ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಸಾಲದು’

Last Updated 24 ಮೇ 2017, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿ ಶಿಕ್ಷಣಕ್ಕೆ ಪ್ರತಿ ವರ್ಷ ಬಜೆಟ್‌ನಲ್ಲಿ ಕೇವಲ ಶೇ 5 ಅನುದಾನ ಮಾತ್ರ ಮೀಸಲಿಡಲಾಗುತ್ತಿದೆ. ಇದರಿಂದ ಅನಕ್ಷರತೆ ನಿವಾರಿಸಲು ಮತ್ತು ಉನ್ನತ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಸಾಧ್ಯವಾಗುವುದಿಲ್ಲ’  ಎಂದು ವಿಶ್ರಾಂತ ಕುಲಪತಿ ಪ್ರೊ.ಸುಧಾ ರಾವ್‌ ಅಭಿಪ್ರಾಯಪಟ್ಟರು.

ಸ್ನೇಹ ಬಳಗ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಕವಲು ದಾರಿಯಲ್ಲಿ ಉನ್ನತ ಶಿಕ್ಷಣ’ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಶೈಕ್ಷಣಿಕ ಸ್ವಾತಂತ್ರ್ಯ’ ಕುರಿತು ಅವರು ಮಾತನಾಡಿದರು. ಕಡ್ಡಾಯ ಮತ್ತು ಉಚಿತ ಶಿಕ್ಷಣದ ಬಗ್ಗೆ ಪಂಚಾಯತ್‌ನಿಂದ ಸಂಸತ್‌ವರೆಗೆ ಜನಪ್ರತಿನಿಧಿಗಳು ಎಂದಿಗೂ ಈಡೇರಿಸಲಾಗದ ಭರವಸೆ ನೀಡುತ್ತಾರೆ. ಆದರೆ, ಶಿಕ್ಷಣಕ್ಕೆ ಅತ್ಯಂತ ಕಡಿಮೆ ಅನುದಾನ ಮೀಸಲಿಡುತ್ತಾರೆ.

ಶಿಕ್ಷಣಕ್ಕೆ ಮೀಸಲಿಡುವ ಅನುದಾನವನ್ನು ಕನಿಷ್ಠ ಶೇ 11 ಅಥವಾ 12ಕ್ಕೆ ಏರಿಸಿದರೆ ಮಾತ್ರ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಿಸಬಹುದು ಎಂದರು. ಶಿಕ್ಷಣ ವಾಣಿಜ್ಯೀಕರಣದಿಂದ ಶೈಕ್ಷಣಿಕ ಸ್ವಾತಂತ್ರ್ಯವೂ ಹರಣವಾಗುತ್ತಿದೆ. ಶೈಕ್ಷಣಿಕ ಸ್ವಾತಂತ್ರ್ಯವಿಲ್ಲದ ಕಡೆ ಉತ್ಕೃಷ್ಟ ಮಟ್ಟದ ಸಂಶೋಧನೆ, ಬರಹ ಮೂಡಿ ಬರುವುದಿಲ್ಲ. ವಿಶ್ವವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಸ್ವಾತಂತ್ರ್ಯ ಇರಲೇಬೇಕಾದುದು ಅತ್ಯಗತ್ಯ. ಆಗ ಮಾತ್ರ ಶಿಕ್ಷಣವೂ ಸರಿ ದಿಕ್ಕಿನಲ್ಲಿ ಸಾಗುತ್ತದೆ’ ಎಂದರು.

ಸಂಪನ್ಮೂಲ ಕೊರತೆ ಇರುವುದಾಗಿ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ  ವಿವಿ ಮುಖ್ಯಸ್ಥರು ಕೊರಗುತ್ತಾರೆ. ಆದರೆ, ವ್ಯರ್ಥವಾಗುತ್ತಿರುವ ಸಂಪನ್ಮೂಲ ಅಂದಾಜಿಸಿ, ಸದ್ಬಳಕೆ ಮಾಡಿಕೊಂಡರೆ ಈಗ ಪಡೆಯುತ್ತಿರುವ ಶೈಕ್ಷಣಿಕ ಪ್ರತಿಫಲ ಮೂರುಪಟ್ಟು ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.

ಲೇಖಕ ಪ್ರೊ.ಜಿ.ರಾಮಕೃಷ್ಣ ಮಾತನಾಡಿ, ಕಾಲೇಜು ಮತ್ತು ವಿ.ವಿಗಳಲ್ಲಿ ಅಗತ್ಯ ಸಂಖ್ಯೆಯಲ್ಲಿ ಪೂರ್ಣಾವಧಿ ಬೋಧಕರಿಲ್ಲ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶೇ 50 ಅತಿಥಿ ಉಪನ್ಯಾಸಕರಿದ್ದಾರೆ. ಉನ್ನತ ಶಿಕ್ಷಣ ಕವಲು ದಾರಿ ಹಿಡಿಯದಂತೆ ತಡೆಯಲು ಎಲ್ಲ ಕಾಲೇಜು, ವಿ.ವಿಗಳಿಗೆ ಕಾಯಂ ಪ್ರಾಧ್ಯಾಪಕರನ್ನು ನೇಮಿಸಬೇಕು ಎಂದು ಸಲಹೆ ನೀಡಿದರು.

ವಿಶ್ರಾಂತ ಕುಲಪತಿ ಪ್ರೊ.ಎಸ್‌.ಬಿಸಲಯ್ಯ ಮಾತನಾಡಿ ‘ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತಾರದಿದ್ದರೆ ಜಾಗತಿಕ ಸವಾಲು ಎದುರಿಸಲು ಸಾಧ್ಯವಾಗುವುದಿಲ್ಲ. ಬೋಧಕರು ಕೂಡ ಬದಲಾವಣೆಗೆ ಒಗ್ಗಿಕೊಳ್ಳಬೇಕು. ಹೊಸ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಸಬೇಕು’ ಎಂದರು.

ಭಾರತೀಯ ವಿಜ್ಞಾನ ಸಂಸ್ಥೆ ಅತಿಥಿ ಉಪನ್ಯಾಸಕ ಪ್ರೊ.ಎಚ್‌.ಎ.ರಂಗನಾಥ್‌ ‘ಉನ್ನತ ಶಿಕ್ಷಣದ ವಿಕಸನದಲ್ಲಿ ಭವಿಷ್ಯದ ಸವಾಲು ಎದುರಿಸಲು ನಾವು ತಯಾರಾಗಿದ್ದೇವೆಯೇ? ಕುರಿತು ವಿಷಯ ಮಂಡಿಸಿದರು. ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪ ಉದ್ಘಾಟಿಸಿದರು. ಪ್ರೊ.ಕೆ.ಜಿ.ಶ್ರೀನಿವಾಸಮೂರ್ತಿ, ಪ್ರೊ.ಜೆ.ವಿ.ರುದ್ರಮುನಿ,  ಪ್ರೊ.ಕೆ.ಈರೇಸಿ, ಪ್ರೊ.ವೆಂಕಟೇಶಮೂರ್ತಿ ಅವರನ್ನು ಸ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT