ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷ್ಠಾವಂತ ಕಾರ್ಯಕರ್ತರ ಸಮಿತಿ ರಚನೆಗೆ ಸಲಹೆ

Last Updated 24 ಮೇ 2017, 5:29 IST
ಅಕ್ಷರ ಗಾತ್ರ

ಚಿತ್ರದುರ್ಗ: ನಿಷ್ಠಾವಂತ ಕಾರ್ಯಕರ್ತರು ಹಾಗೂ ಪಕ್ಷಕ್ಕೆ ಆಸ್ತಿಯಾಗಿ ಉಳಿಯುವಂತಹವರನ್ನು ಗುರುತಿಸಿ, ಬೂತ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸುವಂತೆ ಚಿಕ್ಕನಾಯ್ಕನಹಳ್ಳಿ ಜೆಡಿಎಸ್ ಶಾಸಕ ಸಿ.ಬಿ.ಸುರೇಶ್‌ ಬಾಬು ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ  ಸಲಹೆ ನೀಡಿದರು.

ನಗರದ ನೀಲಕಂಠೇಶ್ವರ ದೇವಾಸ್ಥಾನದ ಪಕ್ಕದಲ್ಲಿರುವ ಜಿಲ್ಲಾ ಜೆಡಿಎಸ್ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಬೂತ್ ಸಮಿತಿ ರಚನೆ ಪೂರ್ವಭಾವಿ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಇದೇ 3 ರಿಂದ ಆರಂಭವಾಗಿದ್ದ ವಲಯ ಮಟ್ಟದ ಸಮಿತಿಗಳ ಸಭೆ ಪೂರ್ಣಗೊಂಡಿದೆ. ಈಗ ಜಿಲ್ಲಾಮಟ್ಟದ ಸಮಿತಿ ಸಭೆ ನಡೆಸಿ, ಬೂತ್ ಮಟ್ಟದ ಸಮಿತಿ ರಚಿಸಲು ಮಾರ್ಗದರ್ಶನ ನೀಡಲಾಗುತ್ತಿದೆ. ರಾಜ್ಯದಲ್ಲಿರುವ 46 ಸಾವಿರ ಬೂತ್‌ಗಳಲ್ಲೂ ಸಮಿತಿ ರಚಿಸುವ ಗುರಿ ಇದ್ದು, ವ್ಯವಸ್ಥಿತವಾಗಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ’ ಎಂದರು.

‘ಬಿಜೆಪಿಯವರಂತೆ ಮತಪಟ್ಟಿ ಹಿಡಿದು ಸಮಿತಿ ರಚಿಸಿ, ಲಕ್ಷಾಂತರ ಜನರನ್ನು ಸದಸ್ಯರನ್ನಾಗಿಸಿದ್ದೇವೆ ಎಂದು ಲೆಕ್ಕ ಹಾಕಬೇಡಿ. ಪ್ರತಿ ಗ್ರಾಮಗಳಿಗೆ ಹೋಗಿ, ಎಲ್ಲ ಜನಾಂಗದಲ್ಲಿರುವ ನಮ್ಮ ಪಕ್ಷದ ಕಾರ್ಯಕರ್ತರನ್ನು ಆಹ್ವಾನಿಸಿ, ಚರ್ಚೆ ಮಾಡಿ, ಅವರ ಸಲಹೆಯಂತೆ ಸಮಿತಿ ರಚಿಸಿ.

ಪ್ರತಿ ಸಮಿತಿಯಲ್ಲಿ ಎಲ್ಲ ಜನಾಂಗದ ಸದಸ್ಯರಿರಬೇಕು. ಹಿರಿಯ ನಾಗರಿಕ, ಯುವಕ  ಹಾಗೂ ಮಹಿಳೆ ಯೊಬ್ಬರು ಕಡ್ಡಾಯವಾಗಿ ಸದಸ್ಯರನ್ನಾಗಿ ನೇಮಿಸಬೇಕು. ಹೀಗೆ ಮಾಡಿದರೆ, ಎಲ್ಲ ಸಮುದಾಯವನ್ನು ತಲುಪುವ ಜತೆಗೆ ರಾಜ್ಯದಾದ್ಯಂತ 8 ಲಕ್ಷದಿಂದ 9 ಲಕ್ಷ ಕಾರ್ಯಕರ್ತರನ್ನು ಸಂಘಟಿಸಲು ಸಾಧ್ಯವಿದೆ’ ಎಂದು ವಿವರಿಸಿದರು.

‘ಈ ತಿಂಗಳ ಕೊನೆಯೊಳಗೆ ಜಿಲ್ಲಾ, ತಾಲ್ಲೂಕು, ಹೋಬಳಿ, ಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚಿಸಬೇಕು. ಮುಂದಿನ ತಿಂಗಳ ಬೂತ್ ಮಟ್ಟದ ಸಮಿತಿ ಪೂರ್ಣಗೊಳಿಸಬೇಕು. ಇಲ್ಲಿವರೆಗೆ ಜೆಡಿಎಸ್‌ನಲ್ಲಿ 20 ವಿಭಾಗ ಗಳಿದ್ದವು. ಈಗ ನಿವೃತ್ತರ ನೌಕರರ ವಿಭಾಗವನ್ನು ಹೊಸದಾಗಿ ಸೇರಿಸಿ 21 ವಿಭಾಗ ಮಾಡಿದೆ ಎಂದರು. 

‘ಬೂತ್ ಮಟ್ಟದ ಸಮಿತಿ ರಚಿಸುವಾಗ ಎಲ್ಲಿಯೂ ಲೋಪವಾಗದಂತೆ ಎಚ್ಚರ ವಹಿಸಿ. ಎಲ್ಲಾ ಜಾತಿಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಪಕ್ಷಕ್ಕೆ ಗೆಲುವು ಸುಲಭವಾಗಲಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ಪಕ್ಷದಲ್ಲಿ ಎಲ್ಲಿಯೂ ಜಾತಿ ತರಬೇಡಿ’ ಎಂದು ಮನವಿ ಮಾಡಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಯಶೋಧರ ಪ್ರಾಸ್ತಾವಿಕವಾಗಿ ಮಾತನಾಡಿ, ‘ಜಿಲ್ಲೆಯ ಪ್ರತಿ ಮತಗಟ್ಟೆಗಳಿಗೆ ಭೇಟಿ ನೀಡಿ, ಜನರಿಗೆ ಪಕ್ಷದ ಸಿದಧಾಂತ, ಮೌಲ್ಯಗಳನ್ನು ತಿಳಿಸಿ.  ಬೂತ್ ಸಮಿತಿ ರಚಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ’ ಎಂದು ಭರವಸೆ ನೀಡಿದರು. ‘1 ಮತಗಟ್ಟೆಗೆ 20 ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಜೆಡಿಎಸ್ ಪಕ್ಷವನ್ನು ಜಿಲ್ಲೆಯಲ್ಲಿ ಶಕ್ತಿಶಾಲಿಯನ್ನಾಗಿ ಮಾಡಬೇಕು’ ಎಂದರು.

ಪಕ್ಷದ ರಾಜ್ಯ ಪ್ರತಿನಿಧಿ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ‘ಪಕ್ಷ ಅಧಿಕಾರದಲ್ಲಿ ಇಲ್ಲವಾದ್ದರಿಂದ ಎಲ್ಲರೂ ರೀತಿ ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಬೂತ್ ಮಟ್ಟದ ಸಮಿತಿಗಳನ್ನು ರಚಿಸಿ ಗಟ್ಟಿ ಕಾರ್ಯಕರ್ತರಿಂದ ಪಕ್ಷವನ್ನು ಬಲವಾಗಿ ಕಟ್ಟಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಪಕ್ಷದ ರಾಜ್ಯ ಮತಗಟ್ಟೆ ಸಮಿತಿ ಮೇಲುಸ್ತುವಾರಿ ಸಮಿತಿ ಸದಸ್ಯ ಹಾಗೂ ವಿಧಾನಪರಿಷತ್ ಸದಸ್ಯರಾದ ಶ್ರೀಕಂಠೇಗೌಡ, ಅಪ್ಪಾಜಿಗೌಡ, ಚೌಡರೆಡ್ಡಿತೂಪಲ್ಲಿ, ರಮೇಶ್ ಬಾಬು, ಕಾಂತರಾಜ್, ಪರಿವೀಕ್ಷಕರಾದ ಮಹಲಿಂಗಪ್ಪ, ರಂಗೇಗೌಡ, ಮೀನಾಕ್ಷಿ ನಂದೀಶ್, ಎನ್.ಭೀಮಪ್ಪ, ಎಂ.ಮಹದೇವಪ್ಪ, ಕಾಶಾಮಯ್ಯ, ರಾಜಣ್ಣ, ಹೆಚ್.ವೀರಣ್ಣ, ಶ್ರೀನಿವಾಸ್‌ಗದ್ದಿಗೆ, ನಗರಸಭೆ ಉಪಾಧ್ಯಕ್ಷ ಕೆ.ಮಲ್ಲೇಶಪ್ಪ, ಸದಸ್ಯರಾದ ಟಿ.ರಮೇಶ್, ಎನ್.ಚಂದ್ರಶೇಖರ್, ಫಕೃದ್ದಿನ್, ರಾಘವೇಂದ್ರ, ತಿಪ್ಪೇಸ್ವಾಮಿ, ಜಿಲ್ಲೆಯ ಆರೂ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಎತ್ತನಟ್ಟಿಗೌಡ, ತಿಪ್ಪೇಸ್ವಾಮಿ, ಶಿವಪ್ರಸಾದ್, ಜಿ.ಬಿ. ಶೇಖರ್, ಲಲಿತಾಕೃಷ್ಣಮೂರ್ತಿ, ಪ್ರತಾಪ್ ಜೋಗಿ ವೇದಿಕೆಯಲ್ಲಿ ಇದ್ದರು.
ಜೆಡಿಎಸ್ ವಕ್ತಾರ ಡಿ.ಗೋಪಾಲಸ್ವಾಮಿ ನಾಯಕ ಸ್ವಾಗತಿಸಿದರು. ಲಕ್ಷ್ಮಿಸಾಗರ ರಾಜಣ್ಣ ನಿರೂಪಿಸಿದರು.

* * 

ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಆ ಅಭಿಮಾನ, ಮತವಾಗಿ ಪರಿವರ್ತನೆಯಾಗಬೇಕು. 
ಸಿ.ಬಿ.ಸುರೇಶ್ ಬಾಬು, ಶಾಸಕ, ಚಿಕ್ಕನಾಯ್ಕನಹಳ್ಳಿ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT