ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಯಾರಣ್ಯ ಬಳಿ ಜಾಗ ಖರೀದಿಗೆ ಮುಂದಾದ ಜೆಎಸ್‌ಡಬ್ಲು!

Last Updated 24 ಮೇ 2017, 19:30 IST
ಅಕ್ಷರ ಗಾತ್ರ
ಬೆಳಗಾವಿ: ಜಿಲ್ಲೆಯ ಭೀಮಗಡ ಅಭಯಾರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ, ಖಾನಾಪುರ ತಾಲ್ಲೂಕಿನ ಗುಂಜಿ ಹೋಬಳಿಯ ಗಾವಳಿ ಗ್ರಾಮದ 878.01 ಎಕರೆ ಜಮೀನು ಖರೀದಿಸಲು ಜೆಎಸ್‌ಡಬ್ಲು ಉಕ್ಕು ಕಂಪೆನಿ ಮುಂದಾಗಿದೆ.
 
ಗ್ರಾಮದ ಸರ್ವೆ ನಂಬರ್‌ 71 ಹಾಗೂ 72ರಡಿ ಲಭ್ಯ ಇರುವ ಈ ಜಾಗವು 86 ಜನರ ಜಂಟಿ ಮಾಲೀಕತ್ವದಲ್ಲಿದ್ದು, ಕಂಪೆನಿಯು ಮುಂಗಡ ಹಣ ನೀಡಿ ಖರೀದಿ ಒಪ್ಪಂದ ಪತ್ರವನ್ನು ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
 
‘ಪಶ್ಚಿಮ ಘಟ್ಟ ಶ್ರೇಣಿ ವ್ಯಾಪ್ತಿಗೆ ಬರುವ ಈ ಅಭಯಾರಣ್ಯದಲ್ಲಿ ಆನೆ, ಹುಲಿ  ಸೇರಿದಂತೆ ಹಲವು ಕಾಡು ಪ್ರಾಣಿಗಳು  ವಾಸವಾಗಿವೆ. ಇದಕ್ಕೆ ಹೊಂದಿಕೊಂಡಂತೆಯೇ ಗಾವಳಿ ಗ್ರಾಮವಿದ್ದು, ಇಲ್ಲಿ ಉಕ್ಕು ತಯಾರಿಕಾ ಘಟಕ ಸ್ಥಾಪನೆಯಾದರೆ ಪರಿಸರ ಸಂಪೂರ್ಣವಾಗಿ ಹಾಳಾಗುತ್ತದೆ’ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
 
ಅರಣ್ಯೀಕರಣಕ್ಕಾಗಿ ಖರೀದಿ:  ‘ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಗಣಿಗಾರಿಕೆ ನಡೆಸಲು ಜೆಎಸ್‌ಡಬ್ಲು ಕಂಪೆನಿಗೆ ಸರ್ಕಾರ ಭೂಮಿ ನೀಡಿದೆ. ಇದಕ್ಕೆ ಬದಲಾಗಿ ಖಾಸಗಿ ಜಮೀನು ಖರೀದಿಸಿ, ಅರಣ್ಯ ಬೆಳೆಸಬೇಕು ಹಾಗೂ ಅದನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕು ಎನ್ನುವ ಷರತ್ತು ವಿಧಿಸಿತ್ತು. ಅದಕ್ಕಾಗಿ ಈ ಗ್ರಾಮದ ಜಮೀನನ್ನು ಖರೀದಿಸಲಾಗುತ್ತಿದೆ’ ಎಂದು ಕಂಪೆನಿಯ ಪರ ವಕೀಲ ಎಂ.ಎಂ. ಶೆಟ್ಟಿ ಹೇಳಿದರು.
 
‘ಜಾಗದ ಮಾಲೀಕರಿಗೆ ಕಂಪೆನಿಯೇ ಹಣ ನೀಡಿದ್ದರೂ, ರಾಜ್ಯ ಸರ್ಕಾರದ ಹೆಸರಿನಲ್ಲಿ  ಜಾಗ ಖರೀದಿಸಲಾಗುತ್ತಿದೆ. ಇಲ್ಲಿ ಯಾವುದೇ ಉಕ್ಕು ತಯಾರಿಕಾ ಘಟಕ ಸ್ಥಾಪಿಸುತ್ತಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
 
ಗಮನಕ್ಕೆ ಬಂದಿಲ್ಲ: ‘ಈ ಖರೀದಿ ಪ್ರಕ್ರಿಯೆ ನಮ್ಮ ಗಮನಕ್ಕೆ ಬಂದಿಲ್ಲ. ಕಂಪೆನಿಯವರಾಗಲೀ, ಜಾಗದ ಮಾಲೀಕರಾಗಲೀ ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಬಸವರಾಜ ಪಾಟೀಲ ಹೇಳಿದರು.
 
‘ಕಂಪೆನಿಯು ಖರೀದಿಸಲು ಬಯಸಿರುವ ಜಾಗವು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಒಳಪಡುತ್ತದೆ. ಈ ಜಾಗವು ಖಾಸಗಿಯವರಿಗೆ ಸೇರಿದ್ದರೂ ಪರಿಸರಕ್ಕೆ ಹಾನಿ ಮಾಡುವ ಯಾವುದೇ ಚಟುವಟಿಕೆ ನಡೆಸುವಂತಿಲ್ಲ. ಕೈಗಾರಿಕೆ ಸ್ಥಾಪನೆ ಹಾಗೂ ಗಣಿಗಾರಿಕೆ ಮಾಡುವಂತಿಲ್ಲ. ಇದನ್ನು ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ. ಅವರ ನಿರ್ದೇಶನದಂತೆ ಮುಂದಿನ ಕ್ರಮಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.
 
ಪಿಐಎಲ್‌ಗೆ ಚಿಂತನೆ: ‘ಗಣಿಗಾರಿಕೆಯಿಂದ ಪರಿಸರ ಸಮತೋಲನ ಹಾಳಾಗುವುದನ್ನು ತಡೆಗಟ್ಟಲು, ಬರಡು ಭೂಮಿಯಲ್ಲಿ ಅರಣ್ಯ ಬೆಳೆಸಬೇಕೆಂದು  ಸರ್ಕಾರ ನಿರ್ದೇಶನ ನೀಡಿರಬಹುದು. ಆದರೆ, ಇಲ್ಲಿ ಈಗಾಗಲೇ ದಟ್ಟವಾದ ಅರಣ್ಯ ಪ್ರದೇಶವಿದೆ. ಇಂತಹ ಜಾಗವನ್ನು ಏಕೆ ಖರೀದಿಸಬೇಕು.
 
ಬೇರೆಡೆ ಇರುವ ಬರಡು ಭೂಮಿ ಖರೀದಿಸಿ, ಅರಣ್ಯವನ್ನೇಕೆ ಬೆಳೆಸಬಾರದು’ ಎಂಬುದು ಪರಿಸರವಾದಿ ಸೋನಾಲಿ ಸರನೋಬತ್‌ ಅವರ ಪ್ರಶ್ನೆ.
 
‘ಪತ್ರಿಕೆಯಲ್ಲಿ ನೀಡಲಾದ ಜಾಹೀರಾತಿನಲ್ಲಿ ಯಾವ ಉದ್ದೇಶಕ್ಕಾಗಿ ಜಮೀನು ಖರೀದಿಸುತ್ತಿದ್ದೇವೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಿಲ್ಲ. ಖರೀದಿ ಪ್ರಕ್ರಿಯೆಯ ಹಿಂದಿನ ಉದ್ದೇಶಗಳ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಉಕ್ಕು ಘಟಕ ಸ್ಥಾಪಿಸುವ ಉದ್ದೇಶವೇನಾದರೂ ಇದೆಯೇ ಎನ್ನುವ ಅನುಮಾನ ನಮ್ಮನ್ನು ಕಾಡುತ್ತಿದೆ’ ಎಂದರು.
 
‘ಈ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಹಾಗೂ ಅಲ್ಲಿಯವರೆಗೆ ಖರೀದಿ ಪ್ರಕ್ರಿಯೆ ತಡೆಹಿಡಿಯಬೇಕು ಎಂದು ಕೋರಿ ಸದ್ಯದಲ್ಲಿಯೇ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಿದ್ದೇವೆ’ ಅವರು ತಿಳಿಸಿದರು.
****‌
‘ಆಕ್ಷೇಪಣೆಗಳಿಗೆ ಆಹ್ವಾನ’
ಜಾಗ ಖರೀದಿಸುತ್ತಿರುವ ಬಗ್ಗೆ ಕಂಪೆನಿಯ ಪರವಾಗಿ ವಕೀಲ ಎಂ.ಎಂ. ಶೆಟ್ಟಿ ಮೇ 22ರಂದು ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದಾರೆ. ಜಾಗದ ಮಾಲೀಕತ್ವ ಹಾಗೂ ಇತರ ವಿಷಯಗಳ ಬಗ್ಗೆ  ತಕರಾರು ಇದ್ದರೆ ಸಾರ್ವಜನಿಕರು 15 ದಿನಗಳೊಳಗೆ ತಮ್ಮನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT