ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾವಿಗೆ ರಾಸಾಯನಿಕ ಸಿಂಪಡಿಸಿದರೆ ಸಜೆ’

Last Updated 24 ಮೇ 2017, 9:48 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಸಾಯನಿಕ ಸಿಂಪರಿಸಿ ಮಾವುಗಳನ್ನು ಹಣ್ಣಾಗಿಸುವವರಿಗೆ 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ’ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ನಿರ್ದೇಶಕ ಜಿ.ಎಸ್‌. ಗೌಡರ ಹೇಳಿದರು.

ತೋಟಗಾರಿಕಾ ಇಲಾಖೆ ಹಾಗೂ ನಿಗಮದ ಸಹಕಾರದಲ್ಲಿ ಆಯೋಜಿಸ­ಲಾಗಿದ್ದ ಮಾವು ಮೇಳದ ಉದ್ಘಾಟನಾ ಸಮಾರಂಭದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ಮಾವಿಗೆ ಕಾರ್ಬೈಡ್‌ ರಾಸಾಯನಿಕ ದ್ರಾವಕ ಸಿಂಪರಿಸಿ ಹಣ್ಣಾಗಿಸುವ ಪ್ರಕ್ರಿಯೆ ಇತ್ತೀಚೆಗೆ ಎಲ್ಲೆಡೆ ಕಂಡುಬರುತ್ತಿದೆ. ಮಾವು ಸೇವಿಸುವವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಇದನ್ನು ತಡೆಗಟ್ಟಲು ರಾಸಾಯನಿಕ ಬಳಸುವವರ ವಿರುದ್ಧ ಸ್ಥಳೀಯ ಜಿಲ್ಲಾಡಳಿತ, ಆರೋಗ್ಯ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‘ಆರೋಗ್ಯ ಸಚಿವ ಪಿ.ಆರ್‌ ರಮೇಶಕುಮಾರ್‌ ಅವರ ಜೊತೆಗೂ ಚರ್ಚಿಸಿದ್ದೇವೆ. ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಅವರು  ಸಹಕಾರ ನೀಡಲಿದ್ದಾರೆ ಎನ್ನುವ ಭರವಸೆ ನಮಗಿದೆ’ ಎಂದು ಹೇಳಿದರು.

1,000 ಟನ್‌ ರಫ್ತು: ಬೆಳಗಾವಿಯೂ ಸೇರಿದಂತೆ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಮಾವು ಬೆಳೆಯಲಾಗುತ್ತಿದೆ. ಅಂದಾಜು 5 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಈ ವರ್ಷ ನಿರೀಕ್ಷೆಗಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗಿದೆ ಎಂದು ಹೇಳಿದರು.

ಅಮೆರಿಕ, ಆಸ್ಟ್ರೇಲಿಯಾ, ಕೊಲ್ಲಿ ರಾಷ್ಟ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ. ಈ ವರ್ಷ ಅಂದಾಜು 1,000 ಟನ್‌ ಮಾವು ರಫ್ತು ಮಾಡಲಾಗಿದೆ ಎಂದು ತಿಳಿಸಿದರು.

ರಫ್ತು ಕೇಂದ್ರ ನಿರ್ಮಾಣ:  ರಫ್ತು ಮಾಡಲು ಅವಶ್ಯಕವಾಗಿರುವ ಮೂಲಸೌಕರ್ಯ­ಗಳನ್ನು ಒದಗಿಸಲು ಹುಬ್ಬಳ್ಳಿಯ ವಿಮಾನ ನಿಲ್ದಾಣದ ಬಳಿ ರಫ್ತು ಕೇಂದ್ರ ನಿರ್ಮಿಸಬೇಕೆನ್ನುವ ಯೋಚನೆ ಇದೆ. ಇದಕ್ಕಾಗಿ ಸುಮಾರು 30 ಎಕರೆ ಜಾಗವನ್ನು ಹುಡುಕುತ್ತಿದ್ದೇವೆ ಎಂದು ಹೇಳಿದರು.

ಈ ಕೇಂದ್ರದಲ್ಲಿ ಬಿಸಿ ನೀರಿನ ಘಟಕ, ಗಾಮಾ ಕಿರಣಗಳ ಘಟಕ, ಮಾರುಕಟ್ಟೆ ಪ್ರಾಂಗಣ ಸೇರಿದಂತೆ ರಫ್ತು ಮಾಡಲು ಬೇಕಾಗಿರುವ ಎಲ್ಲ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗುವುದು. ಅಂದಾಜು ₹ 40– 50 ಕೋಟಿ ವೆಚ್ಚವಾಗಬಹುದು ಎಂದು ತಿಳಿಸಿದರು.

‘ಮಾವು ಇಲ್ಲದ ಮೇಳ’
ಇದೇ ಮೊದಲ ಬಾರಿಗೆ ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ಮಾವು ಮೇಳಕ್ಕೆ ರೈತರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ತೋಟಗಾರಿಕೆ ಇಲಾಖೆಯ ಹ್ಯೂಮ್‌ ಪಾರ್ಕ್‌ನಲ್ಲಿ ಮಾರಾಟ ಹಾಗೂ ಪ್ರದರ್ಶನ ಮೇಳವನ್ನು ಆಯೋಜಿಸಲಾಗಿತ್ತು. ಕೇವಲ ನಾಲ್ಕೈದು ಮಳಿಗೆಗಳಲ್ಲಿ ಮಾತ್ರ ರೈತರು ಮಾವು ಮಾರಾಟ ಮಾಡುತ್ತಿದ್ದುದು ಕಂಡುಬಂತು. ಇನ್ನುಳಿದಂತೆ ಹಲವು ಮಳಿಗೆಗಳು ಖಾಲಿಯಾಗಿದ್ದವು.

ಮಾವಿನ ಸೀಸನ್‌ ಈಗ ಮುಗಿಯುವ ಹಂತಕ್ಕೆ ಬಂದಿದೆ. ಮಳೆ ಸುರಿದಿದ್ದರ ಪರಿಣಾಮವಾಗಿ ಮಾವು ಉದುರಿಬಿದ್ದಿವೆ. ತಮ್ಮ ತೋಟಗಳಲ್ಲಿ ಬೆಳೆದಿದ್ದ ಮಾವು­ಗಳನ್ನು ಈಗಾಗಲೇ ರೈತರು ದಲ್ಲಾಳಿಗಳಿಗೆ ಮಾರಾಟ ಮಾಡಿ­ಬಿಟ್ಟಿದ್ದಾರೆ. ಹೀಗಾಗಿ ಮೇಳದಲ್ಲಿ ನಿರೀಕ್ಷಿಸಿದಷ್ಟು ರೈತರು ಆಗಮಿಸಿಲ್ಲ ಎಂದು ಮೇಳದ ಸಂಘಟಕರು ತಿಳಿಸಿದರು.

ಆಪೂಸ್‌, ಅರ್ಕಾ ಅರುಣ, ಇಮಾಮ್‌ ಪಸಂದ, ಮಂಜಿರಾ, ಸಿಂಧೂರ, ಬ್ಯಾಡಗಿ ಮಲ್ಲಿಕಾ, ತ್ರಿಶೂಲ್‌, ಮಲ್ಲಿಕಾ, ಪೈರಿ, ಕುರುಕ್ಕನ್‌, ಅಪ್ಪೆಮಿಡಿ, ಜಮಾದಾರ, ಪೊಳಿಹುರಾ, ಕರಿ ಇಶಾಡ, ಚಿತ್ರಪೈರಿ, ಕಲ್ಮಿಪೈರಿ, ಜವಾರಿ, ಮುರ್ರಾಜ, ಆಮ್ರಪಾಲಿ, ರತ್ನಾ, ನೀಲ ಗೋವಾ, ಪುನೀತ್‌, ಖಾದರ್‌, ಪುನಾ ಸಹನಾ, ಆರ್ಕಾ ಅನ್ಮೋಲ್‌, ಆರ್ಕಾ ಪುನೀತ್‌, ಇಂಪಾಲ್ಸ್‌, ವೈಭವ, ತೋತಾಪೂರಿ, ರತ್ನಾಗಿರಿ, ಸೇಲಂ, ಪಿಕಲ್‌ ಸೇರಿದಂತೆ 156 ವಿಭಿನ್ನ ಬಗೆಯ ಮಾವುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇವುಗಳಲ್ಲಿ 4– 5 ತಳಿಗಳು ಮಾತ್ರ ಮಾರಾಟಕ್ಕೆ ಲಭ್ಯವಾಗಿದ್ದವು.

ಮುಂದಿನ ವರ್ಷ ಬೇಗ:  ‘ಈ ಮೊದಲು ಬೆಂಗಳೂರಿನಲ್ಲಿ ಮಾತ್ರ ಮಾವು ಮೇಳ ಆಯೋಜಿಸಲಾಗುತ್ತಿತ್ತು. ಈ ವರ್ಷದಿಂದ ಇತರ ಜಿಲ್ಲಾ ಕೇಂದ್ರಗಳಲ್ಲೂ ಮಾಡುತ್ತಿದ್ದೇವೆ. ಬೆಳಗಾವಿಯಲ್ಲಿ ಆಯೋಜಿಸುವುದು ಸ್ವಲ್ಪ ತಡವಾಯಿತು. ಮುಂದಿನ ವರ್ಷ ಏಪ್ರಿಲ್‌ ಮೊದಲ ವಾರದಲ್ಲಿಯೇ ಆಯೋಜಿಸುತ್ತೇವೆ’ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ನಿರ್ದೇಶಕ ಜಿ.ಎಸ್‌. ಗೌಡರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT