ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಕಾರಿನ ಸೆಳೆತ

ಅಕ್ಷರ ಗಾತ್ರ

ಮನೆಗೆ ಹೊಸ ಅತಿಥಿ ಬರುತ್ತಾರೆಂದರೆ ಮನೆಮಂದಿಗೆಲ್ಲಾ ಹರುಷ, ಬರುವವರೆಗೂ ಏನೋ  ಕುತೂಹಲ. ಆ ಅತಿಥಿ ವ್ಯಕ್ತಿಯೇ ಆಗಿರಲಿ ಅಥವಾ ಮೊದಲ ಕಾರೇ ಇರಲಿ. ಒಂದುವೇಳೆ ಕಾರೇ ಆಗಿದ್ದರೆ ಆ ಅತಿಥಿಗೆ ತುಸು ಹೆಚ್ಚೇ ಸ್ಥಾನಮಾನ. ಮೊದಲ ಕಾರು ಖರೀದಿಸಿದ ಅನುಭವ ಬದುಕಿನುದ್ದಕ್ಕೂ ಅಚ್ಚಳಿಯದೇ ಉಳಿದಿರುತ್ತದೆ. ಕಾರಣ ಅದರೊಂದಿಗಿನ ಬಾಂಧವ್ಯ.

2011ರಲ್ಲಿ ಭಾರತದ ಜನಸಂಖ್ಯೆ ನೂರು ಕೋಟಿ ಗಡಿ ತಲುಪಿದಾಗ ಕಾರು ಹೊಂದಿದವರ ಸಂಖ್ಯೆ ಪ್ರತಿ ನೂರು ಕುಟುಂಬಗಳಿಗೆ ಐದು ಮಾತ್ರ. ಆದರೆ 2017ರ ಹೊತ್ತಿಗೆ ಈ ಪ್ರಮಾಣ ಶೇ 18ರ ಗಡಿ ದಾಟಿದೆ. ಭಾರತದಲ್ಲಿನ ಶ್ರೀಮಂತ ವರ್ಗದ ಪ್ರತಿ ಸದಸ್ಯರಿಗೂ ಈಗ ತಲಾ ಒಂದು ಕಾರಿನ ಅಗತ್ಯವಿದೆ. ಹಾಗೆಯೇ ಮೇಲ್ಮಧ್ಯಮ ವರ್ಗದ ಪ್ರತಿ ಕುಟುಂಬಕ್ಕೂ ಒಂದು ಕಾರು ಬೇಕಿದೆ. ಕೆಳ ಮಧ್ಯಮ ವರ್ಗದಿಂದ ಮೇಲ್ಮಧ್ಯಮ ವರ್ಗಕ್ಕೆ ಬಡ್ತಿ ಪಡೆದವರು ಹಾಗೂ ಸಮಾಜದಲ್ಲಿ ಸ್ಥಾನಮಾನ ಎತ್ತರಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಇರುವವರೂ ಮೊದಲ ಕಾರು ಖರೀದಿಯ ಸಂಭ್ರಮದಲ್ಲಿದ್ದಾರೆ.

ಮೂವತ್ತು ವರ್ಷಗಳ ಹಿಂದೆ ವೃತ್ತಿ ಜೀವನ ಆರಂಭಿಸಿದ ಕೆಲವರು ಸೈಕಲ್ ತುಳಿದು ನಂತರ ಸ್ಕೂಟರ್ ಏರಿ, ನಿವೃತ್ತಿ ಅಂಚಿಗೆ ಬಂದು ತಲುಪಿದಾಗ ಬರುವ ಪಿಂಚಣಿ ಹಣದಲ್ಲಿ ಒಂದು ಕಾರು ಖರೀದಿಸುವ ಮನಸ್ಸು ಮಾಡುತ್ತಾರೆ. ತಮಗಾಗಿ ಕಷ್ಟದ ಜೀವನ ಕಳೆದ ಪೋಷಕರಿಗಾಗಿ ಕಾರು ಖರೀದಿಸುವವರೂ ಇದ್ದಾರೆ.

ಕಾರು ಖರೀದಿಸುವ ಮುನ್ನ ಹತ್ತಾರು ಜನರಿಂದ ಅಭಿಪ್ರಾಯ ಕೇಳುವುದುಂಟು. ಕಾರು ಖರೀದಿ ನಂತರ ಅದರ ನಿರ್ವಹಣೆ ಕುರಿತಂತೆ ಖಾಲಿ ಹಾಳೆಯಲ್ಲಿ ಲೆಕ್ಕ ಗೀಚುವುದ್ದೂ ಉಂಟು. ಎಳೆಯರಿಗೆ ವೇಗದ ಕಾರಿನಾಸೆ, ಯುವಕರಿಗೆ ತಮ್ಮ ಶ್ರೀಮಂತ ಸ್ನೇಹಿತರ ಬಳಿ ಇರುವ ಕಾರಿಗಿಂತಲೂ ತುಸು ದೊಡ್ಡ ಕಾರು ಹೊಂದುವ ಬಯಕೆ. ಮಹಿಳೆಯರಿಗೆ ಆಕರ್ಷಕ ಬಣ್ಣದ  ಹಾಗೂ ತಮ್ಮ ನೆಂಟರಿಷ್ಟರ ಬಳಿ ಇರುವ ಕಾರು ಇದ್ದರೆ ಒಳ್ಳೆಯದು ಎಂಬ ಆಸೆ. ಎಲ್ಲ ಒತ್ತಡಗಳ ನಡುವೆ ತಮ್ಮ ಆಸೆಯನ್ನೂ ಬಲಿಕೊಡದೆ ಕಾರು ಖರೀದಿಸುವ ಸರ್ಕಸ್‌ ಖರೀದಿದಾರರದ್ದು.

ಪಟ್ಟಣ ಪ್ರದೇಶಗಳಲ್ಲಿ ಮೊದಲ ಕಾರು ಖರೀದಿ ಆ ಮನೆಗೆ ಮಾತ್ರವಲ್ಲ, ಮನೆಯ ವಠಾರ, ಬೀದಿ, ಕಚೇರಿಯಲ್ಲಿ ಗಮನಿಸುವಷ್ಟರ ಮಟ್ಟಿಗೆ ಎದ್ದು ಕಾಣುತ್ತದೆ. ದೇಶದ ಕಾರು ಮಾಲೀಕರಲ್ಲಿ ಪಟ್ಟಣ ಪ್ರದೇಶದವರ ಪಾಲು ಏರುಮುಖವಾಗಿದೆ.

ಅಂದಹಾಗೆ, ಎರಡು ದಶಕದ ಹಿಂದೆ ಮೊದಲ ಕಾರು ಖರೀದಿಸಿದ ಬಹಳಷ್ಟು ಮಂದಿ, ಇಂದಿಗೂ ಅದನ್ನು ಮಾರದಷ್ಟು ಪ್ರೀತಿ ಹೊಂದಿದ್ದಾರೆ. ಅದು ಇಂದಿಗೂ ಮುಂದುವರಿದಿದೆ. ಅಂದಿನ ಜನಪ್ರಿಯ ಕಾರು ಇಂದು ವಿಂಟೇಜ್ ಸ್ಥಾನಮಾನ ಗಳಿಸಿದೆ. ತಮಗೆ ವಯಸ್ಸಾದರೂ, ಮಕ್ಕಳು ಆಧುನಿಕ ಕಾರು ಖರೀದಿಸಿದ್ದರೂ ಅಂದು ಖರೀದಿಸಿದ ಕಾರಿನ ಮೇಲಿನ ಮೋಹ ಎಲ್ಲಕ್ಕೂ ಹೆಚ್ಚು. ನಿತ್ಯವೂ ಅದನ್ನು ಒರೆಸಿ ಅಂದಗೊಳಿಸುವ ಪ್ರಕ್ರಿಯೆಯೇ ಮೊದಲ ಕಾರಿನ ಮೇಲಿನ ಪ್ರೀತಿ ಹೇಳುತ್ತದೆ.
ಮೊದಲ ಕಾರು ಖರೀದಿಯ ತಯಾರಿ ಇಂದಿಗೂ ಹಿಂದಿನಂತೆಯೇ ಇದೆ. ಹೀಗಾಗಿ ಖರೀದಿಗೂ ಮೊದಲು ಒಂದಷ್ಟು ಸಂಗತಿಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಉತ್ತಮ.
ಕಾರು ಖರೀದಿಗೆ ನಿಮ್ಮ ಬಳಿ ಇರುವ ಹಣವೆಷ್ಟು?

ಮಾರುಕಟ್ಟೆಯಲ್ಲಿ ತರಹೇವಾರಿ ಕಾರುಗಳು ಲಭ್ಯ. ಒಂದಕ್ಕಿಂತ ಒಂದು ಅಂದ, ಐಷಾರಾಮಿ ಹಾಗೂ ವಿಶೇಷ ಸೌಲಭ್ಯ ಸಿಗಲಿವೆ. ಇನ್ನು ಶೋರೂಂಗೆ ಹೋದರೆ ಮಾರಾಟ ಪ್ರತಿನಿಧಿ ನಮ್ಮನ್ನು ದುಬಾರಿ ಕಾರಿನ ಮುಂದೆ ನಿಲ್ಲಿಸುವುದು ಗ್ಯಾರಂಟಿ. ಕಾರು ಖರೀದಿಗೆ ಮುನ್ನ ಜೇಬಿನ ಸಾಮರ್ಥ್ಯ ದೃಢಪಡಿಸಿಕೊಳ್ಳುವುದು ಉತ್ತಮ.

ಒಂದೊಮ್ಮೆ ಸಾಲ ಮಾಡಿ ಕಾರು ಖರೀದಿಸುವುದೇ ಆದಲ್ಲಿ, ಬಡ್ಡಿ ದರ, ಸಾಲ ಮರುಪಾವತಿ ಅವಧಿ ಆದಷ್ಟು ಕಡಿಮೆ ಇರುವಂತೆ ನೋಡಿಕೊಳ್ಳುವುದು ಉತ್ತಮ.
ಖರೀದಿಸುವ ಕಾರು ಹೇಗಿರಬೇಕು?: ಖರೀದಿಗೆ ಬಜೆಟ್ ನಿರ್ಧಾರವಾದ ನಂತರ ನಮ್ಮ ಅಗತ್ಯಗಳಿಗೆ ತಕ್ಕಂತಹ ಹಾಗೂ ಕಡಿಮೆ ಖರ್ಚಿನಲ್ಲಿ ಸಿಗಬಹುದಾದ ಕಾರು ಖರೀದಿ ಉತ್ತಮ.

ಸ್ಪೋರ್ಟಿ, ಐಷಾರಾಮಿ ಅಥವಾ ದೊಡ್ಡ ವಾಹನ ಖರೀದಿಸುವ ಮನಸ್ಸಿನ ನಿರಂತರ ಒತ್ತಡವನ್ನು ನಿಯಂತ್ರಿಸಬೇಕು. ಅದರ ಬದಲು, ಕಾರಿನ ವಾರ್ಷಿಕ ವಿಮಾ ಖರ್ಚು, ನಿರ್ವಹಣೆ ವೆಚ್ಚ ಹಾಗೂ ಇಂಧನ ಭರಿಸಲು ಅಗತ್ಯವಿರುವ ಹಣದ ಕುರಿತು ಯೋಚಿಸಬೇಕು. ಅಧಿಕ ಅಶ್ವಶಕ್ತಿಯ ಕಾರುಗಳು ಹೆಚ್ಚು ಇಂಧನ ಬೇಡುತ್ತವೆ, ವಿಮೆಯ ಕಂತೂ ದುಬಾರಿ. ಇದರೊಂದಿಗೆ ಖರೀದಿ ನಂತರ ಸೇವೆ, ರೇಟಿಂಗ್‌ನಂತಹ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಟೆಸ್ಟ್ ಡ್ರೈವ್‌ ಮುಖ್ಯ: ಕಾರು ಖರೀದಿಸುವುದು ಮನೆಯಲ್ಲಿ ಇಡಲಲ್ಲ. ಹೀಗಾಗಿ ನಮ್ಮ ಆಯ್ಕೆಯ ಕಾರನ್ನು ಓಡಿಸಿ ಪರೀಕ್ಷಿಸುವುದು ಉತ್ತಮ. ಖರೀದಿಗೂ ಮೊದಲು ಮಾರಾಟ ಪ್ರತಿನಿಧಿ, ಕೆಲ ಅಂತರ್ಜಾಲ ತಾಣ, ಸಮೀಕ್ಷೆಗಳ ವರದಿಗಳಿಂದ ಸಂದೇಹ ಪರಿಹರಿಸಿಕೊಳ್ಳಬೇಕು. ಹಾಗೆಯೇ ವಿವಿಧ ಶೋರೂಂಗಳಲ್ಲಿ ಇರುವ ದರ ವ್ಯತ್ಯಾಸದ ಕುರಿತು ಮಾಹಿತಿ ಕಲೆಹಾಕಬೇಕು.

ಸುರಕ್ಷತಾ ಸಾಧನ ಇದೆಯೇ ಗಮನಿಸಿ
ಆ್ಯಂಟಿಲಾಕ್ ಬ್ರೇಕಿಂಗ್ ಸಿಸ್ಟಂ: ಕಾರು ಚಾಲನೆ ಸಂದರ್ಭದಲ್ಲಿ ತುರ್ತು ಬ್ರೇಕ್‌ನ ಅಗತ್ಯವಿದ್ದರೆ ಎಬಿಎಸ್ ವ್ಯವಸ್ಥೆ ಅತ್ಯಗತ್ಯ. ಇದು ಜಾರು ಪ್ರದೇಶದಲ್ಲೂ ಕಾರು ನಿಯಂತ್ರಣ ಕಳೆದುಕೊಳ್ಳದೆ ನಿಲ್ಲುವ ವ್ಯವಸ್ಥೆ ಇದಾಗಿದೆ.

ಸೀಟ್ ಬೆಲ್ಟ್‌ ಹಾಗೂ ಏರ್‌ ಬ್ಯಾಗ್‌: ಚಾಲಕ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಸಾಧಾರಣ ವೇಗದಲ್ಲಿ ವಾಹನ ಚಾಲನೆ ಮಾಡುವುದು ಉತ್ತಮ. ಆದರೂ ಸೀಟ್ ಬೆಲ್ಟ್‌ ಹಾಗೂ ಏರ್‌ ಬ್ಯಾಗ್‌ನಂಥ ಸುರಕ್ಷತಾ ಸಾಧನ ಇರುವ ಕಾರು ಖರೀದಿಸಿ.

ರಿವರ್ಸ್‌ ಸೆನ್ಸರ್ ಇರಲಿ: ರಿವರ್ಸ್ ಪಾರ್ಕಿಂಗ್ ಸೆನ್ಸರ್ ಇರುವ ಕಾರು ಖರೀದಿಸುವುದು ಅಥವಾ ಕಾರು ಖರೀದಿ ನಂತರ ಅಳವಡಿಸಿಕೊಳ್ಳುವುದು ಉತ್ತಮ. ಇದು ಹಿಮ್ಮುಖ ಚಲನೆ ಸಂದರ್ಭದಲ್ಲಿ ಯಾವುದೇ ವಸ್ತು ಅಡ್ಡ ಬಂದಾಗ ಶಬ್ದದ ಮೂಲಕ ಎಚ್ಚರಿಸಲಿದೆ. ಇವಿಷ್ಟು ಮುಂಜಾಗ್ರತೆ ಜತೆಗೆ ಈಗಾಗಲೇ ಕಾರು ಖರೀದಿಸಿದವರ ಸಲಹೆ ಪಡೆಯುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT