ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಿಷ್ಠರು ಬಯಸಿದರೆ ಪಕ್ಷದಲ್ಲಿ ಉಳಿಯುವೆ: ಜಾರಕಿಹೊಳಿ

ಮುಖ್ಯಮಂತ್ರಿ ಸೂಚಿಸಿದವರಿಗೇ ಕೆಪಿಸಿಸಿ ಅಧ್ಯಕ್ಷ ಸ್ಥಾನ
Last Updated 23 ಮೇ 2017, 19:30 IST
ಅಕ್ಷರ ಗಾತ್ರ
ನವದೆಹಲಿ: ‘ವರಿಷ್ಠರು ಪಕ್ಷದಲ್ಲಿ ಉಳಿಸಿಕೊಳ್ಳಲು ಬಯಸಿದರೆ ಮುಂದುವರಿಯುವೆ. ಇಲ್ಲದಿದ್ದರೆ ಬೇರೆ ಪಕ್ಷ ಸೇರುವೆ’ ಹೀಗೆ ಹೇಳಿದವರು ಕಾಂಗ್ರೆಸ್‌ ಮುಖಂಡ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ.
 
ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಮಂಗಳವಾರ ಭೇಟಿ ಮಾಡಿ ಚರ್ಚಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
 
‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸಲಿ. ಆದರೆ, ಸಚಿವ ರಮೇಶ ಜಾರಕಿಹೊಳಿ ಅವರು ನನ್ನ ಸ್ಪರ್ಧೆಯ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಆ ಅಧಿಕಾರ ಕೊಟ್ಟವರು ಯಾರು’ ಎಂದು ಅವರು ಪ್ರಶ್ನಿಸಿದರು.
 
‘ನನ್ನನ್ನು ಸಚಿವ ಸ್ಥಾನದಿಂದ ತೆಗೆದಿದ್ದರಿಂದ ಪಕ್ಷ ತ್ಯಜಿಸುತ್ತಿದ್ದೇನೆ ಎಂಬುದು ವದಂತಿ. ಕಳೆದ ನವೆಂಬರ್‌ನಲ್ಲಿ ನಾನೇ ಮನಸಾರೆ ಸಚಿವ ಸ್ಥಾನವನ್ನು ಬಿಟ್ಟುಕೊಟ್ಟಿದ್ದೇನೆ. ಈಗ ನಾನು ಯಾವುದೇ ರೀತಿಯ ಬೇಡಿಕೆ ಇರಿಸಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
 
ಬೆಳಗಾವಿ ಜಿಲ್ಲೆಯಲ್ಲಿರುವ ಪಕ್ಷದಲ್ಲಿನ ಗೊಂದಲಕ್ಕೆ ಸಂಬಂಧಿಸಿದಂತೆ ವರಿಷ್ಠರು ಬೆಂಗಳೂರಿನಲ್ಲೇ ಮಾತುಕತೆ ನಡೆಸಿ ಸರಿಪಡಿಸಿದ್ದಾರೆ. 15 ದಿನಗಳ ಹಿಂದೆ ನಿಗದಿಯಾಗಿದ್ದ ಕಾರ್ಯಕ್ರಮದಂತೆ ನಾನು ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ್ದೇನೆ. ಇದೊಂದು ಸೌಹಾರ್ದ ಭೇಟಿಯಾಗಿತ್ತು.

ಪಕ್ಷ ಸಂಘಟನೆ, ವಿಧಾನಸಭೆ ಚುನಾವಣೆಯ ಕಾರ್ಯತಂತ್ರ ರೂಪಿಸುವ ಕುರಿತು ಅವರು ನನ್ನೊಂದಿಗೆ ಚರ್ಚಿಸಿದರು’ ಎಂದು ಸತೀಶ ಹೇಳಿದರು.
 
ಹಿಂದೆಯೇ ಬದಲಿಸಬೇಕಿತ್ತು: ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸಬೇಕು ಎಂಬ ಉದ್ದೇಶ ಹೊಂದಿದ್ದರೆ ಹೈಕಮಾಂಡ್‌ ಎರಡು ವರ್ಷಗಳ ಹಿಂದೆಯೇ ಬದಲಿಸ
ಬೇಕಿತ್ತು. ಚುನಾವಣೆ ಹೊಸ್ತಿಲಲ್ಲಿ ಅಧ್ಯಕ್ಷರನ್ನು ಬದಲಿಸುವುದು ವ್ಯತಿರಿಕ್ತ ಪರಿಣಾಮವನ್ನೂ ಬೀರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಎಸ್‌.ಆರ್‌. ಪಾಟೀಲ, ಡಿ.ಕೆ. ಶಿವಕುಮಾರ್‌, ಎಂ.ಬಿ. ಪಾಟೀಲ, ಕೆ.ಎಚ್‌. ಮುನಿಯಪ್ಪ ಅವರ ಹೆಸರು ಕೇಳಿಬರುತ್ತಿದೆ. 
 
ಮುಖ್ಯಮಂತ್ರಿಯವರು ಯಾರ ಹೆಸರನ್ನು ಸೂಚಿಸುತ್ತಾರೋ ಅವರೇ ಅಧ್ಯಕ್ಷರಾಗುವ ಸಾಧ್ಯತೆಗಳಿವೆ. ಸಿದ್ದರಾಮಯ್ಯ ಅವರು ಎಸ್‌.ಆರ್‌. ಪಾಟೀಲ ಅವರತ್ತ ಒಲವು ಹೊಂದಿದ್ದಾರೆ ಎಂದು ಜಾರಕಿಹೊಳಿ ತಿಳಿಸಿದರು.
****
ಎಸ್‌.ಟಿ. ಮುಖಂಡರ ಸಭೆ  ಇಂದು

ನವದೆಹಲಿ: ಪಕ್ಷದ ಪರಿಶಿಷ್ಟ ಪಂಗಡ (ಎಸ್‌.ಟಿ) ವಿಭಾಗ ಮುಖಂಡರ ರಾಷ್ಟ್ರಮಟ್ಟದ ಸಭೆಯನ್ನು ಬುಧವಾರ ಬೆಳಿಗ್ಗೆ 10ಕ್ಕೆ ನಡೆಯಲಿದೆ. ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಸಭೆಯಲ್ಲಿ ಭಾಗವಹಿಸಿ ಪಕ್ಷದಲ್ಲಿ ಪರಿಶಿಷ್ಟ ಪಂಗಡ ಸಮುದಾಯದ ಸ್ಥಾನಮಾನದ ಕುರಿತು ಚರ್ಚಿಸುವರು.

ಸಚಿವ ರಮೇಶ ಜಾರಕಿಹೊಳಿ, ಶಾಸಕರಾದ ಸತೀಶ ಜಾರಕಿಹೊಳಿ, ವಿ.ಎಸ್‌. ಉಗ್ರಪ್ಪ, ಸಂಸದ ಬಿ.ವಿ. ನಾಯಕ್‌, ಟಿ.ಈಶ್ವರ್‌ ಹಾಗೂ ಪರಿಶಿಷ್ಟ ಪಂಗಡದ ರಾಜ್ಯ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT