ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ವಸೂಲಾಗದ ಕಾರಣ ಅಭಿವೃದ್ಧಿಗೆ ಹಿನ್ನಡೆ

Last Updated 24 ಮೇ 2017, 6:59 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಸಮರ್ಪಕವಾಗಿ ವಸೂಲಾಗದ ಕಾರಣ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ ಅಭಿಪ್ರಾಯಪಟ್ಟರು.

ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಪರಿಷ್ಕರಣೆ ಕುರಿತು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಹಲವು ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಸಮರ್ಪಕವಾಗಿ ವಸೂಲಾಗದ ಬಗ್ಗೆ ಸಾಕಷ್ಟು ದೂರು ಬಂದಿವೆ’ ಎಂದು ಹೇಳಿದರು.

‘ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡಲು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ತೆರಿಗೆ ವಸೂಲಿ ಮಾಡಬೇಕು. ಸಕಾಲಕ್ಕೆ ತೆರಿಗೆ ವಸೂಲಿ ಮಾಡಿದರೆ ಮೂಲಸೌಕರ್ಯಗಳ ಜತೆಗೆ ಕ್ರೀಡೆ ಮತ್ತು ಮನರಂಜನೆ ಚಟುವಟಿಕೆಗಳಿಗೆ ಆದ್ಯತೆ ನೀಡಬಹುದು. ಗ್ರಾಮ ಸ್ವರಾಜ್ಯವು ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಹೀಗಾಗಿ ಅ.2ರೊಳಗೆ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಮಾಡುವ ಪಣ ತೊಡಬೇಕು’ ಎಂದು ಕರೆ ನೀಡಿದರು.

ಅಸಮಾಧಾನ: ‘ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಕೇವಲ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರ ಮಾತು ಕೇಳುವವರಾಗಿದ್ದಾರೆ. ಅವರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಲೆಕ್ಕಕ್ಕಿಲ್ಲ. ಜನ ನಮ್ಮ ಬಳಿಯೂ ಸಮಸ್ಯೆ ಹೇಳಿಕೊಳ್ಳುತ್ತಾರೆ. ಹೀಗಾಗಿ ನಾವು ಜನರ ಸಮಸ್ಯೆಯನ್ನು ಪಿಡಿಒಗಳಿಗೆ ಹೇಳುತ್ತೇವೆ. ಆದರೆ, ಪಿಡಿಇಗಳು ನಾವು ಹೇಳುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತೆರಿಗೆ ಪರಿಷ್ಕರಣೆ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ‘ನಿಯಮಾವಳಿ ಪ್ರಕಾರ ಪ್ರತಿ ಎರಡು ವರ್ಷಕ್ಕೊಮ್ಮೆ ಗ್ರಾಮ ಪಂಚಾಯಿತಿ ತೆರಿಗೆಗಳನ್ನು ಪರಿಷ್ಕರಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ತೆರಿಗೆ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು’ ಎಂದು ಸೂಚಿಸಿದರು.
‘ತೆರಿಗೆ ಸಂಗ್ರಹಕ್ಕಾಗಿ ಸರ್ಕಾರ ಬೇರೆ ಬೇರೆ ಹಂತಗಳಲ್ಲಿ ಯೋಜನೆ ರೂಪಿಸಿದೆ. ಅಧಿಕಾರಿಗಳು ಎಲ್ಲವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಜತೆಗೆ ತೆರಿಗೆ ವಸೂಲಾತಿ ಪ್ರಕ್ರಿಯೆಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿದರೆ ಮಾತ್ರ ಗ್ರಾಮ ಪಂಚಾಯಿತಿಗಳ ಬಲವರ್ಧನೆ ಸಾಧ್ಯ’ ಎಂದು ಹೇಳಿದರು.

ಕರ್ತವ್ಯ ಮರೆತಿದ್ದಾರೆ: ‘ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಗ್ರಾಮ ಪಂಚಾಯಿತಿಗಳು ತೆರಿಗೆ ವಿಧಿಸುವ ಅಧಿಕಾರ ಹೊಂದಿವೆ. ತೆರಿಗೆ ವಸೂಲಾತಿಗೆ ಸ್ಪಷ್ಟ ನಿರ್ದೇಶನವಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಾರ್ಯ ಒತ್ತಡದಿಂದಾಗಿ ತೆರಿಗೆ ವಸೂಲು ಮಾಡುವುದನ್ನು ಮರೆತಿದ್ದಾರೆ. ತೆರಿಗೆ ಸಂಗ್ರಹದಾರರು ಸಹ ತೆರಿಗೆ ವಸೂಲಿ ಮಾಡುತ್ತಿಲ್ಲ. ಅಧಿಕಾರಿಗಳು ಮತ್ತು ತೆರಿಗೆ ಸಂಗ್ರಹದಾರರು ಜಾಗೃತಿ ಇಲ್ಲದೆ ಮೂಲ ಕರ್ತವ್ಯವನ್ನೇ ಮರೆತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಹೇಳಿದರು.

‘ಅಧಿಕಾರಿಗಳು ಮತ್ತು ತೆರಿಗೆ ಸಂಗ್ರಹದಾರರು ಗ್ರಾಮಗಳಿಗೆ ತೆರಳಿ ತೆರಿಗೆ ವಸೂಲಿ ಮಾಡುತ್ತಿಲ್ಲ. ಬದಲಿಗೆ ಸಾರ್ವಜನಿಕರು ಗ್ರಾಮ ಪಂಚಾಯಿತಿ ಕಚೇರಿಗೆ ಬಂದ ಸಂದರ್ಭದಲ್ಲಿ ಮಾತ್ರ ತೆರಿಗೆ ಕಟ್ಟಿಸಿಕೊಳ್ಳುತ್ತಿದ್ದಾರೆ. ಈ ಕಾರಣದಿಂದಲೇ ತೆರಿಗೆ ವಸೂಲು ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಗ್ರಾಮ ಪಂಚಾಯಿತಿಗಳು ಹೆಚ್ಚಿನ ಅಧಿಕಾರ ಹೊಂದಿದ್ದು, ಸಂಪನ್ಮೂಲಗಳ ಕ್ರೂಢೀಕರಣಕ್ಕೆ ತೆರಿಗೆಯನ್ನು ಹೆಚ್ಚಾಗಿ ವಸೂಲಿ ಮಾಡಬೇಕು’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತೆರಿಗೆ ನಿಗದಿ, ಪರಿಷ್ಕರಣೆ, ವಸೂಲಿ ಮತ್ತು ಖರ್ಚು, ವಿವಿಧ ಕ್ಷೇತ್ರಗಳಿಗೆ ಅನುದಾನ ಮೀಸಲಿಡುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು. ಜತೆಗೆ ಪಿಡಿಒಗಳ ಜತೆ ಸಂವಾದ ನಡೆಸಿ ಸಲಹೆ ನೀಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಯಶೋಧಮ್ಮ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಕೆ.ಜೆ.ಜಗದೀಶ್ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಸೌಕರ್ಯ ಒದಗಿಸಿ
ಮಹಾತ್ಮ ಗಾಂಧೀಜಿ ನಗರ ಪ್ರದೇಶದಂತೆಯೇ ಗ್ರಾಮೀಣ ಭಾಗಕ್ಕೂ ಎಲ್ಲ ಮೂಲ ಸೌಕರ್ಯ ಕಲ್ಪಿಸಲು  ಗ್ರಾಮ ಸ್ವರಾಜ್ಯದ ಕನಸು ಕಂಡಿದ್ದರು. ಈ ಕನಸು ಪಂಚಾಯತ್‌ರಾಜ್ ವ್ಯವಸ್ಥೆ ಮೂಲಕ ನನಸಾಗಬೇಕಿದ್ದು, ರಸ್ತೆ, ಕುಡಿಯುವ ನೀರು ಸೇರಿದಂತೆ ಗ್ರಾಮಗಳಿಗೆ ಎಲ್ಲ ಸೌಕರ್ಯ ಒದಗಿಸುವ ಜವಾಬ್ದಾರಿ ಗ್ರಾಮ ಪಂಚಾಯಿತಿಗಳದ್ದು.

ಗೀತಮ್ಮ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT