ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುತ್ತಿಗೆ ಪೌರಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಿ’

Last Updated 24 ಮೇ 2017, 9:50 IST
ಅಕ್ಷರ ಗಾತ್ರ

ಕಾರವಾರ: ‘ನಗರ ಸ್ಥಳೀಯ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಗುತ್ತಿಗೆ ಪೌರಕಾರ್ಮಿಕರಿಗೆ ಕನಿಷ್ಠ ವೇತನ, ಭವಿಷ್ಯ ನಿಧಿ ಸೌಲಭ್ಯವನ್ನು ಕಲ್ಪಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಮುನ್ಸಿಪಲ್‌ ಕಾರ್ಮಿಕರ ಸಂಘದವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ನಗರದ ಮಿತ್ರ ಸಮಾಜದಿಂದ ಮೆರವಣಿಗೆ ಹೊರಟ 50ಕ್ಕೂ ಅಧಿಕ ಗುತ್ತಿಗೆ ಪೌರ ಕಾರ್ಮಿಕರು ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಕುಳಿತರು.
‘ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳಲ್ಲಿ ಸ್ವಚ್ಛತಾ ಕಾರ್ಮಿಕರು, ವಾಟರ್‌ಮನ್‌ಗಳು, ಯುಜಿಡಿ ಕಾರ್ಮಿಕರು, ಕಾವಲುಗಾರರು, ವಾಹನ ಚಾಲಕರು, ಕಚೇರಿ ಸಹಾಯಕರು, ಕಂಪ್ಯೂಟರ್‌ ಆಪರೇಟರ್‌ಗಳಾಗಿ ಸಾವಿರಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಶೋಷಿತ ಸಮುದಾಯಗಳಿಂದ ಬಂದ ಅವರು, ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ’ ಎಂದು ಸಂಘದ ಅಧ್ಯಕ್ಷ ಡಿ.ಸ್ಯಾಮಸನ್‌ ಹೇಳಿದರು.

‘2016ರ ಏಪ್ರಿಲ್‌ನಲ್ಲಿ ಜಿಲ್ಲಾಡಳಿತ ಸಭೆ ನಡೆಸಿ 11 ಅಂಶಗಳ ಮೇಲೆ ಚರ್ಚೆ ನಡೆಸಿದಾಗ ತಿಂಗಳ ಒಳಗೆ ಕಾರ್ಮಿಕರ ಎಲ್ಲಾ ಸಮಸ್ಯೆ ಬಗೆಹರಿಸುವ ಭರವಸೆ ನೀಡಿತ್ತು. ಆದರೆ, ಇಂದಿಗೂ ಭರವಸೆ ಈಡೇರಿಲ್ಲ. ಎಲ್ಲಾ ವಿಭಾಗದ ಕಾರ್ಮಿಕರಿಗೆ 5ನೇ ತಾರೀಖಿನ ಒಳಗೆ ವೇತನ ನೀಡಬೇಕು. ಭವಿಷ್ಯ ನಿಧಿಯ ಬಗ್ಗೆ ಮಾಹಿತಿ ಸಿಗಬೇಕು. ಗುರುತಿನ ಪತ್ರ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖ ಬೇಡಿಕೆಗಳು: ‘ಕಾರ್ಮಿಕರಿಗೆ ಸಮವಸ್ತ್ರ, ಬೂಟು, ರೇನ್‌ಕೋಟ್‌, ಮಾಸ್ಕ್‌, ಹೆಲ್ಮೆಟ್‌ ಒದಗಿಸಬೇಕು. ಸರ್ಕಾರಿ ರಜಾ ದಿನಗಳಲ್ಲಿ ದುಡಿಸಿಕೊಳ್ಳಬಾರದು. ಗಳಿಕೆ, ಸಾಂದರ್ಭಿಕ ಹಾಗೂ ಪರಿಮಿತ ರಜೆ ಸೌಲಭ್ಯ ಒದಗಿಸಬೇಕು. ಸಮಾನ ಕೆಲಸಕ್ಕೆ ಸಮಾನ ಕೂಲಿ ಪದ್ಧತಿ ಜಾರಿಗೆ ತರಬೇಕು. ಸಂಬಳ ಚೀಟಿ, ಉಪಾಹಾರ ಸೌಲಭ್ಯ, ತುಟ್ಟಿ ಭತ್ಯೆಗಳನ್ನು ನೀಡಬೇಕು.

ದಾಂಡೇಲಿ ಹಾಗೂ ಶಿರಸಿ ನಗರಸಭೆಯಲ್ಲಿ ಕಸ ವಿಲೆವಾರಿ ವಿಭಾಗ ಹಾಗೂ ಲೋಡರ್ಸ್‌ಗಳಿಗೆ ನೀಡಲಾಗುತ್ತಿರುವ ವೇತನ ಹಾಗೂ ಕಾರ್ಮಿಕರ ಸಂಖ್ಯೆ ಬಗ್ಗೆ ತನಿಖೆ ನಡೆಯಬೇಕು. ವಾರದ ರಜೆ ಕಡ್ಡಾಯ ಮಾಡಬೇಕು’ ಎಂದು ಆಗ್ರಹಿಸಿದರು. ‘ದಾಂಡೇಲಿ ನಗರಸಭೆಯಲ್ಲಿ ಮಹಿಳಾ ಕಾರ್ಮಿಕರಿಗೆ ₹ 4,000 ವೇತನ ನೀಡಲಾಗುತ್ತಿದೆ. ಪ್ರಶ್ನಿಸಿದರೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಲಾಗುತ್ತಿದೆ’ ಎಂದು ಆರೋಪಿಸಿದರು.

ಸಂಘದ ಖಜಾಂಚಿ ರಮೇಶ ಬಾಬು, ಪ್ರಧಾನ ಕಾರ್ಯದರ್ಶಿ ನಾಗಪ್ಪ ನಾಯ್ಕ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್‌.ಶಾನಬಾಗ, ಜಿಲ್ಲಾ ಉಪಾಧ್ಯಕ್ಷೆ ಯಮುನಾ ಗಾಂವಕರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT