ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂನ್ಯ ಸಾಧನೆ: ಕಾಂಗ್ರೆಸ್‌ ವಿರುದ್ಧ ಟೀಕೆ

Last Updated 24 ಮೇ 2017, 9:10 IST
ಅಕ್ಷರ ಗಾತ್ರ

ಗದಗ: ಬರ ಅಧ್ಯಯನಕ್ಕಾಗಿ ಮಂಗಳ ವಾರ ಜಿಲ್ಲೆಗೆ ಬಂದಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು, ನಗರದ ಅಂಬೇಡ್ಕರ್‌ ಸಭಾಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ‘ಮುಂದಿನ ವಿಧಾನಸಭೆ ಚುನಾವಣೆ ಯಲ್ಲಿ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಬೇಕು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಬೂತ್‌ ಮಟ್ಟ ದಿಂದಲೇ ಶ್ರಮಿಸಬೇಕು’ ಎಂದರು.

‘ಬೂತ್‌ ಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡಬೇಕು. ಪ್ರತಿಯೊಂದು ಬೂತ್‌ನಲ್ಲಿ ತಲಾ 15 ಕಾರ್ಯಕರ್ತರ ತಂಡ ರಚಿಸಿಕೊಂಡು, ಕೇಂದ್ರ ಸರ್ಕಾರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಜಾರಿಗೆ ತರಲಾಗಿ ರುವ ಜನಪರ ಯೋಜನೆಗಳ ಕುರಿತು ಜಾಗೃತಿ ಮೂಡಿಸಬೇಕು. ಕಾಂಗ್ರೆಸ್‌ ವೈಫಲ್ಯ ಜನರೆದುರು ತೆರದಿಡ ಬೇಕು’ ಎಂದು ಕರೆ ನೀಡಿದರು.

ಕಳಪೆ ಗುಣಮಟ್ಟದ ಶುದ್ಧ ನೀರು: ಗದುಗಿನಲ್ಲಿ 45 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡ ಲಾಗುತ್ತಿದೆ. ಇದೇ ರಾಜ್ಯ ಸರ್ಕಾರದ ಅತಿ ದೊಡ್ಡ ಸಾಧನೆ ಎಂದು ಲೇವಡಿ ಮಾಡಿದ ಅವರು, ಸರ್ಕಾರ ಇದ್ದೂ ಸತ್ತಂತಾಗಿದೆ ಎಂದರು. ಅವಳಿ ನಗರದ ಜನತೆ ಕುಡಿಯುವ ನೀರಿಗಾಗಿ ಪರದಾ ಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ವಹಿಸಿದ್ದಾರೆ.

ರಾಜ್ಯದಾದ್ಯಂತ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಘಟಕಗಳಿಂದ ಲಭಿಸುವ ನೀರಿನ ಗುಣಮಟ್ಟ ಸರಿ ಇಲ್ಲ. ಕೆಲವೆಡೆ ಶುದ್ದ ನೀರು ಕುಡಿದೇ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ’ ಎಂದು ದೂರಿದರು.

‘ಬರ ನಿರ್ವಹಣೆಗಾಗಿ ಸರ್ಕಾರ ಗದಗ ಜಿಲ್ಲೆಯಲ್ಲಿ ತೆರೆದಿರುವ ಗೋಶಾಲೆ ಗಳಲ್ಲಿ ನಿರ್ವಹಣೆ ಕೊರತೆ ಕಾಡುತ್ತಿದೆ. ಗೋಶಾಲೆಗಳಿಗೆ ಗುಣಮಟ್ಟದ ಮೇವು ವಿತರಿಸುತ್ತಿಲ್ಲ. ಸರ್ಕಾರ ಬರನಿರ್ವಹಣೆ ಯಲ್ಲಿ ವಿಫಲವಾಗಿದೆ’ ಎಂದರು.

‘ಗ್ರಾಮೀಣಾಭಿವೃದ್ಧಿ ಸಚಿವರ ತವರಿ ನಲ್ಲೇ ಅಕ್ರಮ ಮರಳು ಮಾರಾಟ ಅಡೆತಡೆಯಿಲ್ಲದೆ ನಡೆಯುತ್ತಿದೆ. ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಇರುವ ಗದಗ ಬೆಟಗೇರಿ ಅವಳಿ ನಗರದಲ್ಲಿ ಒಂದು ಟ್ಯಾಂಕರ್‌ ನೀರಿನ ಬೆಲೆ ₹500ಕ್ಕೆ ಏರಿಕೆಯಾಗಿದೆ. ಟ್ಯಾಂಕರ್‌ ಮಾಫಿಯಾ ಜೋರಾಗಿ ನಡೆಯುತ್ತಿದೆ’ ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಸಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಆದರೆ, ಕುಡಿಯುವ ನೀರಿಗಾಗಿ ಹೋರಾಟ ಮಾಡಿದವರನ್ನು ಜೈಲಿಗೆ ಕಳುಹಿಸಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ, ನೀರಿಗಾಗಿ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕುವ ಕುತಂತ್ರ ನಡೆದಿದೆ. ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆದುಕೊಳ್ಳಬೇಕು’ ಎಂದರು.

ಬಳಕೆಯಾಗದೆ ಉಳಿದ ಹಣ:  ‘ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ  ₹ 4 ಸಾವಿರ ಕೋಟಿಗೂ ಹೆಚ್ಚು ಮೊತ್ತ ಬಳಕೆಯಾಗದೆ ಕೊಳೆಯುತ್ತಿದೆ. ಕಾಂಗ್ರೆಸ್‌  ಜನಪರ ಕಾಳಜಿ ಮರೆತು ಆಡಳಿತ ನಡೆಸುತ್ತಿದೆ’ ಎಂದು ಸಂಸದ ಬಿ.ಶ್ರೀರಾಮುಲು ಆರೋಪಿಸಿದರು.

ಸಂಸದ ಶಿವಕುಮಾರ ಉದಾಸಿ, ಶೋಭಾ ಕರಂದ್ಲಾಜೆ, ಮಾಜಿ ಸಚಿವ ಕಳಕಪ್ಪ ಬಂಡಿ, ಗೋವಿಂದ ಕಾರ ಜೋಳ, ಮಾಜಿ ಶಾಸಕ ರಾಮಣ್ಣ ಲಮಾಣಿ, ಶ್ರೀಶೈಲಪ್ಪ ಬಿದರೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಸಿ.ಪಾಟೀಲ ಇದ್ದರು.

ಮಹಾದಾಯಿ ನೀರಿನ ಪ್ರಸ್ತಾಪ; ಗೊಂದಲ
ಅಂಬೇಡ್ಕರ್‌ ಸಭಾಭವನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಯಡಿಯೂರಪ್ಪ ಅವರು ಭಾಷಣ ಮಾಡುತ್ತಿದ್ದರು. ಈ ವೇಳೆ ಸಾರ್ವಜನಿಕರ ಗ್ಯಾಲರಿಯಲ್ಲಿ ಕುಳಿತಿದ್ದ ರೈತರೊಬ್ಬರು ಎದ್ದು ನಿಂತು, ಮಹಾದಾಯಿ ನೀರಿನ ಕುರಿತೂ ಮಾತನಾಡ್ರೀ ಎಂದು ಏರು ಧ್ವನಿಯಲ್ಲಿ  ಆಗ್ರಹಿಸಿದರು.

ವೇದಿಕೆ ಮೇಲೆ ಕುಳಿತಿದ್ದ ಮಾಜಿ ಸಚಿವ ಕಳಕಪ್ಪ ಬಂಡಿ ಅವರು ಇದನ್ನು ಗಮನಿಸಿ, ಕೆಳಗೆ ಇಳಿದು ಬಂದು, ರೈತನಿಗೆ ಹೊರಗೆ ನಡಿ ಎಂದರು. ರೈತನ ಕೈ ಹಿಡಿದು ಸಭಾಭವನದ ಹೊರಗೆ ಕಳುಹಿಸಿದರು. ಅಷ್ಟರಲ್ಲಿ ಮತ್ತೊಬ್ಬ ರೈತ ಎದ್ದು ನಿಂತು ಇದೇ  ವಿಷಯವನ್ನು ಪ್ರಸ್ತಾಪಿಸಿದರು. ಆ ರೈತನಿಗೂ ಸುಮ್ಮನೆ ಕುಳಿತುಕೊಳ್ಳುವಂತೆ ಬಂಡಿ ಸೂಚಿಸಿದರು.

* *

‘ವಿನಾಶಕಾಲೇ ವಿಪರೀತ ಬುದ್ಧಿ’ ಎನ್ನುವಂತೆ  ಸಿದ್ದರಾಮಯ್ಯ ಸರ್ಕಾರ ರೈತ ವಿರೋಧಿ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್‌ಗೆ  ಜನರು ತಕ್ಕ ಪಾಠ ಕಲಿಸಲಿದ್ದಾರೆ.
ಬಿ.ಎಸ್‌.ಯಡಿಯೂರಪ್ಪ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT