ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹತ್ತು ವರ್ಷದಲ್ಲಿ ಅಂಬೇಡ್ಕರ್‌ ದೇವರಾಗುತ್ತಾರೆ’

Last Updated 23 ಮೇ 2017, 20:01 IST
ಅಕ್ಷರ ಗಾತ್ರ
ಬೆಂಗಳೂರು: ‘ಸಾಮಾಜಿಕ ಒಳಿತಿಗಾಗಿ ಕೆಲಸ ಮಾಡಿದವನ್ನು ದೇವರು ಮಾಡುವ ಕಾಯಿಲೆ ನಮ್ಮಲ್ಲಿದೆ. ಮಂಟೇಸ್ವಾಮಿ, ಕನಕ, ಬಸವಣ್ಣ ಇದಕ್ಕೆ ಉದಾಹರಣೆ. ಇದೇ ರೀತಿ ಇನ್ನು ಹತ್ತು ವರ್ಷದಲ್ಲಿ ಬಿ.ಆರ್‌. ಅಂಬೇಡ್ಕರ್‌ ಸಹ ದೇವರಾಗುತ್ತಾರೆ’  ಎಂದು ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನದ ಸಂಯೋಜಕ ಆರ್‌.ವಿ.ಚಂದ್ರಶೇಖರ್‌ ತಿಳಿಸಿದರು.
 
ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ (ಯುವಿಸಿಇ) ಮಂಗಳವಾರ ನಡೆದ ‘ಅಂಬೇಡ್ಕರ್‌ ಚಿಂತನೆಗಳ ಪ್ರವೇಶಿಕೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
‘ಅಂತರ್ಜಾತಿ ವಿವಾಹಗಳು ನೈಸರ್ಗಿಕವಾದಾಗ ಮಾತ್ರ ನಮ್ಮ ಸಾಮಾಜಿಕ ವ್ಯವಸ್ಥೆ ಸುಧಾರಣೆಯಾಗುತ್ತದೆ. ನಿಜವಾದ ಸ್ವಾತಂತ್ರ್ಯ– ಸಮಾನತೆ ನೆಲೆಗೊಳ್ಳಬೇಕಾದರೆ ಜಾತಿ ವಿನಾಶವಾಬೇಕು. ಆರ್ಥಿಕ ಪರಿಸ್ಥಿತಿ ಸುಧಾರಣೆಯಿಂದ ಏನೂ ಪ್ರಯೋಜನವಾಗುವುದಿಲ್ಲ’ ಎಂದು ಹೇಳಿದರು.
 
‘ಅಂಬೇಡ್ಕರ್ ಅವರನ್ನು ಜಾತಿ ಕೋಣೆ ಒಳಗೆ ಕೂಡಿ ಹಾಕಲಾಗಿದೆ. ಅವರು ಮಂಡಿಸಿದ ಜನಕಲ್ಯಾಣ ಯೋಜನೆಗಳು ಎಲ್ಲಾ ಸಮುದಾಯಗಳಿಗೂ ಅನ್ವಯವಾಗುತ್ತದೆ. ಪಠ್ಯದಲ್ಲಿ ಅವರೊಬ್ಬ ‘ಸಂವಿಧಾನ ಶಿಲ್ಪಿ’ ಎಂದೆಷ್ಟೇ ಬಿಂಬಿಸಲಾಗಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
 
‘ಸ್ತ್ರೀವಾದಿಯಾಗಿ, ಆರ್ಥಿಕ ತಜ್ಞರಾಗಿ, ಸಮಾಜ ವಿಜ್ಞಾನಿಯಾಗಿ ಅವರು ನೀಡಿರುವ ಅಮೂಲ್ಯ ಕೊಡುಗೆಗಳ ಬಗ್ಗೆ ಎಲ್ಲೂ ಪ್ರಸ್ತಾಪ ಇಲ್ಲ. ಕೆಲಸದ ಅವಧಿ ಎಂಟು ತಾಸು ಇರಬೇಕು, ಮಹಿಳೆಯರಿಗೆ ಹೆರಿಗೆ ರಜೆ ಸಿಗಬೇಕು ಎಂದು 1942ರಲ್ಲೇ ಅಂಬೇಡ್ಕರ್‌ ವಾದಿಸಿದ್ದರು’ ಎಂದರು. 
 
ಯುವಿಸಿಇ ಪ್ರಾಂಶುಪಾಲ ಪ್ರೊ. ಕೆ.ಆರ್‌. ವೇಣುಗೋಪಾಲ್, ‘ವ್ಯಾಸ ಮಹರ್ಷಿ, ವಾಲ್ಮೀಕಿ ಅವರೊಂದಿಗೆ ಅಂಬೇಡ್ಕರ್‌ ಅವರನ್ನು ಹೋಲಿಕೆ ಮಾಡಬಹುದು. ಈ ಮೂರೂ ವ್ಯಕ್ತಿಗಳು ದೇಶಕ್ಕೆ ಪ್ರಮುಖ ಗ್ರಂಥವನ್ನು ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.
 
‘ಅಂಬೇಡ್ಕರ್‌ ಅವರು ಸಂವಿಧಾನ ರಚಿಸಿದ್ದಕ್ಕಿಂತಲೂ, ಹಿಂದೂ ಧರ್ಮದಲ್ಲಿ ಉಳಿಯದೆ ಬೌದ್ಧ ಧರ್ಮ ಸ್ವೀಕರಿಸಿದ್ದು, ಈ ದೇಶಕ್ಕೆ ನೀಡಿದ ಮಹತ್ವದ ಕೊಡುಗೆ’ ಎಂದು ಅಭಿಪ್ರಾಯಪಟ್ಟರು.
 
‘ನಿರ್ದಿಷ್ಟ ಅವಧಿವರೆಗೆ ಮಾತ್ರ ಮೀಸಲಾತಿ ಇರಬೇಕು ಎಂಬುದು ಅಂಬೇಡ್ಕರ್‌ ವಾದವಾಗಿತ್ತು. ಆದರೆ, ಈಗ ಮುಂದುವರಿದ ಜಾತಿಗಳೂ ಮೀಸಲಾತಿಗೆ ಪಟ್ಟು ಹಿಡಿದಿವೆ. ಇನ್ನೂ 100 ವರ್ಷವಾದರೂ ಮೀಸಲಾತಿ ನಮ್ಮಿಂದ ಅಳಿಸಿ ಹೋಗುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT