ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1 ಕೋಟಿ ವಿಮೆ ಹಣ: ಸಹೋದರನ ಕೊಲೆ

Last Updated 24 ಮೇ 2017, 9:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ₹1 ಕೋಟಿ ವಿಮೆ ಹಣಕ್ಕಾಗಿ ಸಹೋದರನನ್ನೇ ಕೊಲೆ ಮಾಡಿದ್ದ ಆರೋಪಿಯನ್ನು ಕುಂದಗೋಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದ ಶಿವರಾಜ ಕೊಡ್ಲಿವಾಡ ಬಂಧಿತ. ಸಹೋದರ ನಾಗರಾಜ ಕೊಡ್ಲಿವಾಡ ಕೊಲೆಯಾದವರು.

‘ನವನಗರದ ಮಂಜುನಾಥ ಹೊಂಗಲ ಅವರೊಂದಿಗೆ ಏ.27ರಂದು ಬೈಕ್‌ನಲ್ಲಿ ಹೊರಟಿದ್ದಾಗ ಸಂಶಿ–ಚಾಕಲಬ್ಬಿ ರಸ್ತೆಯಲ್ಲಿ ವಾಹನದ ಮೇಲಿಂದ ಬಿದ್ದು ತೀವ್ರ ಸ್ವರೂಪದ ಗಾಯಗಳಾಗಿ ನಾಗರಾಜ ಮೃತಪಟ್ಟಿದ್ದರು’ ಎಂದು ಶಿವರಾಜ ಕೊಡ್ಲಿವಾಡ ಕುಂದಗೋಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆದರೆ, ತಲೆಯಲ್ಲಿ ತೀವ್ರ ಸ್ವರೂಪದ ಗಾಯ ಆಗಿರುವುದನ್ನು ಹೊರತುಪಡಿಸಿದರೆ, ದೇಹದಲ್ಲಿ ಯಾವುದೇ ಭಾಗದಲ್ಲಿ ತರಚಿದ ಗಾಯಗಳು ಆಗದಿರುವುದು ಪೊಲೀಸರಿಗೆ ಅನುಮಾನ ಬಂದಿತ್ತು. ಅಲ್ಲದೆ, ನಾಗರಾಜನ ಪತ್ನಿ ಮೇಘಾ ಅವರನ್ನು ವಿಚಾರಣೆ ಮಾಡಿದಾಗ ಶಿವರಾಜನ ಮೇಲೆ ಸಂಶಯ ವ್ಯಕ್ತಪಡಿಸಿದ್ದರು.

‘ಸಹೋದರ ನಾಗರಾಜ ಅವರಿಗೆ ಹೆಚ್ಚು ಮದ್ಯ ಕುಡಿಸಿ, ಆತ ಮಲಗಿದ್ದ ವೇಳೆ ತಲೆಯ ಮೇಲೆ ಸುತ್ತಿಗೆಯಿಂದ ಹೊಡೆದು ನೀರು ತರುವ ಗಾಡಿಯ ಟ್ಯಾಂಕಿನಲ್ಲಿ ಹಾಕಿಕೊಂಡು ಹೋಗಿ ಚಾಕಲಬ್ಬಿ–ಸಂಶಿ ರಸ್ತೆಯಲ್ಲಿ ಶವವನ್ನು ಬಿಸಾಡಿದ್ದೆ. ಸಹೋದರ ಹೆಸರಿನಲ್ಲಿ ಇದ್ದ ₹1 ಕೊಟಿ ವಿಮೆ ಹಣವನ್ನು ಕಬಳಿಸಲು ಸಂಚು ರೂಪಿಸಿದ್ದೆ ಎಂಬುದಾಗಿ ಶಿವರಾಜ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ’ ಎಂದು ಕುಂದಗೋಳ ಠಾಣೆ ಪೊಲೀಸರು ತಿಳಿಸಿದ್ದಾರೆ.

ಶವ ಸಾಗಿಸಲು ಬಳಸಿದ್ದ ನೀರಿನ ಟ್ಯಾಂಕರ್‌, ಜೀವ ವಿಮೆಯ ಬಾಂಡ್‌ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪ್ರಭಾರ ಎಸ್ಪಿ ಸಂತೋಷ ಬಾಬು ಮಾರ್ಗದರ್ಶನದಲ್ಲಿ ಧಾರವಾಡ ಗ್ರಾಮೀಣ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್‌ ನೇತೃತ್ವದಲ್ಲಿ ಕುಂದಗೋಳ ಠಾಣೆ ಇನ್‌ಸ್ಪೆಕ್ಟರ್‌ ವೆಂಕಟಸ್ವಾಮಿ, ಎಸ್‌ಐ ದಿನೇಶ ಜವಳಕರ ಅವರು ತನಿಖೆ ಮಾಡಿದ್ದರು. ಈ ತಂಡಕ್ಕೆ ನಗದು ಬಹುಮಾನ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT