ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತವರಿಗೆ ಟಿಕೆಟ್‌ ಗಗನ ಕುಸುಮ

ಸಮೀಕ್ಷೆ ವರದಿ ಆಧರಿಸಿ ಎಐಸಿಸಿ ನಿರ್ಧಾರ
Last Updated 24 ಮೇ 2017, 19:57 IST
ಅಕ್ಷರ ಗಾತ್ರ

ನವದಹಲಿ: ಪಕ್ಷದ ವಿವಿಧ ವಿಭಾಗಗಳಲ್ಲಿ ಸಾಕಷ್ಟು ಬದಲಾವಣೆ ತರುತ್ತ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸುತ್ತಿರುವ ಕಾಂಗ್ರೆಸ್‌ ಹೈಕಮಾಂಡ್‌, ರಾಜ್ಯ ವಿಧಾನಸಭೆಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಟಿಕೆಟ್‌ ಹಂಚುವುದರಲ್ಲೂ ವಿಭಿನ್ನ ಕಾರ್ಯತಂತ್ರ ರೂಪಿಸಲು ನಿರ್ಧರಿಸಿದೆ.

2013ರ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಿ ಭಾರಿ ಅಂತರದಿಂದ ಸೋತವರಿಗೆ ಮತ್ತೆ ಟಿಕೆಟ್‌ ನೀಡದೆ, ಹೊಸಬರಿಗೆ ಅವಕಾಶ ನೀಡುವಂತೆ ಸಲಹೆಗಳು ಬಂದಿದ್ದರಿಂದ ಈ ಕುರಿತ ತೀರ್ಮಾನ ಕೈಗೊಳ್ಳಲಾಗಿದೆ.

ಪಕ್ಷವೇ ನೇಮಿಸಿರುವ ಸಂಸ್ಥೆಯೊಂದು ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದ ಪ್ರತಿ ಕ್ಷೇತ್ರದಲ್ಲೂ ನಡೆಸಿರುವ ಸಮೀಕ್ಷೆಯ ವರದಿಯನ್ನು ಅವಲೋಕಿಲಾಗಿದೆ. ರಾಜ್ಯಕ್ಕೆ ಭೇಟಿ ನೀಡಿರುವ ಪಕ್ಷದ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ರಾಜ್ಯದ ಬಹುತೇಕ ಜಿಲ್ಲೆಗಳ ಮುಖಂಡರಿಂದಲೂ ಅಭಿಪ್ರಾಯ ಸಂಗ್ರಹಿಸಿದ್ದು, ಅವರ ಸಲಹೆ ಆಧರಿಸಿ ಟಿಕೆಟ್‌ ಹಂಚಲಾಗುತ್ತದೆ ಎಂದು ಹೈಕಮಾಂಡ್‌ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

‘ಕಳೆದ ಬಾರಿ ಪಕ್ಷದ ಪರ ಭಾರಿ ಅಲೆ ಇದ್ದಾಗಲೇ ಸೋತಿರುವವರಿಗೆ ಮತ್ತೆ ಟಿಕೆಟ್‌ ನೀಡಿದಲ್ಲಿ ಪಕ್ಷದ ಗೆಲುವಿನ ಅವಕಾಶಗಳು ಕಡಿಮೆ’ ಎಂಬ ಅಂಶವನ್ನು ಆಧರಿಸಿ ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆಗಳು ನಿಚ್ಚಳವಾಗಿದೆ. ಕ್ಷೇತ್ರದಾದ್ಯಂತ ಸಂಚರಿಸದೆ, ಜನರನ್ನು ಕಡೆಗಣಿಸಿರುವ ಕೆಲವು ಶಾಸಕರೂ ಇದ್ದಾರೆ. ಸಚಿವರಾಗಿದ್ದವರು ಕ್ಷೇತ್ರದಾದ್ಯಂತ ಸಂಚರಿಸುವುದು ಸಾಧ್ಯವಾಗಿಲ್ಲ.

ಅಂಥವರನ್ನು ಹೊರತುಪಡಿಸಿ, ಮತದಾರರನ್ನೇ ಮರೆತವರೂ ಇದ್ದಾರೆ. ಅವರು ಮರಳಿ ಟಿಕೆಟ್‌ ಗಿಟ್ಟಿಸುವುದು ಕಷ್ಟಸಾಧ್ಯ. ಹೈಕಮಾಂಡ್‌ ಈಗಾಗಲೇ ಈ ಸಂದೇಶ ರವಾನಿಸಿದೆ.

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಸೇರಿದಂತೆ ಪಕ್ಷದಲ್ಲಿ ಪ್ರಭಾವಿಯಾಗಿರುವ ಕೆಲವು ಮುಖಂಡರು ಕಳೆದ ಬಾರಿ ಸೋತವರಲ್ಲಿ ಪ್ರಮುಖರಾಗಿದ್ದಾರೆ. ಅಂಥವರಲ್ಲಿ ಕೆಲವರಿಗೆ ಟಿಕೆಟ್‌ ದೊರೆಯಬಹುದು. ಆದರೆ, ಸೋತಿರುವ ಎಲ್ಲರಿಗೂ ಟಿಕೆಟ್‌ ಸಿಗುವುದು ಕಷ್ಟ.

ಅತ್ಯಂತ ಕಡಿಮೆ ಅಂತರದಿಂದ ಸೋತಿರುವ ಕೆಲವರಿಗೆ ಮತ್ತೆ ಟಿಕೆಟ್‌ ನೀಡಬಹುದು. ಆದರೆ, ಐದು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋತವರನ್ನು ಮರಳಿ ಕಣಕ್ಕಿಳಿಸುವುದು ವಿರೋಧ ಪಕ್ಷಗಳಿಗೆ ಪುಷ್ಟಿ ನೀಡುತ್ತದೆ ಎಂದು ಸಮೀಕ್ಷೆಯ ಸಂದರ್ಭ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ ಎಂದು ಪಕ್ಷದ ರಾಜ್ಯ ಮುಖಂಡರೊಬ್ಬರು ತಿಳಿಸಿದರು.

ಟಿಕೆಟ್‌ ಹಂಚಿಕೆಯಲ್ಲಿ ವಿಶಿಷ್ಟ ತಂತ್ರ ಅನುಸರಿಸುವ ಕುರಿತು ಬಿಜೆಪಿ ಚಿಂತನೆ ನಡೆಸುತ್ತಿದೆ. ಮತದಾರರ ಅಭಿಪ್ರಾಯ ಸಂಗ್ರಹಿಸಿ ನೀಡಲಾದ ವರದಿಯನ್ನು ಆಧರಿಸಿ ಪ್ರತಿ ಕ್ಷೇತ್ರದ ಟಿಕೆಟ್‌ ಹಂಚಿಕೆ ಕಾರ್ಯವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರೇ ನಿರ್ವಹಿಸಲಿದ್ದಾರೆ. ಕಾಂಗ್ರೆಸ್‌ ಸಹ  ಸಮೀಕ್ಷೆ ನಡೆಸಿದ್ದು, ಸೋತವರಿಗೆ ಮಣೆ ಹಾಕದಿರುವುದೇ ಒಳಿತು ಎಂಬ ತೀರ್ಮಾನಕ್ಕೆ ಬಂದಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT