ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ಡ ಬೋರ್:ಬೇಸಿಗೆಯಲ್ಲೂ ನೀರು

ತೆರೆದ ಬಾವಿ, ಹೊಂಡಗಳಲ್ಲಿ ನೀರು ಬರಿದಾದಾಗ ಈ ಪ್ರಯೋಗ ಉತ್ತಮ ಫಲಿತಾಂಶ ನೀಡುತ್ತದೆ – ಮಹಮ್ಮದ್
Last Updated 24 ಮೇ 2017, 19:30 IST
ಅಕ್ಷರ ಗಾತ್ರ
ವಿಟ್ಲ: ಬೇಸಿಗೆ ಬಂತೆಂದರೆ ಸಾಕು. ಕೃಷಿಕರು ಹಾಗೂ ಜನಸಾಮಾನ್ಯರು ನೀರಿಗಾಗಿ ಪರದಾಡುವುದು ಸಾಮಾನ್ಯ. ಕೊಳವೆ ಬಾವಿ ಕೊರೆದರೂ ನೀರು ಸಿಗದೇ ಕೃಷಿಕರು ಕಂಗಾಲಾಗುತ್ತಾರೆ. ಆದರೆ ವಿಟ್ಲದ ಕೃಷಿಕರೊಬ್ಬರು ‘ಅಡ್ಡ ಬೋರ್’ ಕೊರೆಯುವ ಮೂಲಕ ಸಮರ್ಪಕ ನೀರು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 
 
ವಿಟ್ಲ ಕಸಬಾ ಗ್ರಾಮದ ಸೇರಾಜೆ ಸುಬ್ರಹ್ಮಣ್ಯ ಭಟ್, ತಮ್ಮ 2.5 ಎಕರೆ ತೋಟದಲ್ಲಿ ಹತ್ತು ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಸಿಗಲಿಲ್ಲ. ತೋಟದ ಕೆರೆಯ ನೀರು ಅಡಿಕೆ ತೋಟಕ್ಕೆ ಸಾಕಾಗುತ್ತಿತ್ತು. ಆದರೆ ಮೇ ತಿಂಗಳಲ್ಲಿ ಮಳೆ ಬಾರದೇ ಇದ್ದರೆ ಕಷ್ಟವಾಗುತ್ತಿತ್ತು.
 
ಕೆರೆ 25 ಅಡಿ ಆಳವಿದ್ದು, ರಿಂಗ್ ಅಳವಡಿಸಿದ್ದಾರೆ. ಈ ಕೆರೆಗೆ 25 ವರ್ಷಗಳ ಹಿಂದೆ ಒಮ್ಮೆ ಅಡ್ಡ ಬೋರ್ ಕೊರೆಸಿದಾಗ ಸುಮಾರು 1 ಇಂಚು ನೀರು ಲಭ್ಯವಾಗಿತ್ತು. ಅದು ಆ ವರ್ಷದ ಸಮಸ್ಯೆಯನ್ನು ನೀಗಿಸಿತ್ತು.
 
ಈ ವರ್ಷ ಮತ್ತೆ 50 ಅಡಿಯಲ್ಲಿ ಅಡ್ಡ ಬೋರ್ ಕೊರೆಸಿದ್ದು, ಒಂದೂಕಾಲು ಇಂಚು ನೀರು ಹರಿದುಬರುತ್ತಿದೆ. ಇದು ಈ ಬೇಸಿಗೆಯನ್ನು ಪಾರು ಮಾಡುತ್ತದೆ ಎಂಬ ವಿಶ್ವಾಸ ಅವರದ್ದು.
 
‘ಕೊಳವೆ ಬಾವಿಯಲ್ಲಿ ನೀರು ಸಿಗುವುದಿಲ್ಲ. ತೋಟದಲ್ಲಿ ಆಳವಾದ ಕೆರೆಗಳಲ್ಲಿ ಮಾತ್ರ ನೀರು ಇರುತ್ತದೆ. ಬೇಸಿಗೆಯಲ್ಲಿ ಕಡಿಮೆಯಾಗುತ್ತಲೇ ಹೋಗುತ್ತದೆ. ಆಗ ಕೆರೆಯೊಳಗೆ ಅಡ್ಡಬೋರ್ ಕೊರೆದು, ನೀರು ಪಡೆಯುವುದು ಅತ್ಯಂತ ಸೂಕ್ತ. ಮಾನವ ಶ್ರಮದಲ್ಲೇ ಅಡ್ಡ ಬೋರ್ ಕೊರೆಯಲಾಗುವುದು. ಖರ್ಚು ಕಡಿಮೆ, ಸಿಕ್ಕಿದ ನೀರಿಗೆ ಮತ್ತೆ ನಿರ್ವಹಣೆ ವೆಚ್ಚ ಇಲ್ಲ’ ಎನ್ನುತ್ತಾರೆ ಸುಬ್ರಹ್ಮಣ್ಯ ಭಟ್. 
 
 
ಅಡ್ಡ ಬೋರ್ ಕೊರೆಯುವುದು ಹೀಗೆ: ಕೊಳವೆ ಬಾವಿಯನ್ನು ಯಂತ್ರಗಳಿಂದ ಕೊರೆಸಲಾಗುತ್ತದೆ. ಆದರೆ ಇಲ್ಲಿ ಮಾನವ ಶ್ರಮದಿಂದ ಈ ಕಾಮಗಾರಿ ನಡೆಯಬೇಕು. ಒಂದು ಜಿಐ ಪೈಪ್‌ನ ತುದಿಗೆ ಚೂಪಾದ ಕೆಲವು ಕಬ್ಬಿಣದ ತುಂಡುಗಳನ್ನು ವೆಲ್ಡ್ ಮಾಡಬೇಕು. ಅಂದರೆ ಅದು ಕೊರೆಯುವ ಪ್ರಬಲ ಅಸ್ತ್ರವಾಗಿ ರೂಪ ಪಡೆಯುತ್ತದೆ.
 
ಆ ಪೈಪ್ ಸುಮಾರು 10 ಅಡಿ ಉದ್ದವಿದ್ದು, ಮೂರು ನಾಲ್ಕು ಮಂದಿ ಕೆರೆಯಲ್ಲಿ ನಿಂತು, ಆ ಪೈಪ್‌್ ಅನ್ನು ಹಿಡಿದು ಹಿಂದೆ ಮುಂದೆ ತಳ್ಳುತ್ತಾರೆ. ಆಗ ಅದು ಭೂಮಿಯನ್ನು ಕೊರೆಯುತ್ತಲೇ ಹೋಗುತ್ತದೆ. 10 ಅಡಿ ಕೊರೆದ ಬಳಿಕ ಮತ್ತೊಂದು ಪೈಪ್ ಅನ್ನು ಅಳವಡಿಸಿ, ಹಿಂದಿನಂತೆ ಕಾಮಗಾರಿ ಮುಂದುವರಿಯಬೇಕು. 
 
ಇನ್ನೊಂದು ಪೈಪ್‌ನಲ್ಲಿ ಭಾರಿ ಒತ್ತಡದಲ್ಲಿ ನೀರು ಪೂರೈಸುವ ವ್ಯವಸ್ಥೆ ಇದ್ದು, ಭೂಮಿಯನ್ನು ಕೊರೆದಾಗ ಮಣ್ಣು ಹೊರಬರುವುದಕ್ಕೆ ಇದು ಉಪಯುಕ್ತ. ಅತ್ಯಂತ ಹೆಚ್ಚು ಎಂದರೆ 50ರಿಂದ 70 ಅಡಿ ಉದ್ದಕ್ಕೆ ಕೊರೆಯಲು ಸಾಧ್ಯ.
 
ಮಣ್ಣು ಇದ್ದರೆ ಕಾಮಗಾರಿ ಮುಂದುವರಿಸಲಾಗುತ್ತದೆ. ಕಲ್ಲು ಅಡ್ಡ ಸಿಕ್ಕಿದಲ್ಲಿ ಕಾಮಗಾರಿ ಸ್ಥಗಿತಗೊಳಿಸಿ, ಬೇರೆ ಜಾಗವನ್ನು ಆಯ್ಕೆ ಮಾಡಬೇಕಾಗುತ್ತದೆ. ನೀರು ಸಿಕ್ಕಿದ ಬಳಿಕ ಕೆರೆಗೆ ಒರತೆಯಾಗಿ ಸೇರ್ಪಡೆಗೊಳ್ಳುವ ನೀರು ಶಾಶ್ವತವಾಗಿ ಲಭ್ಯವಾಗುತ್ತದೆ.
 
ಅಡ್ಡಬೋರ್ ಮಹಮ್ಮದ್: ವಿಟ್ಲ ಸಮೀಪದ ಕೋಡಪದವು ಎಚ್.ಮಹಮ್ಮದ್ ಅಡ್ಡಬೋರ್ ಕೊರೆಯುವುದರಲ್ಲಿ ಸಿದ್ಧಹಸ್ತರು. ಅದಕ್ಕಾಗಿಯೇ ಇವರನ್ನು ‘ಅಡ್ಡಬೋರ್ ಮಹಮ್ಮದ್’ ಎಂದು ಕರೆಯುತ್ತಾರೆ.
 
1986ರಲ್ಲಿ ಅವರು ಈ ಕೆಲಸ ಆರಂಭಿಸಿದ್ದು, ಉಳಿದ ಸಮಯದಲ್ಲಿ ಅವರು ಬಾಡಿಗೆಗೆ ರಿಕ್ಷಾ ಓಡಿಸುತ್ತಾರೆ. ರಿಕ್ಷಾದ ಹೆಸರು ಅಡ್ಡ ಬೋರ್.  30 ವರ್ಷಗಳಿಂದ ಅವರು ಕೊರೆದ ಅಡ್ಡ ಬೋರ್ 1,000ಕ್ಕೂ ಅಧಿಕ. ಸುಳ್ಯ, ಪುತ್ತೂರು, ಧರ್ಮಸ್ಥಳ, ಬಂಟ್ವಾಳಗಳಲ್ಲಿ ಅವರು ಈ ಕಾಮಗಾರಿ ನಡೆಸಿದ್ದಾರೆ.
 
‘ಇಂದು ಕೂಲಿ ಕಾರ್ಮಿಕರು ಸಿಗುವುದು ಕಡಿಮೆ. ಕೆರೆಯ ಕೆಸರಲ್ಲಿ ಹೂತು ಕಷ್ಟಪಟ್ಟುಕೊಂಡು ಇಂಥ ಕೆಲಸ ಮಾಡುವವರಿಲ್ಲ. ಆದರೂ ಹೇಗೋ ಕಷ್ಟಪಟ್ಟು ಈಗಲೂ ಅಲ್ಲಲ್ಲಿ ಕೆಲಸ ಕೈಗೆತ್ತಿಕೊಳ್ಳುತ್ತೇನೆ’ಎನ್ನುತ್ತಾರೆ ಮಹಮ್ಮದ್. ಅಡ್ಡ ಬೋರ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮಹಮ್ಮದ್ ಅವರ ಮೊಬೈಲ್ ಸಂಖ್ಯೆ 94495 53903 ಸಂಪರ್ಕಿಸಬಹುದು. 
 
ಕೊಳವೆ ಬಾವಿ, ಬಾವಿಯಲ್ಲಿಯೂ ನೀರು ಸಿಗದೇ ಇದ್ದಾಗ ಅಡ್ಡ ಬೋರ್ ವೆಲ್ ಮೂಲಕ ನೀರಿನ ಒರತೆ ಪತ್ತೆ ಹಚ್ಚುವ ಕಾರ್ಯ ಮಾತ್ರ ಒಳ್ಳೆಯದು ಹಾಗೂ ಸುಲಭ. ಪ್ರತಿಯೊಬ್ಬರು ನೀರಿಗಾಗಿ ಅತ್ತಿತ್ತ ಓಡಾಡುವ ಬದಲು ತಮ್ಮ ಮನೆಯ ತೋಟದಲ್ಲಿರುವ ಕೆರೆಯಲ್ಲಿ ಅಡ್ಡ ಬೋರ್ ಕೊರೆದರೆ ಉತ್ತಮ.
 
ಒಂದು ವೇಳೆ ನೀರು ಲಭಿಸಿದರೆ ನೀರಿಗಾಗಿ ಪರದಾಟ ತಪ್ಪಿಸಬಹುದು. ಮಳೆ ಬರುವ ವರೆಗೂ ಈ ನೀರು ಸಾಕಾಗಬಹುದು ಎಂದು ಹೇಳಲಾಗುತ್ತಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT