ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮಂಡಲಗಳಲ್ಲಿ ಕಬಡ್ಡಿ ಕಲರವ

Last Updated 24 ಮೇ 2017, 9:01 IST
ಅಕ್ಷರ ಗಾತ್ರ

ವಿಜಯಪುರ: ಚುನಾವಣಾ ವರ್ಷ ಆರಂಭಗೊಳ್ಳುತ್ತಿದ್ದಂತೆ ರಾಜಕೀಯ ಚಟುವಟಿಕೆ ಗರಿಗೆದರಿವೆ. ಇದರ ಬೆನ್ನಿಗೆ ರಾಜಕೀಯೇತರ ಚಟುವಟಿಕೆ ಮೂಲಕವೂ ವರ್ಚಸ್ಸು ಹೆಚ್ಚಿಸಿ ಕೊಳ್ಳಲು, ಯುವ ಜನತೆಯನ್ನು ಆಕರ್ಷಿಸಲು ಪಕ್ಷಗಳ ಅಂಗ ಘಟಕಗಳು ವಿಭಿನ್ನ ಕಾರ್ಯಕ್ರಮ ರೂಪಿಸಿವೆ.

ಬಿಜೆಪಿ ಯುವ ಮೋರ್ಚಾ ಘಟಕ ರಾಜ್ಯದ 272 ಮಂಡಲಗಳಲ್ಲೂ ಪಂಡಿತ ದೀನ ದಯಾಳ ಉಪಾಧ್ಯಾಯರ ಜನ್ಮ ಶತಾಬ್ದಿ ಅಂಗವಾಗಿ ಯುವಕರನ್ನು, ಅದರಲ್ಲೂ ಗ್ರಾಮೀಣ ಯುವಕರನ್ನು ಕೇಂದ್ರವನ್ನಾಗಿಸಿಕೊಂಡು ದೇಸಿ ಕ್ರೀಡೆ ಕಬಡ್ಡಿ ಪಂದ್ಯಾವಳಿ ಆಯೋಜಿಸಿದೆ.

ಮಂಡಲ ವಲಯದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಇದೇ 24ರ ಬುಧವಾರದಿಂದ ಜಿಲ್ಲೆಯ ಮುದ್ದೇಬಿಹಾಳ, ದೇವರ ಹಿಪ್ಪರಗಿ ಮಂಡಲ ವ್ಯಾಪ್ತಿಯಲ್ಲಿ ಚಾಲನೆ ಸಿಗಲಿದೆ. ಇದೇ ರೀತಿ ರಾಜ್ಯದ ವಿವಿಧ ಮಂಡಲ ಗಳಲ್ಲೂ ಪಂದ್ಯಾವಳಿ ನಡೆಯಲಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಹೂಗಾರ ತಿಳಿಸಿದರು.

‘ಮೇ ಅಂತ್ಯದೊಳಗೆ ಎಲ್ಲ ಮಂಡಲ ವ್ಯಾಪ್ತಿಯ ಕಬಡ್ಡಿ ಪಂದ್ಯಾವಳಿ ಪೂರ್ಣ ಗೊಳ್ಳಲಿವೆ. ಈ ಪಂದ್ಯಾವಳಿಯಲ್ಲಿ ಬಿಜೆಪಿಯ ಪ್ರತಿ ಶಕ್ತಿ ಕೇಂದ್ರದಿಂದ ಒಂದೊಂದು ತಂಡ ಭಾಗವಹಿಸಲಿದೆ. ಪ್ರತಿ ಮಂಡಲದಲ್ಲೂ ಕನಿಷ್ಠ ಎಂಟು ಶಕ್ತಿ ಕೇಂದ್ರಗಳಿವೆ.

ಈ ಶಕ್ತಿ ಕೇಂದ್ರಗಳ ಪ್ರಮುಖರಿಗೆ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿರುವ ಸದೃಢ ಕಬಡ್ಡಿ ಆಟಗಾರರ ತಂಡ ರಚಿಸಿ, ಪಂದ್ಯಾವಳಿಯಲ್ಲಿ ಭಾಗವಹಿಸುವಂತೆ ಸೂಚಿಸಲಾಗಿದೆ. ಪ್ರತಿ ಮಂಡಲ ವ್ಯಾಪ್ತಿಯಲ್ಲಿ ಕನಿಷ್ಠ 12 ತಂಡಗಳು ಭಾಗವಹಿಸುವ ನಿರೀಕ್ಷೆ ನಮ್ಮದಾಗಿದೆ’ ಎಂದು ಜಿಲ್ಲಾ ಯುವ ಮೋರ್ಚಾ ಘಟಕದ ಅಧ್ಯಕ್ಷ ರವಿ ಖಾನಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಂಡಲ ವ್ಯಾಪ್ತಿಯಲ್ಲಿ ವಿಜೇತ  ತಂಡಗಳಿಗೆ ಆಯಾ ಮಂಡಲ ದಲ್ಲೇ ಪ್ರಥಮ, ದ್ವಿತೀಯ ನಗದು ಬಹುಮಾನ ವಿತರಿಸಲಾ ಗುವುದು. ಕನಿಷ್ಠ ₹ 10000, ₹ 5000, ಗರಿಷ್ಠ ₹ 25000 ಪ್ರಥಮ, ₹ 11000 ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ ಬಹುಮಾನ ನೀಡ ಲಾಗುವುದು’ ಎಂದರು.

‘ಜೂನ್‌ ಮೊದಲ ವಾರದಲ್ಲಿ ಮಂಡಲ ವಲಯ ದಲ್ಲಿ ವಿಜೇತರಾದ ತಂಡಗಳ ಜಿಲ್ಲಾ ಮಟ್ಟದ ಪಂದ್ಯಾವಳಿ ಆಯೋಜಿಸಲಾ ಗುವುದು. ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ ₹ 50000, ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ ₹ 25000 ಬಹುಮಾನ ನೀಡಲಾಗುವುದು’ ಎಂದೂ ತಿಳಿಸಿದರು.

‘ಜೂನ್ 15ರ ಬಳಿಕ ರಾಜ್ಯ ಮಟ್ಟದ ಪಂದ್ಯಾವಳಿ ನಡೆಯಲಿದೆ. ಇದರಲ್ಲಿ 30 ಜಿಲ್ಲಾ ತಂಡಗಳು ಭಾಗಿಯಾಗಲಿವೆ. ಮಂಡಲ ವ್ಯಾಪ್ತಿಯಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲು ಕನಿಷ್ಠ ₹ 1 ಲಕ್ಷ ವೆಚ್ಚವಾಗಲಿದ್ದು, ಸ್ಥಳೀಯ ಧುರೀಣರೇ ಭರಿಸಲಿದ್ದಾರೆ’ ಎಂದು ಹೇಳಿದರು.

* * 

ಗ್ರಾಮೀಣ ಯುವಕರನ್ನು ದೇಸಿ ಕ್ರೀಡೆ ಮೂಲಕ ಪಕ್ಷದತ್ತ ಆಕರ್ಷಿಸಲು ಯುವ ಮೋರ್ಚಾ ರಾಜ್ಯದ ಎಲ್ಲ ಮಂಡಲ ವ್ಯಾಪ್ತಿಯಲ್ಲೂ ಕಬಡ್ಡಿ ಪಂದ್ಯಾವಳಿ ಆಯೋಜಿಸುತ್ತಿದೆ
ರವಿ ಖಾನಾಪುರ
ಅಧ್ಯಕ್ಷ, ಬಿಜೆಪಿ ಜಿಲ್ಲಾ ಯುವ ಮೋರ್ಚಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT