ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ನಿಗ್ರಹ: ಆಧುನಿಕ ಸಮಾಜಕ್ಕೆ ದೊಡ್ಡ ಸವಾಲು

Last Updated 24 ಮೇ 2017, 19:30 IST
ಅಕ್ಷರ ಗಾತ್ರ
ಮತ್ತೊಂದು ಭಯೋತ್ಪಾದನಾ ದಾಳಿಯಿಂದ  ಜಗತ್ತು ತಲ್ಲಣಿಸಿದೆ.  ವಿನಾಶಕಾರಿಯಾದ ಭಯೋತ್ಪಾದನಾ ದಾಳಿಗಳಿಂದ ಆಧುನಿಕ ನಾಗರಿಕ ಸಮಾಜಕ್ಕೆ ಬಿಡುಗಡೆಯೇ ಇಲ್ಲವೇ ಎಂಬಂಥ ನೋವಿನ, ಆತಂಕದ ಪ್ರಶ್ನೆಯನ್ನು ಇದು ಮತ್ತೊಮ್ಮೆ ಹುಟ್ಟುಹಾಕಿದೆ.
 
ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ  ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 22 ಜನರು ಸತ್ತಿದ್ದಾರೆ. ಸಂಗೀತ ಕೇಳಿ ಸಂಭ್ರಮಿಸಲು ಬಂದ ಹದಿಹರೆಯದವರು ಸಾವಿನ ಮನೆ ಸೇರಿರುವುದು ದುರಂತ. ಈ ದಾಳಿಯ ಹೊಣೆಯನ್ನು ಈಗ  ಐಎಸ್  ಹೊತ್ತುಕೊಂಡಿದೆ.
 
ವ್ಯಕ್ತಿಯೊಬ್ಬನ ಬಂಧನವೂ ಆಗಿದೆ. ಆದರೆ  ಹೆಚ್ಚಿನ ವಿವರಗಳು ಇನ್ನೂ ಬರಬೇಕಿವೆ. ಬ್ರಿಟನ್‌ನಲ್ಲಿ ಭಯೋತ್ಪಾದಕ ಕೃತ್ಯ ನಡೆಸುವ ಜಾಲ ಅಸ್ತಿತ್ವದಲ್ಲಿದೆ ಎಂಬುದಕ್ಕೆ ಈ ಕರಾಳ ಘಟನೆ ಸಾಕ್ಷಿ.  
 
ಮ್ಯಾಂಚೆಸ್ಟರ್ ದಾಳಿಯಲ್ಲಿ ಯುವಜನರನ್ನೇ  ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿರುವುದು ಸ್ಪಷ್ಟ. ಕಳೆದ ಒಂದೂವರೆ ದಶಕದಲ್ಲಿ ಕಂಡು ಬಂದಿರುವ ಸಂಗತಿ ಎಂದರೆ ಭಯೋತ್ಪಾದನಾ ದಾಳಿಗಳು  ನಾಗರಿಕ ಬದುಕಿನ ಭಾಗವಾಗಿಬಿಡುತ್ತಿವೆ.
 
ಪದೇ ಪದೇ ಇಂತಹ ದಾಳಿಗಳು ಮರುಕಳಿಸುತ್ತಿವೆ.  ಪ್ಯಾರಿಸ್, ಬರ್ಲಿನ್, ಬಾಸ್ಟನ್,  ಲಂಡನ್ ನಂತಹ  ಪಾಶ್ಚಿಮಾತ್ಯ ಪ್ರಮುಖ ನಗರಗಳಲ್ಲದೆ, ಭಾರತದ ಮುಂಬೈ, ಆಫ್ರಿಕಾದ ಲೆಗೋಸ್, ಬಾಂಗ್ಲಾದೇಶದ ಢಾಕಾ ಅಥವಾ ಚೀನಾದ ಹೋಟಾನ್‌ನಂತಹ ನಗರಗಳಲ್ಲೂ ಇಂತಹ ದಾಳಿಗಳು ಸಂಭವಿಸುತ್ತಿವೆ.
 
ಕೇವಲ ಎರಡು  ತಿಂಗಳ ಹಿಂದಷ್ಟೇ  ಬ್ರಿಟನ್‌ನ ವೆಸ್ಟ್ ಮಿನಿಸ್ಟರ್ ಸೇತುವೆಯಲ್ಲಿ ಜನರ ಗುಂಪಿನ ಮೇಲೆ ಕಾರು ಹಾಯಿಸಿದ್ದರಿಂದ ನಾಲ್ವರು ಸತ್ತಿದ್ದರು. ಹಾಗೆಯೇ  2005ರ ಜೂನ್‌ನಲ್ಲಿ ಲಂಡನ್‌ನ   ಸಾರ್ವಜನಿಕ ಸಾರಿಗೆ ಜಾಲದ ಮೇಲೆ ನಡೆದ ಭಯೋತ್ಪಾದನಾ ಸರಣಿ ಸ್ಫೋಟಗಳಲ್ಲಿ 50ಕ್ಕೂ ಹೆಚ್ಚು ಜನರು ಸತ್ತಿದ್ದರು.
 
ಬ್ರಿಟನ್‌ನ ಆಂತರಿಕ ಭದ್ರತಾ ಗೂಢಚರ್ಯೆ ಸಂಸ್ಥೆ  ಎಂ15, ಭಯೋತ್ಪಾದನೆ ಭೀತಿ ತೀವ್ರವಾಗಿರುವ ಬಗ್ಗೆ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು.  ಹೀಗಾಗಿ ಭದ್ರತಾ ವ್ಯವಸ್ಥೆಯ  ವೈಫಲ್ಯಗಳ ಬಗ್ಗೆ ತನಿಖೆಯಾಗಬೇಕಿದೆ. ಈ ಮಧ್ಯೆ ಜೂನ್ 8ರಂದು ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ.  ಹೀಗಾಗಿ  ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ರಾಜಕೀಯ ಪಕ್ಷಗಳು ತೊಡಗಿಕೊಂಡಿದ್ದವು.
 
ಸದ್ಯಕ್ಕೆ  ಈಗ ಪ್ರಚಾರ ಕಾರ್ಯ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಈವರೆಗೆ ಚುನಾವಣಾ ಪ್ರಚಾರದಲ್ಲಿ ಆರೋಗ್ಯ ಹಾಗೂ ಶಿಕ್ಷಣ ಕುರಿತಾದ ಸರ್ಕಾರದ ನೀತಿಗಳು ಪ್ರಾಮುಖ್ಯ ಗಳಿಸಿದ್ದವು. ಇನ್ನು ಮುಂದೆ ಭಯೋತ್ಪಾದನೆ ವಿರೋಧಿ ಕಾರ್ಯತಂತ್ರ, ಸಾರ್ವಜನಿಕ ಸುರಕ್ಷತೆ ಇತ್ಯಾದಿ ವಿಚಾರಗಳು ಗಮನ ಸೆಳೆದುಕೊಳ್ಳಲಿವೆ. ಮುಂದಿನ ಸರ್ಕಾರಕ್ಕೆ ಭಯೋತ್ಪಾದನೆ ನಿರ್ವಹಣೆ, ದೊಡ್ಡ ಸವಾಲೂ ಆಗಲಿದೆ.
 
 ಐಎಸ್‌ಗೆ ಬೆಂಬಲ ನೀಡಲು ಇರಾಕ್ ಹಾಗೂ ಸಿರಿಯಾಗಳಿಗೆ ಬ್ರಿಟನ್‌ನಿಂದ ಸುಮಾರು  850 ಮಂದಿ ಹೋಗಿದ್ದಾರೆ ಎಂಬುದು ಅಂದಾಜು. ಈಗ ಅಲ್ಲಿ ಐಎಸ್ ನೆಲೆ ಕಳೆದುಕೊಳ್ಳುತ್ತಿರುವುದರಿಂದ ಅಲ್ಲಿಂದ ಸ್ವದೇಶಕ್ಕೆ ವಾಪಸಾಗುವ ವ್ಯಕ್ತಿಗಳು ನಡೆಸಬಹುದಾದ  ಭಯೋತ್ಪಾದನೆ ಕೃತ್ಯಗಳ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.
 
ಉಗ್ರ ಸಿದ್ಧಾಂತಗಳಿಗೆ ಯುವ ಜನರು  ಆಕರ್ಷಿತರಾಗದಂತೆ ತಡೆಯುವ  ಕಾರ್ಯಕ್ರಮಗಳೂ ಬೇಕು. 1991ರ ಮೇ 21ರಂದು  ಹತ್ಯೆಯಾದ ರಾಜೀವ್ ಗಾಂಧಿ ಸ್ಮರಣಾರ್ಥ ‘ಭಯೋತ್ಪಾದನಾ ವಿರೋಧಿ ದಿನ’ವನ್ನು ಲಂಡನ್‌ನಲ್ಲಿರುವ ಭಾರತೀಯ ಹೈ ಕಮಿಷನ್ ಕಚೇರಿಯಲ್ಲಿ ಆಚರಿಸಲಾಗಿತ್ತು. ಅದಾದ ಕೆಲವೇ ಗಂಟೆಗಳಲ್ಲಿ ಈ ಭಯೋತ್ಪಾದನಾ ದಾಳಿ ನಡೆದಿರುವುದು ವಿಪರ್ಯಾಸ.
 
ಕಳೆದ ವಾರ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಯೋತ್ಪಾದನೆ ವಿರುದ್ಧ ಹೋರಾಡಲು ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ. ಆದರೆ  ಈ ಸಂದರ್ಭದಲ್ಲಿ  ಇಸ್ಲಾಂನ ಒಂದು ಪಂಗಡದ ಜೊತೆ ದನಿಗೂಡಿಸಿ, ಇಸ್ಲಾಂನ ಇನ್ನೊಂದು ಪಂಗಡವಾದ ಇರಾನ್‌ನ ಷಿಯಾಗಳನ್ನು ಶತ್ರುವಾಗಿ ಬಿಂಬಿಸಿದ್ದಾರೆ.  
 
ಇಂತಹ ಧೋರಣೆ ಎಷ್ಟು ಸರಿ? ಭಯೋತ್ಪಾದನೆಗೆ ಯಾವುದೇ ಗಡಿಗಳಿಲ್ಲ ಎಂಬುದು  ಸದ್ಯದ ವಾಸ್ತವ.  ವಿಶ್ವದ ಒಂದು ಭಾಗದಲ್ಲಿ ನಡೆಯುವ ಕ್ರಿಯೆಗಳು ಮತ್ತೊಂದು ಭಾಗದಲ್ಲಿ ಪ್ರತಿಕ್ರಿಯೆಗೆ ಕಾರಣವಾಗಬಹುದು ಎಂಬುದನ್ನೂ ಜಾಗತಿಕ  ಶಕ್ತ ರಾಷ್ಟ್ರಗಳು ಪುನರ್‌ಮನನ ಮಾಡಿಕೊಳ್ಳುವುದೂ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT