ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಪ್ರಗತಿಗೆ ಸಮುದಾಯಗಳು ಅಗತ್ಯ: ಭಂಡಾರಿ

Last Updated 24 ಮೇ 2017, 8:32 IST
ಅಕ್ಷರ ಗಾತ್ರ

ಉಡುಪಿ: ‘ಸಮುದಾಯವೊಂದು ಚಿಕ್ಕದಾಗಿರಲಿ– ದೊಡ್ಡದಾಗಿರಿಲಿ, ಆರ್ಥಿಕವಾಗಿ ಸಬಲವಾಗಿರಲಿ ಅಥವಾ ದುರ್ಬಲವಾಗಿಯೇ ಇರಲಿ ಅದು ದೇಶದ ಪ್ರಗತಿಗೆ ಅನಿವಾರ್ಯ’ ಎಂದು ಮಾಜಿ ಶಾಸಕ ಕೆ. ಗೋಪಾಲ ಭಂಡಾರಿ ಹೇಳಿದರು.

ನಗರದ ಅಂಬಲಪಾಡಿಯ ಜಿಲ್ಲಾ ಸವಿತಾ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಜಾತಿ ಎಂಬುದು ಸಮಾಜದ ಸೃಷ್ಟಿಯೇ ಹೊರತು ದೇವರ ಸೃಷ್ಟಿಸಿದ್ದಲ್ಲ, ಆದ್ದರಿಂದ ಅದನ್ನು ಮೆಟ್ಟಿ ನಿಲ್ಲುವಂತಹ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಆತ್ಮ ವಿಶ್ವಾಸ ಮತ್ತು ಧೈರ್ಯ ಇದ್ದಾಗ ಬೆಳವಣಿಗೆ ಸಾಧ್ಯವಾಗುತ್ತದೆ. ಸಂಘಟನೆ ಎಂಬುದು ಸೌಹಾರ್ದ ಮತ್ತು ಸಮೃದ್ಧಿಗಾಗಿಯೇ ಹೊರತು ಸಂಘರ್ಷಕ್ಕಾಗಿ ಅಲ್ಲ’ ಎಂದರು.

‘ಸಂಘಟಿತವಾಗಿರದ ಸಮುದಾ ಯವನ್ನು ಒಂದುಗೂಡಿಸಲು ಸವಿತಾ ಸಮಾಜದ ಸಂಘಟನೆ ಮಾಡಲಾಯಿತು. 10 ವರ್ಷಗಳ ಹಿಂದೆ ಆರಂಭವಾದ ಸೌಹಾರ್ದ ಸಹಕಾರಿ ಸಂಘ ದಶಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಕಳೆದ ವರ್ಷ ಒಳ್ಳೆಯ ಲಾಭವನ್ನೂ ಇದು ಪಡೆದಿದ್ದು ಸಮಾಜದವರಿಗೆ ಅನುಕೂಲ ಮಾಡಿಕೊಡುವ ಕೆಲವು ಯೋಜನೆ ಸಹ ಪ್ರಕಟಿಸಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ದೇಶದ ಜನ ಸಂಖ್ಯೆ 30 ಕೋಟಿ ಇತ್ತು, ಅದು 60 ಕೋಟಿಗೆ ಏರಿಕೆಯಾದಾಗ ಭೂಮಿಗೆ ಹೊರೆಯಾಗಲಿದೆ ಅನಾಹುತ ನಡೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ, ಇಂದು ಭಾರತದ ಜನ ಸಂಖ್ಯೆ 130 ಕೋಟಿಗೆ ಏರಿಕೆಯಾಗಿದೆ. ಹಿಂದೆ ಚಿನ್ನ ಮತ್ತು ಹಣವನ್ನು ಸಂಪತ್ತು ಎನ್ನುತ್ತಿದ್ದರು, ಆದರೆ ಈಗ ಮಾನವ ಸಂಪನ್ಮೂಲವೇ ನಿಜವಾದ ಸಂಪತ್ತಾಗಿದೆ.

ಪೋಷಕರು ಮಕ್ಕಳನ್ನೇ ಆಸ್ತಿಯನ್ನಾಗಿ ಬೆಳೆಸುವ ಮನೋಭಾವ ಬೆಳೆಸಿಕೊಂಡಿದ್ದಾರೆ’ ಎಂದು ಹೇಳಿದರು. ‘ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ ಮಾತನಾಡಿ, ‘ದೊಡ್ಡ ಕನಸಿನೊಂದಿಗೆ 10 ವರ್ಷದ ಹಿಂದೆ ಈ ಸಂಘವನ್ನು ಕಟ್ಟಲಾಯಿತು. ಈಗ ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿದ್ದು ಸುಮಾರು ₹12 ಲಕ್ಷ ಲಾಭ ಗಳಿಸಿದೆ.

ಈ ಬಾರಿ ಶೇ8ರಷ್ಟು ಲಾಭಾಂಶ ಘೋಷಣೆ ಮಾಡುವ ನಿರೀಕ್ಷೆ ಇದೆ’ ಎಂದರು. ‘ಜೀವನವಿಡೀ ದುಡಿದ 60 ವರ್ಷ ಮೇಲಿನ ಹಿರಿಯರಿಗೆ ನಿವೃತ್ತಿ ವೇತನ ನೀಡಲು ಉದ್ದೇಶಿಸಲಾಗಿದೆ. ಅನಾರೋಗ್ಯದ ಸಂದರ್ಭದಲ್ಲಿ ನೆರವಾಗಲಿ ಎಂದು ಆರೋಗ್ಯಶ್ರೀ ಯೋಜನೆ ಸಹ ಪ್ರಾರಂಭಿಸಲಾಗುತ್ತಿದೆ. ಸಮಾಜದ ಹೆಣ್ಣು ಮಕ್ಕಳು ವಿವಾಹವಾಗುವ ಸಂದರ್ಭದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಎಂದು ಅವರು ಹೇಳಿದರು.

ಜೈಂಟ್ಸ್ ಇಂಟರ್‌ನ್ಯಾಷನಲ್ ಸಂಘಟನೆಯ ಫೆಡರೇಶನ್‌ 6ರ ಅಧ್ಯಕ್ಷ ಮಧುಸೂದನ್ ಹೇರೂರು, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಅರುಣ್ ಭಂಡಾರಿ ಪರ್ಕಳ, ಉಡುಪಿ ಜಿಲ್ಲಾ ಪರಿಯಾಳ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಶಂಕರ್ ಸಾಲಿಯಾನ್‌, ದಶಮಾನೋತ್ಸವ ಸಮಿತಿ ಅಧ್ಯಕ್ಷ ಕೇಶವ ಭಂಡಾರಿ ಕಟಪಾಡಿ, ಸಹಕಾರಿ ಸಂಘದ ಉಪಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಲತಿ ಅಶೋಕ್ ಭಂಡಾರಿ, ಯುವ ನಟ ಸೌರಭ್ ಭಂಡಾರಿ ಇದ್ದರು.

* * 

ಸಮುದಾಯಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಯುತವಾಗುವತ್ತ ಗಮನ ಹರಿಸಬೇಕು. ಪ್ರಗತಿಗೆ ಪ್ರಯತ್ನಿಸಬೇಕು.
ಕೆ. ಗೋಪಾಲ ಭಂಡಾರಿ,
ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT