ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜಸ್ವಿನಿ... ನಟನೆಯ ‘ಮಹಾನದಿ’ಯಲ್ಲಿ

Last Updated 24 ಮೇ 2017, 19:30 IST
ಅಕ್ಷರ ಗಾತ್ರ

ಚಾರ್ಟರ್ಡ್‌ ಅಕೌಂಟೆಂಟ್‌ ಆಗಬೇಕು  ಎಂದುಕೊಂಡ  ಇವರಿಗೆ ಒಲಿದಿದ್ದು ನಟನೆಯ ಪಟ್ಟ. ತಾನಾಗಿಯೇ ಒಲಿದ ಅವಕಾಶವನ್ನು ಒಲ್ಲೆ ಎನ್ನಲಾಗದೆ ಅಪ್ಪಿಕೊಂಡು ಈಗ ಅದರಲ್ಲಿಯೇ ತನ್ಮಯತೆ ಬೆಳೆಸಿಕೊಂಡವರು ತೇಜಸ್ವಿನಿ.

ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಹಾನದಿ’ ಧಾರಾವಾಹಿಯಲ್ಲಿ ಮೇಘನಾ ಪಾತ್ರಕ್ಕೆ ಬಣ್ಣ ಹಚ್ಚಿರುವ ಇವರು,  ಉತ್ತಮ ಅವಕಾಶ ದೊರಕಿದರೆ ಸಿನಿಮಾದಲ್ಲಿಯೂ ನಟಿಸುವ ಕನಸು ಹೊಂದಿದ್ದಾರೆ.

‘ನಟನೆ ಬಗ್ಗೆ ನನಗೆ ಎಳ್ಳಷ್ಟು ಅರಿವಿರಲಿಲ್ಲ. ತಾನಾಗೇ ಬಂದ ಅವಕಾಶವನ್ನು ಒಲ್ಲೆ ಏನ್ನಲೂ ಆಗದೇ ಒಪ್ಪಿಕೊಂಡೆ’ ಎಂದು ನಟನೆಗೆ  ಹೆಜ್ಜೆ ಇಟ್ಟ ಬಗೆಯನ್ನು ತಿಳಿಸುತ್ತಾರೆ.

ಸಾಮಾನ್ಯವಾಗಿ ನಟನಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡುವವರು ಬಾಲ್ಯದಿಂದಲೇ ಈ ಕ್ಷೇತ್ರದಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು ಎಂಬ ಕನಸು ಹೊಂದಿರುತ್ತಾರೆ. ಆದರೆ ಇವರಿಗೆ ನಟಿಯಾಗಬೇಕು ಎಂದಿಗೂ ಅನಿಸಿರಲಿಲ್ಲ.

ಮೈಸೂರಿನವರಾದ ತೇಜಸ್ವಿನಿ ಬಿ.ಕಾಂ. ಪರೀಕ್ಷೆ ಬರೆದು ಮುಂದೇನು ಎಂದು ಯೋಚಿಸುತ್ತಿದ್ದಾಗಲೇ ನಟನೆಯ ಅವಕಾಶ ಅರಸಿ ಬಂತು. 

ಫೇಸ್‌ಬುಕ್‌ನಲ್ಲಿ ಇವರ ಫೋಟೊ ನೋಡಿದ  ನಿರ್ದೇಶಕರೊಬ್ಬರು   ಧಾರಾವಾಹಿಯಲ್ಲಿ ನಟಿಸುವಂತೆ ಕೇಳಿದರು. ಇವರು ಒಪ್ಪಿಕೊಂಡು ಆಡಿಷನ್‌ ನೀಡಿದರು. ಆದರೆ ಆ  ಧಾರಾವಾಹಿ ಪ್ರಾರಂಭವಾಗಲೇ ಇಲ್ಲ.  ಹೇಗೊ ನಟನಾ ರಂಗಕ್ಕೆ ಇಳಿಯಬೇಕು ಎಂದುಕೊಂಡ ಮೇಲೆ ಮತ್ತೇಕ್ಕೆ ಹಿಂದೇಟು ಹಾಕುವುದು ಎಂದು ಮತ್ತೊಂದು ಪ್ರಯತ್ನಕ್ಕೆ ಮುಂದಾದರು.  ಅದರಲ್ಲಿ ಯಶಸ್ವಿಯೂ ಆದರು.

ಇವರು ನಟಿಸಿದ ಮೊದಲ ಧಾರಾವಾಹಿ ‘ಮಧುಬಾಲಾ’, ನಂತರ ‘ಸೌಭಾಗ್ಯವತಿ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ತೆಲುಗು ಮತ್ತು ತಮಿಳು ಧಾರಾವಾಹಿಗಳಿಗೂ ಬಣ್ಣ ಹಚ್ಚಿದ್ದಾರೆ.

‘ಈ ಕ್ಷೇತ್ರ ಪ್ರವೇಶಿಸಿದ ನಂತರ ಒಳ್ಳೆಯ ಕೆಲಸ ಮಾಡಿದ್ದೇನೆ ಎನಿಸುತ್ತಿದೆ. ನಾನು ಮಾಡುತ್ತಿರುವ ಕೆಲಸವನ್ನು ಎಂಜಾಯ್‌ ಮಾಡುತ್ತಿದ್ದೇನೆ. ಮಾಡುವ ಕೆಲಸದಲ್ಲಿ ಪ್ರೀತಿ ಇದ್ದರೆ ಮಾತ್ರವೇ ಅದರಲ್ಲಿ ಯಶಸ್ಸು ಗಳಿಸುವುದು ಸಾಧ್ಯ’ ಎನ್ನುವುದು ಇವರ ಅನುಭವದ ಮಾತು.

ನಟನೆಯ ಬಗ್ಗೆ ಯಾವುದೇ ತರಬೇತಿಯನ್ನು ಪಡೆಯದೆ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ ಸಂದರ್ಭ ಕೇಳಿದರೆ, ಎಂದೂ ನಟನೆ ಕಷ್ಟವೆನಿಸಿಯೇ ಇಲ್ಲ ಎಂದು ಉತ್ತರಿಸುತ್ತಾರೆ.

‘ನಟನೆಯ ತರಬೇತಿ ಪಡೆಯಬೇಕು ಎಂದು ನನಗೆ ಅನಿಸಿಲ್ಲ. ಅನುಭವಗಳೇ ನಟಿಸುವುದನ್ನು ಕಲಿಸುತ್ತದೆ. ನಿರ್ದೇಶಕರು ತಪ್ಪನ್ನು ತಿದ್ದುತ್ತಾರೆ. ಅವರ ಅಣತಿಯಂತೆ ನಟಿಸುತ್ತೇನೆ’ ಎಂದು ಚಿತ್ರೀಕರಣದ ಸ್ಥಳವೇ ನಟನೆಗೆ ಪಾಠಶಾಲೆ ಆದ ಬಗೆಯನ್ನು ತಿಳಿಸುತ್ತಾರೆ.

‘ಶಾಲೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದೆ. ಪ್ರತಿವರ್ಷ ಡಾನ್ಸ್‌ ಮಾಡುವುದನ್ನು ತಪ್ಪಿಸಿಕೊಳ್ಳುತ್ತಲೇ ಇರಲಿಲ್ಲ. ಹೀಗಾಗಿ ವೇದಿಕೆ ಏರಲು ಭಯವಿರಲಿಲ್ಲ. ಹಾಗಾಗಿ ಅಂಜಿಕೆಯಲ್ಲದೆ ನಟಿಸುವುದು ಸುಲಭವಾಯಿತು’ ಎನ್ನುತ್ತಾರೆ.

‘ವಿಭಿನ್ನ ಪಾತ್ರಗಳಲ್ಲಿ ನಟಿಸುವ ಹುಮ್ಮಸ್ಸಿದೆ. ನಾನು ಈಗ ಮಾಡಿರುವ ಎಲ್ಲಾ ಪಾತ್ರಗಳು ಒಂದಕ್ಕೊಂದು ಭಿನ್ನವಾಗಿವೆ. ಏಕತಾನತೆ ಇಲ್ಲದ ಪಾತ್ರಕ್ಕೆ ಆದ್ಯತೆ ನೀಡುತ್ತೇನೆ. ಮುಂದೆ ಸಿನಿಮಾದಲ್ಲಿ ನಟಿಸುವ ಆಸೆಯಿದ್ದು, ಹೊಸತನದ ಪಾತ್ರ ನಿರೀಕ್ಷೆಯಲ್ಲಿದ್ದೇನೆ’ ಎಂದು ಮುಂದಿನ ಹೆಜ್ಜೆಯ ಸುಳಿವು ನೀಡುತ್ತಾರೆ. 

‘ಅಪ್ಪನಿಗೆ ನಾನು ಐಎಎಸ್‌ ಮಾಡಬೇಕೆಂಬ ಆಸೆಯಿತ್ತು. ಪ್ರಾರಂಭದಲ್ಲಿ ಅವರಿಗೆ ನನ್ನ ಆಯ್ಕೆಯ ಕುರಿತು ಬೇಸರವಿತ್ತು. ಆದರೆ  ಅಮ್ಮ ಪ್ರೋತ್ಸಾಹ ನೀಡಿದರು. ಈಗ ಅಪ್ಪನಿಗೂ ನನ್ನ ಬೆಳವಣಿಗೆ ಕಂಡು ಖುಷಿಯಿದೆ ಎನ್ನುತ್ತಾರೆ ಇವರು.

ಬಿಡುವಿನ ವೇಳೆಯಲ್ಲಿ ಹಾಡು, ನೃತ್ಯ, ಓದು ತೇಜಸ್ವಿನಿ ಅವರ ಹವ್ಯಾಸ. ಜೀನ್ಸ್‌ ಮತ್ತು ಸೀರೆ ತೊಡುವುದು ಇವರಿಗೆ ಇಷ್ಟ. ಫಿಟ್‌ನೆಸ್‌, ಚರ್ಮದ ಕಾಂತಿಗೆ ಹೆಚ್ಚು ತಲೆಕೆಡಿಸಿಕೊಳ್ಳದ ತೇಜಸ್ವಿನಿ ಸಹಜ ಸುಂದರಿ.

‘ಇಷ್ಟವಾಗುವ ತಿನಿಸುಗಳನ್ನು ಹೊಟ್ಟೆತುಂಬಾ ತಿನ್ನುತ್ತೇನೆ. ದೇಹಪ್ರಕೃತಿಯೇ ಹೀಗಿರುವುದರಿಂದ ಎಷ್ಟು ತಿಂದರೂ ದಪ್ಪಗಾಗುವುದಿಲ್ಲ. ಬೆಳಿಗ್ಗೆ ಗ್ರೀನ್‌ ಟೀ ಕುಡಿಯುವುದನ್ನು ಬಿಟ್ಟರೆ ಮತ್ಯಾವ ಕಸರತ್ತು ಮಾಡುವುದಿಲ್ಲ’ ಎನ್ನುತ್ತಾರೆ ತೇಜಸ್ವಿನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT