ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯೂಟಿಫುಲ್‌

Last Updated 24 ಮೇ 2017, 19:30 IST
ಅಕ್ಷರ ಗಾತ್ರ

ಯಾವುದೋ ನೆಪದಲ್ಲಿ ಅವಳ ಮನೆಯೊಳಗೆ ನುಸುಳುವ ಹುಡುಗ ಅವಳ ಮೇಲೆ ಅತ್ಯಾಚಾರ ಎಸಗುತ್ತಾನೆ. ನಂತರ ಅವನು ತನ್ನ ಈ ಕೃತ್ಯಕ್ಕೆ ಕೊಡುವ ಕಾರಣ. ‘ನಾನು ಇದನ್ನು ಮಾಡಲು ಕಾರಣ ನೀನು ತುಂಬಾ ಸುಂದರವಾಗಿದ್ದೀಯ!!’

ಇದು ದಕ್ಷಿಣ ಕೊರಿಯಾದ ಖ್ಯಾತ ನಿರ್ದೇಶಕ ಕಿಮ್‌ ಕಿ ಡುಕ್‌ನ ‘ಬ್ಯೂಟಿಫುಲ್‌’ ಸಿನಿಮಾದ ದೃಶ್ಯ. ಯ್ಯೋನ್‌ ಯುಂಗ್‌ ಅಪ್ರತಿಮ ಸುಂದರಿ. ಒಮ್ಮೆ ನೋಡಿದರೆ ಕಣ್ಣು ಕೀಳಲಾಗದಂಥ ರೂಪ ಅವಳದು. ಈ ಸೌಂದರ್ಯವೇ ಅವಳಿಗೆ ಅಪಾರ ಅಭಿಮಾನಿವರ್ಗವನ್ನೂ ಗಳಿಸಿಕೊಟ್ಟಿದೆ. ಆದರೆ ಈ ಸೌಂದರ್ಯವೇ ಅವಳಿಗೆ ಶಾಪವೂ ಆಗುತ್ತದೆ.

‘ಬಾಡಿ ಪಾಲಿಟಿಕ್ಸ್’ನ ವಿವಿಧ ಆಯಾಮಗಳನ್ನು ಬೇರೆಯದೇ ಎತ್ತರದಲ್ಲಿ ಚರ್ಚಿಸುವ ಸಿನಿಮಾ ‘ಬ್ಯೂಟಿಫುಲ್‌’. ಕಿಮ್‌ ಕಿ ಡುಕ್‌ ತಮ್ಮ ಪ್ರತಿಯೊಂದು ಸಿನಿಮಾ ಕೂಡ ಜೀವನದರ್ಶನದ ಒಂದೊಂದು ತುಣುಕುಗಳಾಗಿರುತ್ತವೆ. ಈ ಸಿನಿಮಾವೂ ಅವರ ಕುರಿತ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ.

ಅಂಗಸೌಂದರ್ಯದಿಂದಲೇ ಪ್ರಸಿದ್ಧಿಯ ಪರಾಕಾಷ್ಠೆಯಲ್ಲಿರುವ ಯ್ಯೋನ್‌ ಬದುಕಿನಲ್ಲಿ ಈ ಕಾರಣಕ್ಕಾಗಿಯೇ ದುರಂತಗಳೂ ಸಂಭವಿಸುತ್ತವೆ. ಖಾಸಗೀ ಬದುಕು ಛಿದ್ರವಾಗುತ್ತದೆ. ಆದ್ದರಿಂದ ಅವಳು ತಾನು ವಿಕಾರ ದೇಹಿಯಾಗಬೇಕು ಎಂದು ಹೊರಡುತ್ತಾಳೆ. ಎಲ್ಲ ಡಯಟ್‌ಗಳನ್ನೂ ಬಿಟ್ಟು ಸಿಕ್ಕಿದ್ದೆಲ್ಲವನ್ನೂ ಹಿಂಸೆಪಟ್ಟುಕೊಂಡು ತಿನ್ನುತ್ತಾಳೆ. ದಪ್ಪಗಾದರೆ ಜನರು ನನ್ನನ್ನು ನೋಡುವ ದೃಷ್ಟಿ ಬದಲಾಗಬಹುದು ಎಂಬುದೇ ಅವಳ ಆಶಯ.

ಈ ಪಾತ್ರದ ಮೂಲಕ ನಿರ್ದೇಶಕರು ಸೌಂದರ್ಯ, ಅದು ನೀಡುವ ಪ್ರಚೋದನೆಗಳು, ಅದರ ಪರಿಣಾಮಗಳು, ಸುಂದರವಾದ್ದೆಲ್ಲವನ್ನೂ ನಾವೂ ಅನುಭವಿಸಬೇಕು ಎಂಬ ಮಾನಸಿಕ ವಿಕೃತಿ ತಂದಿಕ್ಕುವ ದುರಂತಗಳು ಎಲ್ಲವನ್ನೂ ಎಳೆ ಎಳೆಯಾಗಿ ಅನಾವರಣ ಮಾಡುತ್ತ ಹೋಗುತ್ತಾರೆ.

ಕಿಮ್‌ ಕಿ ಡುಕ್‌ ಅವರ ಸಿನಿಮಾಗಳಲ್ಲಿ ಎಲ್ಲ ಪಾತ್ರಗಳೂ ಕೊನೆಯಲ್ಲಿ ಸಾಂಕೇತಿಕವಾಗಿ ದರ್ಶನವೊಂದನ್ನು ಹೊಳೆಯಿಸುವ ಉದ್ದೇಶಕ್ಕಾಗಿಯೇ ಪೋಷಿಸಲ್ಪಟ್ಟಿರುತ್ತವೆ. ಈ ಸಿನಿಮಾದ ನಾಯಕ ಮತ್ತು ಅವಳ ಬದುಕಿನ ವೈಪರೀತ್ಯಗಳನ್ನು ಹತ್ತಿರದಿಂದ ನೋಡುತ್ತಲಿರುವ ಪೊಲೀಸ್‌ ಅಧಿಕಾರಿ ಎರಡೂ ಪಾತ್ರಗಳೂ ಸಮಾಜದ ಸಂಗತ ಮತ್ತು ಸಾಕ್ಷಿಪ್ರಜ್ಞೆಯ ಸಂಕೇತಗಳಾಗಿಯೇ ಮನಸ್ಸನ್ನು ಮುಟ್ಟುತ್ತವೆ.

ಹಾಗೆಯೇ ಕೊನೆಯಲ್ಲಿ ನಾಯಕಿಯ ಬದುಕಿನ ದುರಂತಗಳನ್ನು ಅತ್ಯಂತ ಅನುಕಂಪದಿಂದ ನೋಡುವ, ಸಾಧ್ಯವಾದಾಗೆಲ್ಲ ಅವಳನ್ನು ಪೋಷಿಸುವ ಪೊಲೀಸ್‌ ಅಧಿಕಾರಿ ಮನಸ್ಸಲ್ಲಿರುವುದೂ ಮತ್ತದೇ ಸೌಂದರ್ಯದ ಮೇಲೆ ಅಧಿಕಾರ ಸ್ಥಾಪಿಸುವ ಪುರುಷನೇ ಎಂಬ ದುರಂತವನ್ನೂ ಸೂಕ್ಷ್ಮವಾಗಿ ಹೇಳಿದ್ದಾರೆ.

ಉಳಿದಂತೆ ಕಮ್ಮಿ ಮಾತು, ದೃಶ್ಯಗಳಲ್ಲಿಯೇ ದರ್ಶನ ಮಾಡಿಸುವ ಕಿಮ್‌ ಕಿ ಡುಕ್‌ ಶೈಲಿ ಇಲ್ಲಿಯೂ ಮುಂದುವರಿದಿದೆ. ಬ್ಯೂಟಿಫುಲ್ ಸಿನಿಮಾ ನೋಡಲು goo.gl/nmYxpZ ಕೊಂಡಿ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT