುದೇ ರೀತಿಯಿಂದಲೂ ಅವಕಾಶ ಕೊಡುವುದಿಲ್ಲ ಎಂದು ಗುಡುಗಿದರು. ಅಂದರೆ ಸುನ್ನಿ ಬಹುಮತದ ದೇಶಗಳ ಓಲೈಕೆಯೇ ಅವರ ಮನಸ್ಸಿನಲ್ಲಿ ಇತ್ತು ಎಂಬುದು ಸ್ಪಷ್ಟ.
 
ಅವರ ಭಾಷಣದಲ್ಲಿ ಅರಬ್‌– ಇಸ್ಲಾಮಿಕ್‌ ದೇಶಗಳಿಗೂ ಒಂದಿಷ್ಟು ಕಿವಿಮಾತು ಇತ್ತು. ಇಸ್ಲಾಮಿಕ್‌ ಉಗ್ರವಾದವನ್ನು ನಿರ್ಮೂಲನೆ ಮಾಡಲು ಮಧ್ಯಪ್ರಾಚ್ಯದ ದೇಶಗಳು ಸಂಘಟಿತ ಹೋರಾಟ ನಡೆಸಬೇಕು ಎಂದು ಕರೆ ಕೊಟ್ಟರು. ಭಯೋತ್ಪಾದನೆಯನ್ನು ಸದೆಬಡಿಯಬೇಕು ಎನ್ನುವುದು ಪಾಶ್ಚಾತ್ಯ ದೇಶಗಳ  ವಿರುದ್ಧದ ಮತ್ತು ಇಸ್ಲಾಂ ವಿರುದ್ಧದ ಸಂಘರ್ಷ ಅಲ್ಲ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದರು. ಭಯೋತ್ಪಾದನೆಯನ್ನು ಅವರು ಸಮೀಕರಿಸಿದ್ದು, ‘ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಹೋರಾಟ’ ಎಂದು.
 
ಶೃಂಗಸಭೆ ಮತ್ತು ಅದರಲ್ಲಿ ಅಮೆರಿಕದ ಪಾತ್ರದ ಉದ್ದೇಶ ಸ್ಪಷ್ಟ. ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಅಮೆರಿಕಕ್ಕೆ ಮಾರುಕಟ್ಟೆ ಅವಕಾಶಗಳನ್ನು ಹುಡುಕಿಕೊಳ್ಳುವುದು. ಅದಕ್ಕಾಗಿ ಅವರು  ‘ಪ್ರಜಾಸತ್ತಾತ್ಮಕ ಸುಧಾರಣೆಗಳು ಮತ್ತು ಮಾನವ ಹಕ್ಕು ರಕ್ಷಣೆ’ಯಂತಹ ಪ್ರಮುಖ ವಿಚಾರಗಳನ್ನು ಉಲ್ಲೇಖಿಸಲು ಹೋಗಲೇ ಇಲ್ಲ. ವ್ಯಾಪಾರ ವಹಿವಾಟು ಹೆಚ್ಚಿಸಿಕೊಳ್ಳುವುದು, ಭಯೋತ್ಪಾದನೆ ನಿಗ್ರಹಕ್ಕೆ ಅತ್ಯಗತ್ಯ ಎಂಬ ನೆಪದಲ್ಲಿ ರಕ್ಷಣಾ ಉತ್ಪನ್ನಗಳನ್ನು ಈ ದೇಶಗಳಿಗೆ ಮಾರಾಟ ಮಾಡಲು ಹೆಚ್ಚು ಆಸಕ್ತಿ ವಹಿಸಿದರು.
 
ಅದರ ಫಲ ಎಂದರೆ ಸೌದಿ ಅರೇಬಿಯದ ಜತೆ 35 ಸಾವಿರ ಕೋಟಿ ಡಾಲರ್‌ ಮೊತ್ತದ ವಾಣಿಜ್ಯ ವಹಿವಾಟು ಅಮೆರಿಕಕ್ಕೆ ದಕ್ಕಿತು. ಇದನ್ನೆಲ್ಲ ನೋಡಿದರೆ, ಟ್ರಂಪ್‌ ಅವರನ್ನು ಸುಲಭವಾಗಿ ಅಂದಾಜು ಮಾಡಲು ಸಾಧ್ಯವಿಲ್ಲ.
 
ಭಯೋತ್ಪಾದನೆಯಿಂದ ತೊಂದರೆ ಅನುಭವಿಸುತ್ತಿರುವ ಕೆಲ ರಾಷ್ಟ್ರಗಳ ಹೆಸರನ್ನು ಹೇಳುವಾಗ ಭಾರತವನ್ನೂ ಅವರು ಉಲ್ಲೇಖಿಸಿದ್ದು ಗಮನಾರ್ಹ. ಅಮೆರಿಕ ಮಾತ್ರವಲ್ಲದೆ ಆಫ್ರಿಕಾ, ದಕ್ಷಿಣ ಅಮೆರಿಕದ ದೇಶಗಳು, ಭಾರತ, ರಷ್ಯಾ, ಚೀನಾ, ಆಸ್ಟ್ರೇಲಿಯಾಗಳೂ ಭಯೋತ್ಪಾದನೆಯ ಕಹಿ ಉಣ್ಣುತ್ತಿರುವ ದೇಶಗಳು ಎಂದು ಪಟ್ಟಿ ಮಾಡಿದರು.
 
ಶೃಂಗಸಭೆಯಲ್ಲಿ ಹಾಜರಿದ್ದ ಪಾಕಿಸ್ತಾನದ ಪ್ರಧಾನಿಯ ಎದುರು ಆ ದೇಶವನ್ನು ನೇರವಾಗಿ ಉಲ್ಲೇಖ ಮಾಡದೆ, ‘ಯಾವುದೇ ರಾಷ್ಟ್ರ ತನ್ನ ನೆಲದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡಬಾರದು’ ಎಂದು ಹೇಳಿದ್ದು ನಮಗೆ ನೈತಿಕವಾಗಿ ಒಂದಿಷ್ಟು ಬಲ ತುಂಬಿದಂತೆ. ಆದರೆ ಇರಾನ್‌ನ ವಿಷಯದಲ್ಲಿ ಅವರಿಗೆ ಅಷ್ಟೊಂದು ದ್ವೇಷ ಯಾಕೆ ಎನ್ನುವುದು ಅರ್ಥವಾಗದ ಸಂಗತಿ.
 
ಸೌಮ್ಯ ಸುಧಾರಣಾವಾದಿ ಹಸನ್‌ ರೌಹಾನಿ ಅವರು ಇರಾನ್‌ ಅಧ್ಯಕ್ಷರಾಗಿ ಮರು ಆಯ್ಕೆಯಾದ ಬೆನ್ನಲ್ಲೇ ಟ್ರಂಪ್‌ ಕಹಿ ಮಾತುಗಳನ್ನು ಆಡಿದ್ದು ಕಳವಳದ ಸಂಗತಿ. ಅದರಲ್ಲಿಯೂ ಇರಾನ್‌ ಜತೆ ಉತ್ತಮ ಬಾಂಧವ್ಯ ಹೊಂದಿರುವ ನಮಗೆ ಚಿಂತೆಯ ವಿಷಯವೇ ಸರಿ. ಇನ್ನು ಮುಂದಿನ ದಿನಗಳಲ್ಲಿ ಇದನ್ನು ನಾವು ಬಹಳ ಸಮತೂಕದಿಂದ ನಿಭಾಯಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT