ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಪುಟ್‌ ಸಬ್ಸಿಡಿ ವಿತರಣೆಯಲ್ಲಿ ವಿಳಂಬ

Last Updated 24 ಮೇ 2017, 5:12 IST
ಅಕ್ಷರ ಗಾತ್ರ

ದಾವಣಗೆರೆ: ಬರಗಾಲದಿಂದಾಗಿ ತಾಲ್ಲೂಕಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಸಾಕಷ್ಟು ಹಾನಿಯಾಗಿದೆ. ಇನ್ನೂ ಸುಮಾರು 10 ಸಾವಿರ ರೈತರಿಗೆ ಬೆಳೆ ಹಾನಿ ಪರಿಹಾರ (ಇನ್‌ಪುಟ್‌ ಸಬ್ಸಿಡಿ) ಬರಬೇಕಿದೆ ಎಂದು ತಾಲ್ಲೂಕು ಪಂಚಾಯ್ತಿ ಇಒ ಎಲ್‌.ಎಸ್‌. ಪ್ರಭುದೇವ್‌ ಹೇಳಿದರು.

ತಾಲ್ಲೂಕು ಪಂಚಾಯ್ತಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು. ಬೆಳೆ ಹಾನಿಗೊಳಗಾದ ಅರ್ಹ ರೈತರ ಬ್ಯಾಂಕ್‌ ಖಾತೆಗಳಿಗೆ ಇದುವರೆಗೂ ಸಬ್ಸಿಡಿ ಜಮೆಯಾಗಿಲ್ಲ. ರೈತರ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಸಂಖ್ಯೆ ಜೋಡಣೆಯಲ್ಲಿ ಸಮಸ್ಯೆ ಇದ್ದಲ್ಲಿ ಅಧಿಕಾರಿಗಳೇ ಸರಿಪಡಿಸಬೇಕು ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಆಲೂರು ನಿಂಗರಾಜ್‌ ಮತ್ತು ಡಿ.ಜಿ.ಸಂಗಜ್ಜಗೌಡ್ರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್‌, ‘ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪೂರ್ಣ ಪ್ರಮಾಣದಲ್ಲಿ ಬೆಳೆಹಾನಿ ಪರಿಹಾರ ಬಂದಿಲ್ಲ. ಶೇ 40ರಷ್ಟು ಅರ್ಹ ರೈತರಿಗೆ ಸಬ್ಸಿಡಿಯನ್ನು ಅವರ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಲಾಗಿದೆ’ ಎಂದು ಹೇಳಿದರು.

ಮಧ್ಯಪ್ರವೇಶಿಸಿದ ಪ್ರಭುದೇವ್‌ ಅವರು, ‘ತಾಲ್ಲೂಕಿನಲ್ಲಿ ಒಟ್ಟು 17 ಸಾವಿರ ರೈತರು ಬೆಳೆಹಾನಿ ಪರಿಹಾರಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರಲ್ಲಿ 7,000 ರೈತರ ಬ್ಯಾಂಕ್‌ ಖಾತೆಗಳಿಗೆ ಹಣ ಜಮಾ ಆಗಿದೆ’ಎಂದು ಮಾಹಿತಿ ನೀಡಿದರು.

ಈ ಬಾರಿ ತುಂಬಿಗೆರೆ, ಈಚಘಟ್ಟ, ಕುರ್ಕಿ, ಹಾಲುವರ್ತಿ ಹಾಗೂ ಬಾಡಾ ವ್ಯಾಪ್ತಿಯ ಸೊಸೈಟಿಗಳ ಮೂಲಕ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡುವ ಚಿಂತನೆಯಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆಕ್ರಮ ಕೈಗೊಳ್ಳಲಾಗುವುದು ಎಂದು ಉಮೇಶ್‌ ತಿಳಿಸಿದರು.

ಖಾಸಗಿ ಸಂಸ್ಥೆಯೊಂದಕ್ಕೆ ಈಚೆಗೆ ನಗರದಲ್ಲಿ ಕೃಷಿ ಮೇಳ ನಡೆಸಲು ಅವಕಾಶ ನೀಡಬಾರದಿತ್ತು. ಇಲಾಖೆಯಿಂದಲೇ ದೊಡ್ಡದಾಗಿ ಕೃಷಿ ಮೇಳ ಆಯೋಜಿಸಬಹುದಿತ್ತು. ಜಿಲ್ಲೆಯಲ್ಲಿ ಪ್ರಗತಿಪರ ರೈತರು ಹಲವರಿದ್ದಾರೆ. ಎಲ್ಲರಿಗೂ ಅನುಕೂಲವಾಗುತ್ತಿತ್ತು ಎಂದು ಸದಸ್ಯ ಸಂಗಜ್ಜಗೌಡ್ರು ಹೇಳಿದರು.

ಅನುದಾನ ಹೆಚ್ಚಿಸಿ: ತಾಲ್ಲೂಕು ಪಂಚಾಯ್ತಿ ಸದಸ್ಯರಿಗೆ ನೀಡುವ ₹ 7.80 ಲಕ್ಷ ಅನುದಾನದಲ್ಲಿ ಯಾವ ಕಾಮಗಾರಿ ಕೈಗೊಳ್ಳಲೂ ಆಗುವುದಿಲ್ಲ. ಕನಿಷ್ಠ ₹ 20 ಲಕ್ಷ ಅನುದಾನ ಹೆಚ್ಚಿಸಿದರೆ ಅನುಕೂಲವಾಗುತ್ತದೆ. ಈ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಂಡು, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು  ಆಲೂರು ನಿಂಗರಾಜ್‌ ಆಗ್ರಹಿಸಿದರು.

ಅಣಜಿ, ಆಲೂರು ಕೆರೆಗಳು ಒತ್ತುವರಿಯಾಗಿದ್ದು, ಸರ್ವೆ ನಡೆಸಬೇಕು ಎಂದು ಅಣಜಿ ಗ್ರಾಮಸ್ಥರು ಪ್ರಭುದೇವ್‌ ಅವರಿಗೆ ಮನವಿ ಸಲ್ಲಿಸಿದರು.ತಾಲ್ಲೂಕು ಪಂಚಾಯ್ತಿ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ವೈಯಕ್ತಿಕ ಚರ್ಚೆಗೆ ಆದ್ಯತೆ: ‘ಬ್ಯಾಂಕ್‌ನವರು ಪಶುಭಾಗ್ಯ ಯೋಜನೆಗೆ ಸಂಬಂಧಿಸಿದ ಸಬ್ಸಿಡಿ ಹಣ ಮಾತ್ರ ಕೊಡುತ್ತಾರೆ. ಸಾಲ ನೀಡುತ್ತಿಲ್ಲ... ಕುರಿ ಸಾಲ ನೀಡುತ್ತಿಲ್ಲ... ಅನುದಾನ ಹೆಚ್ಚಿಸಿ..’ ಹೀಗೆ ಕೆಲ ಸದಸ್ಯರು ಸಾಮಾನ್ಯ ಸಭೆಯಲ್ಲಿ ವೈಯಕ್ತಿಕ ವಿಷಯಗಳ ಚರ್ಚೆಗೆ ಹೆಚ್ಚು ಆದ್ಯತೆ ನೀಡಿದ್ದು ಕಂಡು ಬಂತು.

ದೀಪಿಕಾಳಿಗೆ ಸನ್ಮಾನ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು 625ಕ್ಕೆ 618 ಅಂಕಗಳನ್ನು ಪಡೆದ ಹಾಲುವರ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ದೀಪಿಕಾಳನ್ನು ಸಭೆಯಲ್ಲಿ ಗೌರವಿಸಲಾಯಿತು. ಜತೆಗೆ ಹೊಲಿಗೆ ಯಂತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದ ರೋಜಾ ಅವರಿಗೂ ಹೊಲಿಗೆ ಯಂತ್ರ ವಿತರಿಸಲಾಯಿತು.

‘ಸಭೆಯ ಮಾಹಿತಿ ನೀಡಿ...’
‘ಮಧ್ಯಾಹ್ನ 12ಕ್ಕೆ ಸಭೆ ಆರಂಭಿಸಿ, 12.15ಕ್ಕೆ ಫೋನ್‌ ಮಾಡಿ ಸಭೆ ಆರಂಭವಾಗಿದೆ ಬನ್ನಿ ಎಂದು ಹೇಳುತ್ತೀರಿ. ಈ ರೀತಿಯ ಕಾಟಾಚಾರಕ್ಕೆ ಏಕೆ ಕರೆಯಬೇಕು. ಸದಸ್ಯರಿಗೆ ಗೌರವವಿಲ್ಲವೇ? ಇನ್ನು ಮುಂದೆ ನೀವೇ ಸಭೆ ನಡೆಸಿ. ನಾವು ಬರಲ್ಲ’ ಎಂದು ಸದಸ್ಯ ಉಮೇಶ್‌ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.‘ನಮ್ಮಿಂದ ತಪ್ಪಾಗಿದೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದು  ಪ್ರಭುದೇವ್‌ ಪ್ರತಿಕ್ರಿಯಿಸಿದರು.

‘ವಂತಿಕೆಗೆ ಕಡಿವಾಣ ಹಾಕಿ’
‘ತಾಲ್ಲೂಕಿನಲ್ಲಿ ಖಾಸಗಿ ಶಾಲೆಗಳಲ್ಲಿ ವಂತಿಕೆ ಹಾವಳಿ ಹೆಚ್ಚಾಗಿದ್ದು, ಶಾಲೆಯ ದಾಖಲಾತಿ ಹೆಸರಿನಲ್ಲಿ ಪೋಷಕರಿಂದ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ. ಇದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕಬೇಕು’ ಎಂದು ಆಲೂರು ನಿಂಗರಾಜ್‌ ಆಗ್ರಹಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿಯವರಿಗೆ ಕಾನ್ವೆಂಟ್‌ ತೆರೆಯಲು ಅನುಮತಿ ನೀಡಿದರೆ, ಅಂಗನವಾಡಿ ಕೇಂದ್ರಗಳಿಗೆ ಪೆಟ್ಟು ಬೀಳುತ್ತದೆ. ಅಧಿಕಾರಿಗಳು ಇದಕ್ಕೆ ಅವಕಾಶ ನೀಡಬಾರದು ಎಂದು ಸದಸ್ಯ ಹನುಮಂತಪ್ಪ ಒತ್ತಾಯಿಸಿದರು.

‘ವಂತಿಕೆ ಹಾವಳಿ ಯಾವ ಶಾಲೆಯಲ್ಲೂ ಇಲ್ಲ. ಮಕ್ಕಳ ದಾಖಲಾತಿ, ಸೌಲಭ್ಯಗಳ ಆಧಾರದ ಮೇಲೆ ಖಾಸಗಿ ಶಾಲೆಯವರು ಶುಲ್ಕ ನಿಗದಿ ಮಾಡುತ್ತಾರೆ’ ಎಂದು ದಕ್ಷಿಣ ವಲಯದ ಬಿಇಒ ಸಿದ್ದಪ್ಪ ಪ್ರತಿಕ್ರಿಯಿಸಿದರು.

ಮೇ 29ಕ್ಕೆ ಶಾಲೆ ಆರಂಭವಾಗಲಿದ್ದು, ಈಗಾಗಲೇ ಶೇ 40ರಷ್ಟು ಪುಸ್ತಕಗಳು ಬಂದಿವೆ. ಮಕ್ಕಳ ಸಮವಸ್ತ್ರಗಳೂ ಬಂದಿವೆ. ವಿದ್ಯಾರ್ಥಿನಿಯರ ಚೂಡಿದಾರ ಬಟ್ಟೆ ಬರಬೇಕಿದೆ. ಜೂನ್‌ 3ರಂದು ಆಯಾ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗುವುದು ಎಂದು ಉತ್ತರ ವಲಯದ ಬಿಇಒ ಬಸವರಾಜಪ್ಪ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT