ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆದಾದರೂ ಗುರಿ ಮುಟ್ಟಿ…

Last Updated 24 ಮೇ 2017, 19:30 IST
ಅಕ್ಷರ ಗಾತ್ರ

ಕೃಷಿ ಯಂತ್ರೋಪಕರಣಗಳ ತಯಾರಿಕೆಯಲ್ಲಿ ನಿರತರಾಗಿರುವ ಯುವತಿ ದೇವಿ ಮೂರ್ತಿ ಅವರ ಸಾಧನೆಯ ಕಥೆ ಇದು. ಬೆಂಗಳೂರಿನ ದೇವಿ ಮೂರ್ತಿ ಅಮೆರಿಕದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಭಾರತಕ್ಕೆ ಮರಳಿದ ಬಳಿಕ ‘ಕಮಲ ಕಿಸಾನ್’ ಎಂಬ ಕಂಪೆನಿ ಆರಂಭಿಸಿ ರೈತರಿಗೆ ಕೃಷಿ ಯಂತ್ರಗಳನ್ನು ತಯಾರಿಸಿಕೊಡುತ್ತಿದ್ದಾರೆ.

ದೇವಿ ಅವರ ಪೋಷಕರು 80ರ ದಶಕದಲ್ಲಿ ‘ಕಮಲ ಬೆಲ್’ ಎಂಬ ಸ್ಟೀಲ್ ಉದ್ಯಮವನ್ನು ಪ್ರಾರಂಭ ಮಾಡಿದ್ದರು. ಆಗ ಈಕೆ ಚಿಕ್ಕ ಹುಡುಗಿ! ಮನೆಯಲ್ಲಿ ಯಾವಾಗಲೂ ಬ್ಯುಸಿನೆಸ್ ಮಾತುಕತೆ ನಡೆಯುತ್ತಿತ್ತು. ಮಲಗುವಾಗ ಮತ್ತು ಊಟ ಮಾಡುವಾಗ ಸಹ ಕಂಪೆನಿಯನ್ನು ಬೆಳೆಸುವ ರೀತಿ, ಲಾಭ, ನಷ್ಟದ ಲೆಕ್ಕಚಾರದ ಬಗ್ಗೆ ಅವರ ಅಪ್ಪ, ಅಮ್ಮ ಮಾತನಾಡುತ್ತಿರುವುದನ್ನು ಕೇಳಿಸಿ ಕೊಳ್ಳುತ್ತಿದ್ದರು. ಅಂತಹ ವಾತಾವರಣದಲ್ಲಿ ಬೆಳೆದಿದ್ದು, ಇಂದು ಅವರು ಕಂಪೆನಿಯೊಂದನ್ನು ಹುಟ್ಟುಹಾಕಲು ನೆರವಾಗಿದೆ.

ಅಮೆರಿಕದಿಂದ ಮರಳಿದ ಬಳಿಕ ಬೆಂಗಳೂರಿನಲ್ಲಿ ಐಐಎಂ ಪದವಿಗೆ ಸೇರಿದರು. ಕ್ಯಾಂಪಸ್‌ನಲ್ಲಿ ನಡೆಯುತ್ತಿದ್ದ ಕೃಷಿ ಮೇಳದಿಂದ ಸ್ಫೂರ್ತಿ ಪಡೆದು ಉದ್ಯಮ ಆರಂಭಿಸುವ ಬಗ್ಗೆ ಯೋಚನೆ ಮಾಡಿದರು. ಇದಕ್ಕೆ ಗೆಳೆಯರು ಸಾಥ್ ನೀಡಿದರು. ಕೃಷಿ ವಿಶ್ವವಿದ್ಯಾಲಯಗಳು ಮತ್ತು ರೈತರನ್ನು ಭೇಟಿ ಮಾಡಿದರು. ರೈತಾಪಿ ಜನರಿಗೆ ಅವಶ್ಯಕವಾಗಿ ಬೇಕಾಗಿರುವ ಯಂತ್ರೋಪಕರಣಗಳ ಬಗ್ಗೆ ತಿಳಿದರು. ಹಾಗೇ ಕೃಷಿ ಕಾರ್ಮಿಕರ ಕೊರತೆ ಇರುವುದನ್ನು ಮನಗಂಡರು. ಹಾಗಾಗಿ ಕೃಷಿ ಚಟುವಟಿಕೆಗಳಿಗೆ ಅವಶ್ಯಕವಾಗಿ ಬೇಕಾಗುವ ಯಂತ್ರಗಳನ್ನು ತಯಾರಿಸುವ ಯೋಜನೆ ರೂಪಿಸಿದರು.

ಕೇವಲ 5 ಲಕ್ಷ ರೂಪಾಯಿ ಬಂಡವಾಳದಲ್ಲಿ ‘ಕಮಲ ಕಿಸಾನ್’ ಕಂಪೆನಿ ಸ್ಥಾಪಿಸಿದರು. ಕಬ್ಬು ಕಟಾವು ಮಾಡುವ ಯಂತ್ರ, ಬಿತ್ತನೆ ಯಂತ್ರ, ಭತ್ತ ನಾಟಿ ಮಾಡುವ ಯಂತ್ರಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ರೈತರಿಗೆ ಕಾರ್ಮಿಕರ ಹೊರೆಯ ತಪ್ಪಿಸಿ ಸರಳವಾಗಿ ಕೃಷಿ ಮಾಡುವ ಉದ್ದೇಶದೊಂದಿಗೆ ಕಮಲ ಕಿಸಾನ್ ಸಂಸ್ಥೆ ಆರಂಭವಾಗಿದೆ ಎಂದು ದೇವಿ ಮೂರ್ತಿ ಹೇಳುತ್ತಾರೆ. 
http://kamalkisan.com

**

ಗೌರಿ ಸಾವಂತ್

ತೃತೀಯ ಲಿಂಗಿಗಳಿಗೆ ಸಾಮಾಜಿಕ ಭದ್ರತೆ, ಸಮಾನತೆ, ಉದ್ಯೋಗ ಕಲ್ಪಿಸಿಕೊಡುವಂತೆ ಹೋರಾಟ ನಡೆಸುತ್ತಿದ್ದಾರೆ ಗೌರಿ ಸಾವಂತ್. ಮುಂಬೈ ನಿವಾಸಿಯಾಗಿರುವ ಅವರು ಪದವಿ ಪೂರೈಸಿದ್ದಾರೆ. ತೃತೀಯ ಲಿಂಗಿಯಾಗಿ ಪರಿವರ್ತನೆಯಾಗಿರುವ ಗೌರಿ, ಈ ಸಮುದಾಯದ ಹಕ್ಕುಗಳಿಗಾಗಿ ಹತ್ತು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಅದಕ್ಕಾಗಿ ಸ್ವಯಂ ಸೇವಾ ಸಂಸ್ಥೆ ಕಟ್ಟಿದ್ದಾರೆ.

ಭಿಕ್ಷಾಟನೆ ಮತ್ತು ಲೈಂಗಿಕ ವೃತ್ತಿ ನಡೆಸುತ್ತಿರುವ ತೃತೀಯ ಲಿಂಗಿಗಳಿಗೆ ಸಾಮಾಜಿಕ ಭದ್ರತೆ ಇಲ್ಲವಾಗಿದೆ. ಸರ್ಕಾರದ ಯಾವ ಸವಲತ್ತುಗಳು ಇಲ್ಲವಾಗಿವೆ. ಕೆಲವು ಸಾಮಾಜಿಕ ಸಂಸ್ಥೆಗಳ ನೆರವಿನೊಂದಿಗೆ ಇಂದು ಸರ್ಕಾರದಿಂದ ಕೆಲ ಮೂಲ ಸೌಲಭ್ಯಗಳನ್ನು ಪಡೆಯುವಂತಾಗಿದೆ ಎಂದು ಗೌರಿ ಹೇಳುತ್ತಾರೆ. ಮೊದಲು ಮತದಾನದ ಹಕ್ಕು ಇರಲಿಲ್ಲ! ಇದೀಗ ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಮತದಾನದ ಹಕ್ಕನ್ನು ಕಲ್ಪಿಸಲಾಗಿದೆ.

ಉದ್ಯೋಗ ಮೀಸಲಾತಿ, ವಸತಿ, ಪಡಿತರ ಸೌಕರ್ಯದಿಂದ ಲಕ್ಷಾಂತರ ತೃತೀಯ ಲಿಂಗಿಗಳು ವಂಚಿತರಾಗಿದ್ದಾರೆ ಎಂದು ಆರೋಪಿಸುತ್ತಾರೆ. ತೃತೀಯ ಲಿಂಗಿಗಳು ಗೌರವಯುತವಾಗಿ ಜೀವನ ನಡೆಸುವಂತಹ ಸೌಕರ್ಯಗಳನ್ನು ಸರ್ಕಾರ ಕಲ್ಪಿಸಬೇಕು. ಇದರ ಜತೆ, ಜನರ ದೃಷ್ಟಿಕೋನ ಬದಲಾದಾಗ ಮಾತ್ರ ನಾವು ಸಮಾಜದ ಮುಖ್ಯವಾಹಿನಿಯಲ್ಲಿ  ಜೀವನ ನಡೆಸಲು ಸಾಧ್ಯ ಎನ್ನುತ್ತಾರೆ.

ಗೌರಿ ಅವರ ಹೋರಾಟವನ್ನು ಗಮನಿಸಿದ ವಿಕ್ಸ್ ಕಂಪೆನಿ ಅವರಿಗೆ ಜಾಹೀರಾತಿನಲ್ಲಿ ನಟಿಸುವ ಅವಕಾಶ ನೀಡಿದೆ. ಹೆಣ್ಣು ಮಗುವನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಅವರ ಹೋರಾಟ ಗುರುತಿಸಿ ದೇಶದ ಹಲವಾರು ಸಂಘ ಸಂಸ್ಥೆಗಳು ಅವರನ್ನು ಗೌರವಿಸಿವೆ.

www.facebook.com/tggaurisawant/

**

ಜಾಹ್ನವಿ ಷರೀಫ್‌

ಅತಿ ಕಿರಿಯ ವಯಸ್ಸಿಗೆ ‘ಬ್ಲಡ್ ಮೂನ್’ ಎಂಬ ನೃತ್ಯ ಪ್ರಕಾರವನ್ನು ಹುಟ್ಟುಹಾಕಿ ವಿಶ್ವ ನೃತ್ಯ ಪ್ರಿಯರ ಮನಗೆದ್ದಿರುವ ಯುವತಿ ಜಾಹ್ನವಿ ಷರೀಫ್‌ ಅವರ ಸಾಧನೆಯ ಕಥೆ ಇದು. ಮುಂಬೈನವರಾದ ಜಾಹ್ನವಿ ಅವರಿಗೆ ನೃತ್ಯವೆಂದರೆ ಭಾವವನ್ನು ಉದ್ದೀಪನಗೊಳಿಸುವಂತಹ ಹವ್ಯಾಸ. ಚಿಕ್ಕ ವಯಸ್ಸಿನಲ್ಲೇ ನೃತ್ಯ ಕಲಿಕೆ ಆರಂಭಿಸಿದರು. ಸಾಂಪ್ರದಾಯಿಕ ಶಿಕ್ಷಣಕ್ಕೆ ಗುಡ್ ಬೈ ಹೇಳಿ ನೃತ್ಯ ಶಿಕ್ಷಣ ಪಡೆದದ್ದು ವಿಶೇಷ.

ಭರತನಾಟ್ಯ ಕಲಿತು, ಪಾಶ್ಚಿಮಾತ್ಯ ನೃತ್ಯ ಅಭ್ಯಾಸ ಮಾಡಲು ಅಮೆರಿಕಕ್ಕೆ ತೆರಳಿದರು. ಅಲ್ಲಿಂದ ಪ್ಯಾರಿಸ್, ತೈಪೆ, ಜಮೈಕಾದಲ್ಲೂ ವಿವಿಧ ಪ್ರಕಾರದ ನೃತ್ಯವನ್ನು ಕಲಿತು ಭಾರತಕ್ಕೆ ಮರಳಿದರು.

ಜಮೈಕಾದಲ್ಲಿ ಇರುವಾಗ ‘ಬ್ಲಡ್ ಮೂನ್’ ಎಂಬ ಹೊಸ ನೃತ್ಯ ಪ್ರಕಾರವನ್ನು ಹುಟ್ಟು ಹಾಕಿದರು. ಈ ನೃತ್ಯ ಪ್ರಕಾರ ‘ಗಂಗ್ನಮ್ ಸ್ಟೈಲ್’ ಮಾದರಿಯಷ್ಟೇ ಜನಪ್ರಿಯಗೊಂಡಿದ್ದು ವಿಶೇಷ.


ಸದ್ಯ ಮುಂಬೈನಲ್ಲಿ ನೆಲೆಸಿರುವ ಅವರು ‘ಡ್ಯಾನ್ಸ್ ಹಾಲ್’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ನೃತ್ಯವನ್ನು ಕಲಿಸುತ್ತಿದ್ದಾರೆ. ಇದರ ಜತೆಯಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಈ ಡ್ಯಾನ್ಸ್ ಹಾಲ್‌ನಲ್ಲಿ ಭರತನಾಟ್ಯ, ಯೋಗ, ಪಾಶ್ಚಿಮಾತ್ಯ ಮತ್ತು ದೇಶಿಯ ನೃತ್ಯದ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಎಲ್ಲರೂ ಸುಲಭವಾಗಿ ಹೆಜ್ಜೆ ಹಾಕಬಹುದು, ಆದರೆ ಆಕರ್ಷಣೀಯವಾಗಿ ಹೊಸ ಹೊಸ ಸ್ಟೈಲ್‌ನಲ್ಲಿ ಹೆಜ್ಜೆ ಹಾಕುವುದಕ್ಕೂ ಪ್ರತಿಭೆ ಇರಬೇಕು ಎಂದು ಅವರು ಹೇಳುತ್ತಾರೆ. ಹಾಲಿವುಡ್‌ನ ಮೂರು ಸಿನಿಮಾಗಳಿಗೆ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಉನ್ನತವಾದುದನ್ನು ಸಾಧಿಸಬೇಕು ಎಂಬ ಗುರಿ ಜಾಹ್ನವಿ ಅವರದಾಗಿದೆ.
www.facebook.com/jahnavi.sheriff

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT