ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗುಣಿಯಲ್ಲಿನ ಈಜಾಟ, ಮೋಜಾಟ...

Last Updated 24 ಮೇ 2017, 19:30 IST
ಅಕ್ಷರ ಗಾತ್ರ

ನಮ್ಮೂರಲ್ಲಿ ಆಗ ನಲ್ಲಿ ನೀರು ಇರಲಿಲ್ಲ. ದಿನವೂ ಪೇಟೆ ಬದಿಗಿರುವ ಬಾವಿಯ ಇಪ್ಪತ್ತು ಪಾವಟಿಗೆಗಳನ್ನಿಳಿದು ಬಳಕೆಗೆಂದು ಮೂರು ಕೊಡ ಸವಳು ನೀರು, ಸೇದುವ ಬಾವಿಗೆ ಹೋಗಿ ಒಂದು ಕೊಡ ಕುಡಿಯುವ ಸಿಹಿ ನೀರನ್ನು ಜಗ್ಗಿ ಹೊತ್ತು ತರುತ್ತಿದ್ದೆವು. ಇದು ಮನೆ ಮಂದಿಗೆ ಕಡ್ಡಾಯ. ಅನಂತರವೇ ಲೋಟದ ತುಂಬ ಚಹಾ ಸಿಕ್ಕುತ್ತಿತ್ತು. ನಾವು ಶಾಲೆಗೆ ಹೋಗುತ್ತಿದ್ದಾಗ ಹತ್ತು ಹನ್ನೊಂದು ವರ್ಷಗಳುದ್ದಕ್ಕೂ ಮನೆಯಲ್ಲಿ ಸ್ನಾನ ಮಾಡಲಿಲ್ಲ. ನಮ್ಮೂರ ಕಾಡಸಿದ್ಧೇಶ್ವರ ದೇವಸ್ಥಾನದ ಪಕ್ಕದಲ್ಲಿ ಹಳ್ಳ ಬಾರಾಮೈನಾ ಹರಿಯುತ್ತಿತ್ತು. ನಾವು ಚೊಣ್ಣವನ್ನು ಟವೆಲ್‌ನಲ್ಲಿ ಸುತ್ತಿಕೊಂಡು ಹಳ್ಳದೆಡೆಗೆ ದೌಡಾಯಿಸುತ್ತಿದ್ದೆವು. ಹರಿಯುವ ನೀರು ಸ್ವಚ್ಛವಾಗಿರುತ್ತಿತ್ತು. ಹಳ್ಳದಲ್ಲಿ ಅಂಗಾತ ಮಲಗಿದರೆ ಎದೆಯ ಮೇಲೆಲ್ಲ ನೀರು ಹರಿದು ಹೋಗುತ್ತಿತ್ತು. ಸೋಪಿನ ಬದಲು ಸಪಾಟಾದ ಕಲ್ಲಿನಿಂದ ಮೈ ತಿಕ್ಕಿಕೊಳ್ಳುತ್ತಿದ್ದೆವು. ತೋಟದ ಬಳಿ ಒಂದು ಕೊಡಗುಣಿ ಇತ್ತು. ಎದೆಮಟ ನೀರು ನಿಂತು ಮುಂದೆ ಹರಿದು ಹೋಗುತ್ತಿತ್ತು. ನಾವು ಹುಡುಗರು ಕೊಡಗುಣಿಗೆ ಜಿಗಿದು, ಮುಳಗಿ, ತೇಲಾಡಿ, ಈಜಾಡಿ ಕೂಗಾಡುತ್ತ ಆನಂದಿಸುತ್ತಿದ್ದೆವು. ಜಳಕದ ನಂತರ ಚೊಣ್ಣ, ಟವೆಲ್ ನುರಿಯಾಗಿ ಹಿಂಡಿ ಹೆಗಲ ಮೇಲೆ ಇಟ್ಟುಕೊಂಡು ಮನೆಗೆ ಬರುತ್ತಿದ್ದೆವು. ಆಗ ಹಸಿದ ಹಾವಿನಂತಾಗಿರುತ್ತಿದ್ದೆವು. ನಿನ್ನೆ ಮಾಡಿದ ತಂಗಳು ರೊಟ್ಟಿ, ಅದರ ಮೇಲೆ ಬಿಸಿ ಬಿಸಿ ಬದನೆಕಾಯಿ ಪಲ್ಲೆ ಹಾಕಿಕೊಂಡು ಮಾಡುತ್ತಿದ್ದ ನಮ್ಮ ನ್ಯಾರಿ ಅಮೃತ ಸಮಾನವಾಗಿರುತ್ತಿತ್ತು. ಹಸಿವೇ ರುಚಿ ಅಲ್ಲವೆ!

ಒಂದು ವಿಷಯವೆಂದರೆ, ಆಗ ನೀರಿನ ಬಳಕೆ ಹಿತಮಿತವಾಗಿರುತ್ತಿತ್ತು. ಮದುವೆ ಮುಂಜಿಗಳಿಗೆ ಹೋಗುವಾಗ ಒಂದು ತಂಬಿಗೆಯಲ್ಲಿ ಕುಡಿಯುವ ನೀರು ಒಯ್ಯುತ್ತಿದ್ದೆವು. ಉಂಡ ಮೇಲೆ ಒಯ್ದ ನೀರಿನಲ್ಲಿಯೇ ಕೈತೊಳೆದು ಉಳಿದ ನೀರು ಕುಡಿದು ಬರುತ್ತಿದ್ದೆವು. ನೀರಿನ ಪೋಲು ಎಂಬ ಮಾತೇ ಇರಲಿಲ್ಲ. ಈಗ ನೀರು ಪೋಲಾಗುತ್ತಿರುವುದನ್ನು ನೋಡಿ ಬೇಸರವೆನಿಸುತ್ತದೆ. ಇವೇ ನನ್ನ ಬಿಸಿಲ ಕಾಲದ ನೀರ ನೆನಪುಗಳು.
–ಜಯವಂತ ಕಾಡದೇವರ ಬನಹಟ್ಟಿ

ಈಜಲು ಹೋಗಿ ಬಾಸುಂಡೆ ಬಿತ್ತು
ನನಗಾಗ ಏಳೆಂಟು ವರ್ಷವಿರಬಹುದು. ಆಗ ಮನೆಯವರೆಲ್ಲರ ಕಣ್ತಪ್ಪಿಸಿ ಗೆಳೆಯರೊಡಗೂಡಿ ಗಾಣಿಗನ ಕೆರೆಗೆ ಈಜಲು ಹೋಗಿದ್ದೆವು. ಒಂದು ತಾಸು ನೀರಿನಲ್ಲಿ ಹೊರಳಾಡಿದ ನಂತರ ಮೈಗೆಲ್ಲಾ ಮೆತ್ತಿಕೊಂಡ ಕೆಸರು ತೊಳೆದುಕೊಂಡು ಅಮಾಯಕರಂತೆ ಮನೆಗೆ ಹೋಗುತ್ತಿದ್ದೆವು. ನಮ್ಮ ಈ ಘನ ಕಾರ್ಯ ಯಾರಿಗೂ ತಿಳಿಯುತ್ತಿರಲಿಲ್ಲ. ಸುಮಾರು ಒಂದು ವಾರದವರೆಗೂ ನಮ್ಮ ಈಜು ಕಾರ್ಯಕ್ರಮ ಯಾವುದೇ ವಿಘ್ನವಿಲ್ಲದೇ ಸಾಂಗವಾಗಿ ನೆರವೇರಿತು. ಅದೊಂದು ದಿನ ಕೆರೆಯಲ್ಲಿ ಈಜುತ್ತಿರುವಾಗ ನಮ್ಮ ಊರಿನ ರಮೇಶಣ್ಣನ ಕಣ್ಣಿಗೆ ಬಿದ್ದೆವು. ನಮ್ಮೆಲ್ಲರಿಗೂ ಗಾಬರಿ. ಮನೆಯಲ್ಲಿ ಹೇಳಿಬಿಟ್ಟರೆ ಕತೆ ಮುಗಿದಂತೆಯೇ. ಯಾರಿಗೂ ಹೇಳದಂತೆ ರಮೇಶಣ್ಣನಿಗೆ ಅಂಗಲಾಚಿದೆವು. ಅವನಿಂದ ಆಣೆ ಭಾಷೆ ಪ್ರಮಾಣ ಮಾಡಿಸಿಕೊಂಡೆವು.

ಆ ದಿನ ಭಯದಿಂದಲೇ ಹೊತ್ತು ಮುಳುಗುವ ಮುನ್ನವೇ ಮನೆ ಸೇರಿಕೊಂಡೆ. ಮುಸ್ಸಂಜೆ ಹೊತ್ತಲ್ಲಿ ಅಪ್ಪ ಲಗುಬಗೆಯಾಗಿ ಮನೆಗೆ ಬಂದಾಗ ನನ್ನ ಮುಖದಲ್ಲಿ ಆತಂಕ ಮನೆಮಾಡಿತ್ತು. ಅಪ್ಪನ ಮುಖವನ್ನು ನೋಡಲೂ ಭಯ. ಎಣಿಸಿದಂತೆಯೇ ಅಪ್ಪನಿಗೆ ನಾವು ಈಜಲು ಹೋದುದು ತಿಳಿದಿತ್ತು.  ಅಪ್ಪನ ಮುಖದಲ್ಲಿ ಕೋಪ ಮನೆಮಾಡಿತ್ತು. ಅಲ್ಲೇ ಇದ್ದ ಬಾರುಕೋಲನ್ನು ತೆಗೆದುಕೊಂಡಾಗ ನನ್ನ ಗಂಟಲು ಒಣಗತೊಡಗಿತು. ಬೆನ್ನಿನ ಮೇಲೆ ಚಟೀರ್ ಅಂತ ಬಿದ್ದ ಮೊದಲ ಏಟಿಗೆ ನನ್ನ ಚಡ್ಡಿಯೆಲ್ಲಾ ಒದ್ದೆಯಾಯಿತು, ನನ್ನ ಅಳುವಿನ ಶಬ್ದ ಕೇಳಿ ಅಮ್ಮ ಗಾಬರಿಯಿಂದ ಓಡಿ ಬಂದು ನನ್ನನ್ನು ಬಾಚಿ ತಬ್ಬಿದಳು. ಅಷ್ಟರಲ್ಲಿಯೇ ನನ್ನ ಬೆನ್ನು, ತೊಡೆಯ ಮೇಲೆ ಐದಾರು ಏಟುಗಳು ಬಿದ್ದಿದ್ದವು. ಅಪ್ಪನ ಗದರಿಕೆಗೆ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿ ಅಮ್ಮನ ಸೆರಗಿನಲ್ಲಿ ಮುಖ ಮುಚ್ಚಿಕೊಂಡು ಅಳತೊಡಗಿದೆ. ಅದ್ಯಾವಾಗ ನಿದ್ದೆ ಹತ್ತಿತೋ ತಿಳಿಯದು. ಮತ್ತೆ ಎದ್ದಾಗ ಏಟುಗಳು ಕೆಂಪಾಗಿ ನೋಯುತ್ತಿದ್ದವು. ಅಮ್ಮ  ನೋಯುತ್ತಿರುವ ಗಾಯಗಳಿಗೆ ಕೊಬ್ಬರಿ ಎಣ್ಣೆ ಮಿಶ್ರಿತ ಅರಿಶಿಣವನ್ನು ಹಚ್ಚುತ್ತಾ ದೊಡ್ಡವನಾಗುವವರೆಗೆ ಯಾರಿಗೂ ಹೇಳದೆ ಈಜಲು ಹೋಗಬೇಡ ಎಂದು ಹೇಳುವಾಗ ಗಾಯವನ್ನೇ ದಿಟ್ಟಿಸುತ್ತಾ ಹೂಂಗುಡುತ್ತಿದ್ದೆ.
–ಗಣೇಶ ಆರ್ ಮಂಗಳೂರು

ಸಾವು ಬದುಕಿನೊಡನೆ ಹೋರಾಡಿಸಿದ ನೀರು
ನಮ್ಮೂರಿಗೂ ಬರಗಾಲಕ್ಕೂ ಅವಿನಾಭಾವ ನಂಟು. ಕೊಡ ಹಿಡಿದು ಬಾವಿಗಳನ್ನು ಮೆಟ್ಟಿಲೇರಿ ಇಳಿದು ನೀರು ತುಂಬಿ ತರಬೇಕು. ಬಾವಿ ಬಾವಿಗೆ ಅಲೆಯಬೇಕು. ತುಂಬಿರುತ್ತಿದ್ದ ಕೆರೆ ಬಾವಿಗಳು ಕಾಲಾನಂತರ ಒಣಗಿ ಕುಡಿವ ನೀರಿಗಿದ್ದ ಬರ, ಬಳಕೆ ನೀರಿಗೂ ಬಂತು. ರಾತ್ರಿ ಹಗಲೆನ್ನದೇ ನಿದ್ದೆ, ನೀರಡಿಕೆ ಎನ್ನದೇ ನೀರನ್ನು ತರುವುದು ಸರ್ವೇಸಾಮಾನ್ಯ ಸ್ಥಿತಿ. ಬದುಕು ಅಸಹನೀಯವಾಯ್ತು. ನೀರಿನ ಹಾಹಾಕಾರ ನಮ್ಮೂರಿಗೂ, ನನಗೂ ಮರೆಯಲು ಸಾಧ್ಯವೇ ಇಲ್ಲ!

ನನಗಂತೂ ಪ್ರತಿವರ್ಷ ಎರಡೆರಡು ಕೊಡ ಹೊತ್ತು ಸಾಕಾಗಿತ್ತು. ಬರದ ಹಾದಿ ಸಾಗಿ 2012–13ರಲ್ಲಿ ತೀವ್ರವಾಗಿತು. ಹದಗೆಟ್ಟ ರಸ್ತೆ, ತಗ್ಗು ದಿನ್ನೆಗಳು ಹೊಸ ರೂಪ ಕೊಡಲು ರಿಪೇರಿ ನಡೆದಿತ್ತು. ಹಾಗೇ ಒಮ್ಮೆ ನೀರು ಹೊರಲು ನಡೆದಿದ್ದೆ. ನನ್ನ ಎಡ ಪಾದದ 2 ಬೆರಳು ಮುರಿದು ಬ್ಯಾಂಡೇಜ್ ಬಿದ್ದಿತ್ತು. ಫೆಬ್ರುವರಿಯಲ್ಲಿ ಗ್ರಾಮದೇವಿ ಜಾತ್ರೆ ನಡೆದಿತ್ತು. ಎರಡೆರಡು ಕೊಡ ನೀರು ಹೊತ್ತು ನನ್ನ ಸೊಂಟ, ಬೆನ್ನು ನೋವು ಮೀತಿ ಮೀರಿ, ಒಂದು ದಿನ ಬೆನ್ನು ಹುರಿ, ನರ ಹರಿದು ಬಿಟ್ಟಿತು. ಎದ್ದು ನಿಲ್ಲಲಾಗದು. ಪ್ರಾಣಿಗಳಂತೆ ಕಾಲು ಕೈ ಹಚ್ಚಿ ನಡೆದೆ. ನೋವಿನಿಂದ ನಾನು ಅಳುತ್ತ ದವಾಖಾನೆ ಸೇರಿದೆ. ಒಂದೂವರೆ ತಿಂಗಳು ಆಸ್ಪತ್ರೆ ಸೇರಿ ಲಕ್ಷಗಟ್ಟಲೆ ಸುರಿದು ಹೊರಳಾಡುತ್ತಿದ್ದೆ.

ಡಾಕ್ಟರರು ಏನಾಗಿದೆ ಅಂತ ಹೇಳಲಿಲ್ಲ. ಮೂರು ತುತ್ತು ಅನ್ನ ತಿನ್ನುವುದು ಅಸಹನೀಯವಾಗಿತ್ತು. ಸೀರಿಯಸ್, ಬದುಕುವುದಿಲ್ಲ ಎನ್ನುವವರೇ ಹೊರತು ಏನಾಗಿದೆ ಅಂತ ತಿಳಿಸಲಿಲ್ಲ. ಒಂದು ದಿನ ಡಾಕ್ಟರರು ಮರುಕಗೊಂಡು ಬೇರೆ ನರತಜ್ಞರನ್ನು ಭೇಟಿಯಾಗಿ ಎಂದರು. ಕೂಡಲೇ ಡಿಸ್ಚಾರ್ಜ್ ಮಾಡಿಸಿಕೊಂಡು ಹುಬ್ಬಳ್ಳಿಯ ಡಾಕ್ಟರಲ್ಲಿಗೆ ಹೋದ್ವಿ. ನನ್ನ ಸ್ಥಿತಿ ನೋಡಿ ನೀನು ಬದುಕಿದ್ದೆ ದೊಡ್ಡದು ಅಂತ ಆಡ್ಮಿಟ್ ಆಗಲು ಹೇಳಿ ಎಲ್ಲ ಪರೀಕ್ಷೆ ಮಾಡಿಸಿ ಸ್ಕ್ಯಾನಿಂಗ್ ಮಾಡಿಸಿರಿ ಎಂದರು. ಅದರಲ್ಲಿ ನನ್ನ ಬೆನ್ನು ನರ ಹರಿದಿತ್ತು. ಆಪರೇಷನ್ ಮೇಜರ್, ಆರಾಂ ಆಗ್ತಾಳೆ ಅಂತ ತಿಳಿಸಿದರು. ಸಾಯಂಕಾಲ 3 ತಾಸು ಆಪರೇಷನ್ ಮಾಡಿದರು. ನಾನು ಮತ್ತೆ ಬದುಕಿ ಬಂದೆ. 2 ಮೀಟರ್ ನರ ಕತ್ತರಿಸಿ ಜೋಡಿಸಿದ್ದರು. ಕಾಳಜಿಯಿಂದ ಬದುಕಲು ತಿಳಿಸಿ ಔಷಧೋಪಚಾರ, ಒಂದು ವರ್ಷ ಬೆಡ್ ರೆಸ್ಟ್ ಮಾಡುವಂತಾಯ್ತು.

ಈಗ 3 ವರ್ಷ ಕಳೆದಿದೆ. ಅಡ್ಡಾಡುತ್ತೇನೋ ಇಲ್ಲವೋ ಎಂಬಂತಿದ್ದ ನಾನು ಈಗ ಸ್ವತಂತ್ರವಾಗಿ ಓಡಾಡುತ್ತೇನೆ. ನೀರಿಗಾಗಿ ಇಷ್ಟೆಲ್ಲಾ ಅನುಭವಿಸುವಂತಾಗಿತ್ತು. ನೀರ ಬರದಿಂದ ನಾನು ಬದುಕಿ ಬಂದೆ ಅನ್ನೋದೇ ಎಂದಿಗೂ ಮರೆಯಲಾಗದ ನೆನಪು.
– ರೇಖಾ ವಿ. ದೇಶಪಾಂಡೆ ಶಿಗ್ಗಾಂವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT