ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಳ ಮಸೂದೆಯ ವಿರುದ್ಧ ಕನ್ನಡಿಗರ ರೋಷಾಗ್ನಿ

ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ದಿಗ್ಬಂಧನ l ಮಲಯಾಳ ಹೇರಿಕೆಗೆ ವಿರೋಧ
Last Updated 23 ಮೇ 2017, 19:57 IST
ಅಕ್ಷರ ಗಾತ್ರ
ಕಾಸರಗೋಡು: ಕೇರಳದ ಕನ್ನಡ ಭಾಷಾ ಅಲ್ಪ ಸಂಖ್ಯಾತರ ಮೇಲೆ ಮಲಯಾಳವನ್ನು ಕಡ್ಡಾಯವಾಗಿ ಹೇರುವ ಮಸೂದೆ ಜಾರಿಗೊಳಿಸಿದ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಕಾಸರಗೋಡಿನ ಕನ್ನಡಿಗರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
 
ಜಿಲ್ಲೆಯ ಮೂಲೆ ಮೂಲೆಗಳಿಂದ ಬಂದ ಸಾವಿರಾರು ಕನ್ನಡಿಗರು ‘ಕನ್ನಡ ರಕ್ಷಿಸಿ, ಕನ್ನಡ ಉಳಿಸಿ’ ಘೋಷಣೆಗಳನ್ನು ಕೂಗಿ ಬೆಳಿಗ್ಗೆ ಆರು ಗಂಟೆಗೆ ಮೊದಲೇ ಜಿಲ್ಲಾಧಿಕಾರಿಗಳ ಕಚೇರಿಯನ್ನು ಸುತ್ತುವರಿದು ಮುಷ್ಕರ ಆರಂಭಿಸಿದ್ದರು.
 
8 ಗಂಟೆಯಾಗುತ್ತಲೇ ತಂಡೋಪತಂಡವಾಗಿ ಬಂದ ಕನ್ನಡ ಹೋರಾಟಗಾರರು 16 ಎಕರೆ ವಿಸ್ತೀರ್ಣವಿರುವ ಜಿಲ್ಲಾಧಿಕಾರಿಗಳ ಕಚೇರಿಯ ಆವರಣ ಗೋಡೆಯ ಸುತ್ತೂ ಜಮಾಯಿಸಿ ಸರ್ಕಾರದ ಕರಾಳ ಶಾಸನವನ್ನು ಪ್ರತಿಭಟಿಸಿ ಧಿಕ್ಕಾರ ಕೂಗಿದರು.
 
ಜಿಲ್ಲಾಧಿಕಾರಿಗಳ ಕಚೇರಿಯ ಸುತ್ತಲಿನ  8 ಪ್ರವೇಶದ್ವಾರದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು ಈ ದ್ವಾರಗಳ ಮೂಲಕ ಸರ್ಕಾರಿ ನೌಕರರು ಕಚೇರಿಗೆ ಹೋಗುವುದನ್ನು ತಡೆಗಟ್ಟಿದರು. ಈ ಮುಷ್ಕರದ ವಿರುದ್ಧ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದರೂ, ಕನ್ನಡಿಗರು ಶಾಂತಿಯುತವಾಗಿ ಮುಷ್ಕರ ನಡೆಸಿದ್ದರಿಂದ ಪೊಲೀಸರಿಗೆ ಯಾವುದೇ ಕೆಲಸ ಇಲ್ಲವಾಯಿತು.
 
ಪ್ರತಿಭಟನೆಯಿಂದ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಬಳಕೆದಾರರ ನ್ಯಾಯಾಲಯ, ಜಿಲ್ಲಾ ಪಂಚಾಯಿತಿ ಕಚೇರಿ ಹಾಗೂ ವಿವಿಧ ಇಲಾಖೆಗಳ 75ಕ್ಕೂ ಹೆಚ್ಚು ಕಾರ್ಯಾಲಯಗಳು ತೆರೆಯಲಿಲ್ಲ. ಸುಮಾರು 1,200ರಷ್ಟು ಸಂಖ್ಯೆಯ ನೌಕರರು ಕಚೇರಿಯ ಒಳಗೆ ಪ್ರವೇಶಿಸಲಾಗದೆ ಮರಳಿದರು.
 
ಮುಷ್ಕರಕಾರರಿಂದ ತುಂಬಿಕೊಂಡ ಜಿಲ್ಲಾಧಿಕಾರಿಗಳ ಕಚೇರಿಯ ಮುಂದುಗಡೆಯ ರಸ್ತೆಯಲ್ಲಿ ವಾಹನ ಸಂಚಾರವನ್ನು ಪೊಲೀಸರು ನಿಲುಗಡೆಗೊಳಿಸಬೇಕಾಯಿತು. ಕನ್ನಡ ಹೋರಾಟ ಸಮಿತಿಯ ಆಶ್ರಯದಲ್ಲಿ ನಡೆದ ಈ ಪ್ರತಿಭಟನಾ ಮುಷ್ಕರಕ್ಕೆ ಸಿಪಿಎಂ ಹೊರತಾಗಿ ಉಳಿದ ಎಲ್ಲಾ ಪಕ್ಷಗಳು ಸಂಪೂರ್ಣ ಬೆಂಬಲ ನೀಡಿದ್ದವು.
 
ವಿವಿಧ ನಾಯಕರು ಜಾತಿ ಮತ  ಪಂಥ ಭಾಷಾ  ಭೇದ ಭಾವ ಮರೆತು ಮುಷ್ಕರದಲ್ಲಿ ಪಾಲ್ಗೊಂಡು ಹೋರಾಟಕ್ಕೆ ಸಂಚಲನ ನೀಡಿದರು. ಅಲ್ಲದೆ ವಿವಿಧ ಕನ್ನಡಪರ ಸಂಘ ಸಂಸ್ಥೆಗಳು, ಕನ್ನಡ, ತುಳು, ಕೊಂಕಣಿ, ಬ್ಯಾರಿ, ಮಲಯಾಳಂ ಸಹಿತ ಇತರ  ಭಾಷೆ ಮಾತನಾಡುವ ಕನ್ನಡ ಸಂಸ್ಕೃತಿಯನ್ನು ಹೊಂದಿರುವವರು ಮುಷ್ಕರವನ್ನು ಬೆಂಬಲಿಸಿ ಸಕ್ರಿಯವಾಗಿ ಪಾಲ್ಗೊಂಡರು.
 
ಕನ್ನಡ ವಿದ್ಯಾರ್ಥಿಗಳು, ಶಿಕ್ಷಕರು, ಬರಹಗಾರರು, ಕವಿಗಳು, ಯಕ್ಷಗಾನ ಕಲಾವಿದರು ಮುಂತಾಗಿ ಕನ್ನಡಿಗರಾದ  ವಿವಿಧ ಸಮಾಜದ ಬಾಂಧವರು ಪಾಲ್ಗೊಂಡು ಮುಷ್ಕರ ಯಶಸ್ವಿಗೊಳಿಸಿದರು.
 
ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ಪ್ರವೇಶ ದ್ವಾರದಲ್ಲಿ ಕೊಂಡೆವೂರು ಯೋಗಾನಂದ ಸರಸ್ವತಿ  ಸ್ವಾಮೀಜಿ , ಬೇಳ ಶೋಕ ಮಾತಾ ಚರ್ಚ್‌ನ ಧರ್ಮಗುರು  ವಿನ್ಸೆಂಟ್ ಡಿಸೋಜಾ  ಹಾಗೂ ಇಸ್ಲಾಂ ಧಾರ್ಮಿಕ ನಾಯಕ ಮೌಲಾನಾ ಅಬ್ದುಲ್ ಅಜೀಜ್ ಜತೆಯಾಗಿ  ಚೆಂಡೆ ಬಾರಿಸಿ ದಿಗ್ಬಂಧನ ಉದ್ಘಾಟಿಸಿದರು. ಕರ್ನಾಟಕ ಸಮಿತಿ ಅಧ್ಯಕ್ಷ ಕೆ. ಮುರಳೀಧರ ಬಳ್ಳೂಕುರಾಯ ಅಧ್ಯಕ್ಷತೆ ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT