ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಡವರ ರಕ್ಷಕ’ನ ಆಡಳಿತದಲ್ಲಿ ಕಷ್ಟಗಳು ದೂರವಾಗಿಲ್ಲ

ಸಿದ್ದರಾಮಯ್ಯ ಸರ್ಕಾರಕ್ಕೆ 4 ವರ್ಷ
Last Updated 24 ಮೇ 2017, 20:02 IST
ಅಕ್ಷರ ಗಾತ್ರ

- ಆರ್.ಎಸ್. ದೇಶಪಾಂಡೆ
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಾಲ್ಕು ವರ್ಷ ಪೂರೈಸಿದೆ. ಸಿದ್ದರಾಮಯ್ಯ ಮತ್ತು ಅವರ ಸಹೋದ್ಯೋಗಿಗಳು ಖುಷಿಪಡಲು ಹಲವು ಕಾರಣಗಳು ಇವೆ. ಹಾಗಾಗಿ, ಕಾಂಗ್ರೆಸ್ ಪಕ್ಷವು ಈ ಹೊತ್ತಿನಲ್ಲಿ ಸಂಭ್ರಮಿಸುತ್ತಿದೆ. ಸರ್ಕಾರವು ಸಂಪೂರ್ಣವಾಗಿ ಸನ್ನದ್ಧವಾಗಿ ಅಲ್ಲದಿದ್ದರೂ, ಈವರೆಗೆ ತಲುಪಲಾರದವರನ್ನು ತಲುಪಲು ಪ್ರಾಮಾಣಿಕ ಪ್ರಯತ್ನ ನಡೆಸಿದೆ.

ಸರ್ಕಾರದ ನಾಲ್ಕು ವರ್ಷಗಳ ಕೆಲಸವನ್ನು ನಾವು ವಾಸ್ತವದ ನೆಲೆಯಲ್ಲಿ ನೋಡಬೇಕು. ಸಿದ್ದರಾಮಯ್ಯ ಅವರು ತಾವು ಅಂದುಕೊಂಡಿದ್ದರಲ್ಲಿ ಕೆಲವ
ಷ್ಟನ್ನು ಸಾಧಿಸಿದ್ದಾರೆ, ಇದೇ ಹೊತ್ತಿನಲ್ಲಿ ಅವರು ದೀರ್ಘಾವಧಿಯ ಕೆಲವು ಅಭಿವೃದ್ಧಿ ವಿಚಾರಗಳನ್ನು ಮರೆತಿದ್ದಾರೆ. ಅವರು ಈ ಹಿಂದೆ ಸಮಾಜವಾದಿ ವಿಚಾರಗಳೊಂದಿಗೆ ಗುರುತಿಸಿಕೊಂಡಿದ್ದು, ನೀತಿ ನಿರೂಪಣೆಗಳಲ್ಲಿ ಸಹಾಯ ಮಾಡಿದೆ. ಸಿದ್ದರಾಮಯ್ಯ ಅವರ ಆಡಳಿತ ಅವಧಿಯು ಅಭಿವೃದ್ಧಿಯ ವಿಚಾರದಲ್ಲಿ ಕರ್ನಾಟಕ ಕಂಡ ಅತ್ಯುತ್ತಮ ಅವಧಿಗಳಲ್ಲಿ ಒಂದು ಎಂಬ ಮಾತನ್ನು ನಾನು ಆತ್ಮವಿಶ್ವಾಸದಿಂದ ಹೇಳಲಾರೆ.

ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯ ತನ್ನದೇ ಆದ ಸಮಸ್ಯೆಗಳನ್ನು ಹೊಂದಿದೆ, ಕೆಲವು ವಿಚಾರಗಳ ಬಗ್ಗೆ ಬಹುಕಾಲದಿಂದ ನಿರ್ಲಕ್ಷ್ಯ ತಾಳಲಾಗಿದೆ ಎಂಬುದು ನಿಜ. ಬರ, ಪ್ರಾದೇಶಿಕ ಅಸಮಾನತೆ, ಕೃಷಿ ವಲಯ ಎದುರಿಸುತ್ತಿರುವ ತೀವ್ರ ಬಿಕ್ಕಟ್ಟು ಹಾಗೂ ರೈತರ ಆತ್ಮಹತ್ಯೆಗಳು, ಮಳೆಯಾಶ್ರಿತ ಪ್ರದೇಶಗಳ ಅಭಿವೃದ್ಧಿ ಆಗಿಲ್ಲದಿರುವುದು, ಬುಡಕಟ್ಟು ಜನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಇರುವ ಬಡತನ, ಉತ್ತರ ಕರ್ನಾಟಕದ ಹಲವು ಪ್ರದೇಶಗಳು ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿರುವುದು, ಸಣ್ಣ ನಗರಗಳಲ್ಲಿ ಮೂಲಸೌಕರ್ಯಗಳ ಕೊರತೆಯಂತಹ ಸಮಸ್ಯೆಗಳು ಇವೆ.

ರಾಜ್ಯವು ಒಟ್ಟಾರೆಯಾಗಿ ಅಭಿವೃದ್ಧಿ ಹೊಂದಿಲ್ಲದಿರುವುದಕ್ಕೆ ಇರುವ ಕಾರಣಗಳಲ್ಲಿ ಇವೂ ಸೇರಿವೆ. ಈವರೆಗೆ ತಲುಪಲಾರದವರನ್ನು ತುಸುವಾದರೂ ತಲುಪುವಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯಶಸ್ಸು ಕಂಡಿದೆ ಎನ್ನುವುದಾದರೆ, ಸಮಸ್ಯೆಗಳ ಮೂಲವನ್ನು ಮುಟ್ಟಲು ಈ ಸರ್ಕಾರ ಆಂಶಿಕ
ವಾಗಿಯೂ ಯಶಸ್ಸು ಕಂಡಿಲ್ಲ.

ಸಿದ್ದರಾಮಯ್ಯ ಅವರು ಬಜೆಟ್‌ ಸಿದ್ಧಪಡಿಸುವ ಕೌಶಲಕ್ಕೆ ಹೆಸರಾದವರು. ಆದರೆ ಕಳೆದ ನಾಲ್ಕು ವರ್ಷಗಳ ಅನುಭವ ಬೇರೆಯದೇ ವಿವರಣೆ ನೀಡುತ್ತದೆ. ಆರ್ಥಿಕ ದೂರದರ್ಶಿತ್ವ, ಆರ್ಥಿಕ ಬೆಳವಣಿಗೆಯ ಕಡೆ ಹೆಜ್ಜೆ ಇಡುವುದಕ್ಕಿಂತ ಹೆಚ್ಚಾಗಿ ಅವರ ಆದ್ಯತೆ ಸಾರ್ವಜನಿಕವಾಗಿ ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳುವುದಕ್ಕೆ ಮಾತ್ರ ಕೇಂದ್ರಿತವಾಗಿತ್ತು. ಒಟ್ಟು ಆದಾಯದ ಶೇಕಡಾವಾರು ವರಮಾನ ವೆಚ್ಚವು 2014–15ರಲ್ಲಿ 81ರಷ್ಟು ಇದ್ದಿದ್ದು, 2017–18ರಲ್ಲಿ 79ರಷ್ಟಕ್ಕೆ ಕುಸಿದಿರುವುದು ಈ ಮಾತಿಗೆ ಸಾಕ್ಷಿ. ₹ 20 ಸಾವಿರ ಕೋಟಿಯ ಆಸುಪಾಸಿನಲ್ಲಿ ಇದ್ದ ಸಾಲದ ಪ್ರಮಾಣವು ₹ 40 ಸಾವಿರ ಕೋಟಿಯ ಆಸುಪಾಸಿಗೆ ಹೆಚ್ಚಳ ಕಂಡಿರುವುದು, ವೆಚ್ಚಗಳನ್ನು ಪರಿಣಾಮಕಾರಿಯಾಗಿ ಮಾಡದಿರುವುದು ಅಭಿವೃದ್ಧಿಪರ ಆಡಳಿತದಲ್ಲಿನ ಲೋಪಗಳಿಗೆ ಸಾಕ್ಷಿ.

ತಮ್ಮ ಸರ್ಕಾರವು ‘ಅಹಿಂದ’ ವರ್ಗಗಳ ಅಭಿವೃದ್ಧಿಗೆ ಆದ್ಯತೆ ನೀಡಲಿದೆ ಎಂಬುದನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಸ್ಪಷ್ಟಪಡಿಸಿದ್ದರು. ‘ಅಹಿಂದ’ ಎಂಬ ಹೆಸರು ಸಿದ್ದರಾಮಯ್ಯ ಅವರಿಗೆ ಆಪ್ತ, ಇದನ್ನು ಅವರು ಚುನಾವಣೆಯಲ್ಲೂ ಪರಿಣಾಮ
ಕಾರಿಯಾಗಿ ಬಳಸಿಕೊಂಡಿದ್ದರು. ರೈತರ ಭವಿಷ್ಯವನ್ನು ಉತ್ತಮಪಡಿಸುವ ಭರವಸೆಯನ್ನೂ ಅವರು ನೀಡಿದ್ದರು. ಹಾಗಾಗಿ ಮೊದಲ ಬಜೆಟ್‌ ಮಂಡಿಸು
ವಾಗ ಅವರು ರೈತರು, ಬಹುಸಂಖ್ಯಾತವಲ್ಲದ ಧಾರ್ಮಿಕ ಸಮುದಾಯಗಳು, ಕಾರ್ಮಿಕರು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಹೇಳಿದರು. ಇವು ಚುನಾವಣೆಯ ವೇಳೆ ಚಲಾವಣೆಗೆ ಬರುವ ‘ವೋಟಿನ ನಾಣ್ಯ’ಗಳು ಎಂಬುದು ನಮಗೆ ಗೊತ್ತಿದೆ.


ಹಾಗಾಗಿ, ಅವರು ಅಧಿಕಾರಕ್ಕೆ ಬಂದ ತಕ್ಷಣ ₹ 1ಕ್ಕೆ ಒಂದು ಕೆ.ಜಿ ಅಕ್ಕಿ ಪೂರೈಸುವ ಯೋಜನೆ ಪ್ರಕಟಿಸಿದರು.  ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಸೇರಿದ ಜನ ಪಡೆದಿರುವ ಸಾಲ ಮನ್ನಾ ಮಾಡುವ, ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಪ್ರೋತ್ಸಾಹ ಧನ ನೀಡುವ ಮತ್ತು ಅಹಿಂದ ವರ್ಗಗಳಿಗೆ ಸಹಾಯವಾಗುವ ಕೆಲವು ಯೋಜನೆಗಳಿಗೆ ಆದ್ಯತೆ ನೀಡಿದರು. ದೊಡ್ಡ ಮತದಾರ ಸಮೂಹವನ್ನು ಖುಷಿಪಡಿಸುವುದು ಅನಿವಾರ್ಯ ಎಂಬುದು ಇಲ್ಲಿರುವ ಸಂದೇಶ.

ಕೃಷಿ ಭಾಗ್ಯ, ಸಾವಯವ ಭಾಗ್ಯ, ಅನ್ನಭಾಗ್ಯ, ಕ್ಷೀರಭಾಗ್ಯ, ವಸತಿ ಭಾಗ್ಯ ಸೇರಿದಂತೆ ‘ಭಾಗ್ಯ’ ಹೆಸರಿನ ಸರಣಿ ಯೋಜನೆಗಳನ್ನು ಘೋಷಿಸಲಾಯಿತು. ಪ್ರತಿ ಬಜೆಟ್‌ ಭಾಷಣವೂ ಒಂದಿಷ್ಟು ಹೊಸ ಯೋಜನೆಗಳ ಘೋಷಣೆ ಹೊಂದಿರುತ್ತಿತ್ತು. ವಿಶೇಷ ಯೋಜನೆಗಳನ್ನು ರೂಪಿಸುವ ಪ್ರತ್ಯೇಕ ಇಲಾಖೆಯೊಂದು ಸರ್ಕಾರದಲ್ಲಿ ಇದ್ದಿರಬೇಕು!

ಈ ಯೋಜನೆಗಳ ಸ್ವತಂತ್ರ ಮೌಲ್ಯಮಾಪನ ಆಗಿಲ್ಲ. ಈವರೆಗೆ ಇವುಗಳ ಬಗ್ಗೆ ಮೌಲ್ಯಮಾಪನ ನಡೆಸಿರುವ ಸಂಸ್ಥೆಗಳು ರಾಜ್ಯ ಮೌಲ್ಯಮಾಪನ ಪ್ರಾಧಿಕಾರದಿಂದ ಹಣ ಪಡೆದುಕೊಂಡಿವೆ. ಅವುಗಳು ನಡೆಸಿದ ಸಮೀಕ್ಷಾ ಮಾದರಿಗಳಲ್ಲಿ ದೋಷಗಳಿವೆ.

ಕೃಷಿ ವಲಯಕ್ಕೆ ಮೊದಲ ಆದ್ಯತೆ ನೀಡುವುದಾಗಿ ಸಿದ್ದರಾಮಯ್ಯ ಅವರು ಮೊದಲ ಬಜೆಟ್‌ ವೇಳೆ ಹೇಳಿದ್ದರು. ರೈತರಿಗೆ ₹ 2 ಲಕ್ಷದವರೆಗೆ ಬಡ್ಡಿರಹಿತ ಸಾಲ, ಕೃಷಿ ಬೆಲೆ ನಿಗದಿ ಆಯೋಗ, ಕೃಷಿ ಕಾರ್ಮಿಕರ ಮಕ್ಕಳಿಗೆ ಶುಲ್ಕ ವಿನಾಯಿತಿ, ಸಾವಯವ ಕೃಷಿ, ಭೂಚೇತನ ಯೋಜನೆಗಳನ್ನು ಮೊದಲ ಬಜೆಟ್‌ನಲ್ಲಿ ಘೋಷಿಸಿದ್ದರು. ಇವೆಲ್ಲ ಈಗಾಗಲೇ ಬಳಕೆಯಾಗಿರುವ ಅಭಿವೃದ್ಧಿ ಮಾದರಿಗಳು.

ಸಾವಯವ ಕೃಷಿ, ಭೂಚೇತನ, ಹನಿ ನೀರಾವರಿ ಪದ್ಧತಿ, ಯಶಸ್ವಿನಿ, ಕೃಷಿ ಹೊಂಡ ಯೋಜನೆಗಳು ಹಿಂದಿನ ಸರ್ಕಾರಗಳ ಅವಧಿಯಿಂದಲೂ ಇವೆ. ಇವುಗಳಲ್ಲಿ ಹೊಸದೇನೂ ಇಲ್ಲ. ಸ್ವಾಮಿನಾಥನ್ ಆಯೋಗ, ವಿಷನ್ ಗ್ರೂಪ್, ರಾಜ್ಯ ರೈತರ ಅಭಿವೃದ್ಧಿ ಸಮಿತಿಗಳನ್ನು ರಚಿಸುವ ಘೋಷಣೆ ಮಾಡಲಾಯಿತು. ಆದರೆ ಇವುಗಳ ವರದಿಗಳು ಕೆಲವೇ ಕೆಲವು ಜನರಿಗೆ ಮಾತ್ರ ಲಭ್ಯವಿವೆ ಅನಿಸುತ್ತಿದೆ.

ಈ ಸಮಿತಿಗಳು ನೀಡಿದ ಶಿಫಾರಸುಗಳು ಯಾರಿಗೂ ಲಭ್ಯವಿಲ್ಲ. ಈ ಶಿಫಾರಸುಗಳು ಸಂಬಂಧಪಟ್ಟ ವೆಬ್‌ಸೈಟ್‌ಗಳಲ್ಲಿ ಲಭ್ಯವಿಲ್ಲ. ಇವು ನಿಜಕ್ಕೂ ಅಸ್ತಿತ್ವದಲ್ಲಿ ಇವೆಯೇ ಎಂಬ ಅನುಮಾನ ನನ್ನಲ್ಲಿದೆ. ಇಂಥವು ಯಾವುವೂ ಇಲ್ಲ ಎಂದು ನಾನು ಸರ್ಕಾರದ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಗೊತ್ತಾಯಿತು. ಕೃಷಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಮೂರು ವರ್ಷಗಳಷ್ಟು ಹಳೆಯ ಮಾಹಿತಿ ಇದೆ. ಈ ಸರ್ಕಾರ ಘೋಷಿಸಿದ ಯೋಜನೆಗಳು ಇದರಲ್ಲಿ ಕಾಣಿಸುವುದೇ ಇಲ್ಲ. ಕೃಷ್ಣಬೈರೇಗೌಡ ಅವರು ಕೃಷಿ ಸಚಿವರಾಗಿ ಅಧಿಕಾರ ಸ್ವೀಕರಿಸಿದಾಗ ನಿರೀಕ್ಷೆಗಳು ದೊಡ್ಡದಿದ್ದವು. ಅವರು ಇಲಾಖೆಯಲ್ಲಿ ಚಲನಶೀಲತೆ ತರುತ್ತಾರೆ ಎಂಬ ಆಸೆ ಇತ್ತು.

ಆದರೆ, ರೈತರು ಎದುರಿಸುತ್ತಿರುವ ಬಿಕ್ಕಟ್ಟು ಮುಂದುವರಿಯಿತು. ಹಲವು ರೈತರು ಆತ್ಮಹತ್ಯೆ ಮಾಡಿಕೊಂಡರು. ಈ ವರ್ಷದ ಮಾರ್ಚ್‌ 11ರ ವೇಳೆಗೆ ಕರ್ನಾಟಕವು ರೈತರ ಆತ್ಮಹತ್ಯೆಯಲ್ಲಿ ಮುಂಚೂಣಿಯಲ್ಲಿತ್ತು.

ರಾಜ್ಯದಲ್ಲಿ ಮಳೆಯನ್ನೇ ನಂಬಿ ಕೃಷಿ ಚಟುವಟಿಕೆ ನಡೆಯುವ ಪ್ರದೇಶ ತೀರಾ ಹೆಚ್ಚಿದೆ. ಶೇಕಡ 77ರಷ್ಟು ಹಿಡುವಳಿದಾರರು ಸಣ್ಣ ಮತ್ತು ಅತಿಸಣ್ಣ ರೈತರು. ಸರಾಸರಿ ಜಮೀನು ಹಿಡುವಳಿ ಪ್ರಮಾಣ 0.48 ಹೆಕ್ಟೇರ್‌ ಮಾತ್ರ. ಕೃಷಿ ಜಮೀನಿನಲ್ಲಿ ಶೇಕಡ 30ರಷ್ಟು ಪ್ರದೇಶದಲ್ಲಿ ಮಾತ್ರ ನೀರಾವರಿ ಸೌಲಭ್ಯ ಇದೆ. ಕಳೆದ ಮೂರು ವರ್ಷಗಳಿಂದ ರಾಜ್ಯ ತೀವ್ರ ಬರ ಎದುರಿಸಿದೆ.

ಕಬ್ಬು ಬೆಳೆಗಾರರ ಸಮಸ್ಯೆಗಳು ತೀವ್ರವಾಗಿವೆ, ವಿದ್ಯುತ್ ಸ್ಥಿತಿ ಉತ್ತಮವಾಗಿಲ್ಲ. ಹಾಗಾಗಿ ಕೃಷಿ ಕ್ಷೇತ್ರದ ಪರಿಸ್ಥಿತಿ ಉತ್ತಮವಾಗಿ ಇಲ್ಲದಿರುವುದು ಆಶ್ಚರ್ಯದ ವಿಚಾರವೇನೂ ಅಲ್ಲ. ಇವು  ಹೊಸ ಸಮಸ್ಯೆಗಳಲ್ಲದ ಕಾರಣ ಇವುಗಳನ್ನು ನಿಭಾಯಿಸಲು ನೀತಿ ನಿರೂಪಕರು ತೀರಾ ಕಷ್ಟಪಡಬೇಕಾಗಿಲ್ಲ.
ಆದರೆ ಕೃಷಿ ಕ್ಷೇತ್ರದ ತುರ್ತು ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಹಾಗೂ ಈ ಕ್ಷೇತ್ರದಲ್ಲಿ ದೀರ್ಘಾವಧಿಯ ಅಭಿವೃದ್ಧಿ ಸಾಧಿಸುವಲ್ಲಿ ಚಲನಶೀಲತೆ ಕಂಡುಬರುತ್ತಿಲ್ಲ. ನಾಲ್ಕು ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯ ಅವರು ‘ಬಡವರ ರಕ್ಷಕ’ ಎಂಬ ಹೆಸರು ಸಂಪಾದಿಸಿದ್ದಾರೆ. ಆದರೆ ಜನರ ಕಷ್ಟ
ಗಳು ಎಲ್ಲೆಡೆ ದೂರವಾಗಿಲ್ಲ. ಇದರಲ್ಲಿ ಅತಿಹೆಚ್ಚು ತೊಂದರೆಗೆ ಒಳಗಾಗಿರುವವ ರೈತ.


(ಲೇಖಕ ಬೆಂಗಳೂರಿನ ಪಿಇಎಸ್‌ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗ ನಿರ್ದೇಶಕ ಮತ್ತು ಸಲಹೆಗಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT