ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ನೇಮಕಾತಿಗೆ ಹೊರ ಗುತ್ತಿಗೆ ನೌಕರರ ವಿರೋಧ

Last Updated 24 ಮೇ 2017, 6:14 IST
ಅಕ್ಷರ ಗಾತ್ರ

ಬೀದರ್: ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಅಟಲ್ ಬಿಹಾರಿ ವಾಜಪೇಯಿ ವಸತಿ ನಿಲಯಗಳಲ್ಲಿನ ಖಾಲಿ ಹುದ್ದೆಗಳನ್ನು ರಾಜ್ಯ ಸರ್ಕಾರ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಮುಂದಾಗಿರುವುದಕ್ಕೆ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.

ನೇರ ನೇಮಕಾತಿ ಪ್ರಕ್ರಿಯೆಯನ್ನು ಆರು ತಿಂಗಳ ಕಾಲ ಮುಂದೂಡುವಂತೆ ಒತ್ತಾಯಿಸಿ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಕಳುಹಿಸಿದರು.

ಹೊರಗುತ್ತಿಗೆ ನೌಕರರು 2015 ರ ಡಿಸೆಂಬರ್ 26 ರಂದೇ ನೇರ ನೇಮಕಾತಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಅದಾಗಿಯೂ ನೇರ ನೇಮಕಾತಿ ಮಾಡಿಕೊಳ್ಳಲು ಹೊರಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

2012 ರಿಂದ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವವರನ್ನು ಕಾಯಂಗೊಳಿಸಲು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬರಲಾಗಿದೆ. ಪ್ರತಿ ವರ್ಷ ಮೇ ಮತ್ತು ಅಕ್ಟೋಬರ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗಿದೆ. ಸರ್ಕಾರದ ಮಟ್ಟದಲ್ಲಿ ಈ ಸಂಬಂಧ ಮಾತುಕತೆಗಳೂ ನಡೆದಿವೆ. ಇದೀಗ ಏಕಾಏಕಿ ನೇರ ನೇಮಕಾತಿಗೆ ಮುಂದಾಗಿರುವುದು ಆಘಾತ ಉಂಟು ಮಾಡಿದೆ ಎಂದು ಹೇಳಿದರು.

ಬೇಡಿಕೆಗಳು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉದ್ದೇಶಿತ ನೇರ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ 6 ತಿಂಗಳ ಕಾಲ ಮುಂದೂಡಬೇಕು. ಸರ್ಕಾರಿ ವಿದ್ಯಾರ್ಥಿ ನಿಲಯ ಮತ್ತು ವಸತಿ ಶಾಲೆಗಳಲ್ಲಿ ಸ್ಟಾಫ್ ನರ್ಸ್, ಅಡುಗೆ ಸಿಬ್ಬಂದಿ ಹಾಗೂ ಅಡುಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು. ನೇರ ನೇಮಕಾತಿಯಲ್ಲಿ ಹೊರ ಗುತ್ತಿಗೆ ನೌಕರರಿಗೆ ಮೀಸಲಾತಿ ಕಲ್ಪಿಸಬೇಕು.

2014 ರ ಜನವರಿ 6 ಕ್ಕಿಂತ ಮುಂಚೆಯಿಂದ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ 10ನೇ ವಿದ್ಯಾರ್ಹತೆಯ ಷರತ್ತನ್ನು ಸಡಿಲಿಸಬೇಕು. ವಿದ್ಯಾರ್ಥಿ ನಿಲಯ, ವಸತಿ ಶಾಲೆಗಳಲ್ಲಿ ಸ್ವಚ್ಛತಾ ಸಿಬ್ಬಂದಿ, ಕಾವಲುಗಾರರಾಗಿ ಕೆಲಸ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರನ್ನೂ ಹಂತ ಹಂತವಾಗಿ ಕಾಯಂಗೊಳಿಸಬೇಕು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಇಸಾಮೊದ್ದೀನ್ ಮೀರಾಸಾಬ್, ಉಪಾಧ್ಯಕ್ಷ ಆರ್.ಪಿ. ರಾಜಾ. ಪ್ರಧಾನ ಕಾರ್ಯದರ್ಶಿ ವಸಂತ ರಾಠೋಡ್, ಸಹ ಕಾರ್ಯದರ್ಶಿ ಅಪ್ಪಬಸಪ್ಪ ಪೋಸ್ತೆ, ಸಲಹೆಗಾರ ದೇವಾನಂದ ಗಾಯಕವಾಡ್‌, ಸಂಗಶೆಟ್ಟಿ, ಸುಭಾಷ ಪೂಜಾರಿ, ಜ್ಞಾನೇಶ್ವರ, ಪ್ರತಿಭಾ ಗಾಯಕವಾಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT