ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಲಹರಿಯಲ್ಲಿ ‘ಗಾಂಧಾರಿ’

Last Updated 24 ಮೇ 2017, 19:30 IST
ಅಕ್ಷರ ಗಾತ್ರ

‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಗಾಂಧಾರಿ’ 375 ಕಂತುಗಳನ್ನು ಪೂರ್ಣಗೊಳಿಸಿದೆ. ಪ್ರತಿದಿನ ಅರ್ಧ ಗಂಟೆ ಕಾಲ ಹಿಡಿದಿಟ್ಟುಕೊಳ್ಳುತ್ತಿರುವ ಧಾರಾವಾಹಿ ತಂಡವು ಈ ಖುಷಿ ಹಂಚಿಕೊಳ್ಳಲು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿತ್ತು.

ಈ ಧಾರಾವಾಹಿಯ ನಿರ್ಮಾಪಕರಾದ ಆನಂದ್ ಆಡಿಯೊ ಮುಖ್ಯಸ್ಥ ಆನಂದ್ ಛಾಬ್ರಿಯಾ, ನಿರ್ದೇಶಕ ಲೋಕೇಶ್ ಕೃಷ್ಣ, ಧಾರಾವಾಹಿಯಲ್ಲಿ ನಟಿಸುತ್ತಿರುವ ಜಗನ್ (ಚಿರು ಪಾತ್ರ), ಕಾವ್ಯಾ ಗೌಡ (ದೃಷ್ಟಿ ಮತ್ತು ದೀಪ್ತಿ ಎಂಬ ಎರಡು ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ) ಸೇರಿದಂತೆ ಇಡೀ ‘ಗಾಂಧಾರಿ’ ಬಳಗವೇ ಅಲ್ಲಿ ಸೇರಿತ್ತು. ಆ ಬಳಗವನ್ನು ಪರಿಚಯಿಸುವ ಕೆಲಸ ಜಗನ್‌ ಅವರದ್ದಾಗಿತ್ತು.

ತಂಡದ ಪರಿಚಯ ಆದ ನಂತರ ಮೊದಲು ಮಾತನಾಡಿದ್ದು ನಿರ್ದೇಶಕ ಲೋಕೇಶ್ ಕೃಷ್ಣ. ಧಾರಾವಾಹಿ ನಿರ್ಮಾಣಕ್ಕೆ ಚಾಲನೆ ನೀಡಿದ್ದ, 2016ರ ಡಿಸೆಂಬರ್‌ನಲ್ಲಿ ನಿಧನರಾದ ಮೋಹನ್ ಛಾಬ್ರಿಯಾ (ಆನಂದ ಆಡಿಯೊ ಆರಂಭಿಸಿದ್ದು ಇವರೇ) ಅವರನ್ನು ನೆನಪಿಸಿಕೊಂಡೇ ಮಾತು ಆರಂಭಿಸಿದ ಲೋಕೇಶ್, ‘ತಮ್ಮ ನಿರ್ಮಾಣದ ಧಾರಾವಾಹಿಯ ಮೂಲಕ ಸಾಕಷ್ಟು ಜನ ಕಲಾವಿದರು ಬೆಳೆಯಬೇಕು ಎಂದು ಮೋಹನ್ ಆಸೆಪಟ್ಟಿದ್ದರು. ಅವರು ಈಗ ನಮ್ಮ ಜೊತೆ ಇರಬೇಕಿತ್ತು’ ಎಂದರು.

‘ಗಾಂಧಾರಿ’ ಧಾರಾವಾಹಿಯು ಒಂದು ಸಾವಿರ ಕಂತುಗಳನ್ನು ಪೂರೈಸಬೇಕು ಎಂಬ ಆಸೆಯನ್ನು ಅವರು ತೆರೆದಿಟ್ಟರು. ಧಾರಾವಾಹಿಯ ಅಂತ್ಯ ಹೇಗಿರುತ್ತದೆ ಎಂಬ ಪ್ರಶ್ನೆ ಎದುರಾದಾಗ, ‘ವ್ಯಕ್ತಿಯೊಬ್ಬನ ಜೀವನದ ಕೊನೆ ಹೇಗಿರುತ್ತದೆ ಎಂದು ಗೊತ್ತಾಗುವುದು ಅದು ಕೊನೆಗೊಂಡಾಗ. ಹಾಗೆಯೇ, ಈ ಧಾರಾವಾಹಿಯ ಅಂತ್ಯ ಹೇಗಿರುತ್ತದೆ ಎಂಬುದನ್ನು ತಿಳಿಯಲು ಕೊನೆಯವರೆಗೂ ಕಾಯಬೇಕು’ ಎಂದು ಜಾಣ್ಮೆಯ ಉತ್ತರ ನೀಡಿದರು.

ಅಂದಹಾಗೆ, ಈ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದ ನಂತರ ಕಾವ್ಯಾ ಗೌಡ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಿದೆಯಂತೆ. ‘ರವಿಚಂದ್ರನ್ ಜೊತೆ ‘ಬಕಾಸುರ’ ಎನ್ನುವ ಸಿನಿಮಾದಲ್ಲಿ ನಟಿಸಲು ನನಗೆ ಅವಕಾಶ ಸಿಕ್ಕಿರುವುದಕ್ಕೆ ಕಾರಣ ಈ ಧಾರಾವಾಹಿ’ ಎಂದು ಕಾವ್ಯಾ ತುಸು ಭಾವುಕರಾಗಿ ಹೇಳಿದರು. ‘ನಾನು ಶಾದಿಭಾಗ್ಯ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದೇನೆ’ ಎಂದು ಇದೇ ಸಂದರ್ಭದಲ್ಲಿ ಹೇಳಲು ಜಗನ್ ಕೂಡ ಮರೆಯಲಿಲ್ಲ.

‘ಸಿನಿಮಾ ನಿರ್ಮಿಸಿ, ಅದನ್ನು ವೀಕ್ಷಿಸಲು ಚಿತ್ರಮಂದಿರಗಳಿಗೆ ಬನ್ನಿ ಎಂದು ಜನರನ್ನು ಕರೆಯುವ ಬದಲು, ಧಾರಾವಾಹಿ ನಿರ್ಮಿಸಿ ಜನರ ಮನೆಯ ಜಗುಲಿಗೆ ನಾವೇ ಹೋಗಬಹುದಲ್ಲವೇ ಎಂಬ ಆಲೋಚನೆಯಿಂದ ಅಪ್ಪ ಈ ಧಾರಾವಾಹಿ ನಿರ್ಮಾಣಕ್ಕೆ ಮುಂದಾದರು. ಅವರ ಯೋಚನೆಗೆ ಈಗ ಯಶಸ್ಸು ಸಿಕ್ಕಿದೆ’ ಎಂದು ಮೋಹನ್ ಛಾಬ್ರಿಯಾ ಪುತ್ರ ಆನಂದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT