ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹46.99 ಕೋಟಿ ವೆಚ್ಚ: 227 ಆಟಗಾರರ ಖರೀದಿ

Last Updated 23 ಮೇ 2017, 19:30 IST
ಅಕ್ಷರ ಗಾತ್ರ

ನವದೆಹಲಿ:  ಪ್ರೊ ಕಬಡ್ಡಿ ಐದನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ 12 ಫ್ರಾಂಚೈಸ್‌ಗಳು ಒಟ್ಟು ₹46.99 ಕೋಟಿ ಹಣವನ್ನು ವೆಚ್ಚ ಮಾಡಿ 227 ಆಟ ಗಾರರನ್ನು ಆಯ್ಕೆ ಮಾಡಿಕೊಂಡವು.

ಮಂಗಳವಾರ ಇಲ್ಲಿ ನಡೆದ ಎರಡನೇ  ಮತ್ತು ಅಂತಿಮ ದಿನದ ಹರಾಜು ಪ್ರಕ್ರಿಯೆಯಲ್ಲಿ ಸಾಕಷ್ಟು ಪೈಪೋಟಿ ಕಂಡು ಬಂದಿತು. ಮೊದಲ ದಿನ ಎ ದರ್ಜೆಯ ಆಟಗಾರರ ಹೆಸರುಗಳೇ ಹೆಚ್ಚು ಚಾಲ್ತಿಯಲ್ಲಿತ್ತು. ಆದರೆ ಎರಡನೇ ದಿನ ಬಿ, ಸಿ, ಡಿ ದರ್ಜೆಯ ಆಟಗಾರರೂ ಗಮನ ಸೆಳೆದರು. ಫ್ರಾಂಚೈಸ್‌ಗಳು ತಮ್ಮ ತಂಡದಲ್ಲಿ ಅನುಭವಿ ಆಟಗಾರರ ಮತ್ತು ಉದಯೋನ್ಮುಖ ಪ್ರತಿಭೆಗಳ ಸಮತೋಲನ ಕಾಪಾಡಿಕೊಳ್ಳಲು ಯತ್ನಿಸಿದ್ದು ಎದ್ದು ಕಾಣುತಿತ್ತು.

ಮಂಗಳವಾರ ದಬಾಂಗ್‌ ಡೆಲ್ಲಿ ಫ್ರಾಂಚೈಸ್‌ ಸೂರಜ್‌ ದೇಸಾಯಿ ಅವರಿಗೆ ₹52.50 ಲಕ್ಷ ನೀಡಿದ್ದೇ ದಿನದ ದೊಡ್ಡ ಮೊತ್ತದ ಖರೀದಿಯಾಗಿತ್ತು.
ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದ ತಂಡದ ಪ್ರಮುಖ ಆಟಗಾರ ಸಚಿನ್‌ ಅವರನ್ನು ಗುಜರಾತ್‌ ತಂಡ ₹36 ಲಕ್ಷ ನೀಡಿ ಸೆಳೆದುಕೊಂಡಿತು.

ಎರಡು ದಿನಗಳ ಹರಾಜು ಪ್ರಕ್ರಿಯೆಯಲ್ಲಿ ಎ ದರ್ಜೆಯ 44 ಆಟಗಾರರು ಮತ್ತು ಬಿ ದರ್ಜೆಯ 58 ಆಟಗಾರರನ್ನು ಖರೀದಿ ನಡೆಸಲಾಯಿತು.
ವಿದೇಶಿ ಆಟಗಾರರಿಗೂ ದೊಡ್ಡ ಮೊತ್ತದ ಹಣ ನೀಡಲು ಫ್ರಾಂಚೈಸ್‌ಗಳು ಪೈಪೋಟಿ ನಡೆಸಿದ್ದು ಎದ್ದು ಕಂಡಿತು. ಬೆಂಗಾಲ್‌ ವಾರಿಯರ್ಸ್‌ನ ತಂಡದವರು ದಕ್ಷಿಣ ಕೊರಿಯಾದ ಜಂಗ್‌ ಕುನ್‌ ಲೀಯವರಿಗೆ ₹80.3 ಲಕ್ಷ ನೀಡಿ ತಮ್ಮಲ್ಲೇ ಉಳಿಸಿಕೊಂಡರು. ಇರಾನ್‌ ದೇಶದ ಅಬೊಜರ್‌ (₹50 ಲಕ್ಷ), ಅಬೊಲ್‌ ಫಜಲ್‌ (₹31.8ಲಕ್ಷ) ಮತ್ತು ಫರಾದ್‌ ರಹಿಮಿ (₹29 ಲಕ್ಷ) ಅವರನ್ನು ಕ್ರಮವಾಗಿ ಗುಜರಾತ್‌, ಡೆಲ್ಲಿ ಮತ್ತು ತೆಲುಗು ಟೈಟನ್ಸ್‌ ತಂಡಗಳು ತಮ್ಮದಾಗಿಸಿಕೊಂಡವು. ಥಾಯ್ಲೆಂಡ್‌ನ ಕೊಮ್ಸನ್‌ (₹20.4 ಲಕ್ಷ) ಅವರನ್ನು ಹರಿಯಾಣ ತಂಡದವರು ತಮ್ಮದಾಗಿಸಿಕೊಂಡರು.

ಹರಾಜು ಪ್ರಕ್ರಿಯೆಯಲ್ಲಿ ಕನ್ನಡಿಗರು: ಇಷ್ಟು ದೊಡ್ಡ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಕನ್ನಡಿಗರ ಸಂಖ್ಯೆ ಕಡಿಮೆಯೇ. ಬೆಂಗಳೂರಿನ ಡಿಫೆಂಡರ್‌ ಜೀವ ಕುಮಾರ್‌ (₹ 52ಲಕ್ಷ) ಅವರನ್ನು ಉತ್ತರ ಪ್ರದೇಶ ತಂಡ ಖರೀದಿಸಿದರೆ, ಬೆಂಗಳೂರಿನ ಇನ್ನೊಬ್ಬ ಆಟಗಾರ ರೈಡರ್‌ ಶಬೀರ್‌ ಬಪ್ಪು (₹ 45 ಲಕ್ಷ) ಅವರನ್ನು ಯೂ ಮುಂಬಾ ತನ್ನದಾಗಿಸಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ರೈಡರ್‌ ಸುಖೇಶ್‌ ಹೆಗ್ಡೆ ಅವರಿಗೆ ₹ 31.50 ಲಕ್ಷ ನೀಡಿ ಗುಜರಾತ್ ತಂಡ ತನ್ನದಾಗಿಸಿಕೊಂಡಿದೆ. ದಕ್ಷಿಣ ಕನ್ನಡದ ಇನ್ನೊಬ್ಬ ಆಟಗಾರ ರೈಡರ್‌ ಪ್ರಶಾಂತ್‌ ಕುಮಾರ್‌ ರೈ (₹21 ಲಕ್ಷ) ಅವರನ್ನು ಹರಿಯಾಣ ತಂಡ ಖರೀದಿಸಿದೆ.

ಪ್ರಸಕ್ತ ಸಾಲಿನಲ್ಲಿ ಪ್ರೊ ಕಬಡ್ಡಿಯ ಮಾರ್ಗದರ್ಶನದಲ್ಲಿ ಯಂಗ್‌ ಟಾಲೆಂಡ್‌ ಪೂಲ್‌ ಎಂಬ ಯೋಜನೆಯ ಅಡಿ 18ರಿಂದ 22 ವರ್ಷದೊಳಗಿನವರ ಉದಯೋನ್ಮುಖ ಆಟಗಾರರ ಯೋಜನೆ ರೂಪು ಗೊಂಡಿತ್ತು. ಸುಮಾರು 150 ಆಟಗಾರರಿಗೆ ವಿಶೇಷ ತರಬೇತಿ ನೀಡಲಾಗಿತ್ತು. ಈ ಗುಂಪಿನಿಂದ ಆಯ್ಕೆಯಾದವರಲ್ಲಿ ಇಬ್ಬರು ಕನ್ನಡಿಗರಿದ್ದಾರೆ. ನೆಲಮಂಗಲದ ರೈಡರ್‌ ದರ್ಶನ್‌ (₹11.80ಲಕ್ಷ) ಅವರನ್ನು ಯೂ ಮುಂಬಾ ತಂಡ ಖರೀದಿಸಿದರೆ, ಚೆನ್ನಪಟ್ಟಣದ ಆಲ್‌ರೌಂಡರ್‌ ಅಭಿಷೇಕ್‌ ಎನ್‌ (₹ 5ಲಕ್ಷ) ಅವರನ್ನು ಜೈಪುರ್ ಪಿಂಕ್‌ ಪ್ಯಾಂಥರ್ಸ್‌ ಖರೀದಿಸಿದೆ. ಮುಂಬೈನಲ್ಲಿ ನೆಲೆಸಿರುವ ಉಡುಪಿ ಜಿಲ್ಲೆಯ ರಿಷಾಂಕ್‌ ದೇವಾಡಿಗ (₹45.50ಲಕ್ಷ) ಅವರನ್ನು ಉತ್ತರ ಪ್ರದೇಶ ತಂಡ ಖರೀದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT