ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಜ್ಞರ ಸಮಿತಿ ಶಿಫಾರಸು ಬಹಿರಂಗಕ್ಕೆ ಒತ್ತಾಯ

Last Updated 24 ಮೇ 2017, 6:32 IST
ಅಕ್ಷರ ಗಾತ್ರ

ತುಮಕೂರು: ‘2007ರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರವು ರಚಿಸಿದ ತಜ್ಞರ ಸಮಿತಿಯು ಸಲ್ಲಿಸಿದ ವರದಿ ಕುರಿತು ನಗರದಲ್ಲಿ ಮಂಗಳವಾರ ನಾಗರಿಕ ಸಂಘಟನೆಗಳ ಸಮಾಲೋಚನಾ ಸಭೆಯಲ್ಲಿ ಚರ್ಚಿಸಲಾಯಿತು.

ತಜ್ಞರ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿನ ಶಿಫಾರಸು ಬಹಿರಂಗಗೊಳಿಸಬೇಕು. ಸಾರ್ವಜನಿಕ ಚರ್ಚೆಗೊಳಪಡಿಸಿದ ನಂತರವೇ ವಿಧಾನಸಭೆಯಲ್ಲಿ ಮಂಡಿಸಬೇಕು, ತಜ್ಞರ ಸಮಿತಿಯ ಜನವಿರೋಧಿ ಶಿಫಾರಸುಗಳನ್ನು ತಿರಸ್ಕರಿಸಲು ಜಿಲ್ಲಾಧಿಕಾರಿ ಮೂಲಕ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ  ಮನವಿ ಪತ್ರ ಸಲ್ಲಿಸುವುದು, ಜಿಲ್ಲೆಯ ಜನಪ್ರತಿನಿಧಿಗಳಿಗೆ ಬಹಿರಂಗ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕರ್ನಾಟಕ ಜನಾರೋಗ್ಯ ಚಳವಳಿಯ ಸಂಚಾಲಕಿ ಅಖಿಲಾ ವಾಸನ್ ಮಾತನಾಡಿ, ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ–2007ಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರವು ರಚಿಸಿದ ತಜ್ಞರ ಸಮಿತಿಯು ಸಲ್ಲಿಸಿದ ವರದಿಯಲ್ಲಿ ಜನವಿರೋಧಿ ಅಂಶಗಳಿವೆ. ಅವುಗಳ ರದ್ದತಿಗೆ ನಾಗರಿಕ ಸಂಘಟನೆಗಳು ಹೋರಾಡಬೇಕು’ ಎಂದು ಹೇಳಿದರು.

‘ಕಲಬುರ್ಗಿಯಲ್ಲಿ ದಲಿತ ಮಹಿಳೆಯರ ಗರ್ಭಕೋಶಗಳನ್ನು ಖಾಸಗಿ ವೈದ್ಯರು ತೆಗೆದು ಪ್ರಕರಣ ನಡೆಯಿತು. ಈ ಕೃತ್ಯ ಎಸಗಿದ ವೈದ್ಯರ ಮೇಲೆ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಯಾವ ರೀತಿ ಅವಕಾಶವಿದೆ ಎಂದು ನೋಡಿದಾಗ ಸೂಕ್ತ ಕಾಯ್ದೆ ಇಲ್ಲದ್ದು ಸರ್ಕಾರಕ್ಕೆ ತಿಳಿಯಿತು.

ಹೀಗಾಗಿ, ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು  ನಿಯಂತ್ರಿಸಲು ತಜ್ಞರ ಸಮಿತಿ ರಚಿಸಿತು. ಜನಸಾಮಾನ್ಯರಿಗೆ ಆಗುವ ಮೋಸ ವಂಚನೆ ತಡೆದು ರಕ್ಷಣೆ ಮಾಡುವಂತಹ ಶಿಫಾರಸು ಮಾಡಲು ಮಾರ್ಗಸೂಚಿಯಲ್ಲಿ ಸಮಿತಿಗೆ ಸರ್ಕಾರ ತಿಳಿಸಿತ್ತು. ಆದರೆ, ಈ ಸಮಿತಿ ನಾಗರಿಕ ಸಂಘಟನೆ, ಜನಸಾಮಾನ್ಯರೊಂದಿಗೆ ಚರ್ಚಿಸಿಲ್ಲ’ ಎಂದು ಆರೋಪಿಸಿದರು.

‘ಸಮಿತಿಯು ಏಪ್ರಿಲ್ 28ರಂದು ಏಕಾಏಕಿ ವರದಿಯನ್ನು ಸಚಿವರಿಗೆ ಕೊಟ್ಟಿದೆ. ಅಲ್ಲದೇ ಈ ಶಿಫಾರಸಿನಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ವ್ಯಾಪ್ತಿಗೆ ತರಲು ಮುಂದಾಗಿರುವುದು ತಿಳಿದಿದೆ. ಇಂತಹ ಶಿಫಾರಸು ದುರದೃಷ್ಟಕರ’ ಎಂದು ವಿಷಾದ ವ್ಯಕ್ತಪಡಿಸಿದರು.

ಜನಾಂದೋಲನ ಮಹಾಮೈತ್ರಿ ಮುಖಂಡ ಸಿ.ಯತಿರಾಜ್ ಮಾತನಾಡಿ, ‘ತಿದ್ದುಪಡಿ ತರುವ ಮುನ್ನ ಸಾರ್ವಜನಿಕರ ಮಧ್ಯೆ ಚರ್ಚೆ ಆಗಬೇಕು. ಸಲಹೆ, ಆಕ್ಷೇಪಣೆಗಳಿಗೆ ಅವಕಾಶ ನೀಡಬೇಕು’ ಎಂದು ಹೇಳಿದರು.

ಪಿ.ಯು.ಸಿ.ಎಲ್ ಸಂಘಟನೆ ಜಿಲ್ಲಾ ಸಂಚಾಲಕ ಪ್ರೊ. ಕೆ.ದೊರೈರಾಜ್ ಮಾತನಾಡಿ, ‘ದೇಶದಲ್ಲಿ ಜಾಗತೀಕರಣ ಆರಂಭವಾದ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರೋಗ್ಯ ನೀತಿಗಳು ಖಾಸಗಿ ಸಹಭಾಗಿತ್ವ (ಪಿ.ಪಿ.ಪಿ)  ಮಾದರಿಗಳಿಗೆ ಹೆಚ್ಚು ಒತ್ತು ನೀಡಿವೆ. ಜನರಿಗೆ ಆರೋಗ್ಯ ಖಾತ್ರಿ ಮಾಡಬೇಕಾದ ಸರ್ಕಾರಗಳು ವಿಮಾ ಯೋಜನೆಗಳನ್ನು ವಿಸ್ತರಿಸುತ್ತಿವೆ.  ಮೂಲ ಕಾಯ್ದೆಯ ಆಶಯಕ್ಕೆ ಪೂರಕವಾಗಿ ತಿದ್ದುಪಡಿ ಆಗಬೇಕು ಎಂದು ಒತ್ತಾಯಿಸುವುದು ಸೂಕ್ತ’ ಎಂದರು.

ಸಭೆಯಲ್ಲಿ ಪ್ರಾಂತ ರೈತ ಸಂಘದ ಬಿ.ಉಮೇಶ್, ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಪಂಡಿತ ಜವಾಹರ್, ಸ್ಲಂ ಜನಾಂದೋಲನ ಘಟಕದ ಸಂಚಾಲಕ ಎ.ನರಸಿಂಹಮೂರ್ತಿ, ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯ ಸಂಚಾಲಕ ಕೆ.ಬಿ.ಓಬಳೇಶ್, ಜಿಲ್ಲಾ ಕೊಳೆಗೇರಿ ಸಮಿತಿ ಸಂಚಾಲಕ ಶೆಟ್ಟಾಳಯ್ಯ, ಮಾದಿಗರ ಪ್ರಚಾರ ಸಮಿತಿ ಕುಮಾರ್ ಮಾದರ್, ಎಸ್‌ಎಫ್‌ಐ ಸಂಘಟನೆ ಜಿಲ್ಲಾ ಘಟಕ ಅಧ್ಯಕ್ಷ ಶಿವಣ್ಣ, ಡಿವೈಎಫ್‌ಐ ಸಂಘಟನೆ ಪ್ರತಿನಿಧಿ ದರ್ಶನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT