ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಾಡುವ ಪುಸ್ತಕಗಳು

ಅಕ್ಷರ ಗಾತ್ರ

ಹ್ಯೂಮನ್ ಲೈಬ್ರರಿ. ಹೆಸರು ನೋಡಿ ಹುಬ್ಬೇರಿಸಿ ಒಳಗೆ ಹೋದ ವ್ಯಕ್ತಿಗೆ ಮೊದಲು ಕಂಡಿದ್ದು ಕಪ್ಪು ಬೋರ್ಡ್‌ ಮೇಲಿನ ಪುಸ್ತಕಗಳ ಪಟ್ಟಿ. ಗಿಜಿಗುಡುವ ಶಬ್ದದ ನಡುವೆಯೇ ಪುಸ್ತಕದ ಹೆಸರೊಂದನ್ನು ಗಟ್ಟಿಯಾಗಿ ಹೇಳಿ ಆ ಬದಿ ಕೂತು ಪುಸ್ತಕ ಎದುರು ನೋಡುತ್ತಿದ್ದಾಗ ಮುಂದೆ ಬಂದು ನಿಂತದ್ದು ವ್ಯಕ್ತಿ. ‘ಐ ಆಮ್ ದಿ ಚೇನ್ಸ್ ಆಫ್ ಫ್ರೀಡಂ’ ಎನ್ನುತ್ತಾ, ಕೈ ಕುಲುಕಿ ನಗುತ್ತಾ ಕುಳಿತ ‘ಆ’ ಪುಸ್ತಕ ಮಾತನಾಡಲು ಶುರು ಮಾಡಿತು. ಈತ ಕಿವಿಯಾದ...

ಹೀಗೆ ಕಥೆಗೆ ಕಿವಿಯಾಗುವುದು ಈ ಲೈಬ್ರರಿಯಲ್ಲಿನ ಜೀವಂತಿಕೆ. ಇಲ್ಲಿ ವ್ಯಕ್ತಿಗಳೇ ಜೀವಂತ ಪುಸ್ತಕಗಳು. ಅವರ ಅನುಭವಗಳಿಂದ ಬಂದ ವಿಚಾರ ಧಾರೆಗಳು ಕಥೆಯಾಗುತ್ತವೆ, ನಿಮ್ಮೊಳಗಿನ ಕಥೆಯನ್ನೂ ಕೆದಕುತ್ತವೆ!

ಪುಸ್ತಕ ಓದುವ ಅನುಭವಕ್ಕೆ ಹೊಸ ಆಯಾಮ ನೀಡಿರುವುದು ಈ ಹ್ಯೂಮನ್ ಲೈಬ್ರರಿ. ಇದೇನು ನಿನ್ನೆ ಮೊನ್ನೆ ಹುಟ್ಟಿಕೊಂಡ ಪರಿಕಲ್ಪನೆಯಲ್ಲ. ಇದಕ್ಕೆ ಹದಿನೇಳು ವರ್ಷಗಳ ಹಿಂದಿನ ಚಳವಳಿಯೊಂದರ ನಂಟಿದೆ.

ಡೆನ್ಮಾರ್ಕ್‌ನ ಕೋಪನ್ ಹೇಗನ್‌ನಲ್ಲಿ ‘ಸ್ಟಾಪ್ ದಿ ವೈಲನ್ಸ್’ ಚಳವಳಿಯ ಹೊಸ ರೂಪದಂತೆ ‘ಹ್ಯೂಮನ್ ಬುಕ್‌ಗಳು’ ರೂಪುಗೊಂಡವು. ತಮ್ಮೊಳಗಿನ ಭಾವಗಳನ್ನು ಜನರಿಗೆ ಪರಿಣಾಮಕಾರಿಯಾಗಿ ದಾಟಿಸುವ ಹೊಸ ಮಾರ್ಗವಾಗಿ ಈ ‘ಮಾತನಾಡುವ ಪುಸ್ತಕಗಳು’ ದನಿ ಎತ್ತಿದವು. ಇದರ ರೂವಾರಿ ರಾನಿ ಅಬರ್ಜಲ್ ಎಂಬಾತ. ಆ ಎರಡೇ ದಿನದಲ್ಲಿ 50 ಪುಸ್ತಕಗಳು ಹುಟ್ಟಿಕೊಂಡಿದ್ದವು. ಈ ಹ್ಯೂಮನ್ ಬುಕ್‌ಗಳು ಪರಿಣಾಮಕಾರಿ ಸಂವಹನ ಎಂಬುದು ಸಾಬೀತಾದ ನಂತರ ಸುಮಾರು 60 ದೇಶಗಳಲ್ಲಿ ಈ ಸಂವಹನ ಮಾಧ್ಯಮ ವಿಸ್ತರಿಸಿಕೊಂಡಿತು. ಆಸ್ಟ್ರೇಲಿಯಾದಲ್ಲಿ ಶಾಶ್ವತ ಹ್ಯೂಮನ್ ಲೈಬ್ರರಿಯೂ ತೆರೆದುಕೊಂಡಿತು.

ಇದೇ ಮಾಹಿತಿ, ಹೈದರಾಬಾದ್‌ನ ಅನ್ನಪೂರ್ಣ ವಿಶ್ವವಿದ್ಯಾಲಯದಲ್ಲಿ ಮೀಡಿಯಾ ಬಿಸಿನೆಸ್‌ ಅಡ್ಮಿನಿಸ್ಟ್ರೇಷನ್‌ನಲ್ಲಿ ಓದುತ್ತಿರುವ ಹರ್ಷದ್‌ ದಿನಕರ್ ಫಾದ್‌ನ ನಿದ್ದೆ ಕೆಡಿಸಿದ್ದು. ಯುರೋಪಿನಾದ್ಯಂತ ಪ್ರಚಲಿತದಲ್ಲಿರುವ ಈ ಮಾನವ ಪುಸ್ತಕಗಳನ್ನು ಭಾರತದಲ್ಲೂ ಪರಿಚಯಿಸುವ ಹುಡುಕಾಟದ ಬೆನ್ನು ಹತ್ತಿ ಹೋದ ಫಾದ್‌ಗೆ, ಕಳೆದ ವರ್ಷ ಇಂದೋರ್‌ನಲ್ಲಿ ಹ್ಯೂಮನ್ ಲೈಬ್ರರಿಯ ಕಾರ್ಯಕ್ರಮ ನಡೆದಿರುವ ಮಾಹಿತಿ ದೊರೆತಿತ್ತು. ಅದೇ ಜಾಡಿನಲ್ಲಿ  ಮಾಹಿತಿಗಳನ್ನು ಕಲೆ ಹಾಕಿ, ಹೈದರಾಬಾದ್‌ನಲ್ಲೂ ಹ್ಯೂಮನ್ ಲೈಬ್ರರಿ ಪರಿಚಯಿಸುವ ಸಿದ್ಧತೆ ಮಾಡಿಕೊಂಡರು. ಎರಡು ತಿಂಗಳ ಹಿಂದಷ್ಟೇ  ಹೈದರಾಬಾದ್‌ನ ಫಿನಿಕ್ಸ್ ಅರೆನಾ ಹೈಟೆಕ್‌ ಸಿಟಿಯಲ್ಲಿ ಲೈಬ್ರರಿಯ ಮೊದಲ ಕಾರ್ಯಕ್ರಮ ಆರಂಭಗೊಂಡಿತು.

ಕಲ್ಪನೆ, ಕಾದಂಬರಿ, ವಿಮರ್ಶೆಯಲ್ಲ
ಸರ್ವೈವಿಂಗ್ ಡೊಮೆಸ್ಟಿಕ್ ವೈಲನ್ಸ್ ಅಂಡ್ ಸೆಲ್ಫ್‌ ಲೋದಿಂಗ್ ನಾರ್ಸಿಸಿಸ್ಟ್, ಟ್ರಾಫಿಕಿಂಗ್ ರಿಹಾಬಿಲಿಟೇಷನ್ ಎನೇಬ್ಲರ್,
ಎ ಮ್ಯಾನ್ಸ್ ಜರ್ನಿ ಟು ದಿ ಎಪಿಟೋಮ್ ಆಫ್ ಗ್ರೇಸ್, ದಿ ಎಕ್ಸ್‌ಪಿರಿಯನ್ಸಸ್ ಆಫ್ ಎ ಮೇಲ್ ಡಾನ್ಸರ್ ವು ಇಂಪರ್ಸೊನೇಟ್ಸ್ ಆ್ಯಸ್ ಎ ವುಮನ್, ಚೇನ್ಸ್ ಆಫ್ ಫ್ರೀಡಂ, ದಿ ಟೇಲ್ಸ್ ಆಫ್ ಎ ಟ್ರಾವೆಲರ್ ವು ವಾಂಟ್ಸ್ ನೇಷನ್ಸ್ ಫ್ರೀಡ್ ಆಫ್ ಬಾರ್ಡರ್ಸ್, ಲೈಫ್ ಇನ್ ಎ ಆಲಿವ್ ಗ್ರೀನ್, ದಿ ಸ್ಟೋರೀಸ್ ಆಫ್ ಆರ್ಮಿ ಮ್ಯಾನ್... ಹೀಗಿವೆ ಪುಸ್ತಕಗಳ ಶೀರ್ಷಿಕೆಗಳು. ಒಂದೊಂದೂ ಒಂದೊಂದು ಕಥೆಯನ್ನು ಹೇಳುವಂಥವು. ಸಾಮಾಜಿಕ ವಿಷಯಗಳು ಈ ಲೈಬ್ರರಿಯ ಪುಸ್ತಕಗಳ ತಿರುಳು.

ಹಾಗಿದ್ದರೆ ಯಾರು ಬೇಕಾದರೂ ಪುಸ್ತಕವಾಗಬಹುದಾ ಎಂಬ ಪ್ರಶ್ನೆ ತೂರುತ್ತಿದ್ದಂತೆ, ಫಾದ್ ಉತ್ತರ ಕೊಟ್ಟಿದ್ದು ಹೀಗಿತ್ತು...

‘ಜನಾಂಗ, ಲಿಂಗ, ವಯಸ್ಸು, ವೈಕಲ್ಯ, ಲೈಂಗಿಕ ಆದ್ಯತೆ, ಧರ್ಮ/ನಂಬಿಕೆ, ವರ್ಗ, ಜೀವನಶೈಲಿಯ ಆಯ್ಕೆ ಇವುಗಳಲ್ಲಿ ಕೆಲವು ಪೂರ್ವಗ್ರಹಗಳನ್ನು ಎದುರಿಸಿದ, ಅದಕ್ಕೆ ಸವಾಲಾದ ವ್ಯಕ್ತಿಗಳು ಇಲ್ಲಿ ಪುಸ್ತಕಗಳಾಗುತ್ತಾರೆ. ಸಮುದಾಯದ ಸಮಸ್ಯೆಯೊಂದನ್ನು ವೈಯಕ್ತಿಕ ಅನುಭವಗಳ ಮೂಲಕ ಓದುಗರೊಂದಿಗೆ ಗೌರವಯುತವಾಗಿ ತಮ್ಮನ್ನು ತೆರೆದುಕೊಳ್ಳುವ, ಜಾಗೃತಿ ಮೂಡಿಸುವ ಒಂದು ಅಂತರ್‌ ವ್ಯಕ್ತಿಗಳ ಸಂವಹನ ಕಲೆಯಿದು. ಸಮಾಜವನ್ನು ವಿಶಾಲ ದೃಷ್ಟಿಕೋನದಿಂದ ನೋಡುವ ಪ್ರಯತ್ನ ಈ ಲೈಬ್ರರಿಯಿಂದ ನಡೆಯುತ್ತದೆ’ ಎಂದು ವಿವರಿಸಿದರು ಫಾದ್.

ಒಂಬತ್ತು ವರ್ಷದ ಮಕ್ಕಳಿಂದ ಹಿಡಿದು ಎಂಬತ್ತು ವಯಸ್ಸು ದಾಟಿದವರೂ ಬರುತ್ತಾರೆ. ಅನುಭವದಿಂದ ಬಂದ ಹತ್ತಾರು ಕಥೆಗಳು ಇಲ್ಲಿವೆ. ನೀವು ಪುಸ್ತಕದ ­ವಿಚಾರಗಳನ್ನು ಒಪ್ಪಲೇಬೇಕೆಂಬ ಒತ್ತಾಯವೇನಿಲ್ಲ. ಈ ಲೈಬ್ರರಿ ಉದ್ದೇಶ ಅಡಗಿರುವುದೇ ಇನ್ನೊಬ್ಬರ ಭಿನ್ನತೆಗಳನ್ನು ಅದೇ ನೆಲೆಗಟ್ಟಿನಲ್ಲಿ ನೋಡುವುದು. ವಿಚಾರವನ್ನು ವೈಯಕ್ತಿಕವಾಗಿ ಒಪ್ಪುತ್ತೀರೋ ಇಲ್ಲವೋ, ಆದರೆ ಅವುಗಳನ್ನು ಗೌರವದಿಂದ ಕಾಣುವಂತೆ ಮಾಡುವ ಮೂಲ ಉದ್ದೇಶದಿಂದ ಹ್ಯೂಮನ್ ಲೈಬ್ರರಿ ಕೆಲಸ ನಿರ್ವಹಿಸುತ್ತಿದೆಯಂತೆ.

‘ನಾಲೆಡ್ಜ್ ಶೇರಿಂಗ್’ ಪರಿಕಲ್ಪನೆಯನ್ನು ಹೊಸ ಧಾಟಿಯಲ್ಲಿ  ದಾಟಿಸುವ ಪ್ರಯತ್ನ ‘ಹ್ಯೂಮನ್ ಲೈಬ್ರರಿ’ ಯದ್ದು ಎಂದು ಅವರು ಹೇಳದೇ ತಿಳಿಯುತ್ತಿತ್ತು.
ಬಹುಸಂಸ್ಕೃತಿಯನ್ನು ಒಡಲಲ್ಲಿಟ್ಟುಕೊಂಡಿರುವ ಭಾರತದಂಥ ದೇಶದಲ್ಲಿ ದಿನನಿತ್ಯ ಎದುರಾಗುವ ಸಾಮಾಜಿಕ ಸಮಸ್ಯೆಗಳು, ಪೂರ್ವಗ್ರಹಗಳು, ಸಮಾಜದ ಸಿದ್ಧಮಾದರಿಗಳಾಚೆಗಿನ ಬದುಕಿನ ಗೊಂದಲಗಳು, ಕಳಂಕಗಳನ್ನು ಹೊತ್ತುಕೊಂಡು ತಿರಸ್ಕೃತರಾಗಿಯೇ ಉಳಿಯುವ ಜೀವನ, ಇವೆಲ್ಲದರ ಅನುಭವಕ್ಕೆ ತೆರೆದುಕೊಂಡವರು ಇಲ್ಲಿನ ಪುಸ್ತಕಗಳು.

‘ಉದಾಹರಣೆಗೆ, ‘ಗೇ’ಗಳ ವಿಚಾರವನ್ನೇ ತೆಗೆದುಕೊಳ್ಳಿ. ಅವರನ್ನು ನಾವು ಎಷ್ಟು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇವೆ? ನಮ್ಮ ಸಮಾಜದಲ್ಲಿ ಅದು ಸಾಧ್ಯವಾಗಿದೆಯೇ? ಒಂದು ಸಮುದಾಯವನ್ನು ತಮಗಿಂತ ಭಿನ್ನ ಎಂಬ ಒಂದೇ ಕಾರಣಕ್ಕೆ ದೂರವಿಡುವ ನಾವು, ಆ ಭಿನ್ನತೆಯನ್ನು ಅರ್ಥೈಸಿಕೊಳ್ಳುವ ಒಂದೇ ಒಂದು ಪ್ರಯತ್ನ ಮಾಡಬಹುದಲ್ಲವೇ? ಇದಕ್ಕೆ ಆ್ಯಂಡಿ ಸಿಲ್ವೇರಿಯಾ ಪುಸ್ತಕವಾಗಿದ್ದಾರೆ... ಹೀಗೆ ಎಷ್ಟೋ ವಿಚಾರಗಳು ಸಮಾಜದಲ್ಲಿವೆ. ಅವುಗಳಿಗೆ ಈ ಲೈಬ್ರರಿಯಲ್ಲಿ ಬೇಲಿಗಳಿಲ್ಲ. ಮತ್ತೊಬ್ಬರ ಭಿನ್ನತೆಯನ್ನು ಅರ್ಥೈಸಿಕೊಳ್ಳುವ ಒಂದು ವೇದಿಕೆ ಇದಷ್ಟೇ. ವ್ಯಕ್ತಿಗತ ಮಟ್ಟದಲ್ಲಿ ಸಂವಹನ ನಡೆಸಿದರೆ, ಅದನ್ನು ಮುಕ್ತ ಮನಸ್ಸಿನಿಂದ ಅರ್ಥೈಸಿಕೊಳ್ಳಬಹುದು, ದೃಷ್ಟಿಕೋನ ಬದಲಿಸಿಕೊಳ್ಳಬಹುದು ಇಲ್ಲವೇ ಅದನ್ನು ಒಪ್ಪಿಕೊಳ್ಳಬಹುದು. ಇವಾವುದೂ ಸಾಧ್ಯವಾಗದೇ ಹೋದರೂ ಇನ್ನೊಬ್ಬರ ಅನುಭವಕ್ಕಂತೂ ಕೇಳುಗರಾಗಬಹುದು’ ಎಂದು ಉದಾಹರಣೆಗಳ ಮೂಲಕ ವಿವರಿಸುತ್ತಾ ಹೋದರು ಫಾದ್.
ಗ್ರಂಥಾಲಯದ ಸಾಂಪ್ರದಾಯಿಕ ತತ್ವಗಳೊಂದಿಗೇ ಈ ಲೈಬ್ರರಿ ಕೂಡ ರೂಪುಗೊಂಡಿದೆ. ಪುಸ್ತಕಗಳನ್ನು ಎರವಲು ಪಡೆಯುವಂತೆ ಇಲ್ಲಿ ತಮ್ಮ ಇಷ್ಟದ ವಿಷಯದ ಮಾನವ ಪುಸ್ತಕಗಳನ್ನೂ ಎರವಲು ಪಡೆಯಬಹುದು. ಮೂವತ್ತು ನಿಮಿಷ ಮುಕ್ತವಾಗಿ ಮಾತನಾಡಬಹುದು, ಚರ್ಚಿಸಬಹುದು.

ಚರ್ಚೆ, ವಿಚಾರಗಳು ಪರಸ್ಪರ ವಿರೋಧ ದಾರಿಯಲ್ಲಿ ಹೋಗಿ  ಜಗಳವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ. ಮೊದಲು ಓದುಗರ ವಿಷಯಾಸಕ್ತಿ, ಆ ಪುಸ್ತಕ ಬಯಸಿದ ಉದ್ದೇಶವನ್ನು ಅರಿತುಕೊಂಡ ಮೇಲಷ್ಟೇ ಪುಸ್ತಕದೊಂದಿಗೆ ಮಾತುಕತೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಕಥೆ ಹೇಳುವವರ ವಿಷಯಜ್ಞಾನ, ಅನುಭವದ ಪ್ರಮಾಣದ ಮೇಲೆ ಅವರನ್ನು ಪುಸ್ತಕಗಳಾಗಿ ನಿಯೋಜಿಸಲಾಗಿರುತ್ತದೆ.  ಹೇಗೆ ಓದುಗರೊಂದಿಗೆ ಸಂವಹನ ನಡೆಸಬೇಕು, ಚರ್ಚೆ ಬೇರೆ ದಾರಿ ಹಿಡಿದರೆ ಹೇಗೆ ನಿಭಾಯಿಸಬೇಕು, ಭಾವಾತಿರೇಕ ತೋರದೆ ಹೇಗೆ ಸಮತೂಕವಾಗಿ ಮಾತನಾಡಬೇಕು ಎಂಬ ವಿಚಾರಗಳನ್ನು ಪರಿಗಣಿಸಿ ಅವರನ್ನು ಪುಸ್ತಕ ಎನ್ನಲಾಗುತ್ತದೆ.

ಎಲ್ಲಾ ಸ್ತರದ, ಎಲ್ಲಾ ಕ್ಷೇತ್ರದ ಭಿನ್ನ ಜನರು ಇಲ್ಲಿದ್ದಾರೆ. ಎಲ್ಲರಿಗೂ ಹೇಳಲು ವಿಚಾರವಿರುತ್ತದೆ. ಆದರೆ ಸಂವಾದ ಆರೋಗ್ಯಕಾರಿಯಾಗಿಲ್ಲ ಎನ್ನಿಸಿದರೆ,  ಓದುಗರು ಲೈಬ್ರರಿಯನ್ ಅನ್ನು ಕರೆಯಬಹುದು. ಅವರಿಗೆ ಮತ್ತೊಂದು ಪುಸ್ತಕವನ್ನು ನೀಡಲಾಗುತ್ತದೆ. ಪ್ರತಿ ರೀಡಿಂಗ್ ಸೆಷನ್ ಮುಗಿದ ಮೇಲೂ ಹ್ಯೂಮನ್ ಬುಕ್‌ಗಳು ಹಾಗೂ ಓದುಗರ ಅನುಭವವನ್ನು ದಾಖಲಿಸಲಾಗುತ್ತದೆ.

ಗ್ರಂಥಾಲಯದ ಹಾಸ್ಪಿಟಾಲಿಟಿ ವಿಭಾಗ ಪುಸ್ತಕಗಳಿಗೆ ದಣಿವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದೆ. ಒಟ್ಟು 12 ಮಂದಿ ಇದ್ದಾರೆ. ಬುಕ್ ಡಿಪೋಟ್ ಮ್ಯಾನೇಜರ್, ಹೆಡ್ ಲೈಬ್ರರಿಯನ್, ಹಾಸ್ಪಿಟಾಲಿಟಿ ಹೆಡ್, ಇವೆಂಟ್ ಆರ್ಗನೈಸರ್, ಸ್ಪಾನ್ಸರ್‌ಶಿಪ್ ಹೀಗೆ ಒಂದು ನೆಲೆಗಟ್ಟಿನಲ್ಲಿ ಲೈಬ್ರರಿ ಸ್ಥಾಪನೆಗೊಂಡಿದೆ.

ಸಾಮಾನ್ಯ ಲೈಬ್ರರಿಗಳಂತೆಎಲ್ಲಾ ದಿನವೂ ಇದು ತೆರೆದಿರುವುದಿಲ್ಲ. ನಿಗದಿತ ದಿನ ಕಾರ್ಯಕ್ರಮ ರೂಪಿಸಿ ಬುಕ್ ಕ್ಯಾಟಲಾಗ್ ತಯಾರಿಸಲಾಗುತ್ತದೆ. ಲೈಬ್ರರಿಗೆ ಪ್ರವೇಶ ಉಚಿತ.

‘ಗೊತ್ತಿಲ್ಲದ ವ್ಯಕ್ತಿಯೊಂದಿಗೆ ನಿಮ್ಮ ಅನುಭವಗಳನ್ನು ಅಥವಾ ಕಥೆಯನ್ನು ಹೇಳಿಕೊಳ್ಳುವುದು ಸಾಧಕವೂ ಹೌದು. ಸವಾಲೂ ಹೌದು. ಹೀಗೇ ಒಮ್ಮೆ, ಓದುವ ಕಾರ್ಯಕ್ರಮ ಮುಗಿಯುತ್ತಿದ್ದಂತೆ, ಮಹಿಳೆಯೊಬ್ಬರು ನನ್ನ ಬಳಿ ಬಂದರು. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದೊಮ್ಮೆ ಅಂದುಕೊಂಡಿದ್ದೆ. ಈಗ ಎಷ್ಟೋ ಮಂದಿಯೊಂದಿಗೆ ನನ್ನ ಕಥೆಯನ್ನು ಹೇಳಿ ಹಗುರವಾದೆ. ಅವರ ಪ್ರಶ್ನೆಗಳಿಗೆ ಉತ್ತರಿಸಿದೆ. ನಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಳ್ಳದೇ ಇದ್ದುದಕ್ಕೆ ಈಗ ಖುಷಿಯಾಗುತ್ತಿದೆ’ ಎಂದರು. ಹೀಗೆ ಅವರೊಳಗನ್ನು, ಅವರಿಂದ ಇನ್ನೊಬ್ಬರೊಳಗನ್ನು ತೆರೆದಿಡುವುದು ಸವಾಲಿನ ಕೆಲಸ ಹೌದಲ್ಲವೇ ಎಂದು ಪ್ರಶ್ನಿಸಿದರು ಫಾದ್.

ಹಲವು ನಗರಗಳಲ್ಲಿ ಲೈಬ್ರರಿ...
ಹೈದರಾಬಾದ್‌ನಲ್ಲಿ ಮೊದಲ ಲೈಬ್ರರಿ ಕಾರ್ಯಕ್ರಮ ನಡೆಸಿದಾಗ ಹತ್ತು ಪುಸ್ತಕಗಳು ಇದ್ದವು. ಇದಕ್ಕೆ ಎನ್‌ಜಿಒಗಳ ಸಹಾಯವನ್ನು ಪಡೆಯಲಾಗಿತ್ತು. ಎರಡನೇ ಕಾರ್ಯಕ್ರಮ ನಡೆಸಿದಾಗ ಪುಸ್ತಕಗಳ ಸಂಖ್ಯೆ 20ಕ್ಕೆ ಏರಿತ್ತು. ಮೊದಲ ಕಾರ್ಯಕ್ರಮದಲ್ಲಿ ಓದುಗರು 60 ಮಂದಿ ಇದ್ದರೆ, ಎರಡನೇ ಕಾರ್ಯಕ್ರಮದಲ್ಲಿ ಓದುಗರ ಸಂಖ್ಯೆ ನೂರಕ್ಕೆ ಏರಿಕೆಯಾಗಿತ್ತು. ಇದೀಗ ಇಲ್ಲಿ ಮೂವತ್ತು ಬಗೆಯ ಸಾಮಾಜಿಕ ಘಟನೆಗಳನ್ನು ಆಧರಿಸಿ ಮೂವತ್ತು ಪುಸ್ತಕಗಳು ಸಿದ್ಧಗೊಂಡಿವೆ. ಮುಂಬೈ, ದೆಹಲಿ, ಕೋಲ್ಕತ್ತ, ಗುಜರಾತ್, ಬೆಂಗಳೂರಿಗೂ ಈ ಮಾತನಾಡುವ ಪುಸ್ತಕಗಳು ಬರುವ ತಯಾರಿಯಲ್ಲಿವೆಯಂತೆ.
ಕೊನೆಗೆ, ‘ನೆವರ್‌ ಜಡ್ಜ್ ಎ ಬುಕ್ ಬೈ ಇಟ್ಸ್ ಕವರ್’ ಎಂದು ಉದ್ಗರಿಸಿ ಈ ಲೈಬ್ರರಿಗೆ ಇದು ಹೆಚ್ಚು ಸೂಕ್ತವಾದ ವಾಕ್ಯ ಎಂದು ಮಾತು ಮುಗಿಸಿದರು ಫಾದ್.

-ಚಿತ್ರಗಳು: ಹರ್ಷದ್‌ ಫಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT