ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿಯಿಂದ ಜನಪದ ಕಲೆಯತ್ತ ಪಯಣ

Last Updated 24 ಮೇ 2017, 7:12 IST
ಅಕ್ಷರ ಗಾತ್ರ

ಕೆರಗೋಡು: ಕಬಡ್ಡಿ ಆಡುತ್ತಿದ್ದ ಕೀಲಾರ ಶಿವಲಿಂಗಯ್ಯ ಈಗ ಜನಪದ ಕಲಾವಿದ. ಆಟವಾಡುತ್ತಿದ್ದ ಅವರು ಈಗ ಹಾಡು ಹೇಳುತ್ತ ಕುಣಿಯುತ್ತಿದ್ದಾರೆ. ಆರೋಗ್ಯ ಸಮಸ್ಯೆಯಿಂದಾಗಿ ಶಿವಲಿಂಗಯ್ಯ ಅವರು ಕಬಡ್ಡಿ ಆಡುವುದನ್ನು ನಿಲ್ಲಿಸಬೇಕಾಯಿತು. ಜಾನಪದ ಕ್ಷೇತ್ರದಲ್ಲಿ ಮತ್ತೆ ಅವರ ಪ್ರತಿಭೆ ಅರಳಿತು. ವಿವಿಧ ಜನಪದ ಪಟ್ಟುಗಳನ್ನು ಕರಗತ ಮಾಡಿಕೊಂಡು ರಾಜ್ಯ, ರಾಷ್ಟ್ರಮಟ್ಟದವರೆಗೆ ಸಾಗಿರುವ ಶಿವಲಿಂಗಯ್ಯ ಮೆಚ್ಚುಗೆ ಗಳಿಸಿದ್ದಾರೆ.

ಗ್ರಾಮದ ಸಂಗೀತ ಮತ್ತು ನೃತ್ಯಶಿಕ್ಷಕ ಮುದ್ದಪ್ಪ ಕಲಿಸುತ್ತಿದ್ದ ಹಾಡುಗಾರಿಕೆ ಮತ್ತು ನೃತ್ಯ ಅವರ ಗಮನ ಸೆಳೆಯಿತು. ಶಿವಲಿಂಗಪ್ಪ ಮುದ್ದಪ್ಪ ಅವರ ಗರಡಿ ಸೇರಿದರು. ಗ್ರಾಮದಲ್ಲಿ ಇದ್ದ ಕೆ.ವಿ. ಶಂಕರಗೌಡ ಯುವಕರ ಸಂಘ, ಕ್ಷೀರಸಾಗರ ಮಿತ್ರಕೂಟ ಮತ್ತು ಅಂಬರೀಷ್‌ ಯುವಕರ ಸಂಘದಲ್ಲಿ ಸದಸ್ಯರಾಗಿ ಹಲವು ವೈವಿಧ್ಯಮಯ ಚಟುವಟಿಕೆಗಳಲ್ಲಿ ಪಾಲ್ಗೊಂಡರು.

ಲಾವಣಿ, ಜನಪದಗೀತೆ, ಜನಪದ ನೃತ್ಯ, ಡೊಳ್ಳುಕುಣಿತ, ಒನಕೆ ಕುಣಿತ, ವೀರಗಾಸೆ, ರಂಗಕುಣಿತ, ಪಟಕುಣಿತ ಸೇರಿದಂತೆ ಹಲವು ಪ್ರಕಾರಗಳಲ್ಲಿ ಪ್ರತಿಭೆ ಪ್ರದರ್ಶಿಸಿದರು. ವಿವಿಧೆಡೆ ನಡೆಯುತ್ತಿದ್ದ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಅವರು ಹಲವು ಬಹುಮಾನ, ಪ್ರಶಸ್ತಿ ಬಾಚಿಕೊಂಡರು.

ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಗುಜರಾತ್, ರಾಯ್‌ಪುರ, ಹರಿಯಾಣ, ಲೂಧಿಯಾನ, ಒಡಿಶಾ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ತಾನ್ ಸೇರಿದಂತೆ ದೇಶದ ಉದ್ದಗಲಕ್ಕೂ ಸಂಚರಿಸಿ ಕಲಾ ಪ್ರೌಢಿಮೆ ಮೆರೆದಿದ್ದಾರೆ.

ರಾಯಚೂರಿನಲ್ಲಿ ನಡೆದ 82ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜನಪದ ಕಲೆಯ ಪ್ರದರ್ಶನ ನೀಡಿದ್ದಾರೆ. ಇದೀಗ ವಿವಿಧ ಕಲೆಗಳ ಪಟ್ಟುಗಳನ್ನು ಶಾಲೆ, ಕಾಲೇಜು ಹಾಗೂ ಶಿಕ್ಷಕ ತರಬೇತಿ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕಲಿಸುವತ್ತ ಗಮನ ಹರಿಸಿದ್ದಾರೆ. ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶುವೈದ್ಯಕೀಯ ವಿಶ್ವವಿದ್ಯಾಲಯ, ಜಿಕೆವಿಕೆ ಕಾಲೇಜು, ರಾಯಚೂರು, ಧಾರವಾಡದ  ಕೃಷಿ ವಿಶ್ವವಿದ್ಯಾಲಯಗಳಲ್ಲಿ ತರಬೇತಿ ನೀಡಿದ್ದಾರೆ.

ಶಿವಲಿಂಗಯ್ಯ ಗರಡಿಯಲ್ಲಿ  ಜಿಕೆವಿಕೆ ಕಾಲೇಜು ತಂಡ ಹರಿಯಾಣ ಮತ್ತು ರಾಜಸ್ತಾನ್‌ನಲ್ಲಿ ನಡೆದ ಅಂತರ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದೆ. ಅಲ್ಲದೆ ಮದ್ದೂರಿನ ಪೂರ್ಣಪ್ರಜ್ಞ ಶಾಲೆಯ ಮಕ್ಕಳು ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಸತತವಾಗಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಕೊಪ್ಪದ ಸರ್ವೋದಯ ಕಾಲೇಜು 2016ರಲ್ಲಿ ಸಿದ್ದಗಂಗೆಯಲ್ಲಿ ನಡೆದ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಗಳಿಸಿ, ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲೂ ಭಾಗವಹಿಸಿದೆ. ಸ್ಟಾರ್ ಆಫ್ ಬೆಂಗಳೂರು, ಕನ್ನಡ ಸಂಸ್ಕೃತಿ ಇಲಾಖೆ ಸೇರಿ ಅನೇಕ ಸಂಘ ಸಂಸ್ಥೆಗಳು ಶಿವಲಿಂಗಯ್ಯ ಅವರನ್ನು ಗುರುತಿಸಿ ಪ್ರಶಸ್ತಿ ನೀಡಿವೆ.

ಇಷ್ಟೆಲ್ಲಾ ಸಾಧನೆ ಮಾಡಲು ಸಹಕರಿಸಿದ ಗ್ರಾಮದ ಮುದ್ದಪ್ಪ, ವೀರಪ್ಪ, ಕೀಲಾರ ಕೃಷ್ಣೇಗೌಡ, ಶಿವಶಂಕರ, ವಿನೋದ್, ರಾಘವೇಂದ್ರ, ಶೆಟ್ಟರ ಚಂದ್ರು, ದಿ. ಶಿಕ್ಷಕ ಗೋಪಾಲ್, ಸತೀಶ್, ಶಂಕರ್ ಮುಂತಾದವರ ಸಹಾಯವನ್ನು ಶಿವಲಿಂಗಯ್ಯ ನೆನೆಯುತ್ತಾರೆ. ತಾಯಿ ಪಾರ್ವತಮ್ಮ, ಪತ್ನಿ ಅಶ್ವಿನಿ ಅವರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಅವರು ಹೇಳಿದರು.  ಶಿವಲಿಂಗಯ್ಯ ಮೊ: 9740334419 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT