ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಚುನಾವಣೆ: ಗೆಲುವಿನ ಸನಿಹ ಎನ್‌ಡಿಎ

Last Updated 23 ಮೇ 2017, 19:30 IST
ಅಕ್ಷರ ಗಾತ್ರ
ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಅಧಿಕಾರಾವಧಿ ಕೊನೆಗೊಳ್ಳುವ ಸಮಯ ಸಮೀಪಿಸುತ್ತಿರುವಂತೆಯೇ ಹೊಸ ರಾಷ್ಟ್ರಪತಿ ಆಯ್ಕೆ ವಿಷಯ ಮುನ್ನೆಲೆಗೆ ಬಂದಿದೆ.
 
ರಾಜಕೀಯ ವಲಯದಲ್ಲಿ ರಾಷ್ಟ್ರಪತಿ ಚುನಾವಣೆಯ ಬಗ್ಗೆ ಚರ್ಚೆ ಆರಂಭವಾಗಿದೆ. ದೇಶದ ಮೊದಲ ಪ್ರಜೆಯನ್ನು ಅವಿರೋಧವಾಗಿ ಆಯ್ಕೆ ಮಾಡುವ ಸಾಧ್ಯತೆಯನ್ನು ಕಾಂಗ್ರೆಸ್‌ ತಳ್ಳಿಹಾಕಿದೆ.
 
ಎಲ್ಲರಿಗೂ ಸಮ್ಮತವಾಗಿರುವ ಅಭ್ಯರ್ಥಿಯನ್ನು ಎನ್‌ಡಿಎಯೇತರ ಪಕ್ಷಗಳಿಂದ ಕಣಕ್ಕಿಳಿಸಲು ಕಾಂಗ್ರೆಸ್‌ ತೀವ್ರ ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸ್ವತಃ ಈ ಹೊಣೆಯನ್ನು ಹೊತ್ತಿದ್ದಾರೆ.
 
ಇತ್ತ ಬಿಜೆಪಿ ನೇತೃತ್ವದ ಎನ್‌ಡಿಎ ತನ್ನ ಅಭ್ಯರ್ಥಿ ಯಾರು ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಅದು ಅಚ್ಚರಿಯ ಆಯ್ಕೆಯನ್ನೇ ಮಾಡಲಿದೆ ಎಂದು ಹೇಳಲಾಗುತ್ತಿದೆ. ಸದ್ಯದ ಮತಗಳ ಲೆಕ್ಕಾಚಾರದಲ್ಲಿ ಎನ್‌ಡಿಎ ಗೆಲುವಿನ ಸನಿಹದಲ್ಲಿದೆ. 
 
ತಮಿಳುನಾಡಿನ ಎಐಎಡಿಎಂಕೆ ಮತ್ತು ಒಡಿಶಾದ ಬಿಜೆಡಿ ಬೆಂಬಲ ಪಡೆದುಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಈ ಎರಡರಲ್ಲಿ ಯಾವುದೇ ಒಂದು ಪಕ್ಷದ ಬೆಂಬಲ ದೊರೆತರೂ ಎನ್‌ಡಿಎ ಅಭ್ಯರ್ಥಿ ನಿರಾಯಾಸ ಗೆಲುವು ಸಾಧಿಸಲಿದ್ದಾರೆ. 
****
ಹಿಂದೆ ಸರಿದ ಅಡ್ವಾಣಿ, ಜೋಷಿ

ರಾಷ್ಟ್ರಪತಿ ಚುನಾವಣೆ ವಿಷಯ ಪ್ರಸ್ತಾಪವಾದಾಗಲೆಲ್ಲ ಬಿಜೆಪಿಯ ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದ್ದವು. ಅಡ್ವಾಣಿ ರಾಷ್ಟ್ರಪತಿ ಹುದ್ದೆಗೆ ಏರುವುದು ಖಚಿತ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆದಿತ್ತು.

ಆದರೆ, ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಒಳಸಂಚು ನಡೆಸಲಾಗಿದೆ ಎಂಬ ಆರೋಪದ ಬಗ್ಗೆ ಅಡ್ವಾಣಿ, ಜೋಷಿ ಸೇರಿದಂತೆ 13 ಆರೋಪಿಗಳು ವಿಚಾರಣೆ ಎದುರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದ ನಂತರ ಇಬ್ಬರ ಹೆಸರುಗಳೂ ತೆರೆಮರೆಗೆ ಸರಿದಿವೆ.
****
ಒಲ್ಲೆ ಎಂದ ಪ್ರಣವ್‌

2012ರ ಜುಲೈ 25ರಂದು ಭಾರತದ 13ನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಪ್ರಣವ್‌ ಮುಖರ್ಜಿ ಅವರನ್ನು ಎರಡನೇ ಅವಧಿಗೆ ಮುಂದುವರಿಸುವ ಬಗ್ಗೆ ಚರ್ಚೆ ಆರಂಭವಾಗಿತ್ತು. ಆದರೆ, ಈ ಪ್ರಸ್ತಾವವನ್ನು ಕೇಂದ್ರ ಸರ್ಕಾರ ವಿರೋಧಿಸಲಿಲ್ಲವಾದರೂ, ಹೊಸ ರಾಷ್ಟ್ರಪತಿ ಆಯ್ಕೆಯ ಇಂಗಿತ ವ್ಯಕ್ತಪಡಿಸಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಪ್ರಣವ್‌ ಮುಖರ್ಜಿ, ತಾವು ಎರಡನೇ ಅವಧಿಗೆ ಮುಂದುವರಿಯುವುದಿಲ್ಲ ಎಂದು ಹೇಳಿದ್ದರು.
****


ರಾಷ್ಟ್ರಪತಿ ಆಯ್ಕೆ ಹೇಗೆ?
*
ಸಂಸದರು ಮತ್ತು ಶಾಸಕರು ಮತ ಹಾಕಿ ರಾಷ್ಟ್ರಪತಿಯನ್ನು ಆಯ್ಕೆ ಮಾಡುತ್ತಾರೆ
* ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ರಾಜ್ಯಗಳ ವಿಧಾನಸಭಾ ಸದಸ್ಯರಿಗೆ ಈ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಇದೆ.
* ದೆಹಲಿ, ಪುದುಚೇರಿಯ ಶಾಸಕರೂ ರಾಷ್ಟ್ರಪತಿ ಆಯ್ಕೆಯಲ್ಲಿ ಭಾಗವಹಿಸುತ್ತಾರೆ
​* ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರೊಬ್ಬರ ಮತದ ಮೌಲ್ಯ 708
​* ಆಯಾ ರಾಜ್ಯದ ಜನಸಂಖ್ಯೆಯನ್ನು ಆ ರಾಜ್ಯದ ಶಾಸಕರ ಸಂಖ್ಯೆಯಿಂದ ಭಾಗಿಸಬೇಕು. ಆಗ ಬಂದ ಶೇಷವನ್ನು 1,000ದಿಂದ ಪುನಃ ಭಾಗಿಸಿಬೇಕು. ಆಗ ದೊರೆಯುವ ಶೇಷವು ಆ ರಾಜ್ಯದ ಒಬ್ಬ ಶಾಸಕನ ಮತ ಮೌಲ್ಯವಾಗಿರುತ್ತದೆ

****
ಮತದಾರರು
776* ಒಟ್ಟು ಸಂಸತ್‌ ಸದಸ್ಯರು
4,120 ಎಲ್ಲಾ ರಾಜ್ಯಗಳ ಶಾಸಕರು
* ಶ್ರೀನಗರ ಲೋಕಸಭಾ ಸ್ಥಾನಕ್ಕೆ ಇನ್ನೂ ಚುನಾವಣೆ ನಡೆದಿಲ್ಲ. ಮಧ್ಯಪ್ರದೇಶದ ರಾಜ್ಯಸಭೆ ಸದಸ್ಯ, ಕೇಂದ್ರ ಸಚಿವರಾಗಿದ್ದ ದವೆ ನಿಧನರಾಗಿದ್ದಾರೆ. ಹೀಗಾಗಿ ಈ 2 ಸ್ಥಾನ ಖಾಲಿ ಇವೆ.

****
ಎನ್‌ಡಿಎ ಸಂಭವನೀಯ ಅಭ್ಯರ್ಥಿಗಳು


ದ್ರೌಪತಿ ಮುರ್ಮೂ ಜಾರ್ಖಂಡ್‌ ರಾಜ್ಯಪಾಲರು


ಸುಷ್ಮಾ ಸ್ವರಾಜ್‌ ವಿದೇಶಾಂಗ ವ್ಯವಹಾರಗಳ ಸಚಿವೆ


ಸುಮಿತ್ರಾ ಮಹಾಜನ್‌ ಲೋಕಸಭೆಯ ಸ್ಪೀಕರ್‌

****
ವಿರೋಧ ಪಕ್ಷಗಳ ಸಂಭವನೀಯ ಅಭ್ಯರ್ಥಿಗಳು

ಗೋಪಾಲ ಕೃಷ್ಣ ಗಾಂಧಿ, ಗಾಂಧೀಜಿ ಮೊಮ್ಮಗ, ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ

ಶರದ್‌ ಯಾದವ್‌, ಜೆಡಿಯು ಮುಖಂಡ

ಮೀರಾ ಕುಮಾರ್‌, ಲೋಕಸಭೆಯ ಮಾಜಿ ಸ್ಪೀಕರ್‌
****


ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT