ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಹೆಚ್ಚಳ: ವಾಣಿಜ್ಯ ಸಂಘ ಗರಂ

Last Updated 24 ಮೇ 2017, 5:47 IST
ಅಕ್ಷರ ಗಾತ್ರ

ರಾಯಚೂರು: ಪ್ರಸಕ್ತ ಹಣಕಾಸು ವರ್ಷದಿಂದ ರಾಯಚೂರು ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿ, ವಾಣಿಜ್ಯ, ಖಾಲಿ ನಿವೇಶನ ಹಾಗೂ ಕೈಗಾರಿಕಾ ಪ್ರದೇಶ ತೆರಿಗೆಗಳನ್ನು ಏರಿಕೆ ಮಾಡಿರುವುದು ನಿಯಮಾನುಸಾರವಾಗಿಲ್ಲ ಎಂದು ರಾಯಚೂರು ವಾಣಿಜ್ಯೋದ್ಯಮ ಸಂಘವು (ಆರ್‌ಸಿಸಿಐ) ಆಕ್ಷೇಪ ಎತ್ತಿದೆ.

ಕರ್ನಾಟಕ ಮುನ್ಷಿಪಲ್‌ ಆ್ಯಕ್ಟ್‌ ಸೆಕ್ಷೆನ್‌ 101 ಮತ್ತು 102ರ ಪ್ರಕಾರವಾಗಿ ಯಾವುದೇ ಕಟ್ಟಡ ಮೌಲ್ಯವನ್ನು ಅದರ ನಿವೇಶನ ಆಧರಿಸಿ ನಿರ್ಧರಿಸಬೇಕು. ಈ ಮೌಲ್ಯ ನಿರ್ಧಾರಕ್ಕೆ ಸರ್ಕಾರವು ಮೌಲ್ಯಮಾಪಕರನ್ನು ನೇಮಿಸಬೇಕು ಎಂದು ತಿಳಿಸಲಾಗಿದೆ. ಇದ್ಯಾವುದನ್ನು ನಗರಸಭೆ ಪಾಲಿಸಿಲ್ಲ ಎಂದು ಸಂಘವು ಆಕ್ಷೇಪಿಸಿದೆ.

‘ಆಸ್ತಿ ತೆರಿಗೆಯನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಶೇ 15ರಷ್ಟು ಹೆಚ್ಚಿಸಬಹುದು ಎಂದು ಸೆಕ್ಷೆನ್‌ 102–ಎ ನಿಯಮದಲ್ಲಿ ತಿಳಿಸಲಾಗಿದೆ. ಆದರೆ, ಆಸ್ತಿ ತೆರಿಯನ್ನು ಈ ವರ್ಷ ಶೇ 30ರಷ್ಟು ಹೆಚ್ಚಳ ಮಾಡಲಾಗಿದೆ. ಈ ಮೂಲಕ ಪ್ರತಿಯೊಂದು ತೆರಿಗೆ ಹೆಚ್ಚಳವು ನಿಯಮಾನುಸಾರವಾಗಿಲ್ಲ ಎಂಬುದು ಕಂಡು ಬಂದಿದೆ.

ವಾಣಿಜ್ಯ ಕಟ್ಟಡದ ತೆರಿಗೆಯು ಕಟ್ಟಡದ ಮೌಲ್ಯಕ್ಕಿಂತ ಶೇ 2ಕ್ಕಿಂತ ಹೆಚ್ಚಳವಾಗಿರಬಾರದು. ವಸತಿ ತೆರಿಗೆ ಶೇ 1ಕ್ಕಿಂತ ಹೆಚ್ಚಳವಾಗಿರಬಹುದು. ಹಿಂದಿನ ವರ್ಷಗಳಲ್ಲಿ ಮಾಡಿರುವ ದರ ಹೆಚ್ಚಳಗಳಿಗೆ ಹೋಲಿಸಿದರೆ, ಈ ಬಾರಿ ತುಂಬಾ ಹೆಚ್ಚಳ ಮಾಡಲಾಗಿದೆ’ ಎನ್ನುವುದು ಸಂಘದ ವಾದ.

ವಿಶೇಷ ಸಭೆ: ತೆರಿಗೆ ಹೆಚ್ಚಳವಾದ ಬಗ್ಗೆ ಚರ್ಚಿಸಲು ಈಚೆಗೆ ಉದ್ಯಮಿಗಳ ವಿಶೇಷ ಸಭೆಯೊಂದನ್ನು ಆರ್‌ಸಿಸಿಐ ಏರ್ಪಡಿಸಿತ್ತು. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ವೈಜ್ಞಾನಿಕ ರೀತಿಯಲ್ಲಿ ತೆರಿಗೆ ಹೆಚ್ಚಳಕ್ಕೆ ನಗರಸಭೆ ಕ್ರಮ ವಹಿಸಬೇಕು. ಸಾರ್ವಜನಿಕರ ಪರವಾಗಿ ಸಂಘವು ಈ ವಿಷಯವನ್ನು ಗಂಭೀರವಾಗಿ ಪರಿಣಮಿಸಿದೆ ಎಂದು ನಗರಭೆಗೆ ನೀಡಿದ ಪತ್ರದಲ್ಲಿ ತಿಳಿಸಿದೆ.

ಚರ್ಚೆಗೆ ಬರಲಿ: ‘ಪರಿಷ್ಕೃತ ತೆರಿಗೆ ದರಗಳು ಏಪ್ರಿಲ್‌ 1ರಿಂದಲೇ ಜಾರಿಗೆ ಬಂದಿವೆ. ಸರ್ಕಾರಿ ಅದೇಶದಂತೆ ಹೊಸ ತೆರಿಗೆ ಜಾರಿ ಮಾಡಲಾಗಿದೆ. ಜನರು ತೆರಿಗೆಗಳನ್ನು ಕಟ್ಟುತ್ತಿದ್ದಾರೆ. ಯಾವ ತೊಂದರೆಯೂ ಇಲ್ಲ. ಹಿಂದಿನ ಹಣಕಾಸು ವರ್ಷಕ್ಕಿಂತಲೂ ಈ ಸಲ ₹2 ಕೋಟಿ ತೆರಿಗೆ ಬೇಡಿಕೆ ಹೆಚ್ಚಳವಾಗಿದೆ. ಏಪ್ರಿಲ್‌ ಮತ್ತು ಮೇ ಎರಡು ತಿಂಗಳಲ್ಲಿ ಶೇ 20ರಷ್ಟು ತೆರಿಗೆ ಸಂಗ್ರಹವಾಗಿದೆ’ ಎಂದು ಪೌರಾಯುಕ್ತ ಕೆ.ಗುರುಲಿಂಗಪ್ಪ ಹೇಳಿದರು.

‘ಕೊಳೆಗೇರಿಗಳು ಸೇರಿದಂತೆ ನಗರದಲ್ಲಿ ಕೆಲವು ಭಾಗದ ಕಟ್ಟಡಗಳಿಗೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ. ನಿಯಮಾನುಸಾರವೇ ತೆರಿಗೆ ಜಾರಿ ಮಾಡಲಾಗಿದೆ. ಪರಸ್ಪರ ಚರ್ಚಿಸಿ ನಡೆಸುವುದಕ್ಕೆ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸಲಾಗಿದೆ’ ಎಂದು ತಿಳಿಸಿದರು.

‘ಕೆಎಂಸಿ ಕಾಯ್ದೆ ಪ್ರಕಾರ ನಗರಸಭೆಯು ತೆರಿಗೆ ಹೆಚ್ಚಿಸಬೇಕು. ಈಗ ಭಾರಿ ಪ್ರಮಾಣದಲ್ಲಿ ತೆರಿಗೆ ಹೆಚ್ಚಿಸಿರುವುದನ್ನು ಕೈಬಿಟ್ಟು ಕೂಡಲೇ ಅದನ್ನು ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ನ್ಯಾಯಾಲಯ ಮೊರೆ ಹೋಗಬೇಕಾಗುತ್ತದೆ’ ಎಂದು ರಾಯಚೂರು ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಶಿ ಅವರು ನಗರಸಭೆಗೆ ನೀಡಿರುವ ಪತ್ರದಲ್ಲಿ ತಿಳಿಸಿದ್ದಾರೆ.

* * 

ಸರ್ಕಾರದ ಆದೇಶದ ಪ್ರಕಾರ ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು ಶೇ 30ರಷ್ಟು ತೆರಿಗೆಯನ್ನು ಹೆಚ್ಚಿಸಿವೆ. ಅದೇ ರೀತಿ ರಾಯಚೂರು ನಗರಸಭೆ ವ್ಯಾಪ್ತಿಯಲ್ಲೂ ಏಪ್ರಿಲ್‌ 1ರಿಂದ ಪರಿಷ್ಕೃತ ತೆರಿಗೆ ಜಾರಿಯಲ್ಲಿದೆ.
ಕೆ.ಗುರುಲಿಂಗಪ್ಪ, ಪೌರಾಯುಕ್ತ, ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT