ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವೇತಾಂಬರಿಗೆ ಜುಂಬಾ ತುಂಬಾ ಇಷ್ಟ

Last Updated 24 ಮೇ 2017, 19:30 IST
ಅಕ್ಷರ ಗಾತ್ರ

ಫಿಟ್‌ನೆಸ್‌ ಬಗ್ಗೆ ಅಪ್ಪನಿಗೆ ಮೊದಲಿನಿಂದಲೂ ಆಸಕ್ತಿ. ಮನೆಯವರನ್ನೆಲ್ಲಾ ಸೇರಿಸಿ ನಿತ್ಯ ಯೋಗ, ಜಾಗಿಂಗ್ ಮಾಡಿಸುತ್ತಿದ್ದರು. ನನಗೆ ರನ್ನಿಂಗ್‌, ಬ್ಯಾಡ್ಮಿಂಟನ್‌  ಕಡ್ಡಾಯವಾಗಿತ್ತು. ಹೀಗೆ ಫಿಟ್‌ನೆಸ್‌ ದಾರಿಗೆ ತೆರೆದುಕೊಂಡಿದ್ದ ನಾನು ಮುಂದೊಂದು ದಿನ ಇದೇ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತೇನೆ ಎಂದುಕೊಂಡಿರಲಿಲ್ಲ.

ಊರು ಕುಂದಾಪುರವೇ ಆದರೂ ಅಪ್ಪ ಬ್ಯಾಂಕ್‌ ಕೆಲಸದಲ್ಲಿದ್ದುದರಿಂದ ನಾನಾ ಕಡೆ ವಿದ್ಯಾಭ್ಯಾಸ ಮಾಡಿದ್ದೇನೆ. ಬಿಕಾಂ ಮುಗಿಸಿ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಆರು ವರ್ಷ ಕೆಲಸ ಮಾಡಿದ್ದೇನೆ. ಒಂದು ದಿನ ಹೆಲ್ತ್‌ ಕ್ಲಬ್‌ವೊಂದರಲ್ಲಿ ವ್ಯವಸ್ಥಾಪಕ ನಿರ್ದೇಶಕಿಯ ಕೆಲಸಕ್ಕೆ ಆಹ್ವಾನ ಬಂತು.  ನನಗೆ ಫಿಟ್‌ನೆಟ್‌ ವೃತ್ತಿ ಬಗ್ಗೆ ಆಸಕ್ತಿ ಬಂದಿದ್ದೇ ಆಗ.

28ನೇ ವಯಸ್ಸಿಗೆ ಫಿಟ್‌ನೆಸ್‌ ವೃತ್ತಿಯ ಕ್ಷೇತ್ರಕ್ಕೆ ಕಾಲಿರಿಸಿದೆ. ಅನೇಕ ಫಿಟ್‌ನೆಸ್‌ ಕೋರ್ಸ್‌ಗಳನ್ನು ಮಾಡಿದೆ. ಜುಂಬಾ ಫಿಟ್‌ನೆಸ್‌ ತರಬೇತಿ ಪಡೆದ ನಂತರ ನನ್ನ ಬದುಕು ಬದಲಾಯಿತು. ಕೆಲಸ ಬಿಟ್ಟು, ಬೇರೆ ಬೇರೆ ಜಿಮ್‌ಗಳಲ್ಲಿ ಪಾಠ ಹೇಳಿಕೊಡಲು ಶುರು ಮಾಡಿದೆ. ಜುಂಬಾ ಫಿಟ್‌ನೆಸ್‌ ಅನ್ನುವ ಪರಿಕಲ್ಪನೆ ತುಂಬಾ ಜನಪ್ರಿಯತೆ ಗಳಿಸಿತು. ನನಗೂ ಬ್ರ್ಯಾಂಡ್‌ ಅಸ್ಮಿತೆ (ಬ್ರ್ಯಾಂಡ್‌ ಐಡೆಂಟಿಟಿ) ಸಿಕ್ಕಿತು.

ನಂತರ ಜುಂಬಾ ತರಬೇತುದಾರರೊಬ್ಬರ ಪರಿಚಯವಾಯ್ತು. ಅವರ ಜೊತೆ ಸೇರಿ 2014ರಲ್ಲಿ ಟ್ರೈಬ್‌ ಫಿಟ್‌ನೆಸ್‌ ಕ್ಲಬ್‌ ಪ್ರಾರಂಭಿಸಿದೆ. ನಗರದ ಬೇರೆ ಬೇರೆ ಕಡೆಗಳಲ್ಲಿ ಶಾಖೆಗಳನ್ನು ತೆರೆದೆವು. ಈ ವರ್ಷ ಕಲ್ಟ್‌ ಕ್ಲಬ್‌ ಜೊತೆ ಸೇರಿಕೊಂಡಿದ್ದೇವೆ.  ಈಗಾಗಲೇ ಬೆಂಗಳೂರಿನಲ್ಲಿ ಎಂಟು ಶಾಖೆಗಳಿದ್ದು, ಬೇರೆ ರಾಜ್ಯಗಳಿಗೆ ವಿಸ್ತರಿಸುವ ಮಹತ್ವಾಕಾಂಕ್ಷೆ ನಮ್ಮದು.

ಕಂಪೆನಿ ನೌಕರಿ ಬಿಟ್ಟು ಫಿಟ್‌ನೆಸ್‌ ದಾರಿ ಹಿಡಿಯುತ್ತೇನೆ ಎಂದಾಗ ಸಹಜವಾಗಿಯೇ ಮನೆಯಿಂದ ವಿರೋಧ ವ್ಯಕ್ತವಾಯಿತು. ಆದರೆ ನನ್ನ ಪತಿಯ ಬೆಂಬಲ ನನ್ನೊಂದಿಗಿತ್ತು. ಈಗ ಕುಟುಂಬದ ಎಲ್ಲರೂ ನನ್ನ ಆಯ್ಕೆಯನ್ನು ಮೆಚ್ಚಿ ಮಾತನಾಡುತ್ತಾರೆ.

ಎರಡು ವರ್ಷದಿಂದ ಫಿಟ್‌ನೆಸ್‌ ಟ್ರೇನರ್‌ ಆಗಿ ಗುರುತಿಸಿಕೊಂಡು ದೇಶದ ನಾನಾ ಕಡೆ ಓಡಾಡಿದ್ದೇನೆ. ಸದ್ಯ ಮಿಲಿಂದ್‌ ಸೋಮನ್‌ ಹಾಗೂ ಹೃತಿಕ್‌ ರೋಷನ್‌ ಅವರ ಜೊತೆಗೂ ಫಿಟ್‌ನೆಸ್‌ಗೆ ಸಂಬಂಧಿಸಿದ ಪ್ರಾಜೆಕ್ಟ್‌ವೊಂದರಲ್ಲಿ ಕೆಲಸ  ಮಾಡುತ್ತಿದ್ದೇನೆ. ದೇಶದ  ಪ್ರಮುಖ ನಾಲ್ವರು ಜುಂಬಾ ಮಾಸ್ಟರ್‌ ಟ್ರೇನರ್‌ಗಳಲ್ಲಿ ನಾನೂ ಒಬ್ಬಳಾಗಿರುವ ಕಾರಣ ನನ್ನನ್ನು ಈಗ ‘ಸೆಲೆಬ್ರಿಟಿ ಟ್ರೇನರ್‌’ ಎಂದು ಗುರುತಿಸುತ್ತಾರೆ.

ಫಿಟ್‌ನೆಸ್‌ ಪಾಠ ಹೇಳುವುದು, ಬೇರೆ ಬೇರೆ ಕಡೆ ಪ್ರಯಾಣ ಬೆಳೆಸುವುದಷ್ಟೇ ಅಲ್ಲದೆ, ನಿತ್ಯ ನನ್ನ ಫಿಟ್‌ನೆಸ್‌ ಬಗೆಗೂ ಸಾಕಷ್ಟು ಕಾಳಜಿ ವಹಿಸುತ್ತೇನೆ. ಯೋಗ, ರನ್ನಿಂಗ್‌, ಜುಂಬಾ ನನ್ನ ದೇಹಕ್ಕೆ ಸೂಕ್ತ ಆಕಾರ ನೀಡಿದೆ. ಜೊತೆಗೆ ಫಿಟ್‌ನೆಸ್‌ ಹಾದಿಯಲ್ಲಿ ನಾನು ಕಲಿತ ನೃತ್ಯವೂ ಕೈಹಿಡಿದಿದೆ.

ಬೇರೆ ಕೆಲಸಗಳ ಒತ್ತಡದಲ್ಲಿ ನನ್ನ ಫಿಟ್‌ನೆಸ್‌ ಬಗೆಗೆ ಕೆಲವೊಮ್ಮೆ ಸಮಯ ಕೊಡಲು ಸಾಧ್ಯವಾಗುವುದಿಲ್ಲ. ಅಂಥ ಸಂದರ್ಭದಲ್ಲಿ ದಿನಕ್ಕೆ ಕನಿಷ್ಠ 10 ಸಾವಿರ ಹೆಜ್ಜೆಯನ್ನಾದರೂ ಇಡಬೇಕು ಎನ್ನುವ ನಿಯಮ ಹಾಕಿಕೊಂಡಿದ್ದೇನೆ. ಒಟ್ಟಿನಲ್ಲಿ ವಾರದ ಆರು ದಿನ ನನ್ನ ಫಿಟ್‌ನೆಸ್‌ ಬಗೆಗೆ ಸಮಯ ಕೊಟ್ಟೇ ಕೊಡುತ್ತೇನೆ. ಉಳಿದಂತೆ ಕುರಕಲು ತಿಂಡಿ ಸೇವಿಸುವುದು ಕಡಿಮೆ. ನಾವು ಸೇವಿಸುವ ಆಹಾರಕ್ಕೂ ದೈಹಿಕ ವ್ಯಾಯಾಮಕ್ಕೂ ಸಾಮ್ಯತೆ ಇದ್ದರೆ ಆರೋಗ್ಯ ಸಮಸ್ಯೆ ಕಾಡದು.

ಶ್ವೇತಾಂಬರಿ ಟಿಪ್ಸ್‌
* ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ
* ಯೋಗ, ಜಾಗಿಂಗ್, ವಾಕಿಂಗ್‌, ವ್ಯಾಯಾಮ ಯಾವುದಾದರೂ ಒಂದು ಪದ್ಧತಿಯನ್ನು ನಿತ್ಯ ಅನುಸರಿಸಿ
* ವ್ಯಾಯಾಮ ಸಾಧ್ಯವಿಲ್ಲವಾದರೆ ನಿತ್ಯ ಕನಿಷ್ಠ 10 ಸಾವಿರ ಹೆಜ್ಜೆಯಾಗುವಷ್ಟು ನಡೆದಾಡಿ
* ದಿನವಿಡೀ ಕುಳಿತು ಕೆಲಸ ಮಾಡುವವರು ಗಂಟೆಗೊಮ್ಮೆಯಾದರೂ ಎದ್ದು 5 ನಿಮಿಷ ವಾಕ್‌ ಮಾಡಿ
* ಫಾಸ್ಟ್‌ಫುಡ್‌, ಜಂಕ್‌ಫುಡ್‌ಗಳಿಂದ ಸಾಧ್ಯವಾದಷ್ಟು ದೂರವಿರಿ.

ಫೇಸ್‌ಬುಕ್‌ ಲಿಂಕ್‌: http://bit.ly/2qVGZlr

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT