ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯಗಳ ಸದ್ಬಳಕೆ ಮಾಡಿ: ಗ್ರೇಸಿ

Last Updated 24 ಮೇ 2017, 8:26 IST
ಅಕ್ಷರ ಗಾತ್ರ

ಉಡುಪಿ: ಮಹಿಳೆಯರು ಸರ್ಕಾರದಿಂದ ಸಿಗುವ ಸೌಲಭ್ಯಗಳ ಸಮಗ್ರ ಮಾಹಿತಿ ಪಡೆದು, ಅದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡರೆ ಯಶಸ್ವಿ ಸ್ವ ಉದ್ಯೋಗಿಗಳಾಗಬಹುದು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್‌ ಹೇಳಿದರು.

ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ (ಬಿವಿಟಿ) ಸಿಂಡಿಕೇಟ್‌ ಬ್ಯಾಂಕ್‌ ಪ್ರಾಯೋಜಕತ್ವದಲ್ಲಿ ಸ್ವ ಉದ್ಯೋಗ ಕೈಗೊಳ್ಳಬಯಸುವ ಮಹಿಳೆಯರಿಗಾಗಿ ಸಂಸ್ಥೆಯಲ್ಲಿ ಆಯೋಜಿಸಿದ್ದ 21 ದಿನಗಳ ಉಚಿತ ವಸ್ತ್ರವಿನ್ಯಾಸ ಮತ್ತು ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ಕಾರ ಸ್ವ ಉದ್ಯೋಗ ಕೈಗೊಳ್ಳಬಯಸುವ ಮಹಿಳೆಯರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅವುಗಳ ಬಗ್ಗೆ ಸೂಕ್ತ ಮಾಹಿತಿ ಪಡೆದು, ಯಶಸ್ವಿ ಸ್ವ ಉದ್ಯೋಗಿಗಳಾಗಲು ಪ್ರಯತ್ನಿಸಬೇಕು ಎಂದು ಕರೆನೀಡಿದರು.

ಸಿಂಡಿಕೇಟ್‌ ಬ್ಯಾಂಕ್‌ನ ಉಡುಪಿ ವಲಯದ ಪ್ರಾದೇಶಿಕ ಮಹಾಪ್ರಬಂಧಕ ಎಸ್‌.ಎಸ್‌. ಹೆಗ್ಡೆ ಮಾತನಾಡಿ, ಈ 21 ದಿನಗಳ ಶಿಬಿರದಲ್ಲಿ ಹೊಲಿದು ಪ್ರದರ್ಶಿಸಿದ ವಿವಿಧ ವಿನ್ಯಾಸದ ಉಡುಪುಗಳ ಗುಣಮಟ್ಟ ನಿಜಕ್ಕೂ ಶಿಬಿರಾರ್ಥಿಗಳ ಆಸಕ್ತಿ ಹಾಗೂ ಸಂಪನ್ಮೂಲ ವ್ಯಕ್ತಿಗಳ ಬದ್ಧತೆಯನ್ನು ಬಿಂಬಿಸುತ್ತದೆ ಎಂದರು. 

ಸ್ವ ಉದ್ಯೋಗ ಕೈಗೊಳ್ಳಬಯಸುವ ಪ್ರತಿಯೊಬ್ಬ ಶಿಬಿರಾರ್ಥಿಯೂ ಸಿಂಡಿಕೇಟ್‌ ಬ್ಯಾಂಕ್‌ನ ಆರ್ಥಿಕ ಸಹಾಯ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಟಿ.ಎ. ಪೈ ಗ್ರಾಮೀಣ ತರಬೇತಿ ಸಂಸ್ಥೆಯ ನಿರ್ದೇಶಕ ಕೃಷ್ಣಾನಂದ ನಾಯಕ್‌, ಸಂಪನ್ಮೂಲ ವ್ಯಕ್ತಿ ಮುಕ್ತಾ ಎಸ್‌. ಭಟ್‌ ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಬಿವಿಟಿಯ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ ಸ್ವಾಗತಿಸಿದರು, ಆಡಳಿತಾಧಿಕಾರಿ ಐ.ಜಿ. ಕಿಣಿ ವಂದಿಸಿದರು. ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ 30ಕ್ಕೂ ಹೆಚ್ಚಿನ ಮಹಿಳೆಯರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT