ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಚಕರ ಖಾತೆಗೆ ಗೌರವಧನ ಜಮೆ ಶೀಘ್ರ

Last Updated 24 ಮೇ 2017, 7:16 IST
ಅಕ್ಷರ ಗಾತ್ರ

ಮಂಡ್ಯ: ‘ಅರ್ಚಕರ ಗೌರವಧನ ಬಿಡುಗಡೆ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಶೀಘ್ರ ಅರ್ಚಕರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗಲಿದೆ’ ಎಂದರು  ಧಾರ್ಮಿಕ ದತ್ತಿ ಇಲಾಖೆ ತಹಶೀಲ್ದಾರ್‌ ಡಿ.ಕೆ. ದಿನೇಶ್‌ ಹೇಳಿದರು.

ನಗರದ ರೈತ ಸಭಾಂಗಣದಲ್ಲಿ ಮುಜರಾಯಿ ದೇವಾಲಯಗಳ ಅರ್ಚಕರು, ಆಗಮಿಕರು ಮತ್ತು ನೌಕರರ ಸಂಘದ ವತಿಯಿಂದ ಮಂಗಳವಾರ ನಡೆದ ಅರ್ಚಕರ ಗುರುತಿನ ಚೀಟಿ ವಿತರಣಾ ಸಮಾರಂಭ ಹಾಗೂ ವಿವಿಧ ಮಹನೀಯರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮುಜರಾಯಿ ಇಲಾಖೆಯಿಂದ ಅರ್ಚಕರಿಗೆ ಸಿಗುವ ಎಲ್ಲ ಸೌಲಭ್ಯ ವಿತರಣೆ ಮಾಡಲಾಗುವುದು. ಅರ್ಚಕರು ಈ ಬಗ್ಗೆ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ಅರ್ಚಕರು ತಮ್ಮ ಸೌಲಭ್ಯ ಪಡೆಯಲು ಯಾವುದೇ ಲಂಚ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ವೈದ್ಯನಾಥಪುರ ಕದಂಬ ಜಂಗಮ ಮಠದ ರೇಣುಕಾಶಿವಾಚಾರ್ಯ ಸ್ವಾಮೀಜಿ ಮಾತನಾಡಿ ‘ಅರ್ಚಕರು ಶಿಸ್ತು ಬದ್ಧವಾಗಿರಬೇಕು. ದುರಾಸೆ ಬದಿಗಿಟ್ಟು ಭಕ್ತಿಯಿಂದ ಭಗವಂತನ ಪೂಜೆ ಮಾಡುತ್ತಾ ಸಮಾಜದಲ್ಲಿ ಭಕ್ತಿಯ ವಾತಾವರಣ ಸೃಷ್ಟಿಸಬೇಕು ಎಂದು ಹೇಳಿದರು.

ಅರ್ಚಕರು ಸಂಘಟಿತರಾದರೆ ಅವರಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತವೆ. 21ನೇ ಶತಮಾನದಲ್ಲಿ ಅರ್ಚಕರಿಗೆ ಎಲ್ಲಾ ರೀತಿಯ ಸೌಲಭ್ಯಗಳು ಸಿಗುತ್ತಿವೆ. ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಅರ್ಚಕರು ಹಿಂದೆ ಕೆಂಪು ವಸ್ತ್ರ ಧರಿಸಿ ಪೂಜೆ ಪುನಸ್ಕಾರದಲ್ಲಿ ತೊಡಗುತ್ತಿದ್ದರು. ಇಂದು ಆ ಪದ್ಧತಿ ಬದಲಾಗಿದೆ. ಅರ್ಚಕರು ತಮಗೊಪ್ಪುವ ಬಟ್ಟೆ ಧರಿಸಿ ಪೂಜೆ ಮಾಡುತ್ತಿದ್ದಾರೆ. ಧರಿಸುವ ಬಟ್ಟೆ ಯಾವುದಾದರೂ ಇರಲಿ, ಭಕ್ತಿ ಮಾತ್ರ ಬದಲಾಗಬಾರದು. ಅರ್ಚಕರು ದುರಾಸೆ ಬಿಡಬೇಕು. ಭಕ್ತಿ, ಶ್ರದ್ಧೆಯಿಂದ ದೇವರ ಪ್ರಾರ್ಥನೆಯಲ್ಲಿ ತಲ್ಲೀನನಾಗುವ ಗುಣ ಬೆಳೆಸಿಕೊಳ್ಳಬೇಕು. ಇದರಿಂದ ಭಗವಂತನ ಸನ್ನಿಧಿಗೆ ಬರುವ ಭಕ್ತರು ಭಕ್ತಿ ಮೆರೆಯುತ್ತಾರೆ’ ಎಂದು ತಿಳಿಸಿದರು.

‘ಎಲ್ಲ ಜೀವಿಗಳಿಗೂ ಲೇಸನ್ನು ಬಯಸುವವನೇ ಭಗವಂತ ಎಂದು ಬಸವಣ್ಣನವರು ಹೇಳಿದ್ದಾರೆ. ಅದರಂತೆ ಅರ್ಚಕರು ದೇವಾಲಯದ ಕಾಯಕದಲ್ಲಿ ಶುದ್ಧವಾಗಿರಬೇಕು. ಭಕ್ತರಿಗೆ ಆಶೀರ್ವಾದ ಮಾಡಬೇಕು. ಬಸವಣ್ಣ, ಶಂಕರಾಚಾರ್ಯ, ರಾಮಾನುಜಾಚಾರ್ಯ ಮುಂತಾದ  ಮಹನೀಯರು ಸಮಾನತೆ ಸಾರಿದ್ದಾರೆ. ಅದರಂತೆ ಬದುಕು ನಡೆಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅರ್ಚಕರಿಗೆ ಗುರುತಿನ ಚೀಟಿ ವಿತರಿಸಲಾಯಿತು. ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್‌. ಪುಟ್ಟಬಸಪ್ಪ ಅಧ್ಯಕ್ಷತೆ ವಹಿಸಿದ್ದರು, ತಾಲ್ಲೂಕು ಧಾರ್ಮಿಕ ದತ್ತಿ ಇಲಾಖೆ ಅಧೀಕ್ಷಕ ಎನ್‌.ಆರ್‌.  ಅರವಿಂದ್‌್, ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಡಿ.ಕೆ. ಶ್ರೀನಿವಾಸಮೂರ್ತಿ, ಜಿಲ್ಲಾ ಘಟಕದ ಅಧ್ಯಕ್ಷ ವೀರಣ್ಣಕುಮಾರ್‌, ಬಿ.ಎಲ್‌. ರಾಜಗೋಪಾಲಾಚಾರ್‌, ಎಂ.ಆರ್‌. ಶಶಿಮೋಹನ್‌್ ಇದ್ದರು.

* * 

ಅರ್ಚಕರಿಗೆ ಸರ್ಕಾರಿ ಸೌಲಭ್ಯಗಳು ಸಿಗಬೇಕು. ಹಲವು ವರ್ಷಗಳಿಂದ ಒತ್ತಾಯ ಮಾಡುತ್ತಾ ಬಂದಿದ್ದರೂ ಸಿಗದಿರುವುದು ದುರದೃಷ್ಟಕರ
ಡಿ.ಕೆ. ಶ್ರೀನಿವಾಸಮೂರ್ತಿ
ಆಗಮಿಕರ ಸಂಘದ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT