ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಕುಮಾರ್‌ಗೆ ಮುಂದುವರಿದ ಶೋಧ ಕಾರ್ಯ

42 ಕಿ.ಮೀ. ರಾಜಕಾಲುವೆಯಲ್ಲಿ ನಡೆದ ಹುಡುಕಾಟ: ಮುಳುಗು ತಜ್ಞರು, ಯಾಂತ್ರಿಕ ದೋಣಿಗಳ ಬಳಕೆ
Last Updated 24 ಮೇ 2017, 20:02 IST
ಅಕ್ಷರ ಗಾತ್ರ
ಬೆಂಗಳೂರು: ಕುರುಬರಹಳ್ಳಿಯ ಜೆ.ಸಿ.ನಗರದ ರಾಜಕಾಲುವೆಯಲ್ಲಿ ಮಳೆನೀರಿಗೆ ಕೊಚ್ಚಿ ಹೋಗಿದ್ದ ತಿಗಳರಪಾಳ್ಯದ ಶಾಂತಕುಮಾರ್ (34) ಅವರ ಶೋಧಕಾರ್ಯ ಬುಧವಾರವೂ  ನಡೆಯಿತು.
 
‘ಮೊದಲ ಹಂತವಾಗಿ ವೃಷಭಾವತಿ ಕಣಿವೆಯ ಒಟ್ಟು 42 ಕಿಲೋಮೀಟರ್ ರಾಜಕಾಲುವೆಯಲ್ಲಿ ಹುಡುಕಾಟ ನಡೆಸಿದ್ದೇವೆ. ಬುಧವಾರ ಬೆಳಿಗ್ಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಹಿಡಿದು ಕುರುಬರಹಳ್ಳಿಯ ರಾಜಕಾಲುವೆವರೆಗೆ ಹಾಗೂ ಭೈರಮಂಗಲ ಕೆರೆಯಲ್ಲಿ ಎರಡನೇ ಬಾರಿಗೆ ಹುಡುಕಾಟ ನಡೆಸಲಾಯಿತು.
 
ಕೊಚ್ಚೆ ಹೆಚ್ಚು ಸಂಗ್ರಹವಾಗಿರುವ ಸ್ಥಳಗಳಲ್ಲಿ ಹೆಚ್ಚು ಆದ್ಯತೆ ಕೊಟ್ಟು ಶೋಧ ನಡೆಸಲಾಯಿತು’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ (ರಾಜಕಾಲುವೆ) ಸಿದ್ದೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
 
‘ಅಗ್ನಿಶಾಮಕ ಸಿಬ್ಬಂದಿ, ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳನ್ನು ಕಾರ್ಯಾಚರಣೆಯಿಂದ ಕೈಬಿಡಲಾಗಿದೆ. ಬಿಬಿಎಂಪಿ ಸಿಬ್ಬಂದಿ, ಮುಳುಗು ತಜ್ಞರು, ಯಾಂತ್ರಿಕ ದೋಣಿ, ಹಿಟಾಚಿ, ಜೆ.ಸಿ.ಬಿ ಯಂತ್ರಗಳಿಂದ ಮಾತ್ರ ಗುರುವಾರ ಶೋಧಕಾರ್ಯ ನಡೆಯಲಿದೆ’ ಎಂದು ಅವರು ತಿಳಿಸಿದರು. 
 
₹ 10 ಲಕ್ಷ ಪರಿಹಾರ ಸಾಧ್ಯತೆ: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಮೇಯರ್ ಜಿ.ಪದ್ಮಾವತಿ, ‘ಶಾಂತಕುಮಾರ್‌ ಕುಟುಂಬಸ್ಥರು ಹಾಗೂ ಸ್ಥಳೀಯ ಶಾಸಕ ಗೋಪಾಲಯ್ಯ ಅವರು ಪರಿಹಾರ ಮೊತ್ತವನ್ನು ₹ 10 ಲಕ್ಷಕ್ಕಿಂತ ಹೆಚ್ಚು ನೀಡುವಂತೆ ಮನವಿ ಮಾಡಿದ್ದಾರೆ. 
 
ಈ ಮನವಿ ಪರಿಗಣಿಸಿ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರೊಂದಿಗೆ ಗುರುವಾರ ಸಭೆ ನಡೆಸುತ್ತೇವೆ. ಪರಿಹಾರ ಮೊತ್ತದ ಬಗ್ಗೆ ಸಭೆಯಲ್ಲೇ ಅಧಿಕೃತವಾಗಿ ಘೋಷಿಸುತ್ತೇವೆ’ ಎಂದು ಅವರು ಹೇಳಿದರು.
****
ಮುನ್ನೆಚ್ಚರಿಕೆ ಕ್ರಮಕ್ಕೆ ಆಗ್ರಹ
ಮಹಾನಗರದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ನಾಗರಿಕರು ತತ್ತರಿಸಿದ್ದಾರೆ. ಆದರೂ ಸರ್ಕಾರ ಹಾಗೂ ಬಿಬಿಎಂಪಿ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲದಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ಸಹ ವಕ್ತಾರ ಎ.ಎಚ್‌.ಆನಂದ್ ತಿಳಿಸಿದ್ದಾರೆ.

ಕುರುಬರಹಳ್ಳಿಯಲ್ಲಿ ವ್ಯಕ್ತಿ ಮಳೆ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಅಲ್ಲದೆ, ಅನೇಕ ಕಡೆ ತಗ್ಗುಪ್ರದೇಶಗಳಲ್ಲಿ ನೀರು ನುಗ್ಗಿ ಸಾವಿರಾರು ಕುಟುಂಬಗಳು ತೊಂದರೆ ಅನುಭವಿಸಿವೆ. ಆದರೂ ಬಿಬಿಎಂಪಿ ಇನ್ನೂ ಗಾಢನಿದ್ರೆಯಿಂದ ಹೊರ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.

ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಿದಂತೆ ಅನಾಹುತ ಸಂಭವಿಸಿದ ಮೇಲೆ ಪರಿಹಾರ ಕಾರ್ಯ ಕೈಗೊಂಡಿರುವುದು ನಾಚಿಕೆಗೇಡಿನ ಸಂಗತಿ. ಮಳೆಗಾಲ ಆರಂಭಕ್ಕೂ ಮೊದಲೇ ಮಳೆನೀರಿನ ಚರಂಡಿಗಳಲ್ಲಿ ಹೂಳೆತ್ತಿ, ರಾಜಕಾಲುವೆ ಸ್ವಚ್ಛಗೊಳಿಸಬೇಕಿತ್ತು.

ಆಗ ಇಂತಹ ಅವಘಡ ಸಂಭವಿಸುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಅಧಿಕಾರಿಗಳು ಇಂತಹ ಸಂದರ್ಭದಲ್ಲಿ  ರಜೆ ತೆಗೆದುಕೊಳ್ಳಬಾರದು. ತಗ್ಗು ಪ್ರದೇಶಗಳಲ್ಲಿ ಎಲ್ಲೆಲ್ಲಿ ನೀರು ನುಗ್ಗುತ್ತದೆ ಎನ್ನುವುದನ್ನು ಮೊದಲೇ ಗ್ರಹಿಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರಾಜಕಾಲುವೆ ಒತ್ತುವರಿ  ಕಾರ್ಯ ನಿಂತೇ ಹೋಗಿದೆ. ಒತ್ತುವರಿದಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಜೂನ್‌ನಿಂದ ಮಳೆಗಾಲ ಬಿರುಸಾಗುವುದರಿಂದ ಅಧಿಕಾರಿಗಳು, ತಕ್ಷಣ ಸರ್ಕಾರದ ಜತೆಗೆ ಸಮನ್ವಯ ಸಾಧಿಸಬೇಕು. ಮಳೆಯಿಂದ ಸಂಭವಿಸಬಹುದಾದ ಅನಾಹುತ ತಡೆಗಟ್ಟಲು  ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

****
ಮಂಗಳವಾರ ರಾತ್ರಿ ಸುರಿದ ಮಳೆ 22 ಮರಗಳ ಕೊಂಬೆಗಳು ಧರೆಗೆ
ಬೆಂಗಳೂರು: ನಗರದ ವಿವಿಧೆಡೆ ಮಂಗಳವಾರ ಮಧ್ಯರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಹಲವೆಡೆ ಅನಾಹುತ ಸೃಷ್ಟಿಯಾಗಿತ್ತು.

ಮಧ್ಯರಾತ್ರಿ 12.19ಕ್ಕೆ ಏಕಾಏಕಿ ಗಾಳಿ ಸಹಿತ ಮಳೆ ಸುರಿದಿದೆ. ಭಾರಿ ಗಾಳಿ ಬೀಸಿದ್ದರಿಂದ ಜಯನಗರ, ಬಸವೇಶ್ವರ ನಗರ ಎಚ್‌ಬಿಆರ್ ಲೇಔಟ್, ಮೈಕೊ ಲೇಔಟ್, ಆರ್‌.ಟಿ.ನಗರ, ಗೋವಿಂದರಾಜನಗರ, ಆಡುಗೋಡಿ, ಕಾಡುಗೋಡಿ, ವೈಟ್‌ಫೀಲ್ಡ್ ಹಾಗೂ ಮಹದೇಪುರದಲ್ಲಿ 22 ಮರದ ಕೊಂಬೆಗಳು  ಧರೆಗುರುಳಿವೆ.

ಈ ಭಾಗದ ರಸ್ತೆಗಳಲ್ಲಿ ಬಿದ್ದ ಮರದ ಕೊಂಬೆಗಳನ್ನು ತ್ವರಿತವಾಗಿ ತೆರವುಗೊಳಿಸದ ಕಾರಣಕ್ಕೆ ಬುಧವಾರ ಮಧ್ಯಾಹ್ನದ ವರೆಗೂ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಕಾರು ಜಖಂ, ಮನೆಗೆ ಹಾನಿ: ಎಚ್‌ಎಸ್‍ಆರ್ ಲೇಔಟ್‌ನಲ್ಲಿ ರಸ್ತೆ ಬದಿ ನಿಂತಿದ್ದ ಕಾರಿನ ಮೇಲೆ ಮರ ಬಿದ್ದು, ಕಾರು ಜಖಂಗೊಂಡಿದೆ. ಸ್ಥಳೀಯರೊಬ್ಬರ ಮನೆ ಮೇಲೆ ಮರ ಬಿದ್ದಿದ್ದರಿಂದ ಹಾನಿಯಾಗಿತ್ತು.  ಈ ಬಗ್ಗೆ ರಾತ್ರಿಯೇ ದೂರು ನೀಡಿದ್ದೇವು. ಬುಧವಾರ ಮಧ್ಯಾಹ್ನದವರೆಗೆ ಮರ ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಸಿಬ್ಬಂದಿಯನ್ನು ಕಳುಹಿಸಲಿಲ್ಲ. ಇದರಿಂದ ತೊಂದರೆ ಎದುರಿಸಬೇಕಾಯಿತು’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

****
ನಾಲ್ಕು ದಿನ ಕಾರ್ಯಾಚರಣೆ ನಡೆದರೂ ಶವ ಪತ್ತೆಯಾಗಿಲ್ಲ. ಹೀಗಾಗಿ ಮೂರು ತಂಡಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಬಿಬಿಎಂಪಿ ಸಿಬ್ಬಂದಿ ಶೋಧ ಮುಂದುವರಿಸಲಿದ್ದಾರೆ
ಸಿದ್ದೇಗೌಡ, ಮುಖ್ಯ ಎಂಜಿನಿಯರ್ (ರಾಜಕಾಲುವೆ), ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT