ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆ

Last Updated 24 ಮೇ 2017, 5:23 IST
ಅಕ್ಷರ ಗಾತ್ರ

ತೀರ್ಥಹಳ್ಳಿ:  ಪರಿಸರ ಸಂರಕ್ಷಣೆ ದೃಷ್ಟಿಯಿಂದ ಡಾ.ಕಸ್ತೂರಿರಂಗನ್‌ ವರದಿ ಪ್ರಕಾರ ಅತಿ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಿರುವ ತಾಲ್ಲೂಕಿನ ಬಾಳಗಾರಿನ ತುಂಗಾ ನದಿಯ ಒಡಲನ್ನು ಬಗೆದು ಅಕ್ರಮವಾಗಿ ಮರಳು ದೋಚುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕಸ್ತೂರಿರಂಗನ್‌ ವರದಿ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳಿಂದ ಮುಚ್ಚಿದ್ದ ಬಾಳಗಾರು, ಹೊಳೇಕೊಪ್ಪ ಮರಳು ಕ್ವಾರಿಯಲ್ಲಿ ಒಂದು ತಿಂಗಳಿ ನಿಂದ ಮರಳು ಅಕ್ರಮ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ರಾತ್ರಿ ವೇಳೆ ದೊಡ್ಡ ಲಾರಿಗಳ ಮೂಲಕ ಸಕ್ಕರೆ ಮರಳು ಸಾಗಿಸಲಾಗುತ್ತಿದೆ. ನದಿ ದಂಡೆಯನ್ನು ಒಡೆದು ರ್‍ಯಾಂಪ್‌ (ದಾರಿ) ಮಾಡಿಕೊಳ್ಳಲಾಗಿದೆ. ನಿತ್ಯ ರಾತ್ರಿ 2 ಗಂಟೆ ನಂತರ 20ರಿಂದ 25 ಲಾರಿಗಳಲ್ಲಿ ಮರಳು ಸಾಗಿಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ರಸ್ತೆಯಲ್ಲಿರುವ ತಪಾಸಣಾ ಕೇಂದ್ರಗಳಲ್ಲಿ ಅಡೆತಡೆಗಳಿಲ್ಲದೇ ದಾಟಿ ಹೋಗುವ ಮರಳಿನ ಲಾರಿಗಳು ಶಿವಮೊಗ್ಗ, ಭದ್ರಾವತಿ ಕಡೆಗೆ ಪ್ರಯಾಣ ಬೆಳೆಸುತ್ತವೆ. ಈ ಬಗ್ಗೆ ಜನರು ಅನೇಕ ಬಾರಿ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನದಿ ಪಾತ್ರದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಾಗಿಲು ಮುಚ್ಚಲು ಹಿಂದೇಟು:  ಬಾಳಗಾರಿನ ಮರಳು ಕ್ವಾರಿಯ ಬಾಗಿಲನ್ನು ಮುಚ್ಚುವಂತೆ ಜನರು ಮನವಿ ಮಾಡಿಕೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ. ದಾರಿಗೆ ಟ್ರಂಚ್‌ ನಿರ್ಮಿಸಿ ಕಾವಲು ಸಿಬ್ಬಂದಿ ನೇಮಿಸಿದರೆ ಅಕ್ರಮ ಸಾಗಾಟ ತಡೆಯಬಹುದು. ಆದರೆ, ಅರಣ್ಯ, ಪೊಲೀಸ್‌, ಕಂದಾಯ ಇಲಾಖೆ ಈ ಕೆಲಸ ಮಾಡುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಸ್ಥಳೀಯರಿಗೆ ಆದ್ಯತೆ:  ಕುಡುಮಲ್ಲಿಗೆ ಗ್ರಾಮ ಪಂಚಾಯ್ತಿ ಆಶ್ರಯ ಫಲಾನುಭವಿಗಳಿಗೆ, ಮನೆ ನಿರ್ಮಾಣ, ಶೌಚಾಲಯ, ಮನೆ ದುರಸ್ತಿ ಸೇರಿದಂತೆ ಅಗತ್ಯ ಕೆಲಸಗಳಿಗೆ ಗ್ರಾಮ ಪಂಚಾಯ್ತಿ ಆಡಳಿತ ಸಣ್ಣ ಪ್ರಮಾಣದಲ್ಲಿ ಮರಳು ಸಾಗಿಸಲು ಅವಕಾಶ ಕಲ್ಪಿಸಿದೆ. ಇದೂ ದುರ್ಬಳಕೆಯಾಗುತ್ತಿದೆ. ಸ್ಥಳೀಯರು ಟಿಲ್ಲರ್‌, ಟ್ರ್ಯಾಕ್ಟರ್‌ಗಳ ಮೂಲಕ ಮರಳು ಸಾಗಿಸುತ್ತಿದ್ದರೂ ಪಂಚಾಯ್ತಿ ತಡೆಯುವುದರ ಬದಲು ಸಹಕಾರ ನೀಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹೆಚ್ಚಿನ ವಹಿವಾಟು:  ಬಗ್ಗೋಡಿಗೆ ಮರಳು ಕ್ವಾರಿಯಲ್ಲಿ ನಿಯಮಿತವಾಗಿ ಮರಳನ್ನು ತಗೆಯಲು ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅವಕಾಶ ಕಲ್ಪಿಸಿದ್ದು, ಲೋಕೋಪಯೋಗಿ ಇಲಾಖೆ ಮೂಲಕ ಇದರ ನಿರ್ವಹಣೆ ಮಾಡಲಾಗುತ್ತಿದೆ.

ಗಬಡಿ ಮರಳು ಕ್ವಾರಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ಹೀಗಿದ್ದರೂ ನಿಷೇಧಿತ ಪ್ರದೇಶದಲ್ಲಿ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ. ತಾಲ್ಲೂಕಿನ  ಜಂಬವಳ್ಳಿ, ತುಡಾನಕಲ್ಲು, ಆರಗ, ಸಂಕದಹೊಳೆ, ಶಿರುಪತಿ, ನೊಣಬೂರು, ಹುಣಸವಳ್ಳಿ, ಹೆದ್ದೂರು, ದಬ್ಬಣಗದ್ದೆ, ಮಹಿಷಿ, ಕುಶಾವತಿ ಹೊಳೆ ಹಾಗೂ ಸಣ್ಣಪುಟ್ಟ ನದಿ, ತೊರೆ, ಹಳ್ಳಗಳಲ್ಲಿ ಮರಳು ತೆಗೆಯಲಾಗುತ್ತಿದೆ. ಮಳೆಗಾಲಕ್ಕೂ ಮುನ್ನ ಮರಳು ಸಂಗ್ರಹಿಸಿಡುವ ಕೆಲಸ ಗಡಿಬಿಡಿಯಲ್ಲೇ ನಡೆಯುತ್ತಿದೆ. ಮಳೆಗಾಲದಲ್ಲಿ ಮರಳು ವ್ಯಾಪಾರ ಮಾಡಲಾಗುತ್ತದೆ.

ಬಾಳಗಾರಿನ ಮರಳು ಕ್ವಾರಿಯಲ್ಲಿ ಪ್ರತಿ ಲಾರಿಯಿಂದ ₹ 25 ಸಾವಿರ ಸಂಗ್ರಹಿಸಲಾಗುತ್ತಿದೆ. ಹೆಚ್ಚು ಮರಳು ತುಂಬಿದ ಒಂದು ಲಾರಿ ಮರಳನ್ನು ಶಿವಮೊಗ್ಗ, ಭದ್ರಾವತಿಯ ಗ್ರಾಹಕರಿಗೆ ₹40 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ಮರಳು ಸಿಗುವುದು ಕಷ್ಟ ಎಂಬ ಕಾರಣಕ್ಕೆ ಗ್ರಾಹಕರು ಅನಿವಾರ್ಯವಾಗಿ ಹೆಚ್ಚಿನ ಹಣ ಕೊಟ್ಟು ಖರೀದಿಸುತ್ತಿದ್ದಾರೆ.

* * 

ಬಾಳಗಾರು ಮರಳು ಕ್ವಾರಿಯಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಅಲ್ಲಿಗೆ ಅಧಿಕಾರಿಗಳ ತಂಡ ಕಳುಹಿಸಿ ಪರಿಶೀಲಿಸಲು ಸೂಚಿಸಿದ್ದೇನೆ
ಡಾ.ಎಂ. ಲೋಕೇಶ್‌ ಜಿಲ್ಲಾಧಿಕಾರಿ,

* *

ಫಲಾನುಭವಿಗಳಿಗೆ ಸುಲಭ ದರದಲ್ಲಿ ಮರಳು ಸಿಗುವಂತೆ ಸರ್ಕಾರ ಕ್ರಮ ತೆಗೆದುಕೊಂಡರೆ ಅಕ್ರಮ ಮರಳು ಸಾಗಾಟ ತಡೆಯಲು ಸಾಧ್ಯ
–  ತಿಮ್ಮಪ್ಪ, ತೀರ್ಥಹಳ್ಳಿ ನಿವಾಸಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT